ಪ್ರಸಕ್ತ ಕಾಲಘಟ್ಟದ ಬಹುದೊಡ್ಡ ಆತಂಕ ‘ಸುಳ್ಳುಸುದ್ದಿ’- ಶ್ರೀನಿವಾಸನ್ ಜೈನ್
ಬೆಂಗಳೂರು, ):
ಸುಳ್ಳು ಸುದ್ದಿಯನ್ನೂ ಸಹ ಬೆಲೆ ಏರಿಕೆ, ರೈತರ ಸಮಸ್ಯೆಯಷ್ಟೇ ಗಂಭೀರ ಸಮಸ್ಯೆಯಾಗಿ ಪರಿಗಣಿಸಬೇಕು ಎಂದು ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಅಭಿಪ್ರಾಯ ಪಟ್ಟರು.
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ‘ ಸುಳ್ಳು ಸುದ್ದಿ – ಸಾಮಾಜಿಕ ನ್ಯಾಯದ ಮೇಲೆ ಬೀರುವ ಪರಿಣಾಮ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಆದರೆ ಇಂದು ಪ್ರಬಲ ನಾಯಕರು, ರಾಜಕೀಯ ಪಕ್ಷಗಳು ಈ ಕೆಲಸ ಮಾಡುತ್ತಿದ್ದಾರೆ.
World Economic Forum ಭಾರತ ಎದುರಿಸುತ್ತಿರುವ ಅತಿ ದೊಡ್ಡ ಆತಂಕ ಸುಳ್ಳು ಸುದ್ದಿ. ಭಾರತ ಸುಳ್ಳು ಸುದ್ದಿಯ ವಿಶ್ವಗುರು ಎಂದು ಬಣ್ಣಿಸಿದೆ. ಹಿಂದೆ ಇದಕ್ಕೆ ಒಂದು ಸೀಮಾರೇಖೆ ಇರುತ್ತಿತ್ತು. ಸರ್ಕಾರದ ವಿವಿಧ ಅಂಗಗಳು ಇವುಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದವು. ಇವು ಚುನಾವಣಾ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಇವೆಲ್ಲವನ್ನೂ ಗಾಳಿಗೆ ತೂರಲಾಗಿದೆ.
ಲವ್ ಜಿಹಾದ್ ವಿಷಯವನ್ನು ಉದಾಹರಿಸಿದ ಅವರು, ವಾಟ್ಸಾಪ್ ಫಾರ್ವರ್ಡ್ಗಳು ಈಗ ಕಾನೂನಾಗಿ ಮಾರ್ಪಾಡು ಹೊಂದುತ್ತಿವೆ. ಇದರಿಂದ ಪರಸ್ಪರ ಒಪ್ಪಿಗೆಯಿಂದ ಮದುವೆಯಾದ ಎಷ್ಟೋ ಅಂತರ್ ಧರ್ಮೀಯ ದಂಪತಿಗಳು ಕಿರುಕುಳ ಅನುಭವಿಸುವಂತಾಗಿದೆ ಎಂದರು.
ಇದು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳೂ ಒಂದಲ್ಲ ಒಂದು ಹಂತದಲ್ಲಿ ಇಂತಹ ನಕಾರಾತ್ಮಕ ಹೆಜ್ಜೆಗಳನ್ನಿರಿಸಿವೆ ಎಂದು ಅಭಿಪ್ರಾಯ ಪಟ್ಟರು.
ದೇಶದ ಬಹು ಸಂಖ್ಯಾತರು ಅಲ್ಪ ಸಂಖ್ಯಾತರ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂಬುದು ಅತ್ಯಂತ ದೊಡ್ಡ ಸುಳ್ಳು ಎಂದ ಜೈನ್ ಅವರು, ಅಧಿಕಾರಸ್ಥರೆ ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುವುದು ಆತಂಕಕಾರಿ. ಇದನ್ನು ರಾಜಕೀಯವಾಗಿಯೇ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ನಾಗಮಣಿ ಎಸ್. ರಾವ್, ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಗಳಾದ ಡಾ. ಕೆ.ವಿ. ತ್ರಿಲೋಕಚಂದ್ರ , ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್ ಉಪಸ್ಥಿತರಿದ್ದರು.