ಕಾಂಗ್ರೆಸ್ ನಿಂದ ಮಾತ್ರ ಸರ್ವ ಜನಾಂಗದ ಅಭಿವೃದ್ಧಿ ಸಾಧ್ಯ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ರೈತರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ

ಕೊಪ್ಪಳ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸರ್ವ ಜನಾಂಗದ ಅಭಿವೃದ್ಧಿ ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಸಮಾಜದ ಏಳಿಗೆಗಾಗಿ ಶ್ರಮಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ‌ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಹಿರೇಸಿಂದೋಗಿ ಜಿಪಂ ಕ್ಷೇತ್ರ ವ್ಯಾಪ್ತಿಯ ಹಲಗೇರಿ, ದದೇಗಲ್, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಗುನ್ನಳ್ಳಿ, ಹೊರತಟ್ನಾಳ ಮತ್ತು ಮಂಗಳಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಕೃತಜ್ಞತಾ ಮತ್ತು ಅಹವಾಲು ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷವು ಬಡವರ, ಮಹಿಳೆಯರ, ರೈತರ, ಕಾರ್ಮಿಕರ, ವೃತ್ತಿಪರರ ಎಲ್ಲ ಜಾತಿ ಧರ್ಮದ ಜನರ ಕಲ್ಯಾಣ ಬಯಸುತ್ತಿದೆ. ಇದಕ್ಕಾಗಿ ಅನೇಕ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.
ಸಾಮಾಜಿಕ ನ್ಯಾಯದ ತತ್ವದಡಿ ವಿಶ್ವಾಸವಿಟ್ಟಿರುವ ಕಾಂಗ್ರೆಸ್ ಸೌಹಾರ್ದತೆಯಲ್ಲಿ ನಂಬಿಕೆ ಇಡುವ ಪಕ್ಷವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಜನಪರ ಯೋಜನೆಗಳನ್ನು ತಲುಪಿಸುವಂತ ಕೆಲಸ‌ ಮಾಡುತ್ತಿದೆ. ಬಿಜೆಪಿಯವರಂತೆ ಜನತೆಗೆ ಸುಳ್ಳು ಆಶ್ವಾಸನೆ ನೀಡಿ, ಜನರಿಗೆ ಮೋಸ ಮಾಡುವ ಪಕ್ಷ ನಮ್ಮದಲ್ಲ. ನಾವು ನುಡಿದಂತೆ ನಡೆಯುತ್ತವೆ ಎಂದರು.

ಕಡುಬಡವರು, ದಲಿತರು, ಹಿಂದುಳಿದ ವರ್ಗದವರು, ಕಾರ್ಮಿಕರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರೇ ಅದು ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲುತ್ತೆ. ರಾಜ್ಯದ ಇತಿಹಾಸದಲ್ಲಿ ಯಾವ ಸರ್ಕಾರವೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿರುವಷ್ಟು ಸಾಧನೆ ಮಾಡಿಲ್ಲ. ರೈತರ ಹಾಗೂ ಬಡಜನರ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಅಲ್ಲದೇ
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪಾರದರ್ಶಕ ಆಡಳಿತ ನಡೆಸುವ ಮೂಲಕ ಜನಪ್ರಿಯತೆಗಳಿಸಿದೆ‌‌‌ ಎಂದರು.

ನಾನು‌ ಎರಡು‌ ಬಾರಿ ಶಾಸಕನಾಗಿದ್ದಾಗ ಆರೋಗ್ಯ, ಶಿಕ್ಷಣ, ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ, ಶಾಲಾ-ಕಾಲೇಜು ನಿರ್ಮಾಣ, ವಸತಿ ಶಾಲೆ, ಗ್ರಾಮೀಣ‌ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸುಮಾರು ನಾಲ್ಕು ಸಾವಿರ ಕೋಟಿ ರೂ., ಅಧಿಕ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲ್ಲ. ಸಧ್ಯ ಕ್ಷೇತ್ರದ ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕನಾಗಿದ್ದು ಈ ಬಾರಿ ಹೆಚ್ಚಿನ ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ. ಜನತೆಗೆ ನೀಡಿದ ಆಶ್ವಾಸನೆ ಈಡೇರಿಸಿ, ಜನರ‌ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಕೆರೆ ತುಂಬಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ:
ಕ್ಷೇತ್ರದ ಅನ್ನದಾತರ ಬಹುಮುಖ್ಯ ಬೇಡಿಕೆಯಾದ ಕೆರೆ ತುಂಬಿಸುವ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುದಾನ ಘೋಷಣೆ ಮಾಡಿದ್ದು, ಶೀಘ್ರದಲ್ಲೇ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡುತ್ತೇನೆ. ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲ ಮಟ್ಟ ಏರಿಕೆಯಾಗಲಿದ್ದು, ನಮ್ಮ ಭಾಗದ ಕೃಷಿಕರಿಗೆ ಅನುಕೂಲವಾಗಲಿದೆ. ಜತೆಗೆ ಆದಾಯ ದ್ವಿಗುಣಕ್ಕೂ ವರದಾನವಾಗಲಿದೆ. ಅಲ್ಲದೇ ಬಾಕಿ ಏತ ನೀರಾವರಿ ಯೋಜನೆಗಳಿಗೆ ಬರುವ ದಿನಗಳಲ್ಲಿ ಅನುದಾನ ತಂದು ಪೂರ್ಣಗೊಳಿಸಲಾಗುವುದು ಎಂದರು.

ಹಳ್ಳಿಗಳ ಶ್ರೇಯೋಭಿವೃದ್ಧಿಗೆ ಪಣ: ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತೇನೆ. ಜನಸಂಖ್ಯೆ ಹೆಚ್ಚಳವಾದಂತೆ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಜವಾಬ್ದಾರಿ ನನ್ನದು. ಪ್ರತಿಯೊಂದು ಹಳ್ಳಿಗಳ ಶ್ರೇಯೋಭಿವೃದ್ಧಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕುರಿಮರಿ ಕಾಣಿಕೆ:
ತಾಲೂಕಿನ ಹಲಗೇರಿ ಗ್ರಾಮದ ಕುರಿ ಮತ್ತು ಉಣ್ಣೆ ಸಂಘದಿಂದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಕಂಬಳಿ ಹೊದಿಸಿ ಕುರಿಮರಿ ಕಾಣಿಕೆ ನೀಡಲಾಯಿತು. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳು ನಮ್ಮ ಅಹವಾಲು ಸಲ್ಲಿಸಿ, ಶಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಬಿ.ನಾಗರಳ್ಳಿ, ಜಿಪಂ ಮಾಜಿ ಸದಸ್ಯ ಸದಸ್ಯರಾದ ಪ್ರಸನ್ನ ಗಡಾದ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಮ ಕೃಷ್ಣ ರೆಡ್ಡಿ ಗಲಭಿ, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಗಾಳೆಪ್ಪ ಪೂಜಾರ್,ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರೆಡ್ಡಿ ಹಂಗನಕಟ್ಟಿ, ಮುಖಂಡರಾದ ವೆಂಕನಗೌಡ್ರು ಹಿರೇಗೌಡ್ರು, ಶಂಕ್ರಪ್ಪ ಅಂಗಡಿ, ಕೇಶವ ರೆಡ್ಡಿ, ಕುರಗೋಡ ರವಿ, ಶಿವಣ್ಣ ಹಂದ್ರಾಳ, ನಾಗರಾಜ ಪಟವಾರಿ, ನಿಂಗಪ್ಪ ಯತ್ನಟ್ಟಿ, ಪ್ರವೀಣ ಪಾಟೀಲ್, ಹನಮಂತ ಹಳ್ಳಿಕೇರಿ, ವಸಂತ ಹೊರತಟ್ನಾಳ, ಶಿವಣ್ಣ ಗುನ್ನಳ್ಳಿ, ನಿಂಗಪ್ಪ ನಿಟ್ಟಾಲಿ, ನಗರಸಭೆಯ ಸದಸ್ಯ ವಿರೂಪಾಕ್ಷಪ್ಪ ಮೊರನಾಳ, ನಗರಸಭೆಯ ಸದಸ್ಯ, ವಕ್ತಾರ ಅಕ್ಬರ್ ಪಲ್ಟನ್, ತಾಲೂಕು ಪಂಚಾಯತ್ ಇಓ ದುಂಡೇಶ್ ತುರಾದಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!