ಬೆಳೆ ಕಟಾವು ಪ್ರಯೋಗಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ನಲಿನ್ ಅತುಲ್

Get real time updates directly on you device, subscribe now.

  ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗವನ್ನು ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 22ರಂದು ನಡೆದ ಜಿಲ್ಲಾ ಮಟ್ಟದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳು ಕಟಾವಿನ ಹಂತದಲ್ಲಿದ್ದು, ಬೆಳೆ ಕಟಾವು ಪ್ರಯೋಗವನ್ನು ಮೊಬೈಲ್ ತಂತ್ರಾಂಶದಲ್ಲಿ ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆಯ ಮೂಲ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಯಾವ ಹಳ್ಳ, ನಾಲೆಗಳಲ್ಲಿ ಹೆಚ್ಚು ನೀರು ಬರುತ್ತದೆ ಎಂಬುವುದರ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಬೇಕು. ಬೆಳೆ ನಷ್ಟ ಉಂಟಾದಲ್ಲಿ ಕೂಡಲೇ ಅದರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಆತ್ಮ ಹತ್ಯೆ ಮಾಡಿಕೊಂಡ ರೈತರಿಗೆ ಫರಿಹಾರ ವಿತರಣೆ ಕ್ರಮದಡಿ ಯಾವುದೇ ಪ್ರಕರಣ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಪ್ರತಿ ಮಾಹೆಯಲ್ಲಿ ತಾಲ್ಲೂಕು ಮಟ್ಟದಲ್ಲಿಯೂ ಸಹ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಭೆಗಳನ್ನು ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಗಾಗಿ ರೇಷ್ಮೆ ಕೃಷಿಯಿಂದಾಗುವ ಅನುಕೂಲಗಳು ಹಾಗೂ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ ರೈತರನ್ನು ಉತ್ತೇಜಿಸಬೇಕು. ತೋಟಗಾರಿಕೆ, ಪಶು ಇಲಾಖೆ ಮತ್ತು ಮೀನುಗಾರಿಕೆ ಯೋಜನೆಗಳನ್ನು ಸಹ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆ ಮಳೆ 281 ಮಿಮಿ ಇದ್ದು, ವಾಸ್ತವಿಕವಾಗಿ 396 ಮಿಮಿ ಮಳೆ ಸುರಿದು, ಶೇ.41ರಷ್ಟು ಮಳೆ ಹೆಚ್ಚಾಗಿದೆ. ಜಿಲ್ಲೆಯ ಒಟ್ಟು 3,19,356 ಹೆಕ್ಟರ್ ಪ್ರದೇಶದ ಬಿತ್ತನೆ ಗುರಿ ಪೈಕಿ 3,04,270 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಭತ್ತ, ಶಕ್ತಿಮಾನ್ ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆ, ತೊಗರಿ, ಹುರಳಿ, ಹೆಸರು, ಅಲಸಂದಿ, ಅವರೆ, ಮಡಕಿ, ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲು, ಹತ್ತಿ, ಕಬ್ಬು ಒಳಗೊಂಡAತೆ ಕೊಪ್ಪಳ ತಾಲ್ಲೂಕಿನಲ್ಲಿ ಶೇ.103, ಕುಷ್ಟಗಿ ಶೆ.100, ಯಲಬುರ್ಗಾ ಶೇ.99, ಕುಕನೂರು ಶೇ.99, ಗಂಗಾವತಿ ಶೇ.78, ಕಾರಟಗಿ ಶೇ.67, ಕನಕಗಿರಿ ಶೇ.98ರಷ್ಟು ಸೇರಿ ಜಿಲ್ಲೆಯಲ್ಲಿ ಶೇ.95ರಷ್ಟು ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕರಾದ ಡಾ ಪಿ.ಎಂ.ಮಲ್ಲಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಸೇರಿದಂತೆ ರೇಷ್ಮೆ, ಮೀನುಗಾರಿಕೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!