ಗೌರಿ-ಗಣೇಶ ಹಬ್ಬ ಆಚರಣೆಯಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಿ: ಡಿಸಿ

Get real time updates directly on you device, subscribe now.

 ಗೌರಿ-ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸೂಚನೆ ನೀಡಿದ್ದಾರೆ.
 ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬದ ಪ್ರಯುಕ್ತ ಗೌರಿ-ಗಣೇಶ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸಿ. ನಂತರ ಗೌರಿ-ಗಣೇಶ ಮೂರ್ತಿಗಳನ್ನು ಕೆರೆ, ಬಾವಿ, ಕಾಲುವೆ, ನದಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲಮಾಲಿನ್ಯ ಉಂಟಾಗುವುದು, ಈ ನಿಟ್ಟಿನಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ಆದೇಶ ದಿನಾಂಕ:18.06.2019 ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗೌರಿ-ಗಣೇಶ ಮೂರ್ತಿಗಳ ಬಳಕೆಗೆ ಉಪಯೋಗಿಸಲ್ಪಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಹಾಗೂ ಮುಂತಾದ ರಾಸಾಯನಿಕಗಳಿಂದ ತಯಾರಿಸಿರುವ ಮೂರ್ತಿಗಳ ವಿಸರ್ಜನೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಹೀಗಾಗಿ ನಮ್ಮ ಸುತ್ತ-ಮುತ್ತಲಿನ ಪರಿಸರ ಹಾಗೂ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸ ಬೇಕಾಗಿರುವುದರಿಂದ ಇನ್ನು ಮುಂದೆ ರಾಜ್ಯದ ಯಾವುದೇ ಕೆರೆ, ಬಾವಿ, ಕಾಲುವೆ, ನದಿ ಮತ್ತು ಇತರೆ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ-ಗಣೇಶ ಮೂರ್ತಿಗಳ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಜಲಮಾಲಿನ್ಯ ತಡೆಗಟ್ಟಲು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಲೈಸನ್ಸ್ ನೀಡದಿರಲು ಮತ್ತು ಲೈಸನ್ಸ್ ಪಡೆಯದೇ ಅನಧಿಕೃತವಾಗಿ ತಯಾರಿಸಿ, ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ರೀತ್ಯ ಕ್ರಮಗಳನ್ನು ತಕ್ಷಣ ಜರುಗಿಸುವುದು. ಈ ಅಧಿಸೂಚನೆಯನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್, ಬಣ್ಣ ಲೇಪಿತಗಳಿಂದ ತಯಾರಿಸಲ್ಪಟ್ಟ ಗೌರಿ-ಗಣೇಶ ಮೂರ್ತಿಗಳನ್ನು ಯಾವುದೇ ಕೆರೆ, ಬಾವಿ, ಕಾಲುವೆ, ನದಿಗಳಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ವಿಸರ್ಜಿಸಬೇಕು. ಈ ಹಿನ್ನೆಲೆಯಲ್ಲಿ ಹಾಗೂ ನೈಸರ್ಗಿಕ, ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕರ್‌ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿಕಸ (ಹೂ, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು)ಗಳನ್ನು ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ, ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ವಾಹನದ ವ್ಯವಸ್ಥೆಗೆ ಕಲ್ಪಿಸಲು ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಪೊಲೀಸರ ಸಹಯೋಗದೊಂದಿಗೆ ವಾರ್ಡ್ಗಳ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಗೌರಿ-ಗಣೇಶ ವಿಗ್ರಹಗಳ ವಿಸರ್ಜನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕವಾಗಿ ಇಡಲಾಗುವ ಗೌರಿ-ಗಣೇಶ ವಿಗ್ರಹಗಳನ್ನು ಸಂಬಂಧಪಟ್ಟ ಪ್ರತಿ ಸಮಿತಿಯವರು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ-ಪಂಚಾಯತಿ, ಗ್ರಾಮ-ಪಂಚಾಯತಿ ಮತ್ತು ಪೋಲೀಸ್ ಇಲಾಖೆಯ ವತಿಯಿಂದ ನಿಬಂಧನೆಗೊಳಪಟ್ಟ ಅನುಮತಿಯನ್ನು ಪಡೆದ ನಂತರವೇ ಸ್ಥಾಪಿಸುವುದು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಕ್ತ ಕ್ರಮ ವಹಿಸಬೇಕು.
ನಿರ್ದಿಷ್ಟ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗಣಪತಿಯನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲ ಮೂಲಗಳನ್ನು ನಿಗದಿಪಡಿಸಲು ಮತ್ತು ಈ ಬಗ್ಗೆ ಸೂಕ್ತ ಪ್ರಕಟಣೆಯನ್ನು ಹೊರಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕ್ರಮ ಕೈಗೊಳ್ಳಬೇಕು.
ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಿ.ಒ.ಪಿ ಮತ್ತು ಬಣ್ಣದ ವಿಗ್ರಹಗಳನ್ನು ತನಿಖೆ ಮಾಡಿ ಸುಪರ್ಧಿಗೆ ತೆಗೆದುಕೊಳ್ಳಲು ಕ್ರಮವಹಿಸುವುದು. ಜಿಲ್ಲೆಗೆ ಅಥವಾ ತಾಲೂಕುಗಳಿಗೆ ಬೇರೆ ಪ್ರದೇಶಗಳಿಂದ ಪಿ.ಒ.ಪಿ. ವಿಗ್ರಹಗಳನ್ನು ಸರಬರಾಜು ಮಾಡುವುದನ್ನು ತಡೆಗಟ್ಟಲು ಸಂಬಂಧಿಸಿದ ಚೆಕ್‌ಪೋಸ್ಟ್ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಪ್ರಮುಖವಾದ ನಗರ, ಪಟ್ಟಣ, ಗ್ರಾಮಗಳ ವ್ಯಾಪ್ತಿಯಲ್ಲಿ ಗೌರಿ ಗಣೇಶ ಪಂಡಾಲುಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿದ್ದು, ಧ್ವನಿವರ್ಧಕಗಳನ್ನು ಬಳಸಲು ಇರುವ ಮಾನದಂಡಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ರಾಜ್ಯ ಸರ್ಕಾರ ಆದೇಶಾನುಸಾರ ಧ್ವನಿವರ್ಧಕಗಳನ್ನು ಬಳಕೆ ಮಾಡಲು ಲೈಸನ್ಸ್/ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯುವುದು ಮತ್ತು ಹಸಿರು ಪಟಾಕಿಗಳ ಬಳಕೆಗೆ ಇರುವ ನಿಯಂತ್ರಣಾ ಕ್ರಮಗಳನ್ನು ಸಾರ್ವಜನಿಕವಾಗಿ ಪ್ರಚಾರ ಪಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಸರ್ಕಾರದ ಸುತ್ತೋಲೆ ದಿನಾಂಕ: 10-05-2022 ರಂದು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಹಬ್ಬದ ಪ್ರಯುಕ್ತ ಬಳಸಲಾಗುವ ಧ್ವನಿವರ್ಧಕಗಳು ಕೈಗಾರಿಕಾ ಪ್ರದೇಶದಲ್ಲಿ ಬೆಳಗಿನ ಸಮಯದಲ್ಲಿ 75 ಡೆಸಿಬಲ್ (Decibel- dB(A) Leq) ಹಾಗೂ ರಾತ್ರಿ ಸಮಯದಲ್ಲಿ 70 ಡೆಸಿಬಲ್ (Decibel- dB(A) Leq), ವಾಣಿಜ್ಯ ವಲಯದಲ್ಲಿ ಬೆಳಗಿನ ಸಮಯದಲ್ಲಿ 65 ಡೆಸಿಬಲ್ ಹಾಗೂ ರಾತ್ರಿ ಸಮಯದಲ್ಲಿ 55 ಡೆಸಿಬಲ್, ವಸತಿ ವಲಯದಲ್ಲಿ ಬೆಳಗಿನ ಸಮಯದಲ್ಲಿ 55 ಡೆಸಿಬಲ್ ಹಾಗೂ ರಾತ್ರಿ ಸಮಯದಲ್ಲಿ 45, ನಿಶ್ಯಬ್ದ ವಲಯದಲ್ಲಿ ಬೆಳಗಿನ ಸಮಯದಲ್ಲಿ 50 ಡೆಸಿಬಲ್ ಹಾಗೂ ರಾತ್ರಿ ಸಮಯದಲ್ಲಿ 40 ಡೆಸಿಬಲ್‌ಗಳ ಮಿತಿ ಮೀರುವಂತಿಲ್ಲ. ಅಲ್ಲದೇ ರಾತ್ರಿ 10 ಗಂಟೆಯಿAದ ಬೆಳಿಗ್ಗೆ 06 ಗಂಟೆಯವರೆಗೆ ಯಾವುದೇ ರೀತಿಯ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಾಗ ಸಂಚಾರ ದಟ್ಟಣೆಯಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಜಾಗದಲ್ಲಿಯೇ ಪ್ರತಿಷ್ಠಾಪನೆ ಮಾಡಬೇಕು. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಹಾಗೂ ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಓಡಾಟಕ್ಕೆ ತೊಂದರೆ ಮಾಡುವಂತಿಲ್ಲ. ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್‌ಗಳಲ್ಲಿ ಆಗ್ನಿನಂದಕಗಳನ್ನು ಬಳಕೆ ಮಾಡಬೇಕು. ಪೆಂಡಾಲ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಪೆಂಡಾಲ್‌ನಲ್ಲಿ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಮಾರ್ಗ ನಿರ್ಮಿಸಬೇಕು ಹಾಗೂ ಜನ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಈ ಬಗ್ಗೆ ಕೊಪ್ಪಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳು ಮತ್ತು ತಹಶೀಲ್ದಾರರು, ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿಟಿವಿ, ಕೆಎಸ್‌ಆರ್‌ಟಿಸಿ ಘಟಕದಲ್ಲಿ ಇರುವ ಕ್ರೇನ್ ಮತ್ತು ನುರಿತ ಈಜುಗಾರರನ್ನು ನಿಯೋಜಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: