ಓದು, ಕಲೆ, ಸಂಗೀತ ಎಲ್ಲದಕ್ಕೂ ಸೈ – ಬಹುಮುಖ ಬಾಲಪ್ರತಿಭೆ ಸಾಹಿತ್ಯ ಗೊಂಡಬಾಳ
ಕೊಪ್ಪಳ ಜಿಲ್ಲೆ ಎಂದ ತಕ್ಷಣ ನಮ್ಮ ಕಣ್ಣಿಗೆ ಕಾಣುವ ಮೊದಲ ಸಂಗತಿ ಇಲ್ಲಿನ ಬಿಸಿಲು ಮತ್ತು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ. ಇಲ್ಲಿ ಎಲ್ಲವನ್ನೂ ಕೇಳಿ ಕೇಳಿ ಪಡೆಯಬೇಕು ಎಂಬ ಪರಿಸ್ಥಿತಿ ಇದೆ. ಆದರೆ ಇಲ್ಲಿ ಪ್ರತಿಭೆಗಳಿಗೆ, ಕಲೆಗೆ ಕೊರತೆ ಇಲ್ಲ ಕೇವಲ ಅವಕಾಶ ಮತ್ತು ಗುರುತಿಸುವಿಕೆಯ ಕೊರತೆ ಇದೆ ಎನ್ನುವದು ಮಾತ್ರ ಸತ್ಯ.
ಇಲ್ಲಿನ ನಿವಾಸಿ ಪತ್ರಕರ್ತ ಮಂಜುನಾಥ ಗೊಂಡಬಾಳ ಮತ್ತು ಸಮಾಜ ಸೇವಕಿ ಜ್ಯೋತಿ ಗೊಂಡಬಾಳ ಅವರ ಹಿರಿಯ ಸುಪುತ್ರಿ ಸಾಹಿತ್ಯ ಅನೇಕ ವಿಷಯಗಳಲ್ಲಿ ತನ್ನ ಪ್ರತಿಭೆ ತೋರಿಸಿ ಹೆಸರಿಗೆ ತಕ್ಕ ಹಾಗೆ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಮುಂದಿರುವ ಈಕೆ ಓದಿನಲ್ಲೂ ನಂಬರ್ ಒನ್. ಮೊನ್ನೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಶೇ. ೯೩.೯೨ ರಷ್ಟು ಅಂಕ ಪಡೆಯುವ ಮೂಲಕ ಭಾಗ್ಯನಗರದ ಪಯೋನಿಯರ್ ಶಾಲೆಯಲ್ಲಿ ತನ್ನ ಮ್ಯಾಟ್ರಿಕುಲೇಶನ್ ಮುಗಿಸಿ ಶಾಲೆಗೆ ಟಾಪರ್ ಆಗಿದ್ದಾಳೆ. ಸಾಹಿತ್ಯ ಪ್ರಸ್ತುತ ಬಳ್ಳಾರಿಯ ಶ್ರೀ ಚೈತನ್ಯ ಸಂಸ್ಥೆಯ ಕೊಪ್ಪಳ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನವನ್ನು ಸ್ಕಾಲರ್‌ಶಿಪ್ ಮೂಲಕ ಪಡೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಹತ್ತಿರವಿದ್ದಾಗಲೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಅಂಕ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ, ಅಲ್ಲಿಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆ ಇರುವ ವ್ಯಕ್ತಿ ಮಾನಸಿಕವಾಗಿ ಎಷ್ಟು ಗಟ್ಟಿ ಎಂಬ ಉದಾಹರಣೆ ಈ ಸಾಹಿತ್ಯ.
ಒಬ್ಬ ವ್ಯಕ್ತಿ ಹಲವಾರು ಕೆಲಸಗಳನ್ನು ಒಟ್ಟಿಗೆ ಮಾಡಲು ಅರ್ಹ ಇದ್ದಾನೆ ಎಂದರೆ ಅವರು ನಿಜವಾಗಿಯೂ ಒಳ್ಳೆಯ ಸಾಮರ್ಥ್ಯ ಹೊಂದ್ದಿದಾರೆ ಎಂದೇ ಅರ್ಥ. ಸಾಹಿತ್ಯ ಕೂಡ ಹಾಗೆ, ಚಿಕ್ಕ ವಯಸ್ಸಿನಲ್ಲಿಯೇ ಭರತ ನಾಟ್ಯ, ವೆಸ್ಟರ್ನ್ ನೃತ್ಯಗಳ ಜೊತೆಗೆ ಚಿತ್ರಕಲೆ, ಸಮರ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಸಂಗೀತದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಜ್ಯೂನಿಯರ್ ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಈಗ ಸೀನಿಯರ್ ಪರೀಕ್ಷೆ ಬರೆಯಲು ಅಣಿಯಾಗಿದ್ದಾಳೆ.
ಹತ್ತು ಹಲವು ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಸಾಹಿತ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ ಮತ್ತು ಜನಪದ ಸಂಗೀತವನ್ನು ಸೊಗಸಾಗಿ ಹಾಡುತ್ತಾಳೆ.ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವ, ಇಟಗಿ ಉತ್ಸವ, ಕೋಟಿಲಿಂಗ ಪುರ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುವ ಸೌರಭ, ಗಿರಿಜನ ಉತ್ಸವ, ಸುಗ್ಗಿ ಹುಗ್ಗಿ, ಜನಪದ ಜಾತ್ರೆ, ಮಹಿಳಾ ಸಾಂಸ್ಕೃತಿಕ ಉತ್ಸವ, ಪ್ರಾಯೋಜಿತ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಗಣೇಶ ಉತ್ಸವಗಳಲ್ಲಿ ಸಂಗೀತ ನೃತ್ಯ ಕಾರ್ಯಕ್ರಮ ನೀಡಿದ್ದಾಳೆ. ಅನೇಕ ಶಾಲಾ, ತಾಲೂಕ, ಜಿಲ್ಲಾ ಮತ್ತು ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಶಿಕ್ಷಣ ಮತ್ತು ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಗೌರಿ ಕಿರುಚಿತ್ರದ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿದ್ದು ಅದು ತೆರೆ ಕಾಣಲಿದೆ.
ಸಂಗೀತದ ಜೊತೆಗೆ ಸಂಗೀತ ವಾದ್ಯಗಳನ್ನು ನುಡಿಸುವದರಲ್ಲಿ ಸಹ ಸೈ ಎನಿಸಿಕೊಂಡಿದ್ದು, ಕ್ಯಾಶಿಯೋ, ಹಾರ್ಮೋನಿಯಂ, ಮೌತ್ ಮ್ಯೂಸಿಕ್ ಇನ್ಸ್ಟ್ರುಮೆಂಟ್, ಬೇಸ್ ಗಿಟಾರ್, ಎಲೆಕ್ಟ್ರಿಕ್ ಗಿಟಾರ್ ನುಡಿಸುತ್ತಾಳೆ. ಯೋಗ ಸರ್ಟಿಫಿಕೇಟ್ ಕೋರ್ಸ್, ಕರಾಟೆ ಮತ್ತು ಶಟಲ್ ಬ್ಯಾಡ್ಮಿಂಟನ್ ಸಹ ಕಲಿತಿದ್ದು ಹಲವು ಪ್ರಶಸ್ತಿ ಗಳಿಸಿದ್ದಾಳೆ. ಬಾಲ್ಯದಿಂದಲೇ ನೃತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಸಾಹಿತ್ಯ ೨೦೨೧ರಲ್ಲಿ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಮಿಂಚಿದ್ದಾಳೆ. ೨೦೧೫ರಲ್ಲಿ ಬಾಲ್ಯೋತ್ಸವ ಜೊತೆಗೆ ೨೦೨೩ರಲ್ಲಿ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ತನ್ನ ಪ್ರತಿಭೆ ಮೆರೆದಿದ್ದಾಳೆ. ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸಾಹಿತ್ಯಳ ಪ್ರತಿಭೆಗೆ ಪ್ರೋತ್ಸಾಹದ ರೂಪದಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ಟಿಎಸ್‌ಪಿ ಯೋಜನೆಯಲ್ಲಿ ಎಲೆಕ್ಟ್ರಿಕ್ ಗಿಟಾರ್ ನೀಡಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ಗಿಟಾರ್ ಮತ್ತು ಹಾರ್ಮೋನಿಯಂ ಸ್ಪರ್ಧೆ ಎರಡರಲ್ಲೂ ದ್ವಿತಿಯ ಪ್ರಶಸ್ತಿ ಪಡೆದಿದ್ದಾಳೆ. ಕನ್ನಡ ಜಾನಪದ ಪರಿಷತ್ ನಡೆಸಿದ ಜಲ ಜಾನಪದೋತ್ಸವ, ಎದೆಗಾರಿಕೆ ಪತ್ರಿಕೆಯ ಕಾರ್ಯಕ್ರಮ, ಯೂಥ್ ವೆಲ್‌ಫೇರ್ ಅಸೋಸೊಯೇಷನ್ ಸೇರಿ ಅನೇಕ ಸಂಸ್ಥೆಗಳು ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾಳೆ. ಫೋಟೊಗ್ರಫಿಯಲ್ಲೂ ಪರಿಣಿತಿ ಹೊಂದಿರುವ ಸಾಹಿತ್ಯ ಅನೇಕ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾಳೆ. ಕೊಡಗಿನಲ್ಲಿ ನಡೆದ ಅತಿವೃಷ್ಟಿಗೆ ಜಿಲ್ಲಾಡಳಿತ ಸಾರ್ವಜನಿಕರ ಸಹಕಾರಕ್ಕೆ ಜಾಥಾ ಮಾಡಿದಾಗ ಸಾಹಿತ್ಯ ತನ್ನ ಉಳಿತಾಯದ ಹಣವನ್ನು ಅಂದಿನ ಜಿಲ್ಲಾಧಿಕಾರಿ ಸುನಿಲ್‌ಕುಮಾರ್ ಅವರಿಗೆ ನೀಡಿ ಭೇಷ್ ಎನಿಸಿಕೊಂಡಿದ್ದಳು. ಕನ್ನಡ, ಹಿಂದಿ, ಇಂಗ್ಲೀಷ್ ಜೊತೆಗೆ ತೆಲುಗು ಭಾಷೆಯಲ್ಲಿ ಸಾಹಿತ್ಯ ಪ್ರಾವೀಣ್ಯತೆ ಪಡೆದಿದ್ದು, ನಾಲ್ಕು ಭಾಷೆಯಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಕಲಿತಿದ್ದಾಳೆ.
ತನ್ನೆಲ್ಲಾ ಪ್ರತಿಭೆಯಿಂದ ಜನಮನ ಗೆದ್ದ ಸಾಹಿತ್ಯ ಗೊಂಡಬಾಳ ಕಲ್ಯಾಣ ಕರ್ನಾಟಕರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ಕಲಾ ನವರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ಕಲಾಕೇಸರಿ ರಾಜ್ಯ ಪ್ರಶಸ್ತಿ, ಕೊಪ್ಪಳ ಐಸಿರಿ ಪ್ರಶಸ್ತಿ, ವಿಜಯನಗರ ಕರ್ನಾಟಕರತ್ನ ರಾಜ್ಯ ಪ್ರಶಸ್ತಿ, ನೃಪತುಂಗ ಪ್ರಶಸ್ತಿಗಳನ್ನು ಪಡೆದಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪುರಸ್ಕಾರ, ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪುರಸ್ಕಾರ, ಶ್ರೀ ಗವಿಸಿದ್ಧೇಶ್ವರ ಬ್ಯಾಂಕಿನ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಗೌರವ ಸನ್ಮಾನ ಸ್ವೀಕರಿಸಿದ್ದಾಳೆ. ಇಂತಹ ಪ್ರತಿಭಾವಂತೆ ಸಾಹಿತ್ಯ ಗೊಂಡಬಾಳಗೆ ಸರಕಾರ, ಅಕಾಡಮಿಗಳು, ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕಿದೆ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತ ಸಾಹಿತ್ಯಳಿಗೆ ಅಭಿಮಾನದ ಅಭಿನಂದನೆಗಳು.
– ಶ್ರೀನಿವಾಸ ಚಿತ್ರಗಾರ
ಶಿಕ್ಷಕರು, ಕವಿ, ಕಲಾವಿದರು, ಕೊಪ್ಪಳ.
Comments are closed.