11 ಮುಖ್ಯಮಂತ್ರಿಗಳ ಪೋಟೋಗ್ರಾರ್ ವಿಶ್ವೇಶ್ವರಪ್ಪಗೆ KUWJ ಗೌರವ

Get real time updates directly on you device, subscribe now.

 

ಕ್ಯಾಮರಾ ಕಣ್ಣಲ್ಲಿ ಎಲ್ಲವನ್ನೂ ವಿಭಿನ್ನವಾಗಿ ಕ್ಲಿಕ್ಕಿಸುವುದೇ ದೊಡ್ಡ ಸವಾಲು

ಬೆಂಗಳೂರು:
ಕ್ಯಾಮರಾ ಕಣ್ಣಲ್ಲಿ ಯಾವ ಸಂದರ್ಭದಲ್ಲಿ ಯಾರು ಹೇಗೆ ಸೆರೆಯಾಗುತ್ತಾರೆ ಎನ್ನುವುದು ಒಬ್ಬ ಛಾಯಾಗ್ರಹಕನಿಗೆ ಮುಖ್ಯವಾದ ಸಂಗತಿ. ಈ ನಿಟ್ಟಿನಲ್ಲಿ ನಮ್ಮ ಕಣ್ಣನ್ನು ಸದಾ ಕ್ಯಾಮರಾ ಮೇಲೆ ನೆಟ್ಟಿರಬೇಕು ಎಂದು ಹಿರಿಯ ಛಾಯಾಗ್ರಹಕ ವಿಶ್ವೇಶ್ವರಪ್ಪ ಹೇಳಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ಮನೆಯಂಗಳಲ್ಲಿ ಗೌರವ ಸಮರ್ಪಣೆ ಎನ್ನುವ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

1994ರಲ್ಲಿ ಎಚ್.ಡಿ.ದೇವೇಗೌಡರು ಸಿಎಂ ಆಗಿದ್ದ ಸಂದರ್ಭವದು. ಗೌಡರು ನಗುವುದನ್ನು ಸೆರೆ ಹಿಡಿದು ಪೋರ್ಟ್‌ರೇಟ್‌ಗಾಗಿ ಕಳುಹಿಸಬೇಕಾಗಿತ್ತು. ಬಾಲಬ್ರೂಹಿ ಗೆಸ್ಟ್ ಹೌಸ್‌ನಲ್ಲಿದ್ದ ಗೌಡರನ್ನು ಭೇಟಿ ಮಾಡಿ ಅವರ ಕ್ಯಾಮರಾದಲ್ಲಿ ಪೋಟೋ ಸೆರೆ ಹಿಡಿಯಲು ಬರೋಬ್ಬರಿ ಖರ್ಚು ಮಾಡಿದ್ದು ಒಂದು ರೀಲ್. ಹನ್ನೊಂದು ಮುಖ್ಯಮಂತ್ರಿಗಳ ಬಳಿ ಕೆಲಸ ಮಾಡಿದ್ದ ನನಗೆ ದೇವೇಗೌಡರ ನಗು ಕ್ಲಿಕ್ ಮಾಡಿದ್ದು ಮರೆಯಲಾಗದ ಘಟನೆ ಎಂದು ನೆನಪಿಸಿಕೊಂಡರು.

ನಾನು ಲಕ್ಷಾಂತರ ಕ್ಲಿಕ್ ಮಾಡಿರಬಹುದು. ನನ್ನ ಕ್ಯಾಮಾರದಲ್ಲಿ ಸೆರೆಯಾದ ಸಾವಿರಾರು ಅತ್ಯುತ್ತಮ ಚಿತ್ರಗಳಿವೆ. ಆದರೆ ಅವುಗಳಲ್ಲಿ ಖುಷಿಕೊಟ್ಟಿದ್ದು ಒಂದೇ ಒಂದು ಚಿತ್ರ. ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ ಸಂದರ್ಭವದು. ವೀರಪ್ಪನ್ ಸೆರೆಯಿಂದ ಬಿಡುಗಡೆಗೊಂಡ ಮೇಲೆ ಡಾ.ರಾಜ್ಕುಮಾರ್ ಅವರನ್ನು ಹೆಲಿಕ್ಯಾಪ್ಟರ್‌ನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಕರೆ ತರಲಾಯಿತು. ಅಣ್ಣವ್ರ ಹೆಲಿಕ್ಯಾಪ್ಟರ್‌ನಿಂದ ಇಳಿದಾಗ ತಾಯ್ನಲದ ಭೂಮಿಗೆ ನಮಸ್ಕರಿಸಿ ಮಣ್ಣನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡಾಗ ನಾನು ಕ್ಲಿಕ್ಕಿಸಿದ ಪೋಟೋ ಈ ತನಕ ನಾ ತೆಗೆದ ಅತ್ಯುತ್ತಮ ಚಿತ್ರ ಎಂದು ಹಳೆಯ ಘಟನೆಗೆ ಕನ್ನಡಿ ಹಿಡಿದರು.

ದೇವೇಗೌಡರಿಂದ ಹಿಡಿದು ಎಸ್.ಎಂ.ಕೃಷ್ಣ, ಜೆ.ಎಚ್.ಪಟೇಲ್, ಸಿದ್ದರಾಮಯ್ಯ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ತನಕ 11 ಸಿಎಂ ಜೊತೆಗೆ ಕೆಲಸ ಮಾಡುವಾಗ ಎಲ್ಲರೂ ಪ್ರೀತಿ ತೋರಿಸಿದ್ದಾರೆ. ಆದರೆ, ಬಹಳ ತಮಾಷೆಯಾಗಿ ಮತ್ತು ಅಷ್ಟೇ ಪ್ರೀತಿ ವಿಶ್ವಾಸದಲ್ಲಿ ನಡೆಸಿಕೊಂಡಿದ್ದು ಮಾತ್ರ ಜೆ.ಎಚ್.ಪಟೇಲ್. ಈ ವಿಷಯದಲ್ಲಿ ಅವರಿಗೆ ಸರಿಸಾಟಿ ಯಾರಿಲ್ಲ ಎಂದರು.
ವಾರ್ತಾ ಇಲಾಖೆಯಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪೋಟೋವನ್ನು ಮೊಟ್ಟಮೊದಲ ಬಾರಿಗೆ ಎಲ್ಲಾ ಪತ್ರಿಕಾಲಯಗಳಿಗೆ ಇಮೇಲ್ (ಆಗಷ್ಟೆ ಇಮೇಲ್ ಬಳಕೆ ಶುರುವಾಗಿತ್ತು)ಮಾಡಿದ ಹೆಗ್ಗಳಿಕೆಯೂ ನನ್ನದು ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಿಮ್ಮನಾಯಕನ ಕೋಟೆಯಲ್ಲಿ ಹುಟ್ಟಿ ಬೆಳೆದ ವಿಶ್ವೇಶ್ವರಪ್ಪ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ವಾರ್ತಾ ಇಲಾಖೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಿಎಂ ಪೋಟೋಗ್ರಾರ್ ಆಗಿ ದುಡಿದಿರುವುದನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಂ, ಹಿರಿಯ ಛಾಯಾಗ್ರಹಕ ಹಿಂದೂ ಪತ್ರಿಕೆಯ ಗೋಪಿನಾಥ್ ಅವರು ವಿಶ್ವೇಶ್ವರಪ್ಪ ಅವರ ಸರಳ ಸಜ್ಜನಿಕೆಯ ಬಗ್ಗೆ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತಿತರರು ಹಾಜರಿದ್ದರು

Get real time updates directly on you device, subscribe now.

Comments are closed.

error: Content is protected !!