ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸು: ಕೆ.ರಾಘವೇಂದ್ರ ಹಿಟ್ನಾಳ್
ಡಿ.ದೇವರಾಜ ಅರಸು ರವರ 109ನೇ ಜನ್ಮ ದಿನಾಚರಣೆ
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಕೊಪ್ಪಳ ಇವರ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಆಗಸ್ಟ್ 20ರಂದು ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ರವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರಾಜ ಅರಸು ರವರು ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಬಡವರ ಶೋಷಿತರ, ದೀನ ದಲಿತರ, ಆರ್ಥಿಕವಾಗಿ ಹಿಂದುಳಿದವರ ಎಲ್ಲಾ ಜನರ ಜೀವನವನ್ನು ಅರಿತುಕೊಂಡು ಅವರೆಲ್ಲರ ಸಮಸ್ಯೆಗಳ ನಿವಾರಣೆಗಾಗಿ ನಮ್ಮ ದೇಶದಲ್ಲಯೇ ಅತ್ಯುನ್ನತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆ, ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ದಲಿತ ಅರ್ಚಕರ ನೇಮಕ, ದೇವಾಲಯಗಳಲ್ಲಿ ಬೆತ್ತಲೆ ಸೇವೆ ನಿಷೇಧ, ಜಾತಿ ನಿಂಧನೆ ಕಾಯ್ದೆ ಜಾರಿಯಂತಹ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದವರು ದೇವರಾಜ ಅರಸರು. ಜಗಜ್ಯೋತಿ ಬಸವಣ್ಣನವರ ಸಮಾನತೆಯ ಪರಿಕಲ್ಪನೆಯನ್ನು ದೇವರಾಜ ಅರಸರು ಮೈಗೂಡಿಸಿಕೊಂಡಿದ್ದರು. ಅರಸುರವರಿಗೆ ಒಬ್ಬ ಬಡ ವಿದ್ಯಾರ್ಥಿ ಭೇಟಿಯಾಗಿ, ಬಡತನ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮತ್ತು ಊಟಕ್ಕೆ ಸಮಸ್ಯೆಯಿದೆ ಎಂದು ಹೇಳಿಕೊಂಡಾಗ ಹಾಸ್ಟೆಲ್ ಮಂಜೂರಿಸಿ ಸ್ಥಳದಲ್ಲಿಯೇ ಪರಿಹಾರ ನೀಡಿದ ಧೀಮಂತ ನಾಯಕರು. ಅರಸು ರವರು ತಮ್ಮ ಆಡಳಿತ ಅವಧಿಯಲ್ಲಿ ದಿಟ್ಟ ನಿರ್ಧಾರಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಬಡವರಿಗೆ, ದೀನ ದಲಿತರಿಗಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವುದುರ ಮೂಲಕ ಅವರಿಗೆ ಆರ್ಥಿಕವಾಗಿ ಶಕ್ತಿ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದಕ್ಕಾಗಿ ಪ್ರತಿ ವರ್ಷ ರೂ. 54 ಸಾವಿರ ಕೋಟಿಗಳನ್ನು ಬಡವರಿಗಾಗಿ ಖರ್ಚು ಮಾಡುತ್ತಿದೆ. ಇಂದು ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಯವರ ಜನ್ಮದಿನಾಚರಣೆಯೂ ಆಗಿದ್ದು, ರಾಜೀವ್‌ಗಾಂಧಿ ಅವರು ಈ ದೇಶದ ತಂತ್ರಜ್ಞಾ ನಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇದರ ಫಲವಾಗಿ ನಾವಿಂದು ಟಿವಿ, ಮೊಬೈಲ್, ಕಂಪ್ಯೂಟ್‌ಗಳಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದ್ದೇವೆ. ಇದರ ಜೊತೆಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಮೂರು ವಿಧದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೆ ತಂದರು. ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ವ್ಯವಸ್ಥೆ ಜಾರಿ ಮೂಲಕ ಗಾಂಧೀಜಿ ಯವರ ಕನಸನ್ನು ನನಸು ಮಾಡಿದ್ದಾರೆ. ಮಹನಿಯರ ಚಿಂತನೆಗಳನ್ನು ನಾವು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ. ಕೊಪ್ಪಳ ನಗರದಲ್ಲಿರುವ ವಸತಿ ರಹಿತರಿಗೆ ನಿವೇಶನ ಕಲ್ಪಿಸುವ ಕುರಿತಂತೆ ಈಗಾಗಲೇ ಆಶ್ರಯ ಕಮಿಟಿಯ ಸಭೆಯನ್ನು ಮಾಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಪ್ಪಳದ ನಿವೃತ್ತ ಪ್ರಾಂಶುಪಾಲರು, ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಡಿ.ದೇವರಾಜ ಅರಸು ರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಡಿ.ದೇವರಾಜ ಅರಸು ರವರು 1915ರ ಆಗಸ್ಟ್ 20ರಲ್ಲಿ ಮೈಸೂರಿನ ಹುಣಸೂರು ತಾಲ್ಲೂಕಿನ ಬೆಟ್ಟದತುಂಗಾದಲ್ಲಿ ಜನಿಸಿದರು. ತಂದೆ ದೇವರಾಜ ಅರಸು, ತಾಯಿ ದೇವಿಮಣಿ, ಮೈಸೂರು ಅರಸರ ಸಂಬಂಧಿಯಾಗಿದ್ದರು. ಯಾವುದೇ ಕಾರಣದಿಂದಾಗಿ ಅರಮನೆ ಸಂಪರ್ಕದಿಂದ ದೂರಗೊಂಡು ಸಾಮಾನ್ಯರಲ್ಲಿ ಅಸಾಮಾನ್ಯರಂತೆ ಬದುಕಿದರು. ಡಿ.ದೇವರಾಜ ಅರಸು ಅವರು ತಮ್ಮ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡು ಉಳುಮೆ ಮಾಡುತ್ತಿದ್ದರು. ಹಾಗಾಗಿ ಅವರಿಗೆ ರೈತರ, ದುರ್ಬಲ ವರ್ಗದವರ ಕಷ್ಟದ ಅರಿವಿತ್ತು. ದೀನ ದಲಿತರ ಬಗ್ಗೆ ಕಳಕಳಿ, ಸಂವೇದನೆ ಹೊಂದಿದ್ದ ದೇವರಾಜ ಅರಸು ಅವರಿಗೆ ದಲಿತ ಹಾಗೂ ದಮನಿತರ ಕಷ್ಟ, ನೋವುಗಳ ಅರಿವಿತ್ತು. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಮುಖ್ಯ ವಾಹಿನಿಗೆ ಬರಬೇಕು ಎಂಬುದು ಅವರ ಆಶಯವಾಗಿತ್ತು. ಅದರಂತೆ ಅವರ ಉದ್ಧಾರಕ್ಕಾಗಿ ತಮ್ಮ ಆಡಳಿತದಲ್ಲಿ ಹಲವಾರು ಯೋಜನೆ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಶೀಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉಚಿತ ಶಾಲೆ ಹಾಗೂ ವಸತಿ ಶಾಲೆಗಳನ್ನು ಆರಭಿಸಿದರು. ದಮನಿತರಿಗೆ ಸಮಾಜದಲ್ಲಿ ಘನತೆಯ ಬದುಕು ಕಲ್ಪಿಸಿಕೊಟ್ಟರು ಎಂದು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ ಕುಮಾರ, ಜಿ.ಪಂ ಉಪಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲವಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಸುರೇಶ ಕೋಕರೆ, ಕೊಪ್ಪಳ ತಹಶೀಲ್ದಾರರಾದ ವಿಠಲ್ ಚೌಗಲಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದ ಬಿ.ವಿ.ಮಠ, ಕೊಪ್ಪಳ ತಾಲ್ಲೂಕು ಹಿಂದುಳಿದ ಕಲ್ಯಾಣಾಧಿಕಾರಿಗಳಾದ ನಗರತ್ನ, ಇಲಾಖೆಯ ವಿಸ್ತರಣಾಧಿಕಾರಿಗಳಾದ ಹೆಚ್.ಕೆ ಬೆಟಗೇರಿ, ಪ್ರಾಶುಂಪಾಲರಾದ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅಲ್ಲಮಪ್ರಭು ಬೆಟ್ಟದೂರಿಗೆ ಹಾಗೂ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳು, ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆಯಾದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
Comments are closed.