ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ

Get real time updates directly on you device, subscribe now.

ಕೊಪ್ಪಳ: ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ ರಾಯರ ಮಠದಲ್ಲಿ ಮಂಗಳವಾರದಿಂದ ಮೂರು ನಡೆಯಲಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆರಾಧನೆ ಹಿನ್ನೆಲೆಯಲ್ಲಿ ರಾಯರ ಮಠದ ಪ್ರಾಂಗಣ ಹಾಗೂ ಮುಂಭಾಗದ ರಸ್ತೆಯನ್ನು ತರಹೇವಾರಿ ಬಣ್ಣಗಳ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಮಠದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ವಿವಿಧ ಪಂಡಿತರಿಂದ ಪ್ರವಚನ ಮಾಲಿಕೆ ಆರಂಭವಾಗಿದೆ.

ಮೊದಲ ದಿನದ ಪೂರ್ವಾರಾಧನೆಯಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ನಡೆಯಲಿದ್ದು, ಬಳಿಕ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಮದ್ಭಾಗವತ ಪ್ರವಚನ, ನೈವೇದ್ಯ, ಹಸ್ತೋದಕ, ಅಲಂಕಾರ ಮತ್ತು ತೀರ್ಥಪ್ರಸಾದ ಇರುತ್ತದೆ. ಸಂಜೆ 6 ಗಂಟೆಗೆ ಬೆಂಗಳೂರಿನ ಸುಜಯೀಂದ್ರ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ರಾತ್ರಿ 8ಕ್ಕೆ ಪ್ರತಿಭಾ ಪುರಸ್ಕಾರ, 9.30ಕ್ಕೆ ರಥೋತ್ಸವ, ಸ್ವಸ್ತಿವಾಚನ, ತೊಟ್ಟಿಲು ಸೇವೆ, ಫಲ ಹಾಗೂ ಮಂತ್ರಾಕ್ಷತೆ ವಿತರಣೆ ಜರುಗಲಿದೆ.

ಆ.21ರಂದು ನಡೆಯುವ ಮಧ್ಯಾರಾಧನೆ ದಿನದಂದು ಬೆಳಿಗ್ಗೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಸೊರಗಾವಿ ಅವರಿಂದ ಭಕ್ತಿ ಸಂಗೀತ, 8 ಗಂಟೆಗೆ ಪಂಡಿತ ಪುರಸ್ಕಾರ, 8.30ಕ್ಕೆ ರಾಘವೇಂದ್ರ ವಿಜಯ ಪ್ರವಚನ ಮಂಗಲ ಮಹೋತ್ಸವ ಮತ್ತು 9.30ಕ್ಕೆ ರಥೋತ್ಸವ ಆಯೋಜನೆಯಾಗಿದೆ.

22ರ ಉತ್ತರಾರಾಧನೆಯಂದು ಸುಪ್ರಭಾತ, ಅಷ್ಟೋತ್ತರದ ಬಳಿಕ ಮಧ್ಯಾಹ್ನ 12.15ಕ್ಕೆ ರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಬೆಂಗಳೂರಿನ ಕೀರ್ತನಾ ಹೊಳ್ಳ ಅವರಿಂದ ಭಕ್ತಿ ಸಂಗೀತ, 8ಕ್ಕೆ ಸೇವಾ ಪುರಸ್ಕಾರ, 8.15ಕ್ಕೆ ಗುಡೆಬೆಲ್ಲೂರಿನ ವೆಂಕಟ ನರಸಿಂಹಾಚಾರ್ಯ ಅವರಿಂದ ಪ್ರವಚನ ನಡೆಯಲಿದೆ.

ಆರಾಧನೆ ಅಂಗವಾಗಿ ಮೂರೂ ದಿನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಪಾಲ್ಗೊಳ್ಳುವಂತೆ ಮಠದ ಪ್ರಕಟಣೆ ತಿಳಿಸಿದೆ

Get real time updates directly on you device, subscribe now.

Comments are closed.

error: Content is protected !!