ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಆಗ್ರಹ

Get real time updates directly on you device, subscribe now.

ಕೊಪ್ಪಳ,ಜು.೧೦: ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ, ವಾಣಿಜ್ಯ ಸಂಕಿರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ, ಎಲ್ಲೆಡೆ ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ನಗರಸಭೆ ಪೌರಾಯುಕ್ತ ಎಚ್.ಎನ್ ಭಜಕ್ಕನವರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ನಗರ ವ್ಯಾಪ್ತಿಯಲ್ಲಿ ಹಲವಡೆ ಪ್ರಾರಂಭಿಸಿರುವ ಉದ್ದಿಮೆ, ವಾಣಿಜ್ಯ ಸಂಕಿರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡದ ನಾಮಫಲಕವನ್ನು ಹಾಕದೆ ಅನ್ಯ ಭಾಷೆಯ ನಾಮಫಲವನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ ಎಂದ ಅವರು ಇನ್ನೂ ಕೆಲವಡೆ ನಮ್ಮ ಮಾತೃಭಾಷೆ ಹಾಗೂ ಆಡಳಿತ ಭಾಷೆಯಾದ ಕನ್ನಡವನ್ನು ಸಣ್ಣ ಪ್ರಮಾಣದಲ್ಲಿ ಹಾಕಿಕೊಂಡು, ಅನ್ಯ ಭಾಷೆಯ ನಾಮಫಲಕವನ್ನು ದೊಡ್ಡದಾಗಿ ವೈಭವಿಕರಿಸುತ್ತಿರುವುದನ್ನು ಕಂಡು ಕಾಣದಂತೆ ಕುಳಿತಿರುವ ನಗರಸಭೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದರು. ಕನ್ನಡ ಭಾಷೆಯನ್ನು ಬಳಸದೆ ಅನ್ಯ ಭಾಷೆಯ ಓಲೈಕೆಯು ನಮ್ಮ ನಾಡಿಗೆ ಮಾಡಿದ ಘೋರ ಅನ್ಯಾಯವಾಗಿದ್ದು, ನಗರದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಅನುಷ್ಠಾನಗೂಳಿಸುವುದು ಸ್ಥಳೀಯ ಸಂಸ್ಥೆಗಳ ಜವಬ್ದಾರಿಯಾಗಿದ್ದು, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ ೧೯೬೩ರ ಪ್ರಕಾರ ಕನ್ನಡ ಭಾಷೆ ನಾಮಫಲಕ ಅಳವಡಿಸುವುದು ಹಾಗೂ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದರು. ನಾಮಫಲಕದ ಶೇ.೬೦ರಷ್ಟು ಜಾಗದಲ್ಲಿ ಕನ್ನಡ ಕಡ್ಡಾಯ ನಿಯಮ, ಪ್ರಥಮ ಆದ್ಯತೆಯಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡದಲ್ಲಿ, ಉಳಿದ ಶೇ.೪೦ರಷ್ಟು ಜಾಗದಲ್ಲಿ ಅಂಗಡಿ ಮಾಲಕರು ಇತರೆ ಭಾಷೆಯಲ್ಲಿ ತಮ್ಮ ನಾಮಫಲಕ ಪ್ರದರ್ಶಿಸಿಕೊಳ್ಳಬಹುದಾಗಿದ್ದು, ಈ ನಿಯಮವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಪ್ರದರ್ಶಿಸುತ್ತಿದ್ದಾರೆ. ಕೂಡಲೇ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ, ವಾಣಿಜ್ಯ ಸಂಕಿರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ, ಎಲ್ಲೆಡೆ ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸಬೇಕು. ಎಂದು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಎಚ್.ಎನ್ ಭಜಕ್ಕನವರ್ ಅವರು ನಿಯಮ ಪಾಲಿಸದ ಅಂಗಡಿ ಮುಗ್ಗಟ್ಟುಗಳ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ, ತಾಲೂಕಾ ಪ್ರ. ಕಾರ್ಯದರ್ಶಿ ನಿಂಗಪ್ಪ ಮೂಗಿನ, ಕರವೇ ಮುಖಂಡರುಗಳಾದ ನಾಗರಾಜ ಹಾಲಳ್ಳಿ, ನೂರಸಾಬ ಕವಲೂರ, ಶರಣಯ್ಯ ಹಿರೇಮಠ, ಕುಮಾರಸ್ವಾಮಿ ನಾಗರಳ್ಳಿ, ಮಂಜು ಗೊಂದಿ, ಬಸವರಾಜ ಚಿಕೆನಕೊಪ್ಪ, ನಾಗರಾಜ ವಾಲ್ಮೀಕಿ, ಮಹೇಶ ಹರಿಜನ, ಮಾರುತಿ ಹೆಚ್, ಅರವಿಂದ ಸೋಕನಿ, ಹನುಮೇಶ ಹರಿಜನ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!