ಗಂಗಾವತಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Get real time updates directly on you device, subscribe now.

ಪತ್ರಕರ್ತರು ನೈಜ ಸುದ್ದಿ ಬಿತ್ತರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಿ -ಗಾಲಿ ಜನಾರ್ದನರೆಡ್ಡಿ
ಗಂಗಾವತಿ: ಪತ್ರಕರ್ತರು ಮನಸಾಕ್ಷಿಗನುಗುಣವಾಗಿ ನೈಜ ವರದಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು, ಒಂದು ಮಾಧ್ಯಮ ಬಯಲು ಮಾಡುತ್ತಿರುವ ವರದಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರವೇ ಅಲುಗಾಡುವಂತಾಗಿದೆ. ಸರಕಾರದ ಸರಿ, ತಪ್ಪುಗಳನ್ನು ಮುಲಾಜಿಲ್ಲದೇ ವರದಿ ಮಾಡುವ ಛಾತಿ ಬೆಳೆಸುಕೊಳ್ಳಬೇಕು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಗಂಗಾವತಿ ತಾಲೂಕು ಘಟಕ ಭಾನುವಾರ ನಗರದ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಕಳೆದ ೨೫ ವರ್ಷಗಳಿಂದ ಪತ್ರಿಕ ಭವನದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಖಾಜಾಬಿ ಅವರನ್ನು ಸನ್ಮಾನಿಸಿ ನಂತರ ಅವರು ಮಾತನಾಡಿದರು.  ರಾಜ್ಯದಲ್ಲಿ ಒಂದು ಮಾಧ್ಯಮ ಇಂದು ಮುಖ್ಯಮಂತ್ರಿಗಳು ಮಾಡಿರುವ ಮೂಡಾ ಹಗರಣವನ್ನು ಬಟಾ ಬಯಲು ಮಾಡುತ್ತಿದೆ.  ಹಗರಣದಿಂದ ಸರಕಾರವೇ ನಡುಗುತ್ತಿದೆ.  ಸಮಾಜ ಸುಧಾರಣೆಗೆ ಪೂರಕವಾಗುವಂತಹ ವರದಿ ಬಿತ್ತರಿಸಬೇಕು.  ಶ್ರೀಮಂತರು ಕೋಟಿಗಟ್ಟಲೇ ಖರ್ಚು ಮಾಡಿ ಮಾಡುವ ಮದುವೆಯಿಂದ ಹತ್ತಾರು ರೀತಿಯ ಬಡ ವ್ಯಾಪಾರಿಗಳ ಬದುಕಿಗೆ ಆಸರೆಯಾಗುತ್ತದೆ.  ಶ್ರೀಮಂತಿಕೆಯ ಮದುವೆ ಬಗ್ಗೆ ಉಡಾಫೆಯ ವರದಿ ಮಾಡುವುದಕ್ಕಿಂತ ಮದುವೆಯಿಂದ ನಮ್ಮ ಜನರಿಗೆ ಆಗುವ ಲಾಭದ ಕುರಿತು ಯೋಚನೆ ಮಾಡಬೇಕು.  ಉದಾಹರಣೆಗೆ ನನ್ನ ಮಗಳ ಅದ್ದೂರಿ ಮದುವೆಯಿಂದ ಎಷ್ಟೊಂದು ವ್ಯಾಪಾರಿಗಳಿಗೆ ಅನುಕೂಲವಾಗಿತ್ತು ಎಂಬ ಸಂಪಾದಕೀಯ ವರದಿ ಇಂದಿಗೂ ನನಗೆ ಸಂತಸ ಮೂಡಿದೆ ಎಂದ ಅವರು ಪತ್ರಕರ್ತರಿಗೆ ಸರಕಾರ ವಿಶೇಷ ಸೌಲಭ್ಯ ನೀಡಲು ನಾನು ಮನವಿ ಮಾಡುತ್ತೇನೆ.  ಗಂಗಾವತಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡಿರುವ ಭರವಸೆಯಂತೆ ತಕ್ಷಣ ಗ್ರಂಥಾಲಯ ನಿರ್ಮಾಣಕ್ಕೆ ರೂ.೫ಲಕ್ಷ ಒದಗಿಸುತ್ತೇನೆ.  ಜೊತೆಗೆ ಅವಶ್ಯವಿರುವ ಪತ್ರಕರ್ತರಿಗೆ ಮನೆ ನಿರ್ಮಿಸುವ ಕೆಲಸದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದರು.
ಮುಂದುವರದು ಮಾತನಾಡಿದ ಅವರು ರಾಜ್ಯ ಸರಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ.  ಕೆಕೆಆರ್‌ಡಿಬಿ ರೂ.೨೦೦೦ ಕೋಟಿ ಹಣವನ್ನು ಮುಖ್ಯಮಂತ್ರಿಗಳು ತಮ್ಮ ವಿವೇಚನೆಯಂತೆ ಬಳಕೆ ಮಾಡಲು ಮುಂದಾಗಿದ್ದರು.  ಇದನ್ನು ವಿರೋಧಿಸಿ ನಾವು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೇವೆ.  ಹೀಗಾಗಿ ಮುಖ್ಯಮಂತ್ರಿಗಳು ಕೆಕೆಆರ್‌ಡಿಬಿ ಅನುದಾನ ನೀಡಲು ಒಪ್ಪಿಕೊಂಡಿದ್ದು, ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಈ ಅನುದಾನ ಬಳಕೆ ಮಾಡುತ್ತೇನೆ ಎಂದು ಭರವಸೆ ನೀಡಿದರಲ್ಲದೇ ಪತ್ರಿಕೆಯಿಂದ ಪ್ರಾರಂಭವಾದ ತಮ್ಮ ವೃತ್ತಿ ಜೀವನದ ಕುರಿತು ಮಾತನಾಡಿದರು.
ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಪತ್ರಕರ್ತರು ಸತ್ಯ ಮತ್ತು ಧರ್ಮಕ್ಕೆ ಒತ್ತು ನೀಡಬೇಕು.  ಅಂತವರಿಗೆ ಸಮಾಜದಲ್ಲಿ ನಿಶ್ಚಿತವಾಗಿ ಬೆಲೆ ಇರುತ್ತದೆ.  ಗಂಗಾವತಿಯಲ್ಲಿ ಬಹಳ ಜನ ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದಿದ್ದು, ಅವರಿಗೆ ಸರಕಾರದ ಸೌಲಭ್ಯ ಒದಗಿಸಲು ಶಾಸಕರು ಮುಂದಾಗಬೇಕು ಎಂದರು. ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಸಮಾಜಿಕ ಜಾಲತಾಣಗಳ ಮತ್ತು ಟಿವಿ ಮಾಧ್ಯಮಗಳ ಬ್ರೇಕಿಂಗ್ ವರದಿಯ ನಡುವೆಯೂ ಮುದ್ರಣ ಮಾಧ್ಯಮ ತನ್ನ ನಂಬಿಕೆಯನ್ನು ಉಳಿಸಿಕೊಂಡಿದೆ.  ಪತ್ರಕರ್ತರು ಗ್ರಾಮೀಣ ಜನ ಬದುಕು ಮತ್ತು ಸರಕಾರಿ ಶಾಲೆಗಳ ಸ್ಥಿತಿಗತಿಗಳ ಕುರಿತು ವರದಿ ಬಿತ್ತರಿಸಬೇಕು.  ಗಂಗಾವತಿಯ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ.  ಇಂತಹ ಮಾಧ್ಯಮ ಪ್ರತಿನಿಧಿಗಳಿಗೆ ಮನೆ ನಿರ್ಮಿಸುವ ಕೆಲಸ ಮಾಡಿದರೆ ನಾನು ಕೂಡಾ ಕೈ ಜೋಡಿಸುತ್ತೇನೆ ಎಂದರು. ಕುವೆಂಪು ಕನ್ನಡ ಭಾಷಾ ಪ್ರಾಧಿಕಾರದ ಸದಸ್ಯ ಹಾಗೂ ಪದವಿ ಕಾಲೇಜ್ ಪ್ರಾಚಾರ್ಯ  ಡಾ|| ಜಾಜೀ ದೇವೇಂದ್ರಪ್ಪ ವಿಶೇಷ ಉಪನ್ಯಾಸ ನೀಡಿ, ಪತ್ರಿಕೆಗಳ ವರದಿಗಳು ಸಮಾಜ ಸುಧಾರಣೆಗೆ ಪೂರಕವಾಗಿರಬೇಕು.  ಪತ್ರಕರ್ತರು ಸರಕಾರದ ಶಾಸ್ವತ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು.  ಪತ್ರಿಕೆಗಳಿಗೆ ಸಂಪಾದಕೀಯವೇ ಆತ್ಮವಾಗಿದೆ.  ಜಿಲ್ಲಾ ಪತ್ರಿಕೆಗಳು ಸಂಪಾದಕೀಯದ ಮೂಲಕ ಸಮಾಜ ತಿದ್ದುವ ಕೆಲಸ ಮಾಡಲಿ ಎಂದ ಅವರು ಬ್ರಿಟಿಷರ್ ಕಾಲದಲ್ಲೇ ಕೇವಲ ಮಂಗಳೂರಿನಲ್ಲಿ ಅಷ್ಟೇ ಅಲ್ಲ ಬಳ್ಳಾರಿಯಲ್ಲೂ ಮೊದಲ ಕನ್ನಡ ಪತ್ರಿಕೆ ಹೊರ ಬಂದಿತ್ತು.  ಇಂದಿಗೂ ಬಳ್ಳಾರಿಯ ಒಂದು ಚರ್ಚಿನಲ್ಲಿ ಅಂದಿನ ಮುದ್ರಣ ಯಂತ್ರವಿದೆ ಎಂದು ಮಾಧ್ಯಮದ ಬೆಳವಣಿಗೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರಮಿಕರಾದ ಖಾಜಿಬಿಯವರನ್ನು ಶಾಸಕರಾದ ಗಾಲಿ ಜನಾರ್ದನರೆಡ್ಡಿ ಆತ್ಮೀಯವಾಗಿ ಸನ್ಮಾನಿಸಿದರು.
ವೈಜೆಆರ್ ಕಾಲೇಜ್ ಅಧ್ಯಕ್ಷ ಜಾನಕೀರಾಮ್, ಲಿಟಲ್ ಹಾರ್ಟ್ಸ್ ಶಾಲೆ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಅಕ್ಷರ ಪಬ್ಲಿಕ್ ಶಾಲೆಯ ಅಧ್ಯಕ್ಷ ರವಿಚೇತನರೆಡ್ಡಿ ಮಾತನಾಡಿ, ಪತ್ರಿಕೆಗಳಿಂದ ಹಲವು ಬದಲಾವಣೆಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಂಗಾವತಿಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅತ್ಯಂತ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ.  ಸಂಘದಿಂದ ಗ್ರಂಥಾಲಯ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡುವುದರ ಜೊತೆಗೆ ಪತ್ರಕರ್ತರ ಸಮಸ್ಯೆಗೆ ಸ್ಪಂದಿಸಬೇಕು.  ಮತ್ತು ಸ್ಥಳೀಯ ಪತ್ರಿಕೆಗಳನ್ನು ಗುರುತಿಸಿ ಜಾಹಿರಾತು ನೀಡಬೇಕು ಎಂದರು. ಉಪ್ಪಾರ ಸಮಾಜದ ಅಧ್ಯಕ್ಷ ವೆಂಕಟೇಶ ಅಮರಜ್ಯೋತಿ ಇದ್ದರು.  ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ ನಿರ್ವಹಿಸಿದರು. ಪ್ರಸನ್ನ ದೇಸಾಯಿ ಸ್ವಾಗತಿಸಿದರು.  ಹರೀಶ ಕುಲಕರ್ಣಿ ಕಾರ್ಡ್ ವಿತರಣೆ ಮಾಡಿದರು.  ಶ್ರೀನಿವಾಸ ಎಂ.ಜೆ ವಂದಿಸಿದರು.
ಸಂಘದ ಉಪಾಧ್ಯಕ್ಷ ಜೋಗದ ಕೃಷ್ಣಪ್ಪ ನಾಯಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಶ್ವನಾಥ ಬೆಳಗಲ್‌ಮಠ, ಚಂದ್ರು ಮುಕ್ಕುಂದಿ, ಶಿವಪ್ಪ ನಾಯಕ, ಪತ್ರಕರ್ತರಾದ ವಿ.ಎಸ್.ಪಾಟೀಲ್,  ಮಂಜುನಾಥ ಹೊಸಕೇರಿ, ಸುದರ್ಶನ ವೈದ್ಯ,  ಕೆ.ಎಂ.ಶರಣಯ್ಯಸ್ವಾಮಿ, ವೆಂಕಟೇಶ ಮಹಾಂತ, ವೆಂಕಟೇಶ ಉಪ್ಪಾರ, ಜೋಗದ ರಮೇಶ, ಮಂಜುನಾಥ ಗುಡ್ಲಾನೂರು ,ದಿವಾಕರ, ಹನುಮೇಶ ಬಟಾರಿ, ದಶರಥ, ಮಲ್ಲಿಕಾರ್ಜುನ ಗೊಟೂರು, ಗಾದಿಲಿಂಗಪ್ಪ ನಾಯಕ್, ಅಕ್ಷಯ, ಟಾಕಪ್ಪ, ಶರಣಪ್ಪ ಮತ್ತಿತರು ಇದ್ದರು.

Get real time updates directly on you device, subscribe now.

Comments are closed.

error: Content is protected !!