ಪರೀಕ್ಷಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಿ: ಎಡಿಸಿ

Get real time updates directly on you device, subscribe now.

ಎಸ್.ಎಸ್.ಎಲ್.ಸಿ ಪರೀಕ್ಷೆ-3 : ಪೂರ್ವಭಾವಿ ಸಭೆ

  ಇದೇ ಆಗಸ್ಟ್ 02 ರಿಂದ 09 ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-3 ರಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಸುಗಮ ಪರೀಕ್ಷೆ ನಡೆಸುವುದು ಎಲ್ಲ ಪರೀಕ್ಷಾಧಿಕಾರಿಗಳು, ಸಿಬ್ಬಂದಿಗಳ ಜವಾಬ್ದಾರಿಯಾಗಿದ್ದು, ಅಚ್ಚುಕಟ್ಟಾಗಿ ಪರೀಕ್ಷಾ ಕರ್ತವ್ಯ ನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಆಗಸ್ಟ್ 02 ರಿಂದ 09 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-3 ರ ಅಂಗವಾಗಿ ಚರ್ಚಿಸಲು ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳ, ಮಾರ್ಗಾಧಿಕಾರಿಗಳು, ವೀಕ್ಷಕರು ಹಾಗೂ ಇತರೆ ಪರೀಕ್ಷಾ ನಿಯೋಜಿತ ಸಿಬ್ಬಂದಿ ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಕಾಲಮಿತಿಯಲ್ಲಿ ನಿಯಮಾನುಸಾರ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು, ಸುಗಮ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ನೀಡಿರುವ ನಾಮಿನಲ್ ರೋಲ್‌ನಲ್ಲಿ ಇರುವಂತೆ ಪರೀಕ್ಷಾ ಕೇಂದ್ರದಲ್ಲಿ ಆಸನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಯಾವುದೇ ರೀತಿಯ ಪರೀಕ್ಷಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಂದು ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ವಾಚ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟಾçನಿಕ್ ವಸ್ತುಗಳನ್ನು ತರುವಂತಿಲ್ಲ. ಈ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಎಚ್ಚರಿಕೆಯಿಂದ ತಪಾಸಣೆಗೆ ಕ್ರಮ ಕೈಗೊಂಡು, ಅಭ್ಯರ್ಥಿಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು, ಶೌಚಾಲಯ, ಸೂಕ್ತ ಗಾಳಿ ಬೆಳಕು, ಆಸನದ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಆರೋಗ್ಯ ಇಲಾಖೆಯಿಂದ ತುರ್ತು ಪರಿಸ್ಥಿತಿ ನಿರ್ವಹಣೆಗೆ ವೈದ್ಯಕೀಯ ಸಿಬ್ಬಂದಿಯನ್ನು  ನಿಯೋಜಿಸಬೇಕು. ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹಾಜರಿದ್ದ ಅಧಿಕಾರಿಗಳಿಗೆ ಅವರು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ ಬಿರಾದಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ 02 ರಿಂದ 09 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-3 ರಲ್ಲಿ ಜಿಲ್ಲೆಯಾದ್ಯಂತ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಯಲಬುರ್ಗಾ ತಾಲ್ಲೂಕಿನ 662, ಕುಷ್ಟಗಿ ತಾಲ್ಲೂಕಿನ 720, ಕೊಪ್ಪಳ ತಾಲ್ಲೂಕಿನ 863 ಹಾಗೂ ಗಂಗಾವತಿ 1,204 ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 3,449  ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಮಂಡಳಿಯ  ಮಾರ್ಗಸೂಚಿಯಂತೆ ಸುಗಮ ಪರೀಕ್ಷೆಗೆ ಎಲ್ಲ ರೀತಿಯ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ಶರಣಬಸವಗೌಡ, ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಪರೀಕ್ಷಾ ನಿಯೋಜಿತ ಸಿಬ್ಬಂದಿ, ಖಜಾನೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!