ಕಲ್ಮಲಾ-ಶಿಗ್ಗಾಂವ್ ರಸ್ತೆ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಡಿಗಲ್ಲು
ಗ್ರಾಮೀಣ ರಸ್ತೆ ಸುಧಾರಣೆಗೆ ಒತ್ತು — ಕೆ. ರಾಘವೇಂದ್ರ ಹಿಟ್ನಾಳ
— ಕಂಪ್ಲಿಯಿಂದ ಬೆಳಗಟ್ಟಿ ರಸ್ತೆ ನಿರ್ಮಾಣಕ್ಕೆ ಚಾಲನೆ
— ಕ್ಷೇತ್ರದ ರಸ್ತೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
— ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ
ಕೊಪ್ಪಳ:
ಕ್ಷೇತ್ರದಲ್ಲಿ ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಮಾದರಿ ರಸ್ತೆಗಳನ್ನಾಗಿ ನಿರ್ಮಾಣ ಮಾಡಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಕಂಪ್ಲಿ-ಬೆಳಗಟ್ಟಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಉತ್ತಮ ಜನಪರ ಆಡಳಿತದೊಂದಿಗೆ ರಾಜ್ಯ ಸರಕಾರ ಈಗಾಗಲೇ ಪಂಚ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಬಡ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ನಯಾಪೈಸೆ ಅನುದಾನ ನೀಡದೇ ತಾರತಮ್ಯ ಮಾಡಿದರು. ಅನುದಾನ ಬಿಡುಗಡೆಯಾಗದ ಹಿನ್ನೆಲೆ ಕ್ಷೇತ್ರದಲ್ಲಿ ಅನೇಕ ರಸ್ತೆಗಳು ಇಂದು ದುರಸ್ತಿ ಮಾಡದಂತ ಸ್ಥಿತಿಗೆ ಬಂದಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ರಾಮೀಣ ರಸ್ತೆಗಳ ಸುಧಾರಣೆಗೆ ವಿಶೇಷ ಒತ್ತು ನೀಡಿದೆ ಎಂದರು.
ಕಲ್ಮಲಾ-ಶಿಗ್ಗಾಂವ್ ರಸ್ತೆ ನಿರ್ಮಾಣ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದು, ಹಂತ ಹಂತವಾಗಿ ರಸ್ತೆ ಸುಧಾರಣೆ ಮಾಡಿದೆ. ಸುಮಾರು 20 ಕೋಟಿ ಅನುದಾನದಲ್ಲಿ ಕಂಪ್ಲಿಯಿಂದ ಬೆಳಗಟ್ಟಿ ವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವ ಕೆಲಸ ಮಾಡುವೆ ಎಂದರು.
ಕೆರೆ ತುಂಬಿಸುವ ಯೋಜನೆ : ಅಳವಂಡಿ ಭಾಗದ 16 ಕೆರೆ ತುಂಬಿಸುವ ಯೋಜನೆಗೆ ಹೀಗಾಗಲೇ 22.19 ಕೋಟಿ ಅನುಧಾನ ಮಂಜೂರು ಆಗಿದ್ದು ಟೆಂಡರ್ ಕೂಡ ಮುಗಿದಿದ್ದು ಶೀಘ್ರದಲ್ಲಿ ಅಡಿಗಲ್ಲು ನೆರವೇರಿಸಿ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನಿಡುತ್ತೇವೆ. ಈ ಯೋಜನೆಯಲ್ಲಿ ಕವಲೂರಿನ 3 ಕೆರೆ, ಅಳವಂಡಿಯ 3 ಕೆರೆ, ಬೆಳಗಟ್ಟಿ ಕೆರೆ, ಹಟ್ಟಿ ಕೆರೆ, ಮುರ್ಲಾಪುರ ಕೆರೆ, ಘಟ್ಟರಡ್ಡಿಹಾಳ ಕೆರೆ, ಮೋರನಾಳ ಗ್ರಾಮದ 2 ಕೆರೆ, ಬೆಟಗಗೇರಿ ಕೆರೆ, ಹಂದ್ರಾಳ ಕೆರೆ ಹಾಗೂ ಕೋಳೂರು ಕೆರೆಯನ್ನ ತುಂಬಿಸಲಾಗುವುದು.
ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಕೇಸಲಾಪುರ, ಹೈದರ್ ನಗರ, ಹಟ್ಟಿ, ಬೆಳಗಟ್ಟಿ, ಮುರ್ಲಾಪುರ ಘಟ್ಟರೆಡ್ಡಿಹಾಳ ಏತ ನೀರಾವರಿ ಯೋಜನೆಗೆ 10 ಕೋಟಿ ಅನುದಾನ ಮೀಸಲಿಟ್ಟು ಟೆಂಡರ್ ಕರೆಯುವ ಕೆಲಸ ಶೀಘ್ರದಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.
ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಕಲ್ಮಲಾ-ಶಿಗ್ಗಾಂವ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದಿಂದ ವಿಶೇಷ ಅನುದಾನ ತಂದು ಚತುಷ್ಪಥ ರಸ್ತೆಯನ್ನಾಗಿ
ಅಭಿವೃದ್ಧಿ ಮಾಡುವೆ. ಅಲ್ಲದೇ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಹ ಕವಲೂರು ಮಾರ್ಗದ ಮೂಲಕ ಹಾದು ಹೋಗಲಿದೆ. ಇದರಿಂದ ಕ್ಷೇತ್ರದ ರಸ್ತೆ ಸಂಪರ್ಕ ಜಾಲ ಮತ್ತಷ್ಟು ವಿಸ್ತಾರಗೊಳ್ಳಲಿದೆ. ಕೊಪ್ಪಳದಲ್ಲಿ ವಿಮಾನ ನಿಲ್ದಾಣ, ರೈಲ್ವೆ ಮತ್ತು ರಸ್ತೆ ಕಾಮಗಾರಿಗಳನ್ನು ಬರುವ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ, ಅಳವಂಡಿ-ಬೆಟಗೇರಿ, ಬಹದ್ದೂರ್ ಬಂಡಿ- ನವಲಕಲ್ ಏತ ನೀರಾವರಿ ಯೋಜನೆ ಈ ಭಾಗದ ರೈತರ ಬಹುದಿನದ ಕನಸಾಗಿದೆ. ಇದಕ್ಕಾಗಿ ಅನೇಕ ಹೋರಾಟ ನಡೆದಿವೆ. ಹೋರಾಟದ ಫಲವಾಗಿ ಈಗಾಗಲೇ ಸಿಂಗಟಾಲೂರು ಏತ ನೀರಾವರಿ ಹಾಗೂ ಇತರೆ ಏತ ನೀರಾವರಿ ಯೋಜನೆಗಳ ಕಾಮಗಾರಿ ಪ್ರಾರಂಭಗೊಂಡಿವೆ. ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ನಾನು ಈ ಯೋಜನೆ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಬೇಕೆಂಬ ಕನಸು ಹೊತ್ತಿದ್ದೇವೆ. ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಆದರೆ, ಅಳವಂಡಿ, ಕವಲೂರು, ಹಂದ್ರಾಳ, ಬೆಟಗೇರಿ ಸೇರಿದಂತೆ ಅನೇಕ ಗ್ರಾಮಗಳ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಸೋಲಾರ್ ಮತ್ತು ವಿಂಡ್ ಪವರ್ ಅವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ದಯಮಾಡಿ ಎಲ್ಲ ರೈತರು ಭೂಮಿ ಮಾರಾಟ ಮಾಡದೇ ಪೂರ್ವಜರ ಆಸ್ತಿ ರಕ್ಷಣೆ ಮಾಡುವ ಕೆಲಸ ಮಾಡಿ, ಇಲ್ಲವಾದಲ್ಲಿ ಮುಂದೊಂದು ದಿನ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಟ್ಟಿಯ ಹಜರತ್ ಮುಸ್ತಫಾ ಗುರುಗಳು, ಮುಖಂಡರಾದ ಕೃಷ್ಣರೆಡ್ಡಿ ಗಲಭಿ, ಭರಮಪ್ಪ ನಗರ, ಕೆ.ಎಂ.ಸೈಯದ್ ,ಗಾಳೆಪ್ಪ ಪೂಜಾರ, ರಾಮಣ್ಣ ಚೌಡ್ಕಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲೆ, ಚೌಡಪ್ಪ ಜಂತ್ಲಿ, ಅನ್ವರ ಗಡಾದ, ಗುರು ಬಸವರಾಜ ಹಳ್ಳಿಕೇರಿ, ಭೀಮಣ್ಣ ಬೋಚನಹಳ್ಳಿ, ಮಂಜುನಾಥ ಹಂದ್ರಾಳ, ತೋಟಪ್ಪ ಶಿಂಟ್ರ, ನೀಲಪ್ಪ ಹಟ್ಟಿ, ಹೊನ್ನಪಗೌಡ, ಸಲೀಂ ಅಳವಂಡಿ, ಭಾಗ್ಯಶ್ರೀ, ಮಹಾಂತೇಶ ಕವಲೂರು, ಮುತ್ತಣ್ಣ ಬಿಸರಳ್ಳಿ, ಮುದಿನ್ ಸಾಬ್ ಆಲೂರು, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅನುದಾನ ನೀಡುವಂತೆ ಒತ್ತಾಯಿಸುತ್ತೇವೆ.
ಕೆ. ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ
Comments are closed.