ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಉಸಿರು. ಪತ್ರಿಕಾ ವೃತ್ತಿ ಪ್ರಜಾಪ್ರಭುತ್ವಕ್ಕೆ ರಕ್ತವನ್ನು ಪಂಪ್ ಮಾಡುವ ಹೃದಯ ಇದ್ದ ಹಾಗೆ: ಕೆ.ವಿ.ಪ್ರಭಾಕರ್

Get real time updates directly on you device, subscribe now.

ಹಾಸನ ಜು 14 : ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಉಸಿರು. ಪತ್ರಿಕಾ ವೃತ್ತಿ ಪ್ರಜಾಪ್ರಭುತ್ವಕ್ಕೆ ರಕ್ತವನ್ನು ಪಂಪ್ ಮಾಡುವ ಹೃದಯ ಇದ್ದ ಹಾಗೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೃದಯಕ್ಕೆ ಶಕ್ತಿ ತುಂಬುವುದು ನಮ್ಮ ಸಂವಿಧಾನ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಈ ಸಂವಿಧಾನದ ಜೀವಾಳ ಎಂದರು.

ಪತ್ರಕರ್ತರಿಗೆ, ಪತ್ರಿಕಾ ವೃತ್ತಿಗೆ ನಮ್ಮ ಸಂವಿಧಾನ ಪ್ರತ್ಯೇಕವಾದ ಹಕ್ಕುಗಳನ್ನು ಕೊಟ್ಟಿಲ್ಲ. ಅಭಿವ್ಯಕ್ತಿ‌ ಸ್ವಾತಂತ್ರ್ಯದ ನೆರಳಲ್ಲೇ ಪತ್ರಿಕಾ ಸ್ವಾತಂತ್ರ್ಯವೂ ಇದೆ. ಹೀಗಾಗಿ ಸಂವಿಧಾನದ ರಕ್ಷಣೆಯಿಂದ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ ಎಂದು ತಿಳಿ ಹೇಳಿದರು.

ಜನರ ನಿರೀಕ್ಷೆ ಮತ್ತು ಸಮಸ್ಯೆಗಳನ್ನು ಅರಿಯಲು ಸರ್ಕಾರಕ್ಕಾಗಲಿ, ವಿರೋಧ ಪಕ್ಷಕ್ಕಾಗಲಿ ಇರುವ ಬಹುಮುಖ್ಯ ಸಾಧನ ಮಾಧ್ಯಮ. ಮೊದಲೆಲ್ಲಾ ಜನರ ನಿರೀಕ್ಷೆಗಳನ್ಮು ಮಾಧ್ಯಮಗಳು ಸರ್ಕಾರದ ಗಮನಕ್ಕೆ ತರುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕಾರ್ಪೋರೇಟ್ ಶ್ರೀಮಂತರ ವೈಯುಕ್ತಿಕ ಹಿತಾಸಕ್ತಿಗಳೇ ಜನರ ಸಮಸ್ಯೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ ಲೋಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಮನರಂಜನೆ ಮತ್ತು ಸುದ್ದಿಗಳ ಆಧ್ಯತೆ ಎರಡೂ ಬದಲಾಗಿವೆ. Entertainment ಚಾನಲ್ ಗಳಲ್ಲಿ ಬರುವ ಸೀರಿಯಲ್ ಗಳಲ್ಲಿ ಶ್ರೀಮಂತರ ಕುಟುಂಬಗಳ ಸಂಬಂಧಗಳು ಮತ್ತು ಸಮಸ್ಯೆಗಳನ್ನೇ ಇಡಿ ಸಮಾಜದ ಸಮಸ್ಯೆ ಎನ್ನುವಂತೆ ತೋರಿಸುತ್ತಾರೆ. ಶ್ರಮ ಸಂಸ್ಕೃತಿಯ ಬದುಕಿಗೆ ಇಲ್ಲಿ ಸ್ಥಾನಗಳಿಲ್ಲದಂತಾಗುತ್ತಿದೆ ಎಂದರು.

ಅದೇ ರೀತಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯನ್ನೇ ದೇಶದ ಹಿತಾಸಕ್ತಿ ಎನ್ನುವ ರೀತಿಯಲ್ಲಿ ಸುದ್ದಿ ಮಾಧ್ಯಮಗಳು ಬಿಂಬಿಸುತ್ತಿವೆ. ಇವೆರಡೂ ಕೂಡ ಸಮಾಜಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಅಲ್ಲವೇ ಎಂದು ಪ್ರಶ್ನಿಸಿದರು.

ಯಾವುದೇ ಪತ್ರಿಕಾ ಸಂಸ್ಥೆಗಳಲ್ಲಿ ಪತ್ರಿಕೆ ಹಾಕುವವರಿಂದ ಹಿಡಿದು ವರದಿಗಾರರು, ಜಾಹಿರಾತು ಪ್ರತಿನಿಧಿಗಳು, ಸಂಪಾದಕರವರೆಗೂ ಬಹುತೇಕ ಮಂದಿ ರೈತ, ಕಾರ್ಮಿಕರ. ಮಕ್ಕಳೇ ಆಗಿದ್ದಾರೆ. ಆದರೂ ರೈತ- ಕಾರ್ಮಿಕರ ಮತ್ತು ದುಡಿಯುವ ವರ್ಗಗಳ ನಿಜವಾದ ಸಮಸ್ಯೆಗಳಿಗೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಮೊದಲಿನಷ್ಟು ಪ್ರಾಶಸ್ತ್ಯ ಸಿಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ನಾವು ಈಗ ಪತ್ರಿಕಾ ಸ್ವಾತಂತ್ರ್ಯವನ್ನು , ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರೆ ಇದರಲ್ಲಿ ನಮ್ಮ ಪಾತ್ರ ಏನೇನೂ ಇಲ್ಲ. ನಮ್ಮ ಹಿಂದಿನವರ ಕಾಳಜಿ, ಹೋರಾಟ ಮತ್ತು ವೃತ್ತಿಪರತೆಯ ಫಲವನ್ನು ನಾವು ಈಗ ಸವಿಯುತ್ತಿದ್ದೇವೆ.

ಹೀಗಾಗಿ ನಮ್ಮ ಹಿಂದಿನವರು ನಮಗೆ ಒದಗಿಸಿಕೊಟ್ಟಿರುವ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಸವಲತ್ತನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ದಾಟಿಸಬೇಕು ಎನ್ನುವುದು ಮನವಿ ಮಾಡಿದರು.

ಫೇಕ್ ನ್ಯೂಸ್ ಫ್ಯಾಕ್ಟರಿಗಳೇ ತಲೆ ಎತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ಜವಾಬ್ದಾರಿಯನ್ನು ನಿರ್ವಹಿಸೋಣ. ಸಾಮಾಜಿಕ ತಾಣಗಳಿಂದ ಸಮಾಜಕ್ಕೆ ಆಗುತ್ತಿರುವ ಅನಾಹುತಗಳನ್ನು ತಡೆಯುವ ಶಕ್ತಿ ನಿಮಗಿದೆ ಎಂದರು.

ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್, ಜಿಲ್ಲಾ ರಕ್ಷಣಾಧಿಕಾರಿ ಮೊಹಮದ್ ಸುಜಿತಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ಮದನ್ ಗೌಡರು, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್, ಬಾಲಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ತೆಂಗಿನ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಟರಾಜ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!