ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಹಿನ್ನೆಲೆ: ಕೆ.ಪಿ.ಮೋಹನ್ ರಾಜ್ ರಿಂದ ವಿನೂತನ ಕಾರ್ಯಕ್ರಮ

Get real time updates directly on you device, subscribe now.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಹಿನ್ನೆಲೆ:ಕೊಪ್ಪಳ ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಅವರಿಂದ ವಿನೂತನ ಕಾರ್ಯಕ್ರಮ

===
ಕೊಪ್ಪಳ   ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸು ಮತ್ತು ಫೇಲಾದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳಿಂದ ಸಲಹೆ ಪಡೆಯುವ ವಿನೂತನ ಕಾರ್ಯಕ್ರಮವು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತಿಯ ಆಡಳಿತಾಧಿಕಾರಿಗಳಾದ ಕೆ.ಪಿ ಮೋಹನ್ ರಾಜ್ ಅವರಿಂದ ಜುಲೈ 13ರಂದು ನಡೆಯಿತು.
ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಚಿಂತನ ಮಂಥನ ನಡೆಸಬೇಕು. ಮಕ್ಕಳಿಂದ ಸಲಹೆ ಪಡೆಯಬೇಕು ಎನ್ನುವ ಪರಿಕಲ್ಪನೆಯೊಂದಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ರಜಾ ದಿನವಾದ ಎರಡನೇ ಶನಿವಾರದಂದು ಸಹ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಂವಾದ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು.
ಸಂವಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಮತು ಶಿಕ್ಷಕರು ಆಗಮಿಸಿದ್ದರು. ಪೂರ್ವನಿಗದಿಯಂತೆ ಸಂವಾದ ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ಆರಂಭವಾಗಿ ಸುಧೀರ್ಘ 3 ಗಂಟೆಗಳ ಕಾಲ ನಡೆಯಿತು.
ಸಂವಾದ ನಡೆಸುವ ಪೂರ್ವದಲ್ಲಿ ಕಾರ್ಯದರ್ಶಿಗಳು, ತಮ್ಮ ಬಾಲ್ಯದ ಜೀವನ, ಓದಿನ ದಿನಗಳು, ಐಎಎಸ್ ಪಾಸು ಮಾಡಲು ತಾವು ಪಟ್ಟ ಶ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಮ್ಮ ತಂದೆ ಎಸ್ಸೆಸ್ಸಲ್ಸಿ ಫೇಲಾಗಿದ್ದರು. ತಾಯಿ ಎಸ್ಸೆಸ್ಸೆಲ್ಸಿ ಫಾಸಾಗಿದ್ದರು. ನಮ್ಮದು ಮಧ್ಯೆಮ ವರ್ಗದ ಕುಟುಂಬ. ಕಷ್ಟಪಟ್ಟು ಓದಿದೆ. ಐಎಎಸ್ ಪಾಸು ಮಾಡಲೇಬೇಕು ಎಂದು ಹಠತೊಟ್ಟು ಓದಿ ಆ ಗುರಿ ತಲಿಪಿದೆ ಎಂದು ವಿದ್ಯಾರ್ಥಿಗಳಿಗೆ ತಮ್ಮ ಜೀವನಗಾಥೆಯ ಬಗ್ಗೆ ತಿಳಿಸಿ ಸಂವಾದದಲ್ಲಿ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪನೆ ನೀಡಿದರು.
ಸೋಲೆ ಗೆಲುವಿನ ಮೆಟ್ಟಿಲು : ಸೋಲೇ ಗೆಲುವಿನ ಮೆಟ್ಟಿಲು ಆಗಿದೆ. ಪರೀಕ್ಷೆಯಲ್ಲಿ ಫೇಲಾದ ಮಕ್ಕಳು ಯಾವುದೇ ರೀತಿ ಕುಗ್ಗದೇ ಮತ್ತೆ ಪರಿಶ್ರಮದೊಂದಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ದೇಶದಲ್ಲಿಯೇ ಅತ್ಯಂತ ಕಠೀಣ ಪರೀಕ್ಷೆಯಾದ ಐಎಎಸ್ ಪರೀಕ್ಷೆಗಾಗಿ ಹಲವಾರು ಜನ ಪರೀಕ್ಷೆ ಬರುಯುತ್ತಾರೆ. ಅದರಲ್ಲಿ ಕೆಲವೇ ಕೆಲವರಿಗೆ ಸಫಲತೆ ಸಿಗುತ್ತದೆ. ಆದರೆ, ಸಫಲತೆ ಸಿಗದ ಅಭ್ಯರ್ಥಿಗಳು ಮತ್ತೆ ಮತ್ತೆ ಪ್ರಯತ್ನ ಮಾಡಿ ತಮ್ಮ ಗುರಿಯನ್ನು ತಲುಪುತ್ತಾರೆ. ಮದುವೆಯಾದ ಬಳಿಕ ಐಎಎಸ್ ತೇರ್ಗಡೆಯಾದ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಅದರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ಮಕ್ಕಳು ಯಾವೂದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ರಾಜಕೀಯ, ಕ್ರೀಡಾ ಹಾಗೂ ಇತರೆ ಸ್ಪರ್ಧೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸೋಲು-ಗೆಲವು ಸರ್ವ ಸಾಮಾನ್ಯವಾಗಿದೆ. ಸೋಲು ಅನುಭವಿಸಿದವರು ಯಾರೂ ಸಹ ಹಿಂದೆ ಸರಿಯುವುದಿಲ್ಲ. ಯಾವುದೇ ಸೋಲು ನಿರಂತರವಲ್ಲ. ಇದಕ್ಕೆ ಕಾರಣ ಏನು ಎಂಬುವುದನ್ನು ಅರಿತುಕೊಂಡು ಮತ್ತೆ ಪ್ರಯತ್ನಿಸಬೇಕಷ್ಟೇ. ಅಂತೆಯೇ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಾದ ಸೂಲಿಗೆ ಭಯಪಡದೇ ಮತ್ತೊಮ್ಮೆ ಪ್ರಯತ್ನಿಸಿ ಗೆಲುವನ್ನು ಸಾಧಿಸಬೇಕು. ಮೊದಲು ವಿದ್ಯಾರ್ಥಿಗಳು ನಾವು ಮತ್ತೆ ಪ್ರಯತ್ನಿಸಿ ಸಫಲವಾಗುತ್ತೇವೆ ಎಂಬ ಆತ್ಮವಿಶ್ವಾಸ ಹೊಂದಬೇಕು. ಪ್ರತಿನಿತ್ಯ ಎಂಟು ತಾಸುಗಳ ಕಾಲ ವಿದ್ಯಾಭ್ಯಾಸ ಮಾಡುವ ಹವ್ಯಾಸವನ್ನು ಬೆಳಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಹಿಂದಿನ ಎಸ್ಸೆಸ್ಸೆಲ್ಸಿ ಫಲಿತಾಂಶವು ಶೇ.90ಕ್ಕಿಂತ ಹೆಚ್ಚಿತ್ತು. ಈ ಬಾರಿ ಕಡಿಮೆ ಇದೆ. ಈ ಬಗ್ಗೆ ಹಲವಾರು ಸಭೆಗಳನ್ನು ಕೈಗೊಳ್ಳಲಾಗಿದೆ. ಫಲಿತಾಂಶ ಕಡಿಮೆಗೆ ಶಿಕ್ಷಣ ಇಲಾಖೆಯವರು ವಿವಿಧ ಕಾರಣಗಳನ್ನು ನೀಡಿದ್ದಾರೆ. ಪರೀಕ್ಷೆಯಲ್ಲಿ ಮಕ್ಕಳಿಗಾದ ಸಮಸ್ಯೆಗಳನ್ನು ತಿಳಿಯಲು ಈ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಕ್ಕಳು ನಿಮ್ಮ ಸಮಸ್ಯೆಯನ್ನು ಮುಕ್ತವಾಗಿ ಹೇಳಿ. ನಿಮ್ಮ ಪ್ರಶ್ನೆ ಕೇವಲ ನಿಮಗೊಬ್ಬರಿಗೆ ಮಾತ್ರ ಸೀಮಿತವಗುವುದಿಲ್ಲ. ಬದಲಿಗೆ ಅದು ಮುಂಬರು ಎಲ್ಲಾ ಮಕ್ಕಳ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೊಪ್ಪಳ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ವೀಣಾ ಮಾತನಾಡಿ, ನನಗೆ ನೆನಪಿನ ಶಕ್ತಿ ಕೊರತೆಯಿದ್ದು, ಇದರಿಂದ ನನಗೆ ಪರೀಕ್ಷೆ ಪರೆಯಲು ತೊಂದರೆ ಉಂಟಾಗಿದೆ ಎಂದರು.
ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿ ಲಾವಣ್ಯ ಮಾತನಾಡಿ, ಕೋರನಾ ಸಂದರ್ಭದಲ್ಲಿ ನಾವುಗಳು ನಾವು 7ನೇ ತರಗತಿಯಲ್ಲಿದ್ದೇವೆ. ಆಸಂದರ್ಭದಲ್ಲಿ ತರಗತಿ ನಡೆಯದೇ ಇದ್ದ ಕಾರಣ 8 ಮತ್ತು 9ನೇ ತರಗತಿಗಳಲ್ಲಿ ನಮಗೆ ಶಿಕ್ಷಕರ ಭೋಧನೆ ತಿಳಿಯಲಿಲ್ಲ. ಹಾಗಾಗಿ 10ನೇ ತರಗತಿಯಲ್ಲಿಯೂ ಸಹ ಕಷ್ಟವಾಗಿದೆ ಎಂದರು.
ಕುಷ್ಟಗಿ ತಾಲ್ಲೂಕಿನ ಸಿರಗುಂಪಿ ಸರಕಾರಿ ಶಾಲೆಯ ವಿದ್ಯಾರ್ಥಿ ಮಾಳಪ್ಪ ಮಾತನಾಡಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್ ಎದುರಿಸಲು ಭಯವಾಗಿತ್ತು. ಆದ್ದರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳಲ್ಲಿಯೇ ವೆಬ್‌ಕಾಸ್ಟಿಂಗ್ ಅಳವಡಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮೇನ್ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್ ಎದುರಿಸಲು ಅನುಕೂಲವಾಗುತ್ತದೆ. ಪರೀಕ್ಷೆ ಬರೆಯಲು ಮೂರು ಬಾರಿ ಅವಕಾವಿರುವುದರಿಂದ ವಿದ್ಯಾರ್ಥಿಗಳು ಮೊದಲ ಬಾರಿಯ ಪರೀಕ್ಷೆಗೆ ಹೆಚ್ಚು ಓದುತ್ತಿಲ್ಲ ಎಂದು ಹೇಳಿದರು.
ಗಂಗಾವತಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ನಯನಾ ಮಾತನಾಡಿ, ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳು, ಇಂಪಾರ್ಟೆAಟ್ ಪ್ರಶ್ನೆಗಳನ್ನು ಹೇಳಿಕೊಡುವ ವ್ಯವಸ್ಥೆ ಮಾಡಬೇಕು ಎಂದರು.
ವಿಜಯಕುಮಾರ ಮಾತನಾಡಿ, ನನ್ನ ತಂದೆ-ತಾಯಿ ಜೊತೆ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ಶಾಲೆಗೆ ಹೆಚ್ಚಾಗಿ ಹಾಜರಾಗಲಿಲ್ಲ. ಆದರೂ ಸಹ ನನ್ನಲ್ಲಿ ಓದಬೇಕೆಂಬ ಹವ್ಯಾಸವಿತ್ತು. ಅದರಂತೆ ಎಸ್ಸೆಸ್ಸೆಲ್ಸಿಯಲ್ಲಿ ಪಾಸ್ ಆಗಿದ್ದೇನೆ. ವಿದ್ಯಾರ್ಥಿಗಳು ಓದಲೇಬೇಕೆಂಬ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾಧ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಒಂದೊAದಾಗಿ ಆಲಿಸಿ, ಮಕ್ಕಳ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮತನಾಡಿ, ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವು ಕಡೆಮೆಯಾಗಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕು. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರನ್ನೊಳಗೊಂಡು ತಂಡಗಳನ್ನು ರಚಿಸಿ ಚಿಂತನ ಮಂಥನ ನಡೆಸುವುದು, ಇನ್ನೂ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಶ್ರೀಶೈಲ್ ಬಿರಾದಾರ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಟೂಶನ್ ಕ್ಲಾಸ್‌ಗಳನ್ನು ನಡೆಸುವುದು, ಪ್ರಶೋತ್ತರ ಪುಸ್ತಕಗಳ ವಿತರಣೆಗೆ ವ್ಯವಸ್ಥೆ ಸೇರಿದಂತೆ ಬೇರೆ ಬೇರೆ ರೀತಿಯ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ವಿವಿಧ ಶಾಲೆಯ ಶಿಕ್ಷಕರು ಮಾತನಾಡಿ, ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಶಿಕ್ಷಕರ ಮತ್ತು ಕೊಠಡಿಗಳ ಕೊರತೆ ಉಂಟಾಗುತ್ತಿದೆ. ಇದರಿಂದಲೂ ಫಲಿತಾಂಶ ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದರು.
ಪತ್ರಕರ್ತರೊಂದಿಗೆ ಸಂವಾದ : ಮಕ್ಕಳೊಂದಿಗೆ ಸಂವಾದ ನಡೆಸುವ ಸಂದರ್ಭದಲ್ಲಿ ಫಲಿತಾಂಶ ಹಿನ್ನೆಡೆಗೆ ಕಾರಣ ಏನು ಎಂಬುದರ ಬಗ್ಗೆ ಪತ್ರಕರ್ತರೊಂದಿಗೆ ಸಹ ಕಾರ್ಯದರ್ಶಿಗಳು ಸಂವಾದ ನಡೆಸಿದರು.
ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಮಕ್ಕಳಿಗೆ ಹಾಜರಾತಿ ಇರುವಂತೆ ಶಿಕ್ಷಕರ ಹಾಜರಾತಿಯನ್ನು ಸಹ ಕಡ್ಡಾಯ ಪ್ರತಿದಿನ ಮೇಲ್ವಿಚಾರಣೆ ಮಾಡಬೇಕು. ಬಯೊಮೆಟ್ರಿಕ್ ಅಳವಡಿಸಿ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಪತ್ರಕರ್ತರಾದ ರವೀಂದ್ರ ವಿ.ಕೆ. ಮತ್ತು ಅನೀಲ್ ಬಾಚನಹಳ್ಳಿ ಅವರು ಸಲಹೆ ಮಾಡಿದರು.
ಪ್ರಾಥಮಿಕ ಶಿಕ್ಷಣದಲ್ಲಿಯೇ ಮೂಲಸಮಸ್ಯೆ ಇದೆ. ಇದನ್ನು ಮೊದಲು ಸರಿಪಡಿಸಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಹಿನ್ನೆಡೆಗೆ ಕ್ಯಾಮರಾವೊಂದೇ ಕಾರಣವಲ್ಲ. ಬೋಧನಾ ಅವಧಿಯನ್ನು ವಿಸ್ತರಿಸಬೇಕು. ಶಿಕ್ಷಕರನ್ನು ಬೋಧನೆಗಷ್ಟೇ ಮಿತಿಗೊಳಿಸಬೇಕು. ಅನ್ಯ ಕಾರ್ಯಕ್ಕೆ ಬೇರೆಯವರನ್ನು ಬಳಸಬೇಕು ಎಂದು ಹಿರಿಯ ಪತ್ರಕರ್ತರಾದ ಚಾಮರಾಜ ಸವಡಿ ಅವರು ಸಲಹೆ ಮಾಡಿದರು.
ಬಹುತೇಕ ಮಕ್ಕಳು ಶಾಲೆಗೆ ಬರುವುದಿಲ್ಲ. ಆದರೂ ಅಂತಹ ಮಕ್ಕಳಿಗೆ ಹಾಜರಾತಿ ಕೊಡಲಾಗುತ್ತದೆ. ಏಳು, ಎಂಟು, ಒಂಬತ್ತನೇ ತರಗತಿಯಲ್ಲಿ ಮಕ್ಕಳ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಬೇರೆಯವರಿಂದ ಪರೀಕ್ಷೆ ಬರೆಯಿಸಿ ಎಸ್ಸೆಸ್ಸೆಲ್ಸಿವರೆಗೆ ಮಕ್ಕಳನ್ನು ಎಳೆ ತರುತ್ತಾರೆ. ಹೀಗಾಗಿ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೊರೆಯಾಗಿ ಪರಿಣಮಿಸುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಹಿನ್ನೆಡೆಗೆ ಇರುವ ಇರುವ ವಾಸ್ತವ ಸತ್ಯವನ್ನು ಯಾರು ಸಹ ಒಪ್ಪುತ್ತಿಲ್ಲ ಎಂದು ಹಿರಿಯ ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ ಅವರು ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಪ್ರಮೋದ, ಶ್ರೀಕಾಂತ ಅಕ್ಕಿ, ದೊಡ್ಡೇಶ ಯಲಿಗಾರ, ಶ್ರೀನಾಥ ಮರಕುಂಬಿ, ಪತ್ರಿಕಾ ಛಾಯಾಗ್ರಾಹಕರಾದ ನಾಗರಾಜ ಹಡಗಲಿ, ಭರತ್ ಕಂದಕೂರ, ವಿಡಿಯೋ ಜರ್ನಲಿಸ್ಟ್ ಸಮೀರ್ ಪಾಟೀಲ ಸೇರಿದಂತೆ ಇನ್ನೀತರರು ಇದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕರು, ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸು ಮತ್ತು ಫೇಲಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳೊಂದಿಗೆ ಊಟ ಸವಿದರು : ಕಾರ್ಯಕ್ರಮ ಮುಕ್ತಾಯದ ನಂತರ ಕಾರ್ಯದರ್ಶಿಗಳು ವಿದ್ಯಾರ್ಥಿಗಳೊಂದಿಗೆ ತೆರಳಿ ಮಕ್ಕಳೊಂದಿಗೆ ಊಟ ಮಾಡಿದರು.
ಸಂವಿಧಾನ ಪುಸ್ತಕ ವಿತರಣೆ: ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಸಂವಿಧಾನ ಪುಸ್ತಕ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಇತರ ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಯಿತು.

Get real time updates directly on you device, subscribe now.

Comments are closed.

error: Content is protected !!