ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿಮಾನುಷ ತಿರುವಿನ ಪ್ರೇಮಕತೆ

0

Get real time updates directly on you device, subscribe now.

ಡಿ. ೨೩ರಿಂದ ‘ನೂರು ಜನ್ಮಕೂ’ ಧಾರವಾಹಿ ಆರಂಭ

ಕೊಪ್ಪಳ: ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಈ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ತಿಳಿಸಿದ್ದಾರೆ.

ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.

ಚಿತ್ರೀಕರಣ: ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಚೆಂದದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ. ಉನ್ನತ ಮಟ್ಟದ ಗ್ರಾಫಿಕ್ಸ್ ಹೊಂದಿರುವ ಈ ಧಾರವಾಹಿ ಕನ್ನಡ ಪ್ರೇಕ್ಷಕರ ಮನಸೂರೆಗೊಳಿಸುತ್ತದೆ. ಕನ್ನಡ ಧಾರಾವಾಹಿಗಳಲ್ಲಿ ಅತಿಮಾನುಷ ಶಕ್ತಿಯ ಕತೆಗಳು ಕಡಿಮೆ. ಆ ಕೊರತೆಯನ್ನು ‘ನೂರು ಜನ್ಮಕೂ’ ಸಮರ್ಥವಾಗಿ ತುಂಬಲಿದೆ ಎಂದರು.

ತಾರಾಗಣ: ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾ’ ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ಇದೀಗ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಚಿರಂಜೀವಿ ಪಾತ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ಚಿರು, ಜಾಲಿಯಾಗಿರೋ ಮನುಷ್ಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಸ್ಪೋರ್ಟಿವ್ ಆಗಿ ತಗೋತಾನೆ. ಫ್ಯಾಮಿಲಿ ಮ್ಯಾನ್, ಶತೃಗಳನ್ನೂ ಪ್ರೀತಿಸ್ತಾನೆ. ದೆವ್ವ-ದೇವರ ಮೇಲೆ ನಂಬಿಕೆ ಇಲ್ಲ. ಮಿಸ್ ಮಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದ ಶಿಲ್ಪಾ ಕಾಮತ್ ನಾಯಕಿಯಾಗಿ ಮೈತ್ರಿ ಪಾತ್ರದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ಕಥಾ ನಾಯಕಿ ಮೈತ್ರಿ, ರಾಘವೇಂದ್ರ ಸ್ವಾಮಿ ಭಕ್ತೆ. ಆಶಾವಾದಿ, ಸ್ವಾಭಿಮಾನಿ ಹಾಗೂ ತ್ಯಾಗಮಯಿ. ವಿಶೇಷ ಪಾತ್ರ ಅಂದ್ರೆ, ದೆವ್ವದ ಪಾತ್ರದಲ್ಲಿ ಚಂದನ ಗೌಡ ನಟಿಸುತ್ತಿದ್ದಾರೆ. ಈ ಪಾತ್ರದ ಹೆಸರು ಕಾಮಿನಿ. ಇವಳಿಗೆ ಚಿರು ಎಂದರೆ ಪ್ರಾಣ. ಶಾರ್ಟ್ ಟೆಂಪರ್, ಹಠಮಾರಿ ಹಾಗೂ ಧೈರ್ಯವಂತೆ. ಹಿರಿಯ ನಟಿ ಗಿರಿಜಾ ಲೋಕೇಶ, ಭಾಗ್ಯಶ್ರೀ, ಬಿ.ಎಂ.ವೆಂಕಟೇಶ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರವರ್ಗದಲ್ಲಿದ್ದಾರೆ. ಜೊತೆಗೆ ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ಇದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದೆ ಎಂದರು.

ಟಿವಿ ಧಾರಾವಾಹಿಗಳ ಪ್ರೇಮಕತೆಗಳ ಸ್ವರೂಪವನ್ನೇ ಬದಲಾಯಿಸಲು ಸಜ್ಜಾಗಿರುವ ‘ನೂರು ಜನ್ಮಕೂ’ ಮೊದಲ ಸಂಚಿಕೆಯನ್ನು ತಪ್ಪಿಸಿಕೊಳ್ಳಬೇಡಿ. ಕಲರ್ಸ್ ಕನ್ನಡ ಒಂದು ಕುಟುಂಬ ಮನರಂಜನಾ ಚಾನಲ್ ಆಗಿದ್ದು, ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುಣಮಟ್ಟದ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಒದಗಿಸುತ್ತದೆ. ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ನಿನಗಾಗಿ, ದೃಷ್ಟಿಬೊಟ್ಟು, ಕರಿಮಣಿ, ಶ್ರೀಗೌರಿ, ಗಿಚ್ಚಿ-ಗಿಳಿಗಿಳಿ, ರಾಜಾ-ರಾಣಿ, ನನ್ನಮ್ಮ ಸೂಪರ್‌ಸ್ಟಾರ್, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್ ಮತ್ತು ಬಿಗ್ ಬಾಸ್ ಕನ್ನಡ ಚಾನಲ್‌ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲವು ಎಂದರು‌.

Get real time updates directly on you device, subscribe now.

Leave A Reply

Your email address will not be published.

error: Content is protected !!