ಕೊಪ್ಪಳ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಸದಸ್ಯರಿಂದ ಪರಿವೀಕ್ಷಣೆ
ಕಾರಾಗೃಹ, ಬಸ್ ನಿಲ್ದಾಣ, ವಸತಿ ನಿಲಯಗಳಿಗೆ ಭೇಟಿ
ಕೊಪ್ಪಳ ಜಿಲ್ಲೆಯಲ್ಲಿ ಜುಲೈ 10ರಂದು ಪ್ರವಾಸದ ಮೇಲಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಟಿ ಶ್ಯಾಮ್ ಭಟ್ ಹಾಗೂ ಗೌರವಾನ್ವಿತ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಪೂರ್ವನಿಗದಿಂತೆ ಕೊಪ್ಪಳ ಜಿಲ್ಲೆಯಲ್ಲಿ ಪರಿವೀಕ್ಷಣೆ ಕೈಗೊಂಡರು.
ಬೆಳಗ್ಗೆ ಜಿಲ್ಲಾಡಳಿತ ಭವನದಲ್ಲಿನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ಮತ್ತು ಸಿಟಿಂಗ್ಸ್ ನಡೆಸಿದ ನಂತರ ಮಧ್ಯಾಹ್ನ ವೇಳೆ ಅಧ್ಯಕ್ಷರು ಹಾಗೂ ಸದಸ್ಯರು, ಆಯೋಗದ ಕಾರ್ಯದರ್ಶಿ ಎ ದಿನೇಶ್ ಸಂಪತ್‌ರಾಜ್, ಆಪ್ತ ಕಾರ್ಯದರ್ಶಿಗಳಾದ ಅರುಣ ಪೂಜಾರ್, ಅಪರ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮೊದಲಿಗೆ ನಗರದಲ್ಲಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.
ಕಾರಾಗೃಹದಲ್ಲಿನ ಅಡುಗೆ ಸಿದ್ಧತಾ ಕೋಣೆ, ಅಡುಗೆ ಸಾಮಗ್ರಿ ಕೋಣೆ, ಕೈದಿಗಳ ಸೆಲ್‌ಗಳ ವೀಕ್ಷಣೆ ನಡೆಸಿದರು. ಕೈದಿಗಳಿಗೆ ಬಡಿಸಲು ಸಿದ್ಧಪಡಿಸಿದ್ದ ಅಡುಗೆಯನ್ನು ಪರೀಕ್ಷಿಸಿದರು. ಅಡುಗೆ ಸಿದ್ಧತಾ ಕೋಣೆ ಸೇರಿದಂತೆ ಎಲ್ಲಾ ಕಡೆಗೆ ಶುಚಿತ್ವ ಕಾಯ್ದುಕೊಳ್ಳಲು ಸೂಚನೆ ನೀಡಿದರು. ವಕೀಲರೊಂದಿಗೆ ಕಾಲಕಾಲಕ್ಕೆ ವಿಚಾರಣೆಗೆ ಹಾಜರಾಗುತ್ತಿರಾ? ಎಂದು ಅಲ್ಲಿದ್ದ ಕೈದಿಗಳಿಗೆ ಮಾತನಾಡಿದರು. ಪ್ರತಿದಿನ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡುತ್ತೀರಾ? ಲೈಬ್ರರಿ ಇದೆಯಾ? ವಕೀಲರು ಬಂದು ಕೌನ್ಸೆಲಿಂಗ್ ಮಾಡ್ತಾರಾ? ಕೈದಿಗಳಿಗೆ ಯೋಗ, ಚಿಂಥನ ಮಂಥನ ನಡೆಸುತ್ತಿರಾ? ಎಂದು ಕೇಳಿ ಮಾಹಿತಿ ಪಡೆದುಕೊಂಡರು.
ಜೈಲಿನಲ್ಲಿರುವ ಒಟ್ಟು ಕೈದಿಗಳ ಸಂಖ್ಯೆ, ಅವರಿಗೆ ನೀಡುತ್ತಿರುವ ಆಹಾರ, ಜೈಲಿನಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರ ಸೇರಿದಂತೆ ನಾನಾ ಮಾಹಿತಿಯನ್ನು ಇದೆ ವೇಳೆ ಕಾರಾಗೃಹದ ಜೈಲರ್ ರಾಮುಲು ಅವರು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ನೀಡಿದರು.
ಬಳಿಕ ಕೊಪ್ಪಳ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರೊಂದಿಗೆ ಮಾತನಾಡಿ ಬಸ್ ನಿಲ್ದಾಣದಲ್ಲಿನ ವ್ಯವಸ್ಥೆಯ ಬಗ್ಗೆ ಕೇಳಿದರು. ಬಸ್ ನಿಲ್ದಾಣದಲ್ಲಿನ ಶೌಚಕ್ಕೆ ಹೋಗಲು 10 ರೂ., 15 ರೂ ಮತ್ತು ಮೂತ್ರ ವಿಸರ್ಜನೆ ಮಾಡಲು 5 ರೂಪಾಯಿ ತೆಗೆದುಕೊಳ್ಳುತ್ತಾರೆ. ಇಂತಿಷ್ಟು ಹಣ ನೀಡಬೇಕು ಎಂದು ಎಲ್ಲಿಯೂ ಬೋರ್ಡ್ ಹಾಕಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಕೆಲವು ಸಾರ್ವಜನಿಕರು ತಂಡದ ಎದುರು ದೂರಿದರು. ಈ ಬಗ್ಗೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಹಿರಿಯ ಘಟಕ ವ್ಯವಸ್ಥಾಪಕರಾದ ಬಸವರಾಜ ಬಟ್ಟೂರ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಆರ್.ಬಿ.ಜಾದವ್ ಅವರೊಂದಿಗೆ ಚರ್ಚಿಸಿದರು. ಶೌಚ ಮತ್ತು ಮೂತ್ರಾಲಯಕ್ಕೆ ನಿಗದಿಪಡಿಸಿದಷ್ಟು ಹಣವನ್ನು ಮಾತ್ರ ಪಾವತಿಸಬೇಕು ಎನ್ನುವ ಫಲಕವನ್ನು ಹೊರಗಡೆ ಕೂಡಲೇ ಹಾಕಬೇಕು. ಬಸ್ ನಿಲ್ದಾಣದ ಎಲ್ಲಾ ಕಡೆಗೆ ಶುಚಿತ್ವ ಕಾಯ್ದುಕೊಳ್ಳಬೇಕು. ಜನರಿಗೆ ಅನುಕೂಲವಾಗುವ ಹಾಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒತ್ತು ಕೊಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಆಯೋಗದ ಸದಸ್ಯರ ತಂಡವು ಬಳಿಕ ನಗರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿತು. ಅಲ್ಲಿನ ಅಡುಗೆ ಸಿದ್ಧತೆ ಕೋಣೆ, ಆಹಾರ ದಾಸ್ತಾನು ಸಾಮಗ್ರಿ ಕೊಠಡಿಯ ವೀಕ್ಷಣೆ ನಡೆಸಿದರು. ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರ ಅಗತ್ಯಕ್ಕೆ ತಕ್ಕಂತೆ ಕಡ್ಡಾಯವಾಗಿ ಸ್ನಾನಗೃಹಗಳ ಮತ್ತು ಶೌಚಗೃಹಗಳ ವ್ಯವಸ್ಥೆಯನ್ನು ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಕೂಡಲೇ ಬಾಡಿಗೆ ಕಟ್ಟಡ ಪಡೆದು ಅವರಿಗೆ ಸರಿಯಾದ ಸೌಕರ್ಯ ಕಲ್ಪಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿನ ಎಲ್ಲಾ ವಸತಿ ನಿಲಯಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ 6 ತಿಂಗಳೊಳಗೆ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಬೇಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ವಿಜಯಕುಮಾರ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ ಆರ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜನ ತೊದಲಬಾಗಿ, ನಗರಸಭೆ ಪೌರಾಯುಕ್ತರಾದ ಗಣೇಶ ಪಾಟೀಲ, ತಹಸೀಲ್ದಾರ ವಿಠ್ಠಲ್ ಚೌಗಲಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ಟಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ, ಟೌನ್ ಪೊಲೀಸ್ ಇನ್ಸಪೆಕ್ಟರ್ ಜಯಪ್ರಕಾಶ ಸೇರಿದಂತೆ ಇತರರು ಇದ್ದರು.
Comments are closed.