ಪ್ರಧಾನ ಮಂತ್ರಿ ಆವಾಸ್‌ ಯೋಜನೆ: ಆದ್ಯತೆ ಮೇರೆಗೆ ಅಪೂರ್ಣ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Get real time updates directly on you device, subscribe now.

 

ಬೆಂಗಳೂರು, 
ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ ಈಗಾಗಲೇ ಪ್ರಾರಂಭವಾಗಿರುವ ಮನೆಗಳ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಅವರು ಕೃಷ್ಣಾದಲ್ಲಿ ಬುಧವಾರ ವಸತಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೊಳಚೆ ನಿರ್ಮೂಲನೆ ಮಂಡಳಿ ಅಡಿಯಲ್ಲಿ 82 ಸಾವಿರ ಮನೆಗಳು, ರಾಜೀವ್‌ ಗಾಂಧಿ ವಸತಿ ನಿಗಮ ಅಡಿಯಲ್ಲಿ47800 ಮನೆಗಳು ಒಟ್ಟು 1.30 ಲಕ್ಷ ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿದ್ದು, ಅವುಗಳ ನಿರ್ಮಾಣ ಕಾರ್ಯವನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಪ್ರತಿ ಮನೆಯ ನಿರ್ಮಾಣದ ಘಟಕ ವೆಚ್ಚ 6 ರಿಂದ 7.5 ಲಕ್ಷಗಳಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನವನ್ನು ಹೊರತುಪಡಿಸಿ, ಬಾಕಿ ಸುಮಾರು 4 ರಿಂದ 5 ಲಕ್ಷ ರೂಪಾಯಿಗಳ ವಂತಿಕೆ ಮೊತ್ತವನ್ನು ಫಲಾನುಭವಿಗಳೇ ಭರಿಸಬೇಕಾಗಿತ್ತು. ಈ ಮೊತ್ತವನ್ನು ಆರ್ಥಿಕವಾಗಿ ಆಶಕ್ತರಾಗಿರುವ ಕೊಳಗೇರಿ ನಿವಾಸಿಗಳು ಪಾವತಿಸಲು ಕಷ್ಟಕರವಾಗಿ ಮನೆಗಳ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದವು. ಆದುದರಿಂದ, ಫಲಾನುಭವಿಗಳ ಮೇಲಿನ ವಂತಿಕೆ ಹೊರೆಯನ್ನು ಕಡಿಮೆ ಮಾಡಿ, ಒಂದು ಲಕ್ಷಕ್ಕೆ ನಿಗಧಿಗೊಳಿಸಿ, ಪ್ರತಿ ಫಲಾನುಭವಿಗೆ ಬಾಕಿ ರೂ.4.00 ಲಕ್ಷಗಳಂತೆ ಸರ್ಕಾರದಿಂದಲೇ ಭರಿಸಲು ಅನುಮೋದನೆ ನೀಡಲಾಗಿದ್ದು, ಪ್ರಥಮ ಹಂತದಲ್ಲಿ ರೂ. ೫೦೦ಕೋಟಿ ಮಂಜೂರು ಮಾಡಲಾಗಿದೆ. ಹೆಚ್ಚುವರಿ ಅನುದಾನ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಫಲಾನುಭವಿಗಳ ಪಾಲಿನ ಒಂದು ಲಕ್ಷ ರೂ. ವಂತಿಕೆ ಮೊತ್ತವನ್ನು ಸಂಗ್ರಹಿಸುವ ಮೂಲಕ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 592 ಕೊಳೆಗೇರಿಗಳ ಅಭಿವೃದ್ಧಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಕರ್ನಾಟಕ ಗೃಹ ಮಂಡಳಿಯಲ್ಲಿ ಭೂಸ್ವಾಧೀನ ಮಾಡಿಕೊಂಡ ಜಮೀನಿನಲ್ಲಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಬಹುದು. ಆದರೆ 50:50 ಅನುಪಾತದ ಹಂಚಿಕೆ ಆಧಾರದಲ್ಲಿ ಜಮೀನು ಪಡೆದುಕೊಂಡರೆ, ರೈತರಿಗೆ ಮರುಹಂಚಿಕೆ ಮಾಡುವ ಭೂಮಿಯ ಪರಿವರ್ತನೆಯಲ್ಲಿ ವಿಳಂಬವಾಗುತ್ತಿದ್ದು,ಈ ಬಗ್ಗೆ ನೋಂದಣಿ ಮತ್ತು ಮುದ್ರಾಂಕ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯವರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್‌ ಅಬ್ಬಯ್ಯ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್‌, ವಸತಿ ಇಲಾಖೆ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌, ಆರ್ಥಿಕ ಇಲಾಖೆ ಕಾರ್ಯದರ್ಶಿ ಎಂ.ಟಿ. ರೇಜು, ಉಪ ಕಾರ್ಯದರ್ಶಿ ಇಕ್ರಂ ಶರೀಫ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!