ವಿಮಾನ ನಿಲ್ದಾಣ ಅನುದಾನ ಬೇರೆ ಕಾರ್ಯಗಳಿಗೆ ಉಗ್ರ ಹೋರಾಟ: ಸಿವಿಸಿ ಎಚ್ಚರಿಕೆ

Get real time updates directly on you device, subscribe now.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೀಸಲಾಗಿಟ್ಟ ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸುವ ನಿರ್ಧಾರದಿಂದ ಈ ಕೂಡಲೇ ಶಾಸಕ ರಾಘವೇಂದ್ರ ಹಿಟ್ನಾಳ್ ಹಿಂದೆ ಸರಿದು ವಿಮಾನ ನಿಲ್ದಾಣ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
 ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಅಭಿವೃದ್ಧಿ ಹೆಸರಿನಲ್ಲಿ ಮತ ಪಡೆದ ಶಾಸಕ ಹಿಟ್ನಾಳ್ ಅಭಿವೃದ್ಧಿ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ತಮ್ಮ ನಿರ್ಧಾರಕ್ಕೆ ಮತದಾರರ ದೇಶದ ಕ್ಷಮಾಪಣೆ ಯಾಚಿಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಈ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ಬಿಳಂಬವಾಗಿರುವುದು ಶಾಸಕರ ನಿರ್ಲಕ್ಷತೆಗೆ ಹಿಡಿದ ಕೈಗನ್ನಡಿ. ಈ ಯೋಜನೆಗೆ ಅವರ ಕೊಡುಗೆ ಶೂನ್ಯ. ಅನುಮತಿ ಬಂದ ನಂತರ 100 ಕೋಟಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂಬುದು ದಾರಿ ತಪ್ಪಿಸುವ ಹೇಳಿಕೆ. ಅನುಮತಿ ಪಡೆದುಕೊಳ್ಳುವಲ್ಲಿ ಅವರು ಇಲ್ಲಿಯ ತನಕ ಮಾಡಿದ ಮಹತ್ಸಾಧನೆ ಏನೆಂಬುದನ್ನು ಅವರೇ ವಿವರಿಸಬೇಕು ಎಂದು ತಿಳಿಸಿದ್ದಾರೆ.
ವೈಯಕ್ತಿಕ ಹಿತಾಸಕ್ತಿ, ಕುಟುಂಬ ಪ್ರೇಮ ಹಾಗೂ ಕ್ಷುಲ್ಲಕ ರಾಜಕಾರಣದಲ್ಲಿ ನಿರತರಾಗಿರುವ ರಾಘವೇಂದ್ರ ಹಿಟ್ನಾಳ್ ಅವರಿಗೆ ಕೆಟ್ಟು ಹೋದ ರಸ್ತೆಗಳು ಹಾಗೂ ಹಳ್ಳ ಹಿಡಿದ ಅಭಿವೃದ್ಧಿ ಕಾಮಗಾರಿಗಳು ಕಾಣಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ಮಾಜಿ ಸಂಸದರು ಹಾಗೂ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ಕರಡಿ ಸಂಗಣ್ಣ ಅವರು ಈ ಕುರಿತು ಸ್ಪಷ್ಟ ನಿಲುವು ತಾಳಬೇಕು ಹಾಗೂ ಶಾಸಕರಿಗೆ ಕಿವಿ ಹಿಂಡಿ ಬುದ್ಧಿವಾದ ಹೇಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಮಾನ ನಿಲ್ದಾಣ ಬಿಟ್ಟು ಬೇರೆ ಕಾಮಗಾರಿಗಳಿಗೆ ಮೀಸಲಿಟ್ಟ ಅನುದಾನವನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದರೆ ತಮ್ಮ ಪಕ್ಷದಿಂದ ಉಗ್ರ ಸ್ವರೂಪದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ತಾವು ಶೀಘ್ರದಲ್ಲಿ ಕೇಂದ್ರ ಸಚಿವರಾದ  ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಿರುವ ಎಲ್ಲಾ ಸಹಾಯ ಮಾಡುವಂತೆ ಕೋರಿಕೊಳ್ಳುವುದಾಗಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!