ಕುಲಾಂತರಿ ಸಾಸಿವೆ ಕರ್ನಾಟಕಕ್ಕೆ ಬೇಡ

Get real time updates directly on you device, subscribe now.

ಕುಲಾಂತರಿ ಸಾಸಿವೆ ಕರ್ನಾಟಕಕ್ಕೆ ಬೇಡ ಎಂದು ಪ್ರಗತಿಪರ ಚಿಂತಕರ ಸರಕಾರಕ್ಕೆ ಒತ್ತಾಯಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ

ʻಹತ್ತಿಯನ್ನೇನೂ ನಾವು ತಿನ್ನುವುದಿಲ್ಲʼ ಎಂಬ ಸಬೂಬು ಹೇಳಿ, ಕುಲಾಂತರಿ ಹತ್ತಿಯನ್ನು ಬೆಳೆಯಲು ಭಾರತ ಸರಕಾರ ಅನುಮತಿ ನೀಡಿತು. ಆಮೇಲೆ ಮೆಲ್ಲಗೆ ಕುಲಾಂತರಿ ಬದನೆಯನ್ನು ದೇಶದ ಒಳಕ್ಕೆ ನುಗ್ಗಿಸಲು ಏನೆಲ್ಲ ಯತ್ನಗಳು ನಡೆದವು. ಕರ್ನಾಟಕ ಸರಕಾರ ಅದಕ್ಕೆ ಅನುಮತಿ ನೀಡಲಿಲ್ಲ. ಭಾರತ ಸರಕಾರವೂ ಅನುಮತಿ ನೀಡಲಿಲ್ಲ. ಈಗ ಕುಲಾಂತರಿ ಸಾಸಿವೆಯನ್ನು ರೈತರ ಹೊಲಕ್ಕೆ ನುಗ್ಗಿಸಲು ಸಿದ್ಧತೆ ನಡೆದಿದೆ. ಕೇಂದ್ರ ಸರಕಾರ ರೈತರ ಹೊಲಗಳಲ್ಲಿ ಅದನ್ನು ಬೆಳೆಯಲು ಅನುಮತಿ ನೀಡಿದೆ. ಕರ್ನಾಟಕದಲ್ಲೂ ಅಂಥ ಸಾಸಿವೆಯ ಬಿತ್ತನೆ ನಡೆಯಬಹುದು. ಕರ್ನಾಟಕ ಸರಕಾರ ಇದಕ್ಕೆ ನಿಷೇಧ ಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ. ಅದಕ್ಕೆ ಕಾರಣಗಳು ಹೀಗಿವೆ:
1. ಈ ಹೊಸ ಕುಲಾಂತರಿ ಸಾಸಿವೆಯಲ್ಲಿ ಕೀಟನಿರೋಧಕ ಶಕ್ತಿ ಇಲ್ಲ. ಇದನ್ನು ಹೈಬ್ರಿಡೈಸೇಶನ್ ತಂತ್ರಜ್ಞಾನ ಎಂದು ಕರೆಯಲಾಗುತ್ತಿದ್ದರೂ, ಇಳುವರಿ ಹೆಚ್ಚಳದ ಯಾವುದೇ ಪುರಾವೆಗಳಿಲ್ಲ. ಇದರ ಏಕೈಕ ಗುಣವೆಂದರೆ ಇದರ ಮೇಲೆ ಗ್ಲುಫೋಸಿನೇಟ್ ಕಳೆನಾಶಕವನ್ನು ಸುರಿದರೆ ಸಸ್ಯಕ್ಕೆ ಏನೂ ತೊಂದರೆ ಆಗುವುದಿಲ್ಲ. ಆದರೆ ಇದರ ಸುತ್ತಲಿನ ಕಳೆಗಳೆಲ್ಲ ಸುಟ್ಟುಹೋಗುತ್ತವೆ. ಒಂದೇ ಒಂದು ಲಕ್ಷಣವೆಂದರೆ ಕಾರ್ಮಿಕರು ಕಳೆ ತೆಗೆಯುವ ಅಗತ್ಯವಿಲ್ಲ. ಅದರಿಂದಾಗಿ, ಬಡ ಮಹಿಳೆಯರು ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ.
2. ನಮ್ಮ ದೇಶ ಸಾಸಿವೆಯ ಮಟ್ಟಿಗೆ ಸ್ವಾವಲಂಬಿ ಆಗಿದೆ. ಉತ್ತಮ ಇಳುವರಿಯ ತಳಿಗಳನ್ನು ಮತ್ತು ಜಿಎಂ ಅಲ್ಲದ ಹೈಬ್ರಿಡ್ ಬೀಜಗಳನ್ನು ಉತ್ತರ ಭಾರತದ ರೈತರು ಬೆಳೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಇದು ಅಲ್ಪ ಪ್ರಮಾಣದಲ್ಲಿ ಬೆಳೆಯಲ್ಪಡುತ್ತಿದೆ. ಕುಲಾಂತರಿ ತಳಿಯನ್ನು ಪರಿಚಯಿಸುವ ಯಾವ ತುರ್ತೂ ಇಲ್ಲ. ಆದರೂ ಇದನ್ನು ಹೊಲಕ್ಕೆ ನುಗ್ಗಿಸುವ ಹುನ್ನಾರ ಏಕೆ ನಡೆಯುತ್ತಿದೆಯೆಂದರೆ, ಒಮ್ಮೆ ಇದಕ್ಕೆ ಪ್ರವೇಶ ಸಿಕ್ಕರೆ ಆಮೇಲೆ ಕುಲಾಂತರಿ ಬದನೆ, ಮೆಣಸು, ಬೆಂಡೆ, ಟೊಮ್ಯಾಟೊ, ಕೋಸು, ಕೊತ್ತುಂಬರಿಗಳಿಗೂ ಅನುಮತಿ ಪಡೆಯುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಸುಲಭವಾಗುತ್ತದೆ. ಹಾಗೆ ಅವೆಲ್ಲ ನುಗ್ಗಿದ್ದೇ ಆದರೆ ನಮ್ಮ ಸ್ಥಳೀಯ ತಳಿವೈವಿಧ್ಯವೆಲ್ಲ ಮೂಲೆಗುಂಪಾಗುತ್ತವೆ. ಬಿಟಿ ಹತ್ತಿ ಬಂದ ನಂತರ ದೇಶದ ೯೫% ಸ್ಥಳೀಯ ತಳಿಗಳು ನಾಪತ್ತೆಯಾಗಿವೆ. ಕಂಪನಿ ಬೀಜಗಳಿಗಾಗಿ ರೈತರು ಕ್ಯೂ ನಿಲ್ಲುವಂತಾಗುತ್ತದೆ.
3. ಕುಲಾಂತರಿ ಸಾಸಿವೆಯ ಮಾದರಿಯಲ್ಲೇ ಕಳೆನಾಶಕ ವಿಷದ ಘಾಟನ್ನು ಸಹಿಸಿಕೊಳ್ಳುವ ತರಕಾರಿ ತಳಿಗಳು ಬಂದರೆ ರೌಂಡಪ್‌ನಂಥ ಕೆಮಿಕಲ್‌ಗಳ ಬಳಕೆ ಬೇಕಾಬಿಟ್ಟಿ ಹೆಚ್ಚುತ್ತದೆ. ಅದರಿಂದ ನೆಲದೊಳಗಿನ ಜೀವಿಗಳ ಮಾರಣ ಹೋಮ ಆಗುವುದಷ್ಟೇ ಅಲ್ಲ, ರೈತರ ಮತ್ತು ಬಳಕೆದಾರರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಕಾಣತೊಡಗುತ್ತವೆ.
4. ಸಾಸಿವೆ ಹೂಬಿಟ್ಟಾಗ ದುಂಬಿ, ಜೇನ್ನೊಣಗಳಂಥ ರೈತಸ್ನೇಹಿ ಜೀವಿಗಳ ಸಂಖ್ಯೆ ಹೆಚ್ಚುತ್ತದೆ; ಇತರ ಫಸಲುಗಳ ಪರಾಗಸ್ಪರ್ಷ ಹೆಚ್ಚುತ್ತದೆ. ಇಳುವರಿ ಕೂಡ ಹೆಚ್ಚುತ್ತದೆ. ಕುಲಾಂತರಿ ಸಾಸಿವೆಯ ಪರಾಗದಿಂದ ಕೀಟಗಳಿಗೆ ಏನೇನು ಅಪಾಯ ಇದೆ ಎಂಬುದರ ಪರೀಕ್ಷೆ ನಡೆದಿಲ್ಲ.
5. ಕುಲಾಂತರಿ ಸಾಸಿವೆಯನ್ನು ಒಗ್ಗರಣೆಗೆ ಬಳಸಿದರೆ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಆದೀತೆಂಬ ದೀರ್ಘಕಾಲೀನ ಪರೀಕ್ಷೆಗಳೂ ನಡೆದಿಲ್ಲ. ಸಂಶಯ, ಅಪನಂಬಿಕೆಗಳ ನಿವಾರಣೆ ಆಗದೇ ಇದನ್ನು ಹೊಲಕ್ಕಿಳಿಸಿದರೆ ಮುಂದೆ ಬಳಕೆದಾರರು, ಹೊಟೆಲ್‌ಗಳು, ಎಣ್ಣೆಗಾಣಗಳು ಈ ಸಾಸಿವೆಯನ್ನು ನಿರಾಕರಿಸಿದರೆ ರೈತರ ಶ್ರಮ ಮಣ್ಣು ಪಾಲಾಗಬಹುದು.
ಜಿಎಂ ಅಲ್ಲದ ಮಿಶ್ರತಳಿಗಳು ಇರುವಾಗ ಹೈಬ್ರಿಡ್ ತಂತ್ರಜ್ಞಾನದ ನೆಪದಲ್ಲಿ ಕುಲಾಂತರಿ ಕಳೆನಾಶಕ ಸಹಿಷ್ಣು ಸಾಸಿವೆಯನ್ನು ರೈತರ ಹೊಲಗಳಿಗೆ ನುಗ್ಗಿಸುವುದು ಸರಿಯಲ್ಲ. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಇದನ್ನು ನಿಷೇಧಿಸುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಬೇಕು ಮತ್ತು ನೀಡಿದ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೇಳಬೇಕು ಎಂದು
ಪ್ರೊ. ಎಸ್.ಜಿ.ಸಿದ್ದರಾಮಯ್ಯ,ಬೆಂಗಳೂರು
ಶಾರದಾ ಗೋಪಾಲ‌, ಧಾರವಾಡ
ಕವಿತಾ ಕುರುಗಂಟಿ, ಬೆಂಗಳೂರು
ನಾಗೇಶ ಹೆಗಡೆ, ಬೆಂಗಳೂರು
ಸಂತೋಷ ಕೌಲಗಿ, ಮೇಲುಕೋಟೆ
ಕೆ.ಪಿ. ಸುರೇಶ್, ಮೈಸೂರು
ಮಲ್ಲಿಕಾರ್ಜುನ ಹೊಸಪಾಳ್ಯ, ತುಮಕೂರು
ಜಿ.ಕೃಷ್ಣಪ್ರಸಾದ್‌, ಮೈಸೂರು
ಆನಂದತೀರ್ಥ ಪ್ಯಾಟಿ, ಕೊಪ್ಪಳ
ಅಣೇಕಟ್ಟೆ ವಿಶ್ವನಾಥ್, ಬೆಂಗಳೂರು
ರಮೇಶ ಚೀಮಾಚನಹಳ್ಳಿ,ದೇವನಹಳ್ಳಿ ಆಗ್ರಹಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!
%d bloggers like this: