ಓನರ್‌ ಕಮ್‌ ಕ್ಲೀನರ್‌ ಸಾವಿತ್ರಿ- ಪ್ರಕಾಶ್ ಕಂದಕೂರ

Get real time updates directly on you device, subscribe now.

ಓನರ್‌ ಕಮ್‌ ಕ್ಲೀನರ್‌ ಸಾವಿತ್ರಿ..
————————————
ಗಡಿಯಾರ ಕಂಬದ ಬಳಿ ನಮ್ಮ ಸ್ಟುಡಿಯೋದ ಮೇಲಿರುವ ಬಣ್ಣದ(ಪೇಂಟ್‌) ಅಂಗಡಿಯ ಮುಂದೆ ಬಣ್ಣದ ಡಬ್ಬಿಗಳನ್ನು ಹೊತ್ತ ಸಣ್ಣ ಟ್ರಕ್ಕೊಂದು ನಿಂತಿತ್ತು. ಅದರೊಳಗಿನಿಂದ ಮಹಿಳೆಯೊಬ್ಬರು ಬಣ್ಣದ ಡಬ್ಬಿಗಳನ್ನು ಕೆಳಗಿಳಿಸುತ್ತಿದ್ದರು. ವೃತ್ತಿಪರ ಗಂಡಸರೂ ಎತ್ತಲು ಹೆಣಗಾಡುವಂತಿದ್ದ ಆ ಪೇಂಟಿನ ಡಬ್ಬಿಗಳನ್ನು ಆ ಮಹಿಳೆ ಸರಳವಾಗಿ ಇಳಿಸುತ್ತಿದ್ದದ್ದು ನನ್ನಲ್ಲಿ ಆಶ್ಚರ್ಯದ ಜೊತೆಗೆ ಕುತೂಹಲ ಮೂಡಿಸಿತು. ಮಹಿಳೆಯೊಬ್ಬರು ಲಾರಿಯಿಂದ ಸರಕು ಇಳಿಸುವುದನ್ನು ಇಲ್ಲಿಯವರೆಗೂ ನೋಡಿರದ ನನಗೆ ಅವರ ಕಾರ್ಯವೈಖರಿ ಸಮಾನತೆ ಭಾವ ಮೂಡಿಸಿತು.

ಅವರ ಹೆಸರು ಸಾವಿತ್ರಿ ಗಂಡ ದಿವಂಗತ ಯಲ್ಲಪ್ಪ ಕರಿಯಣ್ಣನವರ್‌. ಮೂಲತಃ ಧಾರವಾಡದವರಾದ ಇವರನ್ನು ಸುಮಾರು ೨೫ ವರ್ಷಗಳ ಕೆಳಗೆ ಕಲಘಟಗಿ ಬಳಿಯ ಪುಟ್ಟ ಗ್ರಾಮದ ಯಲ್ಲಪ್ಪ ಅವರೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ಟೈಲ್ಸ್‌ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಹಠಾತ್‌ ನಿಧನಹೊಂದಿದರು. ಪತಿಯ ಅಗಲಿಕೆಯಿಂದ ಸಾವಿತ್ರಿ ಸಾಕಷ್ಟು ಕುಗ್ಗಿಹೋದರು. ಆರು ವರ್ಷದ ಮಗ, ನಾಲ್ಕು ವರ್ಷದ ಮಗಳನ್ನು ಒಬ್ಬರೆ ಸಾಕುವುದು ತ್ರಾಸದಾಯಕವಾಯಿತು. ಹೇಗಾದರೂ ಮಾಡಿ ಮಕ್ಕಳು ಮತ್ತು ತಾನು ಬದುಕಲೇಬೇಕು ಎಂಬ ನಿರ್ಧಾರಕ್ಕೆ ಬಂದರು ಸಾವಿತ್ರಿ.

ಸ್ಥಳೀಯರೊಬ್ಬರ ಸಲಹೆಯಂತೆ ವೃದ್ಧಾಶ್ರಮವೊಂದರಲ್ಲಿ ಅಡುಗೆ ತಯಾರಿಸುವ ಕೆಲಸಕ್ಕೆ ಸೇರಿಕೊಂಡರು ಸಾವಿತ್ರಿ. ಅಲ್ಲಿಂದ ಅವರ ಬದುಕುಕಿಗೊಂದು ಭರವಸೆ ದೊರೆಯಿತು. ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆಗೆ ಮನೆಗೆ ಬರುತ್ತಿದ್ದುದರಿಂದ ಮಕ್ಕಳ ಬಗ್ಗೆ ಗಮನಹರಿಸಲು ಆಗುತ್ತಿರಲಿಲ್ಲ. ಹಾಗಾಗಿ ಮಕ್ಕಳನ್ನು ಸರ್ಕಾರಿ ಹಾಸ್ಟೆಲ್‌ಗೆ ಸೇರಿಸಿದರು. ಶಿಕ್ಷಣ ಕಲಿತ ಮಕ್ಕಳು ದೊಡ್ಡವರಾದರು. ಇಷ್ಟರಲ್ಲೇ ಎಷ್ಟು ದಿನ ಇರುವುದು ಎಂದುಕೊಂಡು ಮಗನ ಸಲಹೆಯಂತೆ ಸರಕು ಸಾಗಣೆ ಉದ್ದೇಶದಿಂದ ಸಾಲ ಮಾಡಿ ಮಿನಿಟ್ರಕ್ಕೊಂದನ್ನು ಖರೀದಿಸಿದರು ಸಾವಿತ್ರಿ. ಮಗನೇ ಡ್ರೈವರ್‌ ಆದ. ಕೆಲ ದಿನಗಳಲ್ಲೇ ಆತ ಯುವತಿಯೊಬ್ಬಳನ್ನು ಪ್ರೇಮಿಸಿ, ಮದುವೆಯಾಗಿ ಬೇರೆಯಾಗಿಬಿಟ್ಟ. ಡ್ರೈವರ್‌ ಕೆಲಸಕ್ಕೆ ಬರುವುದಕ್ಕೂ ಒಲ್ಲೆ ಎಂದ ಆತ, ಟ್ರಕ್ಕನ್ನು ಯಾರಿಗಾದರೂ ಮಾರಿಬಿಡುವ ಸಲಹೆಯನ್ನೂ ತಾಯಿಗೆ ಕೊಟ್ಟ. ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ಡೌನ್‌ಪೇಮೆಂಟ್‌ ಮಾಡಿ ಕೊಂಡ ಟ್ರಕ್ಕನ್ನು ಮಾರುವುದು ಸಾವಿತ್ರಿ ಅವರಿಗೆ ಇಷ್ಟ ಆಗಲಿಲ್ಲ.

ಟ್ರಕ್ಕಿನ ಗಾಲಿ ಉರುಳದೆ ತಮ್ಮ ಬದುಕೂ ಸಾಗದು ಎಂಬುದು ಮನದಟ್ಟಾಗಲು ಅವರಿಗೆ ಬಹಳ ಸಮಯ ಹಿಡಿಯಲಿಲ್ಲ. ಡ್ರೈವರ್‌ ಒಬ್ಬರನ್ನು ನೇಮಿಸಿಕೊಂಡು ತಾವೇ ಕ್ಲೀನರ್‌ ಆಗಿ ರೋಡಿಗಿಳಿದೇ ಬಿಟ್ಟರು ಸಾವಿತ್ರಿ. ಬೇಸರವಿಲ್ಲದ ದುಡಿಮೆ ಅವರನ್ನು ಕೈಬಿಟ್ಟಿಲ್ಲ. ಕಳೆದ ಮೂರು ವರ್ಷಗಳಿಂದ ಬ್ಯಾಂಕಿನ ಸಮಾನ ಮಾಸಿಕ ಕಂತುಗಳನ್ನು ಅವರೊಬ್ಬರೇ ಕಟ್ಟಿ, ಜೀವನ ನಡೆಸುತ್ತಿದ್ದಾರೆ. ʻಇನ್ನೊಂದು ವರ್ಷದಲ್ಲಿ ಟ್ರಕ್ಕಿನ ಮೇಲಿರುವ ಎಲ್ಲ ಸಾಲ ತೀರುತ್ತೆ. ಆಗ ದುಡಿದ ಹಣವೆಲ್ಲ ಕೈಗೆ ಹತ್ತಲಿದೆʼ ಎಂದಾಗ ಅವರ ಮುಖದಲ್ಲಿ ಕಂಡ ಮುಗುಳುನಗೆ ಭರವಸೆಯ ಬೆಳಕಿನಂತಿತ್ತು.

ಮಹಿಳೆ ಮನಸ್ಸು ಮಾಡಿದರೆ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬಲ್ಲಳು ಎಂಬುದಕ್ಕೆ ಸಾವಿತ್ರಿ ಅವರ ಬದುಕೇ ಒಂದು ಉತ್ತಮ ನಿದರ್ಶನ.

-ಪ್ರಕಾಶ ಕಂದಕೂರ

Get real time updates directly on you device, subscribe now.

Comments are closed.

error: Content is protected !!
%d bloggers like this: