ಅಂತಃಕರಣದ ಪತ್ರಕರ್ತ ಕೊಪ್ಪಳ ಜಿಲ್ಲೆಯ ಶರಣಪ್ಪ ಕುಂಬಾರ ಇನ್ನಿಲ್ಲ
*ಅಂತಃಕರಣದ ಪತ್ರಕರ್ತ ಕೊಪ್ಪಳ ಜಿಲ್ಲೆಯ ಶರಣಪ್ಪ ಕುಂಬಾರ ಇನ್ನಿಲ್ಲ
—
ಕೊಪ್ಪಳ ಜುಲೈ 06: ಕೊಪ್ಪಳ ಜಿಲ್ಲೆಯ ಉತ್ಸಾಹಿ ಪತ್ರಕರ್ತರಾಗಿದ್ದ, ಅಂತಃಕರಣ ಗುಣದ ಶರಣಪ್ಪ ಕುಂಬಾರ (43) ಅವರು ಜುಲೈ 05ರಂದು ಸಂಜೆ ಅನಾರೋಗ್ಯದಿಂದಾಗಿ ಅಗಲಿದರು.
ಜುಲೈ 6ರಂದು ಮಧ್ಯಾಹ್ನ ಹನುಮನಾಳದ ಹೊರವಲಯದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ತಮ್ಮ ಸ್ನೇಹಮಯ ಗುಣದಿಂದ ಜನಮನ ಗೆದ್ದಿದ್ದ ಶರಣಪ್ಪ ಅವರ ಬಂಧುಗಳು, ಗ್ರಾಮಸ್ಥರು, ಅವರ ಸ್ನೇಹಿತರು, ಹನುಮನಾಳ, ಕುಷ್ಟಗಿ, ತಾವರಗೇರಾ, ಕೊಪ್ಪಳ ಸೇರಿದಂತೆ ವಿವಿಧ ತಾಲೂಕಿನ ಪತ್ರಕರ್ತರು ಹಾಗು ಇನ್ನೀತರರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ,
ಶರಣಪ್ಪ ಅವರು ಬಡತನದ ಬೇಗೆಯಲ್ಲಿ ಬದುಕು ಕಟ್ಟಿಕೊಳ್ಳಲು ಪಟ್ಟ ಶ್ರಮದ ಬಗ್ಗೆ ಮತ್ತು ಅವರಲ್ಲಿನ ಮಾನವೀಯ ಗುಣಗಳ ಬಗ್ಗೆ ಸ್ಮರಿಸುತ್ತ ಕಣ್ಣೀರಿನ ವಿದಾಯ ಹೇಳಿದರು.
ಶರಣಪ್ಪ ಅವರು ಮೂಲತಃ
ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದವರು.
ಕೃಷಿ ಪ್ರಿಯ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿದ್ಯಾರ್ಥಿ ದಿಶೆಯಿಂದಲೇ ಕ್ರೀಡಾಪಟುಗಳಾಗಿದ್ದ ಶರಣಪ್ಪ ಅವರು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಜನಮಾನಸದ ಬಗ್ಗೆ ಮೊದಲಿನಿಂದಲು ಅಪಾರ ಕಾಳಜಿ ಹೊಂದಿದ್ದ ಶರಣಪ್ಪ ಅವರಲ್ಲಿನ ಅಂತಃಕರಣ ಗುಣವು ಅವರನ್ನು ಪತ್ರಿಕೋದ್ಯಮ ಕ್ಷೇತ್ರದತ್ತ ಹೊರಳುವಂತೆ ಮಾಡಿತು. ಗದಗ ಜಿಲ್ಲೆಯ ಸುಪ್ರಸಿದ್ಧ ನಾಗರಿಕ ಪತ್ರಿಕೆಯಿಂದ ಪತ್ರಿಕಾ ಜರ್ನಿ ಆರಂಭಿಸಿ, ಬಳಿಕ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಸದಾ ಕ್ರೀಯಾಶೀಲರಾಗಿರುತ್ತಿದ್ದ ಗುಣದಿಂದಾಗಿ ಹಲವಾರು ಸುದ್ದಿವಾಹಿನಿಗಳಲ್ಲು ಅವರು ಅವಕಾಶಗಿಟ್ಟಿಸಿ ಕೆಲಸ ಮಾಡಿದರು. ಕನ್ನಡದ ಸುಪ್ರಸಿದ್ಧ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನ್ನದಾತ ಕಾರ್ಯಕ್ರಮಕ್ಕಾಗಿ ಕೊಪ್ಪಳ ಜಿಲ್ಲೆಯ ಹಳ್ಳಿಹಳ್ಳಿಗಳನ್ನು ಸುತ್ತಿ ಪ್ರಗತಿಪರ ರೈತರ ಯಶೋಗಾಥೆಯನ್ನು ನಾಡಿಗೆ ಪರಿಚಯಿಸಿದ ಶ್ರೇಯಸ್ಸು ಶರಣಪ್ಪ ಅವರಿಗೆ ಸಲ್ಲುತ್ತದೆ.
*ಪತ್ರಿಕಾರಂಗದಲ್ಲಿ ಕಂಪನ:* ಶರಣಪ್ಪ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಬರುತ್ತಿದ್ದಂತೆ ಕೊಪ್ಪಳ ಜಿಲ್ಲೆಯ ಪತ್ರಿಕಾವಲಯದಲ್ಲಿ ತೀವ್ರ ಕಂಪನ ಉಂಟಾಯಿತು. ಇದು ಅರಗಿಸಿಕೊಳ್ಳಲಾಗದ ಸಾವು ಎಂದು ಅನೇಕ ಪತ್ರಕರ್ತರ ಸ್ನೇಹಿತರು, ಅವರ ಇನ್ನೀತರ ಗೆಳೆಯರು, ಬಂಧುಗಳು ವಾಟ್ಸಪ್, ಫೆಸಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಾಪ ಸಂದೇಶ ಪ್ರಕಟಿಸಿ ಮಿತ್ರನ ಅಗಲಿಕೆಗೆ ಕಂಬನಿ ಮಿಡಿದರು. ‘ತಾನು ಪತ್ರಕರ್ತ ಎನ್ನುವ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಎಲ್ಲರೊಂದಿಗೆ ಬೆರೆತು ಸದಾಕಾಲ ಲವಲವಿಕೆಯಿಂದಿರುತ್ತಿದ್ದ ಶರಣಪ್ಪ ಕುಂಬಾರ ಅವರು ಸ್ನೇಹಜೀವಿಯಾಗಿದ್ದರು, ಮಾರ್ಗದರ್ಶಿಯಾಗಿದ್ದರು’ ಎಂದು ಕೊಪ್ಪಳ ಜಿಲ್ಲೆಯ ಎಲ್ಲಾ ಪತ್ರಿಕೆಗಳ ಮತ್ತು ಸುದ್ದಿವಾಹಿನಿಗಳ ಪತ್ರಕರ್ತರು ಶರಣಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
*ಅಪರೂಪದ ವ್ಯಕ್ತಿತ್ವ:* ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಅವಕಾಶವಿದೆ ಬ್ರದರ್ ಎಂದು ಸಹ ಪತ್ರಕರ್ತ ಮಿತ್ರರಿಗೆ ತಿಳಿಸುತ್ತ, ಯುವಕರಿಗೆ ಸಲಹೆ ಮಾರ್ಗದರ್ಶನ ಮಾಡುತ್ತಿದ್ದರು. ಇತರರ ಏಳ್ಗೆ ಕಂಡು ಸಂತಸಪಡುತ್ತಿದ್ದರು. ಯಾರೇ ಇರಲಿ ಹಿರಿಯರು, ಕಿರಿಯರು ಎನ್ನದೇ ಪ್ರತಿಯೊಬ್ಬರನ್ನು ಪ್ರೀತಿ ಗೌರವದಿಂದ ಕಾಣುತ್ತಿದ್ದರು. ವಿಶೇಷ ವರದಿಗಾಗಿ ಊರೂರು ಅಲೆಯುತ್ತಿದ್ದರು. ಹೇಳಿ ಬ್ರದರ್ ಎಂದೇ ಮಾತು ಆರಂಭಿಸಿ ಆಪ್ತರಾಗುವ ಅಪರೂಪದ ಗುಣಹೊಂದಿದ್ದರು, ಸ್ವಾಭಿಮಾನಿಯಾಗಿದ್ದರು. ವಾರ್ತಾ ಇಲಾಖೆ, ವಾರ್ತಾಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳು ಹಾಗೂ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ತರುಣ ಪತ್ರಕರ್ತರಾಗಿದ್ದ ಶರಣಪ್ಪ ಕುಂಬಾರ ಅವರ ನಿಧನದಿಂದ ಕೊಪ್ಪಳ ಜಿಲ್ಲಾ ಮಾಧ್ಯಮರಂಗ ಬಡವಾಯಿತು. ಅವರ ಕುಟುಂಬದವರಿಗೆ, ಬಂಧುಗಳಿಗೆ, ಸ್ನೇಹಿತರಿಗೆ ದೇವರು ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ಧಪ್ಪ ಹೊಸಮನಿ ಅವರು ಶರಣಪ್ಪ ಕುಂಬಾರ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Comments are closed.