ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ

ಜೂನ್ 3ರಂದು ಮತನಾದನಕ್ಕೆ ಸಕಲ ಸಿದ್ಧತೆ : ನಲಿನ್ ಅತುಲ್

Get real time updates directly on you device, subscribe now.


*

ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ಪ್ರಯುಕ್ತ ಜೂನ್ 3ರಂದು ನಡೆಯಲಿರುವ ಮತದಾನಕ್ಕಾಗಿ ಕೊಪ್ಪಳ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನದ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವನ್ನು ಜೂನ್ 3ರಂದು ನಿಗದಿಪಡಿಸಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 9162 ಪುರುಷರು ಹಾಗೂ 4581 ಮಹಿಳೆಯರು ಸೇರಿ 13,743 ಮತದಾರರಿದ್ದಾರೆ. ಈ ಚುನಾವಣೆ ಸಂಬಂಧ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಕುಷ್ಟಗಿ ತಾಲ್ಲೂಕಿನಲ್ಲಿ 5, ಕಾರಟಗಿಯಲ್ಲಿ 2, ಕನಕಗಿರಿಯಲ್ಲಿ 3, ಗಂಗಾವತಿಯಲ್ಲಿ 4, ಯಲಬುರ್ಗಾದಲ್ಲಿ 2, ಕುಕನೂರಿನಲ್ಲಿ 2, ಕೊಪ್ಪಳದಲ್ಲಿ 6 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಜೂ.2ರಂದು ಆಯಾ ತಾಲ್ಲೂಕು ತಹಶೀಲ್ದಾರ ಕಛೇರಿಗಳಲ್ಲಿ ಮಸ್ಟರಿಂಗ್‌ಕಾರ್ಯವನ್ನು ನಡೆಸಲಾಗಿದ್ದು, ಮಸ್ಟರಿಂಗ್ ಬಳಿಕ ಮತದಾನ ಸಿಬ್ಬಂದಿಗಳು ಮತಪೆಟ್ಟಿಗೆ ಮತ್ತು ಮತದಾನ ಸಾಮಾಗ್ರಿಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದ್ದಾರೆ. ಜೂ.3ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನವನ್ನು ನಿಗದಿಪಡಿಸಲಾಗಿದೆ. ಜೂ.3ರಂದು ಮತದಾನ ಮುಕ್ತಾಯವಾದ ನಂತರ ಆಯಾ ತಾಲ್ಲೂಕು ತಹಶೀಲ್ದಾರರ ಕಛೇರಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯವನ್ನು ಕೈಗೊಂಡು ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳ ಮತಪೆಟ್ಟಿಗೆ ಮತ್ತು ದಾಖಲಾತಿಗಳನ್ನು ತೆಗೆದು ಕೊಂಡು ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ಹೇಮರಡ್ಡಿ ಮಲ್ಲಮ್ಮಕಟ್ಟಡ ಸಭಾಂಗಣದಲ್ಲಿ ನಿರ್ಮಿಸಿರುವ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗುವುದು ಎಂದು ಹೇಳಿದರು.
*ಮತದಾರರ ಸೌಲಭ್ಯ ಕೇಂದ್ರದ ದೂರವಾಣಿ ಸಂಖ್ಯೆಗಳ ವಿವರ:* ಮತದಾನ ಕೇಂದ್ರಗಳ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಪದವೀಧರ ಮತದಾರರ ಹೆಸರುಗಳು ನೋಂದಣಿಯಾಗಿರುವ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮತ್ತು ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಮತದಾರರ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮತದಾರರ ಸಹಾಯವಾಣಿ ಕೇಂದ್ರ, ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ: 1950(ಟೋಲ್ ಫ್ರೀ), ತಹಶೀಲ್ದಾರ ಕಛೇರಿ, ಕುಷ್ಟಗಿ: 08536-267031, ತಹಶೀಲ್ದಾರ ಕಛೇರಿ, ಕಾರಟಗಿ: 08533-200321, ತಹಶೀಲ್ದಾರ ಕಛೇರಿ, ಕನಕಗಿರಿ: 080-23900982, ತಹಶೀಲ್ದಾರ ಕಛೇರಿ, ಗಂಗಾವತಿ: 08533-230929, ತಹಶೀಲ್ದಾರ ಕಛೇರಿ, ಯಲಬುರ್ಗಾ: 08534-220130, ತಹಶೀಲ್ದಾರ ಕಛೇರಿ, ಕುಕನೂರು: 08534-200115, ತಹಶೀಲ್ದಾರ ಕಛೇರಿ, ಕೊಪ್ಪಳ: 08539-220381 ಗೆ ಸಂಪರ್ಕಿಸಿ ಜಿಲ್ಲೆಯ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿರುವ ಬಗ್ಗೆ ಮತ್ತು ಮತದಾನ ಕೇಂದ್ರಗಳ ಬಗ್ಗೆ ಮಾಹಿತಿ ಪಡೆಯಬಹುದು.
ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾದ ಎಲ್ಲಾ ಮತದಾರರಿಗೆ ವೋಟರ್ ಸ್ಲಿಪ್‌ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಮತದಾರರಿಗೆ ವೋಟರ್ ಸ್ಲಿಪ್ ತಲುಪಿರದಿದ್ದಲ್ಲಿ ಮೇಲ್ಕಾಣಿಸಿದ ಮತದಾರರ ಸೌಲಭ್ಯ ಕೇಂದ್ರಗಳಿಂದ ಮಾಹಿತಿ ಪಡೆಯಬಹುದು ಮತ್ತು ಮತದಾನದ ದಿನದಂದು ಮತಗಟ್ಟೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು.
*ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನದ ಮಾಹಿತಿ:* ಚುನಾವಣೆಯ ಮತದಾನವು ಪ್ರಾಶಸ್ತ್ಯ ಮತದಾನವಾಗಿರುತ್ತದೆ. ಮತದಾರರು ಮತಪತ್ರದಲ್ಲಿ ಅಭ್ಯರ್ಥಿಗೆ  ಪ್ರಾಶಸ್ತ್ಯ ಮತವನ್ನು ನೀಡಬೇಕು.  ಪ್ರಾಶಸ್ತ್ಯ ಮತಗಳನ್ನು ಯಾವುದೇ ಭಾಷೆಯ ಸಂಖ್ಯೆಗಳಲ್ಲಿ ನೀಡಬಹುದು. ಮೊದಲನೇ  ಪ್ರಾಶಸ್ತ್ಯ  ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು. (ಮೊದಲನೇ  ಪ್ರಾಶಸ್ತ್ಯ ಮತವನ್ನು ಸಂಖ್ಯೆ 01 ರಿಂದ ಗುರುತಿಸಬೇಕು). ಉಳಿದ ಅಭ್ಯರ್ಥಿಗಳಿಗೆ ಸಂಖ್ಯೆ 2 ರಿಂದ ಆಯ್ಕೆಯನುಸಾರ ನೀಡಬೇಕು. ಒಬ್ಬ ಅಭ್ಯರ್ಥಿಗೆ ನೀಡಿದ ಸಂಖ್ಯೆಯನ್ನು ಇನ್ನೊಬ್ಬ ಅಭ್ಯರ್ಥಿಗೆ ಪುನರಾವರ್ತಿಸಬಾರದು. ಮತದಾನ ಮಾಡುವಾಗ ಕಡ್ಡಾಯವಾಗಿ ಗೌಪ್ಯತೆಯನ್ನು ಕಾಪಾಡಬೇಕು. ಮತಗಟ್ಟೆಯಲ್ಲಿ ಮತದಾರರು ಮೊಬೈಲ್ ಮತ್ತು ಇತರೆ ಯಾವುದೇ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಮತಪತ್ರದಲ್ಲಿ ಸಹಿ, ಹೆಸರು, ಪಕ್ಷದ ಗುರುತು ಅಥವಾ ಯಾವುದೇ ಚಿತ್ರದ ಗುರುತು ಮಾಡಬಾರದು. ಮತಗಟ್ಟೆಯಲ್ಲಿ ನೀಡಲಾಗುವ ಪೆನ್ನಿನಿಂದ ಮಾತ್ರ ಮತ ಚಲಾಯಿಸಬೇಕು ಎಂದು ಹೇಳಿದರು.
*ಮತಗಟ್ಟೆಗಳಲ್ಲಿ ವಿಡಿಯೋಗ್ರಾಫಿ ಮತ್ತು ವೆಬ್‌ಕಾಸ್ಟಿಂಗ್ ವ್ಯವಸ್ಥೆ:* ಕೊಪ್ಪಳ ಜಿಲ್ಲೆಯ ಎಲ್ಲಾ 24 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಹಾಗೂ 06 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫಿ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲಾ ಮತದಾನ ಕೇಂದ್ರಗಳಿಗೆ 17 ಸೆಕ್ಟರ್ ರೂಟ್‌ಗಳನ್ನು ಗುರುತಿಸಲಾಗಿದೆ ಮತ್ತು ಚುನಾವಣಾ ಪ್ರಕ್ರಿಯೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮತದಾನದ ದಿನದಂದು ಕರ್ನಾಟಕ ವಿಧಾನ ಪರಿಷತ್ ಮತಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ  Establishment ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ಸರ್ಕಾರ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದ್ದು, ಅರ್ಹ ಮತದಾರರು ಈ ಸೌಲಭ್ಯವನ್ನು ಪಡೆಯಬಹುದು ಎಂದು ತಿಳಿಸಿದರು.
*ಮತಚಲಾವಣೆಗೆ ಪರ್ಯಾಯ ದಾಖಲೆ:* ಮತದಾರರು ತಮ್ಮ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತಚಲಾಯಿಸಬಹುದು ಅಥವಾ ಪರ್ಯಾಯ ದಾಖಲೆಗಳನ್ನು ತೋರಿಸಿ ಮತಚಲಾವಣೆ ಮಾಡಬಹುದಾಗಿದೆ. ಆಧಾರಕಾರ್ಡ, ವಾಹನ ಚಾಲನೆ ಪರವಾನಗಿ, ಪಾನ್‌ಕಾರ್ಡ, ಭಾರತೀಯ ಪಾಸ್‌ಪೋರ್ಟ, ಕೇಂದ್ರ/ರಾಜ್ಯ ಸರ್ಕಾರ/ಸಾರ್ವಜನಿಕ ವಲಯದ ಉದ್ದಿಮೆ/ಸಾರ್ವಜನಿಕ ಸೀಮಿತಿ ಕಂಪನಿಗಳ ನೌಕರರಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನಚೀಟಿ, ಎಂ.ಪಿ/ಎಂ.ಎಲ್.ಎ/ಎಂ.ಎಲ್.ಸಿ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಮತದಾರರು ಪ್ರಸ್ತುತ ಕೆಲಸ ಮಾಡುತ್ತಿರುವ ಪದವೀಧರರಕ್ಷೇತ್ರದಲ್ಲಿರುವ ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನಚೀಟಿ, ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ/ಅಂಗೀಕೃತವಾಗಿರುವ ವಿಶ್ವವಿದ್ಯಾನಿಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ/ಡಿಪ್ಲೋಮಾ ಪ್ರಮಾಣ ಪತ್ರ ಕೋರ್ಸಗಳ ಮೂಲ ಪ್ರತಿ, ದೈಹಿಕ ಅಂಗವೈಕಲ್ಯತೆ (ವಿಶೇಷ ಚೇತನ) ಹೊಂದಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಪ್ರಮಾಣ ಪತ್ರದ ಮೂಲ ಪ್ರತಿ ಹಾಗೂ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ನೀಡಿರುವ ವಿಕಲಚೇತನರ ವಿಶಿಷ್ಟ ಗುರುತಿನಚೀಟಿ (ಯುಡಿಐಡಿ ಕಾರ್ಡ್) ಹಾಜರು ಪಡಿಸಿ ಮತ ಚಲಾಯಿಸಬಹುದು ಎಂದು ಹೇಳಿದರು.
ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ಸಂಬಂಧ ಜೂ.1ರ ಸಾಯಂಕಾಲ 4 ಗಂಟೆಯಿಂದ ಬಹಿರಂಗ ಪ್ರಚಾರದ ಅವಧಿ ಮುಕ್ತಾಯವಾಗಿದ್ದು, ಈ ಚುನಾವಣೆಯ ಸಂಬಂಧ ಜೂ.3ರಂದು ಮತದಾನ ನಡೆಯುವ ಎಲ್ಲಾ ನಗರ/ಗ್ರಾಮೀಣ ಭಾಗಗಳಲ್ಲಿ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಲಾಗಿದೆ. ಈಶಾನ್ಯ ಪದವೀಧರರ ಕ್ಷೇತ್ರದಚುನಾವಣೆ ಸಂಬಂಧ ಜೂ.1ರಂದು ಸಂಜೆ 4ಗಂಟೆಯಿಂದ ಜೂ.3ರ ಮಧ್ಯರಾತ್ರಿ 12ಗಂಟೆಯವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯತಯಾರಿಕೆ, ಮದ್ಯ ಮಾರಾಟ, ಮದ್ಯ ಸಂಗ್ರಹಣೆ ಹಾಗೂ ಮದ್ಯ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಶುಷ್ಕ ದಿನವನ್ನಾಗಿ ಘೋಷಿಸಲಾಗಿರುತ್ತದೆ. ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಚುನಾವಣೆಯು ಮುಕ್ತ, ಶಾಂತ ರೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿಯಲ್ಲಿ ಜೂ.1ರ ಸಾಯಂಕಾಲ 6 ಗಂಟೆಯಿಂದ ಜೂ.3ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲಾ ಪದವೀಧರ ಮತದಾರರು ಜೂನ್ 03 ರಂದು ತಪ್ಪದೇ ನಿಗದಿತ ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸಲು ಮತ್ತು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ಮತದಾನವನ್ನು ಯಶಸ್ವಿಗೊಳಿಸಬೇಕು ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಡಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!