ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್
ಲೋಕಸಭಾ ಚುನಾವಣೆಯ ಮತ ಎಣಿಕೆ: ಸುದ್ದಿಗೋಷ್ಠಿ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ತ ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗೆ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತ ಎಣಿಕೆ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತಎಣಿಕೆ ಕಾರ್ಯವನ್ನು ಜೂನ್ 04ರಂದು ನಿಗದಿಪಡಿಸಿರುತ್ತದೆ. ಮತ ಎಣಿಕೆ ಕಾರ್ಯವನ್ನು ಅಂದು ಬೆಳಿಗ್ಗೆ 08 ಗಂಟೆಗೆ ಪ್ರಾರಂಭಿಸಲಾಗುವುದು. 08-ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿಗದಿಪಡಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ 09 ಭದ್ರತಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 01 ಪ್ರತ್ಯೇಕ ಎಣಿಕೆ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದರು.
ಅಂಚೆ ಮತಪತ್ರ ಮತ್ತು ಇ.ಟಿ.ಪಿ.ಬಿ.ಎಂ.ಎಸ್ ಮೂಲಕ ಸ್ವೀಕೃತವಾದ ಮತಪತ್ರಗಳ ಎಣಿಕೆ ಕಾರ್ಯಕ್ಕಾಗಿ 01 ಮತ ಎಣಿಕೆ ಕೊಠಡಿಯನ್ನು ಸ್ಥಾಪಿಸಲಾಗಿದೆ. ಒಟ್ಟಾರೆಯಾಗಿ 08+01 ಮತ ಎಣಿಕೆ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯಕ್ಕಾಗಿ ನಿಗದಿಪಡಿಸಲಾದ ಕೊಠಡಿಗಳಲ್ಲಿ 14 ಎಣಿಕೆ ಟೇಬಲ್‌ಗಳು ಮತ್ತು 01 ಸಹಾಯಕ ಚುನಾವಣಾಧಿಕಾರಿಗಳ ಟೇಬಲ್‌ನ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆ ಕೊಠಡಿಗಳಲ್ಲಿ ಅಂಚೆ ಮತಪತ್ರಗಳ ಎಣಿಕೆಗಾಗಿ 08 ಟೇಬಲ್‌ಗಳು ಮತ್ತು ಇ.ಟಿ.ಪಿ.ಬಿ.ಎಂ.ಎಸ್ ಮೂಲಕ ಸ್ವೀಕೃತವಾದ ಮತಪತ್ರಗಳ ಎಣಿಕೆಗಾಗಿ 01 ಟೇಬಲ್‌ನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
*ವಿಧಾನಸಭಾ ಕ್ಷೇತ್ರವಾರು ಮತ ಎಣಿಕಾ ಸುತ್ತುಗಳ ವಿವರ:* ಪ್ರತಿ ಸುತ್ತಿನಲ್ಲಿ 14 ಮತಗಟ್ಟೆಯ ಮತಯಂತ್ರಗಳ ಎಣಿಕೆ ಕಾರ್ಯವು ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿರುವ ಸುತ್ತುಗಳ ವಿವರಗಳು ಇಂತಿದೆ. 58-ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದು, 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. 59-ಮಸ್ಕಿ ವಿಧಾನಸಭಾ ಕ್ಷೇತ್ರದ 231 ಮತಗಟ್ಟೆಗಳ ಪೈಕಿ 17 ಸುತ್ತುಗಳಲ್ಲಿ, 60-ಕುಷ್ಟಗಿ ವಿಧಾನಸಭಾ ಕ್ಷೇತ್ರದ 268 ಮತಗಟ್ಟೆಗಳ ಪೈಕಿ 20 ಸುತ್ತುಗಳಲ್ಲಿ, 61-ಕನಕಗಿರಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಗಳ ಪೈಕಿ 19 ಸುತ್ತುಗಳಲ್ಲಿ, 62-ಗಂಗಾವತಿ ವಿಧಾನಸಭಾ ಕ್ಷೇತ್ರದ 235 ಮತಗಟ್ಟೆಗಳ ಪೈಕಿ 17 ಸುತ್ತುಗಳಲ್ಲಿ, 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳ ಪೈಕಿ 19 ಸುತ್ತುಗಳಲ್ಲಿ, 64-ಕೊಪ್ಪಳ ವಿಧಾನಸಭಾ ಕ್ಷೇತ್ರದ 292 ಮತಗಟ್ಟೆಗಳ ಪೈಕಿ 21 ಸುತ್ತುಗಳಲ್ಲಿ, 92-ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 228 ಮತಗಟ್ಟೆಗಳಿದ್ದು, ಈ ಪೈಕಿ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
*ಮತ ಎಣಿಕೆ ಕಾರ್ಯಕ್ಕಾಗಿ 450 ಸಿಬ್ಬಂದಿಗಳ ನೇಮಕ:* ಮತ ಎಣಿಕೆ ಕಾರ್ಯಕ್ಕಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರವಾರು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು ಹಾಗೂ 17 ಮೈಕೋಆಬ್ರ‍್ವರ್ ಮತ್ತು ಇದರ ಜೊತೆಗೆ ಅಂಚೆ ಮತಪತ್ರ ಎಣಿಕೆ ಕೊಠಡಿಗೆ 11 ಎಣಿಕೆ ಮೇಲ್ವಿಚಾರಕರು, 21 ಎಣಿಕೆ ಸಹಾಯಕರು ಹಾಗೂ 10 ಮೈಕೋಆಬ್ರ‍್ವರ್‌ಗಳು ಸೇರಿ ಒಟ್ಟು 147 ಎಣಿಕೆ ಮೇಲ್ವಿಚಾರಕರು, 157 ಎಣಿಕೆ ಸಹಾಯಕರು ಮತ್ತು 146 ಮೈಕೋಆಬ್ರ‍್ವರ್‌ಗಳು ನೇಮಿಸಿದೆ.
ಮತ ಎಣಿಕೆ ಕಾರ್ಯಕ್ಕಾಗಿ ಅಭ್ಯರ್ಥಿಗಳು ಪ್ರತಿ ಟೇಬಲ್ಲಿಗೆ ಒಬ್ಬರಂತೆ ಒಟ್ಟು 129 ಎಣಿಕೆ ಏಜೆಂಟರನ್ನು ನೇಮಿಸಲು ಅವಕಾಶವಿರುತ್ತದೆ. ಏಜೆಂಟರು ಕೇವಲ ಪೆನ್ನು ಮತ್ತು ಹಾಳೆಯನ್ನು ತೆಗೆದುಕೊಂಡು ಬರಲು ಅವಕಾಶವಿದೆ. ಬರೆದುಕೊಳ್ಳಲು ನೋಟ್ ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿಯನ್ನು ತೆಗೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಟೇಬಲ್‌ಗಳ ಸುತ್ತಲೂ ಹಾಕಿರುವ ವೈರ್ ಮೆಷ್‌ನ್ನುದಾಟಿ ಹೋಗಲು ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರುಗಳಿಗೆ ಅವಕಾಶ ನೀಡಲಾಗುವುದಿಲ್ಲ. ಮತ ಎಣಿಕೆ ಕೇಂದ್ರದಲ್ಲಿ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು, ಮತಎಣಿಕೆ ಸಿಬ್ಬಂದಿಗಳು, ಎಣಿಕೆ ಏಜೆಂಟರುಗಳು, ಅಭ್ಯರ್ಥಿಗಳು ಮತ್ತು ಯಾವುದೇ ವ್ಯಕ್ತಿಯು ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಮತ ಎಣಿಕೆ ಕೇಂದ್ರದಲ್ಲಿ ನೀರಿನ ಬಾಟಲಿ, ಕತ್ತರಿ, ಚಾಕು ಅಥವಾ ಇನ್ನಿತರೆ ಹರಿತವಾದ ವಸ್ತುಗಳು, ಲೈಟರ್, ಬೆಂಕಿ ಪೊಟ್ಟಣಗಳನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಸಿಬ್ಬಂದಿಗಳಿಗೆ, ಏಜೆಂಟರಿಗೆ ಫೋಟೊ ಸಹಿತಗುರುತಿನ ಚೀಟಿಗಳನ್ನು ನೀಡಲಾಗಿದ್ದು, ಗುರುತಿನ ಚೀಟಿಗಳನ್ನು ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶಿಸಲು ಅವಕಾಶವಿರುತ್ತದೆ. ಪ್ರತಿ ಸುತ್ತಿನ ಮತಎಣಿಕೆ ಪೂರ್ಣಗೊಂಡ ನಂತರ ಫಲಿತಾಂಶವನ್ನು ಘೋಷಿಸಲು ವ್ಯವಸ್ಥೆ ಮಾಡಲಾಗಿರುತ್ತದೆ ಹಾಗೂ ಎಣಿಕೆ ಕೇಂದ್ರದ ಎದುರಿನ ಮೈದಾನದಲ್ಲಿ ಸ್ಕ್ರೀನ್‌ನಲ್ಲಿ ಫಲಿತಾಂಶವನ್ನು ತೋರಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದರು.
ಜಿಲ್ಲೆಯಾದ್ಯಂತ ನಿಷೇಧಾಜ್ಞೆ: ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯವು ಶಾಂತ ರೀತಿಯಿಂದ ನಡೆಯುವ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿಯಲ್ಲಿ ಜೂನ್ 03ರ ಸಾಯಂಕಾಲ 6 ಗಂಟೆಯಿAದ ಜೂ.4ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ಮತ ಎಣಿಕೆ ಕೇಂದ್ರವಾದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿರುತ್ತದೆ. ಮತ ಎಣಿಕೆ ಕಾರ್ಯದ ಸಿಬ್ಬಂದಿಗಳಿಗೆ, ಅಭ್ಯರ್ಥಿಗಳಿಗೆ ಮತ್ತು ಎಣಿಕೆ ಏಜೆಂಟರಿಗೆ ಹಾಗೂ ಭದ್ರತಾ ಸಿಬ್ಬಂದಿಯವರಿಗೆ ಮಾತ್ರ ಪ್ರವೇಶವಿರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಿಜಯೋತ್ಸವ ಆಚರಣೆ, ಧ್ವನಿ ವರ್ಧಕಗಳನ್ನು ಹಾಕುವುದು, ಮೆರವಣಿಗೆ ಮಾಡುವುದು ಹಾಗೂ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ಮತಎಣಿಕೆ ನಿಮಿತ್ಯ ಜೂ.4ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ತಯಾರಿಕೆ, ಮದ್ಯ ಮಾರಾಟ, ಮದ್ಯ ಸಂಗ್ರಹಣೆ ಹಾಗೂ ಮದ್ಯ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಶುಷ್ಕ ದಿನವನ್ನಾಗಿ ಘೋಷಿಸಲಾಗಿರುತ್ತದೆ ಎಂದು ಹೇಳಿದರು.
*ಮತ ಎಣಿಕೆಗೆ ಪೊಲೀಸ್ ಬಂದೋಬಸ್ತ್:* ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಡಗೋಡಿ ಅವರು ಮಾತನಾಡಿ, ಜೂನ್ 4ರಂದು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿAದ ಕೊಪ್ಪಳ-08 ಲೋಕಸಭಾ ಕ್ಷೇತದ ಮತ ಎಣಿಕೆ ಪಕ್ರಿಯೆ ಜರಗುವುದು. ಮತ ಎಣಿಕೆ ಪ್ರದೇಶವು ನಿರ್ಭಂಧಿತ ಪ್ರದೇಶವಾಗಿರುವುದರಿಂದ ಬಸವೇಶ್ವರ ವೃತ್ತದಿಂದ ಗವಿಮಠ ಕಡೆಗೆ, ಗಡಿಯಾರ ಕಂಬದಿಂದ ಹಾಗೂ ಡಾಲರ್ಸ್ ಕಾಲೋನಿಯಿಂದ ಗವಿಮಠದ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಭಂಧಿಸಲಾಗಿದ್ದು, ಈ ಭಾಗದ ಸಾರ್ವಜನಿಕರು ಸಂಚರಿಸಲು ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಏಜೆಂಟರು, ಮತ ಎಣಿಕೆ ಏಜೆಂಟರ್‌ಗಳು ಹಾಗೂ ಮತ ಎಣಿಕೆ ಪ್ರಕ್ರಿಯೆಗೆ ನಿಯುಕ್ತಿಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಸವೇಶ್ವರ ವೃತ್ತದ ಮೂಲಕ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿದ್ದು, ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವವರು ಮುಂಚಿತವಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದ್ದು, ಬಸವೇಶ್ವರ ವೃತ್ತದಿಂದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ರಾಜಕೀಯ ಪಕ್ಷಗಳ ಏಜೆಂಟ್ ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ಎ.ಪಿ.ಎಂ.ಸಿ ಆವರಣದಲ್ಲಿ ನಿಲುಗಡೆ ಮಾಡಬೇಕು. ಮತ ಎಣಿಕೆ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಯರು ಮತ್ತು ಮಾಧ್ಯಮ ಮಿತ್ರರು ಬಿ.ಬಿ.ಎಮ್ ಕಾಲೇಜು ಆವರಣದಲ್ಲಿ ತಮ್ಮ ವಾಹನಬಗಳನ್ನು ಪಾರ್ಕಿಂಗ್ ಮಾಡಬೇಕು. ಬಸವೇಶ್ವರ ಸರ್ಕಲ್‌ನಿಂದ ಗವಿಮಠಕ್ಕೆ ಆಗಮಿಸುವ ಭಕ್ತಾಧಿಗಳು ಗವಿಮಠ ರಸ್ತೆ 3ನೇ ಕ್ರಾಸ್‌ನಿಂದ ಕತೇಶ್ವರ ಕಲ್ಯಾಣ ಮಂಟಪದವರೆಗೆ ಆಗಮಿಸಿ ತಮ್ಮ ವಾಹನ ಪಾರ್ಕಿಂಗ್ ಮಾಡಿ ಇಲ್ಲಿಂದ ನಡೆದುಕೊಂಡು ಮಠಕ್ಕೆ ತೆರಳಬಹುದಾಗಿದೆ. ಗಡಿಯಾರ ಕಂಬದಿಂದ ಗವಿಮಠಕ್ಕೆ ಆಗಮಿಸುವ ಭಕ್ತಾಧಿಗಳು ಗವಿ ಮಠ ಹಿಂಭಾಗದಲ್ಲಿ (ಜೈಲು ರಸ್ತೆ) ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ನಡೆದುಕೊಂಡು ಮಠಕ್ಕೆ ತೆರಳಬಹುದು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ರಾಜಕೀಯ ಪಕ್ಷಗಳ ಏಜೆಂಟರು, ಮತ ಎಣಿಕೆ ಏಜೆಂಟರ್‌ಗಳು ಕಡ್ಡಾಯವಾಗಿ ಚುನಾವಣಾಧಿಕಾರಿಗಳು ಕೊಪ್ಪಳ ರವರು ನೀಡಿರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಬರಬೇಕು ಎಂದು ಹೇಳಿದರು.
*ಭಾರಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ:* ಜೂ.4ರಂದು ಕೊಪ್ಪಳ ನಗರದ ಗವಿಮಠ ಮೂಲಕ ಸಂಚರಿಸುವ ಭಾರಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ವಿವರ ಇಂತಿದೆ. ಗವಿಮರ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಸಂಚರಿಸುವ, ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ಬಾರಿ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು.
ಗವಿಮಠ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಹಾಗೂ ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ತೆರಳುವ ಸಂಚರಿಸುವ ಲಘು ಹಾಗೂ ದ್ವಿ-ಚಕ್ರ ವಾಹನಗಳು ಗಡಿಯಾರ ಕಂಭ, ಅಶೋಕ ವೃತ್ತ, ಹಳೇ ಡಿಸಿ ವೃತ್ತ ಮೂಲಕ ಸಂಚರಿಸಬೇಕು. ಚುನಾವಣಾ ಆಯೋಗದ ನಿರ್ದೇಶಾನುಸಾರ ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲಾ ರಾಜಕೀಯ ಪಕ್ಷದ ಅಭ್ಯರ್ಥಿಗಳು, ಅವರ ಏಜೆಂಟರ್‌ಗಳು ಮತ್ತು ಮತ ಎಣಿಕೆ ಏಜೆಂಟರ್‌ಗಳು ಮತ ಎಣಿಕಾ ಕೇಂದ್ರಕ್ಕೆ ನೀರಿನ ಬಾಟಲ್, ಲೈಟರ್, ಬೆಂಕಿ ಪೊಟ್ಟಣ, ಆಪಾಯಕಾರಿ ವಸ್ತುಗಳು, ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು (ಮೊಬೈಲ್), ಗುಟ್ಕಾ, ಬೀಡಿ-ಸಿಗರೇಟ್ ಇತರೆ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಬರುವದನ್ನು ನಿಷೇಧಿಸಿದೆ.
*ಬಂದೋಬಸ್ತ್ ಕರ್ತವ್ಯಕ್ಕೆ ಪೊಲಿಸ್ ಅಧಿಕಾರಿ, ಸಿಬ್ಬಂದಿಗಳ ನೇಮಕ:* ಕೊಪ್ಪಳ-08 ಲೋಕಸಭಾ ಕ್ಷೇತದ ಮತ ಎಣಿಕೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ಒಬ್ಬರು ಎಎಸ್ಪಿ, 2 ಡಿಎಸ್ಪಿ, 7 ಸಿಪಿಐ/ಪಿಐ, 21 ಪಿ.ಎಸ್.ಐ, 33 ಎ.ಎಸ್.ಐ., 100 ಹೆಡ್ ಕಾನ್ಸ್ಟೇಬಲ್, 125 ಪೊಲೀಸ್ ಕಾನ್ಸ್ಟೇಬಲ್, 24 ಮಹಿಳಾ ಹೆಡ್ ಕಾನ್ಸ್ಟೇಬಲ್, 2 ಡಿ.ಎ.ಆರ್., 2 ಕೆ.ಎಸ್.ಆರ್.ಪಿ., 50 ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಇತರೆ ಸ್ಥಳಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ 7 ಸಿಪಿಐ/ಪಿಐ, 18 ಪಿ.ಎಸ್.ಐ, 37 ಎ.ಎಸ್.ಐ., 125 ಹೆಡ್ ಕಾನ್ಸ್ಟೇಬಲ್, 200 ಪೊಲೀಸ್ ಕಾನ್ಸ್ಟೇಬಲ್, 30 ಮಹಿಳಾ ಹೆಡ್ ಕಾನ್ಸ್ಟೇಬಲ್, 6 ಡಿ.ಎ.ಆರ್., 2 ಕೆ.ಎಸ್.ಆರ್.ಪಿ., 150 ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರಿದ್ದರು.
Comments are closed.