ಮಹಿಳೆ ಸಂಕೋಲೆಗಳಿಂದ ಬಿಡುಗಡೆಗೊಳ್ಳಲಿ -ಆರ್.ಸುನಂದಮ್ಮ
ಕೊಪ್ಪಳ ಮೇ
ಮಹಿಳೆಯನ್ನು ಸಂಕೋಲೆಗಳಿಂದ ಬಿಡುಗಡೆಗೊಳಿಸದ ಹೊರತು ಸಮಾಜದಲ್ಲಿ ಇತರೆ ರಾಜಕೀಯ,ಆರ್ಥಿಕ ಸಮಾನತೆಗಳನ್ನು ತರುವುದು ಸಾಧ್ಯವಿಲ್ಲ .ಸಾಹಿತಿಗಳು,ಬರಹಗಾರರು ತಮ್ಮ ವಿಚಾರಗಳನ್ನು ಸ್ಪಷ್ಟವಾಗಿಟ್ಟುಕೊಳ್ಳಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಸರ್ಕಾರಗಳನ್ನು ನಿರಂತರವಾಗಿ ಎಚ್ಚರಿಕೆಯಿಂದ ಇಡುವ ಹೊಣೆ ಸಾಹಿತಿಗಳು ,ಹೋರಾಟಗಾರರ ಮೇಲಿದೆ ಎಂದು ಸಾಹಿತಿ ಆರ್.ಸುನಂದಮ್ಮ ಹೇಳಿದರು.
ಇಲ್ಲಿನ ಶಿವಶಾಂತವೀರ ಮಂಗಲಭವನದಲ್ಲಿ ಎರಡು ದಿನಗಳ ಕಾಲ ನಡೆದ ಮೇ ಸಾಹಿತ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಸಂದರ್ಭದಲ್ಲಿ ನಮ್ಮ ಬದ್ಧತೆ ಏನಾಗಿರಬೇಕು ಎಂಬುದನ್ನು ಕವಿ,ಸಾಹಿತಿಗಳು,ಹೋರಾಟಗಾರರು ಸ್ಪಷ್ಟವಾಗಿಸಿಕೊಳ್ಳಬೇಕು.ಪ್ರಜಾಪ್ರಭುತ್ವದಲ್ಲಿ ಪ್ರಬಲ ವಿರೋಧ ಪಕ್ಷಗಳಿರಬೇಕು.ಸಾಮಾಜಿಕ ಚಳುವಳಿಕಾರರು ನಿರಂತರವಾಗಿ ಪ್ರಭುತ್ವವನ್ನು ವಿಮರ್ಶಿಸುತ್ತ ವ್ಯವಸ್ಥೆಯನ್ನು ಎಚ್ಚರವಾಗಿರಿಸಿಬೇಕು.ಹೋರಾಟಗಾರರು,ಚಿಂತಕರು ಮೌನವಾಗಿರಬಾರದು.ಮೌನ ಸಮ್ಮತಿಯ ಲಕ್ಷಣವಾಗುತ್ತದೆ.ಸಂವಿಧಾನ ಬದಲಾಯಿಸುವ ದಾರ್ಷ್ಟ್ಯದ ಮಾತುಗಳನ್ನು ಹೇಳಿದರೂ ಕೂಡ ನಾವು ಪ್ರತಿಕ್ರಿಯಿಸದೇ ಕುಳಿತರೇ ಆಡಳಿತ ಮಾಡುವವರು ತಮ್ಮ ನಿಲುವೇ ಸರಿ ಎಂದು ಭಾವಿಸುತ್ತಾರೆ.ಮನುಷ್ಯ ವಿರೋಧಿ,ಜೀವ ವಿರೋಧಿಯಾದ ಮನುಸ್ಮೃತಿಯನ್ನೇ ಮತ್ತೆ ಬೇರೆ ರೂಪಗಳಲ್ಲಿ ಜಾರಿಗೊಳಿಸುವ ಅಪಾಯಗಳಿವೆ. ತಳಹಂತದಿಂದ ಜಾತಿ,ವರ್ಗಗಳನ್ನು ಹೋಗಲಾಡಿಸಬೇಕು.ಮಹಿಳೆಗೆ ಲಿಂಗತ್ವ ಸಮಾನತೆ ತರಬೇಕು.ಸ್ತ್ರೀಗೆ ಇರುವ ಸಂಕೋಲೆಗಳಿಂದ ಮುಕ್ತಗೊಳಿಸದ ಹೊರತು ಇತರೆ ಸಾಮಾಜಿಕ,ಆರ್ಥಿಕ ಸಮಾನತೆ ತರುವುದು ಸಾಧ್ಯವಿಲ್ಲ ಎಂದು ಆರ್.ಸುನಂದಮ್ಮ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಎರಡು ದಿನಗಳ ಕಾಲ ನಡೆದ ಮೇ ಸಾಹಿತ್ಯ ಮೇಳವು ಸಾಮಾಜಿಕ ಪ್ರಜ್ಞೆ ವಿಸ್ತರಣೆಗೆ ಪೂರಕವಾಗಿದೆ. ಜನರ ವೈಚಾರಿಕ ಹಸಿವನ್ನು ಹಿಂಗಿಸುವ ಯಶಸ್ವಿ ಪ್ರಯತ್ನ ಮಾಡಿದೆ.ದೇಶದ ಮುಖ್ಯ ಕಸುಬಾಗಿರುವ ಒಕ್ಕಲುತನವನ್ನು ಕಡೆಗಣಿಸಿದ್ದರಿಂದ ಈ ದೇಶದ ರೈತರು ತಮ್ಮ ಕೃಷಿಭೂಮಿಯನ್ನು ನಾನಾ ಕಾರಣಗಳಿಗಾಗಿ ಮಾರಾಟ ಮಾಡುತ್ತಿದ್ದಾರೆ.ಕೊಪ್ಪಳ ಭಾಗದಲ್ಲಿಯೂ ಲಕ್ಷಾಂತರ ಎಕರೆ ಭೂಮಿ ಉಳುಮೆಯಾಗದೇ ಖಾಲಿ ಬಿದ್ದಿದೆ.ಸರ್ಕಾರದ ನೀತಿಗಳೇ ಇದಕ್ಕೆ ಕಾರಣ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸದವರು ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವುದರ ಮೂಲಕ,ಕರ್ಪೂರಿ ಠಾಕೂರ್ ಅವರ ವಿಚಾರಗಳನ್ನು ಒಪ್ಪದೇ ರಾಜಕೀಯ ಕಾರಣಕ್ಕಾಗಿ ಭಾರತ ರತ್ನ ಪ್ರಶಸ್ತಿ ನೀಡಿರುವುದು.ಪ್ರಶಸ್ತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ನಡೆಯಾಗಿದೆ.ಇದು ಸರಿಯಾದುದಲ್ಲ.ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಘರ್ಷ ಬಹಳ ಕಡೆ ತಾರಕಕ್ಕೆ ಏರಿವೆ.ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ಎಂದು ಭಾವಿಸಲಾಗಿದೆ.ಬಹುಧರ್ಮ,ವೈವಿಧ್ಯಮಯ ಆಹಾರ,ಭಾಷೆ,ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಉಳಿಸಿಕೊಂಡು ಹೋಗಬೇಕು . ಕೊಪ್ಪಳಕ್ಕೆ ಹೋರಾಟದ ದೊಡ್ಡ ಹಿನ್ನೆಲೆ ಇದೆ.ಇಲ್ಲಿನ ಗವಿಮಠ ಹಿಂದೆ ಬೌದ್ಧರ ನಂತರ ಜೈನರ ಕೇಂದ್ರವಾಗಿತ್ತು.ಈಗ ವೀರಶೈವ ಕೇಂದ್ರವಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ.ಇಲ್ಲಿನ ಗವಿಮಠದ ಜಾತ್ರೆ ಎಲ್ಲಾ ಜಾತಿ,ಧರ್ಮದವರು ಒಟ್ಟಾಗಿ ಸೇರಿ ಆಚರಿಸುವ ಬಹುದೊಡ್ಡ ಸೌಹಾರ್ದದ ಆಚರಣೆಯಾಗಿದೆ.ಬಸವಾದಿ ಶರಣರ ವಿಚಾರಗಳ ಹಿನ್ನೆಲೆಯ ಈ ಮಠ ಇನ್ನೂ ದೊಡ್ಡ ಪ್ರಮಾಣದಲ್ಲಿ ಆ ನಿಟ್ಟಿನಲ್ಲಿ ಸಾಗಿದರೆ ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡುವ ಅವಕಾಶಗಳಿವೆ ಎಂದರು.
ಮತ್ತೆ ಜೊತೆಗೂಡುವ ಮಾತುಗಳನ್ನಾಡಿದ ಬಿ.ಪೀರಬಾಷಾ ಅವರು,ಭಿನ್ನ ಚಳುವಳಿಗಳ ಎಲ್ಲಾ ಕ್ರಿಯಾಶೀಲ ಗೆಳೆಯರು,ಸಂಘಟಕರು ಒಂದೆಡೆ ಸೇರಿ ಕಳೆದ ಹತ್ತು ವರ್ಷಗಳಿಂದ ಮೇ ಸಾಹಿತ್ಯ ಮೇಳ ಆಚರಿಸಿಕೊಂಡು ಬರುತ್ತಿರುವುದು.ರೈತ,ದಲಿತ,ಕಾರ್ಮಿಕ,ಬಂಡಾಯ ಹೀಗೆ ವಿವಿಧ ಸಮಾನ ಮನಸ್ಕರನ್ನು ಒಂದು ವೇದಿಕೆಯಡಿ ತರುವ ಪ್ರಯತ್ನವನ್ನು ಮೇ ಸಾಹಿತ್ಯ ಮೇಳ ಮಾಡಿಕೊಂಡು ಬರುತ್ತಿದೆ.ಯಾವುದೇ ಸರ್ಕಾರದ ,ಕಂಪನಿಗಳ,ರಾಜಕಾರಣಿಗಳ ನೆರವನ್ನು ಪಡೆಯದೇ ಪ್ರಾಮಾಣಿಕವಾಗಿ ದುಡಿದವರ ನೈತಿಕ ಗಳಿಕೆಯ ನೆರವಿನಿಂದಲೇ ಮೇ ಸಾಹಿತ್ಯ ಮೇಳವು ನಡೆಯುತ್ತಿದೆ.ಮೇಳದ ನಂತರ ಸಾಮಾಜಿಕ ಮಾಧ್ಯಮಗಳ ಮೂಲಕ ಖರ್ಚು-ವೆಚ್ಚಗಳ ವಿವರಗಳನ್ನು ಪಾರದರ್ಶಕವಾಗಿ ಹಂಚಿಕೊಳ್ಳುವುದು ಅದರ ವಿಶಿಷ್ಟವಾಗಿದೆ.ಅದನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ.ಎಲ್ಲ ಜನರ ಬೆಂಬಲ ಈ ಮೇಳಕ್ಕೆ ನಿರಂತರವಾಗಿ ಸಿಗುವಂತಾಗಲಿ ಎಂದರು.
ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ತೀರ್ಥಹಳ್ಳಿಯ ಸವಿರಾಜ್ ಆನಂದ್ ಮಾತನಾಡಿ,ಸಮಾಜ ಅನೇಕ ಸಂದರ್ಭಗಳಲ್ಲಿ ಮುಜುಗರಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.ಕವಿಗಳಾದವರು ಸ್ವತಃ ತಮ್ಮನ್ನೂ ಹಾಗೂ ವ್ಯವಸ್ಥೆಯನ್ನು ಮುಜುಗರಕ್ಕೆ,ಟೀಕೆಗೆ ಒಳಪಡಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ ಪಡೆದ ಧಾರವಾಡದ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ,ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ ಪಡೆದ ಕೆರೆಕೋಣದ ಮಾಧವಿ ಭಂಡಾರಿ ಮಾತನಾಡಿದರು.
ಕೆ.ಬಿ.ಗೋನಾಳ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ
ಕಳೆದ ಎರಡು ದಿನಗಳ ಕಾಲ ನಡೆದ ಮೇ ಸಾಹಿತ್ಯ ಮೇಳದ ಯಶಸ್ವಿಗೆ ಶ್ರಮಿಸಿದ ರವಿತೇಜ ಅಬ್ಬಿಗೇರಿ,ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ನೇರ ಪ್ರಸಾರ ಮಾಡಿದ ಅಕ್ಷರ ಟಿವಿಯ ಮಂಜುನಾಥ ಗೊಂಡಬಾಳ ಮತ್ತಿತರರನ್ನು ಸನ್ಮಾನಿಸಿ,ಗೌರವಿಸಲಾಯಿತು.
Comments are closed.