ಎಸ್ ಆರ್ ಹಿರೇಮಠ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’
ರಾಜಕಾರಣಿಗಳು ಅಧಿಕಾರ, ಸಂಪರ್ಕಗಳನ್ನು ದುರ್ಬಳಕೆ ಮಾಡಿಕೊಂಡು ಕಬಳಿಸಿದ ಅಕ್ರಮ ಭೂಮಿಯ ಸಕಲ ದಾಖಲೆಗಳನ್ನು ಸಂಪಾದಿಸಿ, ದೂರು ನೀಡಿ, ಹಲವರು ರಾಜೀನಾಮೆ ನೀಡಲು, ಜೈಲಿಗೆ ಹೋಗಲು ಕಾರಣವಾದರು. ಅಕ್ರಮ ಎಸಗುವವರು ಯಾವುದೇ ಪಕ್ಷದವರಿರಲಿ, ಎಷ್ಟೇ ಪ್ರಭಾವಿತರಿರಲಿ ಅವರನ್ನು ಬಿಡುವುದಿಲ್ಲ ಎಂದು ಈಗಲೂ ೮೦ ವರ್ಷದ ಎಸ್. ಆರ್. ಹಿರೇಮಠ ಘೋಷಿಸುತ್ತಾರೆ ಮತ್ತು ಹೋರಾಟ ನಡೆಯುತ್ತಲೇ ಇದೆ.
ಬಿಡುವಿರದ ಹೋರಾಟ, ಸಂಘಟನೆ, ಚಟುವಟಿಕೆಗಳ ನಡುವೆಯೂ ಅರಣ್ಯ ರಕ್ಷಣೆ, ಜೈವಿಕ ವೈವಿಧ್ಯ, ಭೂಮಿ ಒತ್ತುವರಿ, ನೈಸರ್ಗಿಕ ಸಂಪತ್ತಿನ ಮೇಲೆ ಜನರ ಹಕ್ಕುಗಳೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಹಿರೇಮಠರು ಬರೆದಿದ್ದಾರೆ, ಸಂಪಾದಿಸಿದ್ದಾರೆ. ರಾಜಕಾರಣಿಗಳು ಮತ್ತು ಪ್ರಭಾವಿ ಕುಳಗಳ ವಿರುದ್ಧ ನಿರಂತರ ಹೋರಾಟ ನಡೆಸುವುದರಿಂದ ಸಾಕಷ್ಟು ಜೀವ ಬೆದರಿಕೆ ಬಂದಿದ್ದರೂ ರಕ್ಷಣೆ ಒದಗಿಸಬೇಕೆಂದು ಸರಕಾರವನ್ನು ಕೇಳಿಲ್ಲ. ಸತ್ಯದ ಗುರಾಣಿ ಮುಂದಿರುವಾಗ ಯಾವ ವಿಷಬಾಣವೂ ತನ್ನನ್ನು ನಾಟುವುದಿಲ್ಲ ಎಂದೇ ಧೃಢವಾಗಿ ನಂಬಿ ಭ್ರಷ್ಟರ ವಿರುದ್ಧ ಯುದ್ಧ ಮುಂದುವರೆಸುತ್ತಿದ್ದಾರೆ. ಅವರನ್ನು ಸಮಾಜ ಸುಧಾರಕ, ಪರಸರವಾದಿ, ಗ್ರಾಮೀಣಾಭಿವೃದ್ಧಿಯ ಕಾರ್ಯಕರ್ತ, ಭ್ರಷ್ಟಾಚಾರ ವಿರೋಧಿ, ಶಿಕ್ಷಣ-ಆರೋಗ್ಯ-ಪರಿಸರ ಜಾಗೃತಿ ಮೂಡಿಸಿದ ಹೋರಾಟಗಾರ, ಗಾಂಧಿವಾದಿ ಮುಂತಾಗಿ ಏನೇ ಹೆಸರಿಟ್ಟು ಕರೆದರೂ ಅವೆಲ್ಲ ಪಾತ್ರಗಳಿಗೆ ಒಂದು ಮಾದರಿಯಾಗಿ ಬದುಕುತ್ತಿದ್ದಾರೆ. ಸರಳಾತಿಸರಳ ಜೀವನ ನಡೆಸುತ್ತಿದ್ದಾರೆ. ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಹಲವಾರು ಸಂಘ, ಸಂಸ್ಥೆ, ಮಂಡಳಿ, ಯೋಜನೆ, ಸಮಿತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಸಂಖ್ಯ ಮನ್ನಣೆಗಳು ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಜನಮನ್ನಣೆ ಅವರಿಗೆ ದೊರೆತಿದೆ. ಕವಿ, ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ, ‘ಮಹಾಸಂಗ್ರಾಮಿ’ ಎಂಬ ಎಸ್ಸಾರ್ ಹಿರೇಮಠರ ಸುದೀರ್ಘ ಜೀವನ ಚರಿತ್ರೆಯ ಹೊತ್ತಗೆಯನ್ನು ಪ್ರಕಟಿಸಿದ್ದಾರೆ.
ದಣಿವರಿಯದ ಈ ಸಮಾಜಮುಖಿ ಜೀವನಕ್ಕೆ ೨೦೨೪ನೇ ಸಾಲಿನ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’ ನೀಡಿ ಗೌರವಿಸಲು ಮೇ ಸಾಹಿತ್ಯ ಮೇಳ ಬಳಗವು ಹೆಮ್ಮೆ ಪಡುತ್ತದೆ. ಅವರಿಗೆ ಆರೋಗ್ಯ, ನೆಮ್ಮದಿಯ ಬದುಕು ಸದಾ ಸಿಗಲೆಂದು; ತನ್ನ ಸಮಾಜದ ಬಗೆಗೆ ಕಂಡ ಕನಸುಗಳು ನನಸಾಗಲೆಂದು ಹಾರೈಸುತ್ತೇವೆ.
ಈ ಪ್ರಶಸ್ತಿ ಹತ್ತು ಸಾವಿರ ನಗದು ಮತ್ತು ಫಲಕ ಹೊಂದಿದೆ. ಪ್ರಶಸ್ತಿಯನ್ನು ದಾವಣಗೆರೆಯ ಬಿ. ಶ್ರೀನಿವಾಸ ಅವರು ಪ್ರಾಯೋಜಿಸಿದ್ದಾರೆ
Comments are closed.