ಹುಚ್ಚಮ್ಮ ಚೌದ್ರಿ ಕುಣಿಕೇರಿ ಅವರಿಗೆ ‘ಲಕ್ಷ್ಮೀಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ’ ಪ್ರಶಸ್ತಿ
10ನೇ ಮೇ ಸಾಹಿತ್ಯ ಮೇಳದ ಗೌರವ ಪ್ರಶಸ್ತಿಗಳು ಪ್ರಕಟ -6
ಹುಚ್ಚಮ್ಮ ಶಿವಪ್ಪ ಗೋಂದಿಹೊಸಳ್ಳಿ ಅವರು ಈಗಿನ ಕೊಪ್ಪಳ ಜಿಲ್ಲೆಯ ಹಂದ್ರಾಳ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಮೂರ‍್ನಾಲ್ಕು ವರ್ಷದ ಬಾಲೆಯಾಗಿದ್ದಾಗಲೇ ಬಸಪ್ಪ ಚೌದ್ರಿ ಎಂಬ ವರನೊಂದಿಗೆ ಮದುವೆಯಾಯಿತು. ಗಂಡನ ಊರು ಕುಣಿಕೇರಿಗೆ ಬಂದಾಗ ಅವರಿಗೆ ೧೩ ವರ್ಷ ವಯಸ್ಸು. ಸಂಸಾರ ಆರಂಭಿಸಿ ನಾಲ್ಕು ವರ್ಷ ಕಳೆಯುವುದರಲ್ಲೇ ಬಸಪ್ಪ ತೀರಿಕೊಂಡರು. ಮಕ್ಕಳಾಗಿರದ ಹದಿನೇಳು ವರ್ಷದ ಯುವತಿ ಹುಚ್ಚಮ್ಮ ವಿಧವೆ ಎನಿಸಿಕೊಂಡಳು. ವಿಧವೆ ಯುವತಿ ಒಂಟಿ ಹೆಣ್ಣಾಗಿ ಭಾರತೀಯ ಸಮಾಜದಲ್ಲಿ ಬದುಕುವುದು ಸುಲಭವಿಲ್ಲ. ಆದರೆ ಧೃಢವಾಗಿ, ದಿಟ್ಟವಾಗಿ ತನ್ನ ಅನ್ನ ತಾನು ದುಡಿದುಕೊಂಡು ಅತಿ ಕಷ್ಟದಿಂದಲೇ ಘನತೆಯ ಬದುಕನ್ನು ಕಟ್ಟಿಕೊಂಡರು. ತನ್ನ ಹೊಲದಲ್ಲಿ ತಾನೇ ಕೈಹಾಕಿ ದುಡಿದು ಸರಳ ಜೀವನ ನಡೆಸಿದರು.
ದಶಕಗಳ ಕೆಳಗಿನ ಮಾತು. ಕುಣಿಕೇರಿ ಊರಿನಲ್ಲೊಂದು ಶಾಲೆಯಿರಲಿಲ್ಲ. ಶಾಲಾ ಕೊಠಡಿ ಕಟ್ಟಲು, ಮಕ್ಕಳು ಆಟವಾಡಲು ಜಾಗವಿರಲಿಲ್ಲ. ಊರಿನಲ್ಲಿ ಜಮೀನ್ದಾರರಿದ್ದರು, ಹೊಲಗಳ ಒಡೆಯರಿದ್ದರು. ಆದರೆ ತುಂಡು ಭೂಮಿಗಾಗಿ ಜೀವಮಾನವಿಡೀ ರಕ್ತಸಿಕ್ತ ಕದನ ನಡೆಸಲೂ ಸಿದ್ಧವಾಗುವ ಸಮಾಜದಲ್ಲಿ ಶಾಲೆಗಾಗಿ ಪುಕ್ಕಟೆ ಭೂಮಿ ಕೊಡಲು ಯಾರೂ ಸಿದ್ಧರಿರಲಿಲ್ಲ. ನೂರಾರು ಎಕರೆ ಹೊಲವಿರುವವರು ಒಂದೆಕರೆ ಕೊಡಲೂ ಒಪ್ಪಲಿಲ್ಲ.
ಆಗ ಹುಚ್ಚಮ್ಮ ಯೋಚಿಸಿದರು. ತನಗೆ ಮಕ್ಕಳಿಲ್ಲ. ಸಾಕಬೇಕಾದ ಕುಟುಂಬವಿಲ್ಲ. ಜಮೀನು ಇಟ್ಟುಕೊಂಡು ಏನು ಮಾಡಲಿ? ತನ್ನಂತೆ ನಿರಕ್ಷರಿಯಾಗಿ ಕಷ್ಟದ ಬದುಕು ನಡೆಸುವ ಪರಿಸ್ಥಿತಿ ತನ್ನೂರ ಮಕ್ಕಳಿಗೆ ಬಾರದೆ ಇರಲಿ, ಊರಿನಲ್ಲೊಂದು ಶಾಲೆ ಶುರುವಾಗಿ ಮಕ್ಕಳೆಲ್ಲ ವಿದ್ಯಾವಂತರಾಗಲಿ ಎಂದು ಯೋಚಿಸಿದರು. ಇದ್ದಷ್ಟು ದಿವಸ ದುಡಿದು ಬದುಕುವೆ ಎಂದು ತನ್ನ ಪಾಲಿನ ಎರಡೆಕರೆ ಜಮೀನನ್ನು ಶಾಲೆಗೆ ದಾನ ಮಾಡಿಬಿಟ್ಟರು. ಅವರ ತಂದೆ ಶಿವಪ್ಪ ಸಹಾ ತವರೂರು ಹಂದ್ರಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಒಂದು ಎಕರೆ ಜಮೀನು ದಾನ ಮಾಡಿದ್ದ ನೆನಪು ಅವರಿಗಿತ್ತು. ತಂದೆಯ ಉದಾತ್ತ ನಡೆಯನ್ನೇ ಮಗಳೂ ಅನುಸರಿಸಿದಳು.
ನಂತರ? ಬದುಕು ನಿಭಾಯಿಸಲು ಹುಚ್ಚಮ್ಮ ಕೂಲಿ ಕೆಲಸವನ್ನೇ ನಂಬಿಕೊಂಡರು. ಕೆಲವು ವರ್ಷಗಳ ಬಳಿಕ ತನ್ನ ಜಮೀನಿನಲ್ಲಿ ಆರಂಭವಾದ ಶಾಲೆಯಲ್ಲಿ ಬಿಸಿಯೂಟ ನೌಕರರಾಗಿ ಸೇರಿಕೊಂಡರು. ಮಕ್ಕಳಿಗೆ ಅಕ್ಷರದ ತುತ್ತುಣಿಸಲು ಜಾಗ ನೀಡಿದ ಆ ಮಹಾಮನಸು, ೨೫ ವರ್ಷಗಳ ಕಾಲ ಮಕ್ಕಳಿಗೆ ತುತ್ತನ್ನೂ ಉಣಿಸಿತು. ಸರ್ಕಾರಿ ಲೆಕ್ಕದ ಪ್ರಕಾರ ಅವರೀಗ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ ಈಗಲೂ ಶಾಲೆಗೊಮ್ಮೆ ಹೋಗಿಬರುತ್ತಾರೆ. ತಾವು ಪ್ರೀತಿಯಿಂದ ಸಾಕಿ ಸಲಹಿದ ದೀಪಾ ಅವರ ಕುಟುಂಬದೊಡನೆ ಜೀವನ ನಡೆಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಊರಲ್ಲೊಂದು ಶಾಲೆಯಾಗಲೆಂದು ತನ್ನ ಪಾಲಿನ ಜಮೀನು ಪೂರ್ತಿ ದಾನ ನೀಡುವ ಮೂಲಕ ಸಮಾಜಮುಖಿಯಾಗಿ ಬದುಕನ್ನು ತೆತ್ತುಕೊಂಡ ಹುಚ್ಚವ್ವ ಸಮುದಾಯಕ್ಕೆ ಮಾದರಿಯೆನಿಸುವ ಚೇತನ. ಅಂತಹ ಅಕ್ಷರದಾತೆಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲು ‘ಮೇ ಸಾಹಿತ್ಯ ಮೇಳ ಬಳಗ’ವು ಹರ್ಷಿಸುತ್ತದೆ. ಅವರಿಗೆ ಆರೋಗ್ಯ, ನೆಮ್ಮದಿಯ ಬದುಕು ಸದಾ ಸಿಗಲೆಂದು ಹಾರೈಸುತ್ತೇವೆ.
ಈ ಪ್ರಶಸ್ತಿ ಹತ್ತು ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಬಿಜಾಪುರ ಜಿಲ್ಲೆಯ ದಲಿತ ಚಳವಳಿಯ ಯುವ ಹೋರಾಟಗಾರ ಚನ್ನು ಕಟ್ಟಿಮನಿ ಪ್ರಾಯೋಜಿಸಿದ್ದಾರೆ.
Comments are closed.