ಶಿವಾಜಿ ಚತ್ರಪ್ಪ ಕಾಗಣಿಕರ್ ಅವರಿಗೆ ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ

Get real time updates directly on you device, subscribe now.

 

ಬೆಳಗಾವಿ ಜಿಲ್ಲೆಯ ಕಡೋಣಿ ಗ್ರಾಮದವರಾದ ೭೫ ವರ್ಷ ವಯಸ್ಸಿನ  ಶಿವಾಜಿ ಚತ್ರಪ್ಪ ಕಾಗಣಿಕರ್ ಜಲಾನಯನ ಅಭಿವೃದ್ಧಿ, ಸಾವಯವ ಕೃಷಿ, ಸುಸ್ಥಿರ ಗ್ರಾಮೀಣ ಉದ್ಯೋಗ ಜಾಗೃತಿ, ಭ್ರಷ್ಟಾಚಾರ ವಿರೋಧಿ ಅಭಿಯಾನ, ಸಾರಾಯಿ ವಿರೋಧಿ ಅಭಿಯಾನ, ಜಲಸಂರಕ್ಷಣೆಯೇ ಮೊದಲಾದ ಕ್ಷೇತ್ರಗಳಲ್ಲಿ ಐದು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರು. ಸಮಾಜಸೇವೆಯ ಮೂಲಕ ಕನ್ನಡ-ಮರಾಠಿ ಸಮಾಜಗಳನ್ನು ಬೆಸುಗೆ ಮಾಡಿದವರು.

ಪ್ರಾಥಮಿಕ ಶಾಲೆಯಲ್ಲಿ ಓದಿದ ಇತಿಹಾಸ ಪಾಠವು ಎಳೆಯ ಶಿವಾಜಿಯವರ ಮೇಲೆ ಎಂತಹ ಗಾಢ ಪ್ರಭಾವ ಬೀರಿತೆಂದರೆ ಸರ್ವೋದಯ ಕಾರ್ಯಕರ್ತರಾಗಿ ಗ್ರಾಮಸ್ವರಾಜ್ಯ ಚಳವಳಿಯಲ್ಲಿ ಕಾರ್ಯ ನಿರ್ವಹಿಸುವ ನಿರ್ಧಾರ ಮಾಡಿದರು. ಸಾನೆ ಗುರೂಜಿ ಮತ್ತು ವಿನೋಬಾ ಭಾವೆ ಅವರಿಂದ ಪ್ರಭಾವಿತರಾಗಿ ಯೌವನದ ದಿನಗಳಲ್ಲೇ ಮನೆ ಬಿಟ್ಟು ಸಮಾಜಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟುಕೊಂಡರು. ಜೂನ್ ತಿಂಗಳು ಬಂತೆಂದರೆ ತಾವು ವಾಸಿಸುವ ಸುತ್ತಮುತ್ತಲ ಹತ್ತಾರು ಹಳ್ಳಿಗಳ ತಿರುಗಿ ಬಡ, ತಳಸಮುದಾಯಗಳ ಮಕ್ಕಳನ್ನು ಕರೆತಂದು ಶಾಲೆಗಳಿಗೆ ಸೇರಿಸುತ್ತಿದ್ದರು. ರಾತ್ರಿ ಶಾಲೆ ಆರಂಭಿಸಿದರು. ೨೦೦ ಹಳ್ಳಿಗಳಲ್ಲಿ ೨೭೦ ಬಾಲವಾಡಿಗಳನ್ನು ಆರಂಭಿಸಿದರು. ಮಹಿಳೆಯರು ಉರುವಲಿಗೆ ಪಡುವ ಕಷ್ಟ ನೋಡಿದ್ದ ಶಿವಾಜಿಯವರು, ಕಟ್ಟಣಭಾವಿ ಮತ್ತು ಕಡೋಲಿ ಊರುಗಳ ಆಸುಪಾಸುಗಳಲ್ಲಿ ಗೋಬರ್ ಗ್ಯಾಸ್ ಸ್ಥಾವರಗಳನ್ನು ಮನೆಮನೆಗೆ ಕಟ್ಟಿಕೊಟ್ಟರು. ಜನ ಜಾಗರಣ್ ಸಂಸ್ಥೆಯೊಡನೆ ಕೈಜೋಡಿಸಿದರು.

೧೯೮೪ರಲ್ಲಿ ಹಂದಿಗನೂರು ಪ್ರೌಢಶಾಲಾ ಆವರಣದಲ್ಲಿ ಗಿಡನೆಟ್ಟು ಹಸಿರಾಗಿಸುವ ಕಾಯಕ ಆರಂಭಿಸಿದ ಅವರು, ಇದುವರೆಗೆ ಒಂದು ಲಕ್ಷ ಗಿಡ ನೆಟ್ಟಿದ್ದಾರೆ. ಬರಿಯ ನೆಡುವುದಷ್ಟೇ ಅಲ್ಲ, ಹಳ್ಳಿಹಳ್ಳಿ ತಿರುಗಿ ನೆಟ್ಟ ಗಿಡಗಳ ಪೋಷಿಸಿದ್ದಾರೆ. ಹಳ್ಳಿಗಳು ಎದುರಿಸುತ್ತಿದ್ದ ತೀವ್ರ ನೀರಿನ ಕೊರತೆ ಗಮನಿಸಿ ಗಿಡಮರಗಳ ನೆಟ್ಟು, ಇಳಿಜಾರು ಪ್ರದೇಶದಲ್ಲಿ ಹೊಂಡ ಕುಣಿಗಳ ತೆಗೆದು ನೀರಿಂಗುವ ವ್ಯವಸ್ಥೆ ಮಾಡಿದ್ದಾರೆ. ಕಟ್ಟಣಬಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಬಂಬರಗಾ ಊರುಗಳಲ್ಲಿ ಜನರ ಮನವೊಲಿಸಿ ನಿರ್ಮಿಸಿದ ಕೆರೆಗಳು ಇವತ್ತಿಗೂ ಜನರಿಗೆ, ಜಾನುವಾರುಗಳಿಗೆ ನೀರುಣಿಸುತ್ತ ಬರ ಪರಿಸ್ಥಿತಿ ಎದುರಿಸದಂತೆ ತಡೆದಿವೆ.

ಖಾದಿ ಅಂಗಿ, ಚಡ್ಡಿ ಧರಿಸಿ ಸೈಕಲ್ಲಿನಲ್ಲಿ ಹಳ್ಳಿಹಳ್ಳಿ ತಿರುಗುವ ಕಾಗಣಿಕರ್ ಮಾಮಾ, ಗ್ರಾಮೀಣ ಬೆಳಗಾವಿ ಭಾಗದಲ್ಲಿ ಯುವಸಮುದಾಯಕ್ಕೆ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ. ಗಾಂಧೀಜಿಯವರ ತತ್ವಗಳಿಗೆ ನಿಷ್ಠರಾಗಿರುವ ಅವರು, ಸರಳತೆ, ಮಿತವ್ಯಯದ ಜೀವನ ನಡೆಸುತ್ತಿದ್ದಾರೆ. ಐದು ದಶಕಗಳಿಂದ ಸಮಾಜಕ್ಕೆ ತೆತ್ತುಕೊಂಡ ಅವರು ಯುವಪೀಳಿಗೆಗೆ ಆದರ್ಶ ಮಾದರಿಯಾಗಿದ್ದಾರೆ. ಅಂಥವರನ್ನು ‘ನಿಂಗಪ್ಪ ಸಂಶಿ ರೈತಚೇತನ ಪ್ರಶಸ್ತಿ’ ಕೊಟ್ಟು ಗೌರವಿಸುವುದು ಮೇ ಸಾಹಿತ್ಯ ಮೇಳ ಬಳಗಕ್ಕೆ ಪ್ರೀತಿಯ ಮತ್ತು ಹೆಮ್ಮೆಯ ಸಂಗತಿಯಾಗಿದೆ.

Get real time updates directly on you device, subscribe now.

Comments are closed.

error: Content is protected !!