ಇಂದೂಧರ ಹೊನ್ನಾಪುರ ಅವರಿಗೆ ಚಂದ್ರಶೇಖರ ಹೊಸಮನಿ ‘ಅಂಬೇಡ್ಕರ್ ಪತ್ರಿಕಾ ಮಾರ್ಗಿ ‘ ಪ್ರಶಸ್ತಿ

Get real time updates directly on you device, subscribe now.

 

 

ಕರ್ನಾಟಕದ ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ (70) ಮೈಸೂರು ಜಿಲ್ಲೆ ಪಿರಿಯಾ ಪಟ್ಟಣ ತಾಲೂಕಿನ ಹೊನ್ನಾಪುರದ ಶಿಕ್ಷಕರಾದ ಹೆಚ್. ಜಿ. ಶ್ರೀಕಂಠಯ್ಯ ಮತ್ತು ತಿಮ್ಮಾಜಮ್ಮ ಅವರ ಮಗ. ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಕರ್ನಾಟಕದ ದಲಿತ ಚಳವಳಿಯ ಹುಟ್ಟಿಗೆ ಕಾರಣವಾದ, ತಮ್ಮ ಸಮಕಾಲೀನರನ್ನು ಬರವಣಿಗೆಗೆ ತೊಡಗಿಸಿದ ‘ಶೋಷಿತ’ ಹಾಗು ‘ಪಂಚಮ’ ಪತ್ರಿಕೆಗಳ ಸ್ಥಾಪಕ ಸಂಪಾದಕರಾದರು. ವಿದ್ಯಾರ್ಥಿಯಾಗಿರುವಾಗಲೇ ಮೈಸೂರಿನ ಆಂದೋಲನ ಪತ್ರಿಕೆಗಾಗಿ ಕೆಲಸ ಮಾಡಿದರು. ಪದವಿಯ ನಂತರ ಆರು ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಕೆಲಸ ಮಾಡಿ ಬಳಿಕ ‘ಮುಂಗಾರು’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದರು. ೧೯೮೫ರಲ್ಲಿ ‘ಸುದ್ದಿ ಸಂಗಾತಿ’ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ದೂರದರ್ಶನ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ೨೦೦೨ರಿಂದ ‘ಸ್ಫೂರ್ತಿಧಾಮ’ವು ಹೊರತರುತ್ತಿರುವ ‘ಸಂವಾದ’ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೨೦೧೫ರಲ್ಲಿ ‘ಅಗ್ನಿ’ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲಕಾಲ ಕೆಲಸ ನಿರ್ವಹಿಸಿದ್ದಾರೆ. ೧೯೯೫ರ ಹೊತ್ತಿಗೆ ದೃಶ್ಯ ಮಾಧ್ಯಮ ಪಡೆದುಕೊಳ್ಳುತ್ತಿರುವ ಸಾಧ್ಯತೆ, ಜನಪ್ರಿಯತೆಗಳನ್ನು ಗುರುತಿಸಿ ‘ವೀಡಿಯೋ ಸಮಾಚಾರ್’ ಎಂಬ ವೀಡಿಯೋ ಮ್ಯಾಗಜೀನ್ ಆರಂಭಿಸಿದ ಅವರು, ದೂರದರ್ಶನ ಮತ್ತು ಖಾಸಗಿ ವಾಹಿನಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಪತ್ರಕರ್ತ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಇಂದೂಧರ ಅವರ ತನಿಖಾ ವರದಿಗಳು ಪರಿಣಾಮಕಾರಿ ಬದಲಾವಣೆ ತರುವಲ್ಲಿ ಯಶಸ್ವಿಯಾದವು. ತಲೆಮೇಲೆ ಮಲ ಹೊರುವ ಪದ್ಧತಿ, ತಂಬಾಕು ಬೆಳೆಗಾರರ ಸಮಸ್ಯೆ, ಬೆಂಗಳೂರಿನ ಸ್ಲಂಗಳ ಕುರಿತ ವಿಸ್ತೃತ ವರದಿ, ಗುಜರಾತ್ ಮೀಸಲಾತಿ ವಿರೋಧಿ ಹೋರಾಟಗಳ ಸಮಯದಲ್ಲಿ ಅತ್ಯುತ್ತಮ ತನಿಖಾ ವರದಿಗಳನ್ನು ಬರೆದರು. ರೋಲೆಕ್ಸ್ ಹಾಗು ಕಾವೇರಿ ಎಂಪೋರಿಯಂ ಹಗರಣಗಳನ್ನು ಬಯಲಿಗೆಳೆದ ಅವರ ತನಿಖಾ ವರದಿಯು ಕ್ಯಾಬಿನೆಟ್ ಸಚಿವರ ರಾಜೀನಾಮೆಗೆ ಕಾರಣವಾಯಿತು.

ಬರಹದ ಜೊತೆಗೆ ಚಳವಳಿಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದು ಸೂಕ್ಷ್ಮ ಗ್ರಹಿಕೆಗೆ, ಹರಿತ ನ್ಯಾಯನಿಷ್ಠುರ ಬರಹದ ಶೈಲಿಗೆ ಇಂಬು ನೀಡಿತು. ಕರ್ನಾಟಕದ ಪ್ರಮುಖ ಚಳವಳಿಗಳಾದ ಸಮಾಜವಾದಿ, ದಲಿತ, ಬಂಡಾಯ ಸಾಹಿತ್ಯ, ರೈತ ಚಳವಳಿಗಳಲ್ಲಿ ನೇರವಾಗಿ ತೊಡಗಿಕೊಂಡರು. ದಲಿತ ಸಂಘರ್ಷ ಸಮಿತಿಯಾಗಿ ರೂಪುಗೊಂಡ ‘ದಲಿತ ಲೇಖಕರ ಕಲಾವಿದರ ಬಳಗ’ (ದಲೇಖ)ದ ಸ್ಥಾಪಕರಲ್ಲಿ ಇಂದೂಧರರೂ ಒಬ್ಬರು. ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕರಲ್ಲೊಬ್ಬರು ಹಾಗೂ ಅದರ ಪ್ರಥಮ ರಾಜ್ಯ ಸಂಚಾಲಕರಾಗಿದ್ದರು.

ಪತ್ರಕರ್ತ ವ್ಯಕ್ತಿತ್ವ ವಿಕಸನವಾಗುವಾಗಲೇ ಅವರೊಳಗಿನ ಬಂಡಾಯ ಕವಿಯೂ ಜಾಗೃತನಾಗಿದ್ದ. ವಿದ್ಯಾರ್ಥಿಯಾಗಿರುವಾಗಲೇ ರಾಜ್ಯಮಟ್ಟದ ಯುವಕವಿ ಪ್ರಶಸ್ತಿ ಪಡೆದ ಅವರ ಮೊದಲ ಕವನ ಸಂಕಲನ ‘ಬಂಡಾಯ’ ೧೯೭೮ರಲ್ಲಿ ಪ್ರಕಟವಾಯಿತು. ‘ಹೊಸದಿಕ್ಕು’ ಎಂಬ ಲೇಖನ ಸಂಗ್ರಹ; ಬೆಂಗಳೂರಿನ ಸ್ಲಂ ಕುರಿತ ವಿಶೇಷ ವರದಿ ‘ಬೇಡದ ಬದುಕಿನ ಕರಾಳ ಮುಖಗಳು’; ಬಿದಿರು ಕೋಲು, ಉಳಿದದ್ದು ಸಂವಿಧಾನ, ಸಾಲುಗಳ ನಡುವೆ, ಬರಹ-ಭಾಷಣ ಕೃತಿಗಳು ಪ್ರಕಟವಾಗಿವೆ.

ಇಂದು ಕನ್ನಡ ಪತ್ರಿಕಾರಂಗದಲ್ಲಿ ಪರ್ಯಾಯ ಆಲೋಚನೆಗಳನ್ನಿಟ್ಟುಕೊಂಡು ಬರೆಯುತ್ತಿರುವ, ಸಂಘಟನೆ-ಹೋರಾಟ-ಬೋಧನೆ-ವೃತ್ತಿಗಳ ಜೊತೆಜೊತೆಗೇ ಬರವಣಿಗೆಯನ್ನೂ ಮಾಡುತ್ತಿರುವ ಹೊಸತಲೆಮಾರಿನ ಹಲವರು ಇಂದೂಧರ ಹೊನ್ನಾಪುರ ಅವರ ಮೂಸೆಯಲ್ಲಿ ಒಂದಲ್ಲ ಒಂದು ಕಡೆಯಿಂದ ಹೊಕ್ಕು ಹೊರಬಂದವರು. ತಮಗಿಂತ ಕಿರಿಯ ತಲೆಮಾರನ್ನು ಜತನದಿಂದ ಗಮನಿಸಿ, ಬರವಣಿಗೆ ಮಾಡಲು ಪ್ರೋತ್ಸಾಹಿಸಿ, ಅಗತ್ಯ ಬಿದ್ದಲ್ಲಿ ಸೂಕ್ತ ಸಲಹೆ ಸೂಚನೆ ನೀಡುವ ಅವರು ‘ಹಿರಿಯ’ರೆಂಬ ಹೊರೆಯನ್ನು ತಲೆಗೇರಿಸಿಕೊಂಡವರೇ ಅಲ್ಲ. ತಾವು ಕಟ್ಟಲೆತ್ನಿಸಿದ ಕನಸಿನ ನಾಡು ಕೇಡಿನೆಡೆಗೆ ಸಾಗುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡು ಬಿಸಿಲು, ಧಗೆಗಳ ಲೆಕ್ಕಿಸದೆ ಕರ್ನಾಟಕದ ಉದ್ದಗಲಗಳ ಸುತ್ತಿ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕಟ್ಟಿದ್ದಾರೆ. ಕರ್ನಾಟಕ ಎಚ್ಚೆತ್ತು ಮತಾಧಿಕಾರ ಚಲಾಯಿಸುವಂತೆ ಪ್ರೇರೇಪಿಸಿದ್ದಾರೆ. ನಾಡಿನ ಸಂದಿಮೂಲೆಗಳಲ್ಲಿರುವ ಸೂಕ್ಷ್ಮ ಮನದ ಚಿಂತಕರನ್ನು ಬರೆಯಲು ಹಚ್ಚಿದ್ದಾರೆ. ಈಗ ಕೈಚೆಲ್ಲಿದರೆ ಇನ್ನೆಂದೂ ಈ ನೆಲ ಸುಧಾರಿಸದು ಎಂಬ ತುರ್ತಿನೊಂದಿಗೆ ಸಂಚರಿಸುತ್ತ ಸಮುದಾಯಗಳ ಜಾಗೃತಿಗೆ, ಒಳವಿಮರ್ಶೆಗೆ, ಬೆಸುಗೆಗೆ ದುಡಿಯುತ್ತಿದ್ದಾರೆ. ತಮ್ಮ ಹುಟ್ಟೂರಿನ ಬಳಿ ಅತ್ಯಂತ ಕುಗ್ರಾಮದಲ್ಲಿ ಮಕ್ಕಳಿಗೆ ಶಿಕ್ಷಣ ಸಂಸ್ಥೆ ತೆರೆದು ಒಂದರಿಂದ ಹತ್ತನೆಯ ತರಗತಿಯವರೆಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿ, ಯುವಜನರಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ; ಬಡ ಮಹಿಳೆಯರಿಗೆ ಉಚಿತ ‘ವಿವಿಧೋದ್ದೇಶ ಸ್ವಯಂ ಉದ್ಯೋಗ ತರಬೇತಿ ಕೇಂದ್ರ’ ಸ್ಥಾಪಿಸಿದ್ದಾರೆ.

ಕನ್ನಡದ ಹಿರಿಯ ಚಿಂತಕ, ಹೋರಾಟಗಾರ, ಪತ್ರಕರ್ತ ಚೇತನ ಇಂದೂಧರ ಹೊನ್ನಾಪುರ ಅವರಿಗೆ ‘ಮೇ ಸಾಹಿತ್ಯ ಮೇಳ ಬಳಗ’ವು ಮೊತ್ತಮೊದಲ ‘ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ’ ಪ್ರಶಸ್ತಿ ಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರಿಗೆಲ್ಲವೂ ಒಳಿತೇ ಆಗಲಿ; ಲೋಕಹಿತ ಬಯಸಿ ಕಂಡ ಕನಸುಗಳೆಲ್ಲ ಸಾಕಾರವಾಗಲಿ ಎಂದು ಬಳಗವು ಹಾರೈಸುತ್ತದೆ.

ಈ ಪ್ರಶಸ್ತಿಯೂ ಹತ್ತು ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಮೇ ಸಾಹಿತ್ಯ ಮೇಳ ಬಳಗದ ಬಿಜಾಪುರ ಸಾಹಿತಿ ಮತ್ತು ಹೋರಾಟಗಾರರಾದ ಅನಿಲ ಹೊಸಮನಿ ಪ್ರಾಯೋಜಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!