ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿ ಘೋಷಣೆ: ನಲಿನ್ ಅತುಲ್

Get real time updates directly on you device, subscribe now.

: ಭಾರತ ಚುನಾವಣಾ ಆಯೋಗವು ಮೇ 02 ರಂದು ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮೇ 9 ರಂದು ಗುರುವಾರ ಅಧಿಸೂಚನೆ ಹೊರಡಿಸಲಾಗುವುದು. ಮೇ 16 ರಂದು ಗುರುವಾರ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಮೇ 17ಕ್ಕೆ ಶುಕ್ರವಾರ ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಮೇ 20 ಸೋಮವಾರ ಕೊನೆಯ ದಿನವಾಗಿದ್ದು, ಜೂನ್ 3 ರಂದು ಸೋಮವಾರ ಮತದಾನದ ಹಾಗೂ ಜೂ.6ಕ್ಕೆ ಗುರುವಾರ ಮತಎಣಿಕೆ ನಡೆಯಲಿದೆ ಎಂದರು.
*13,405 ಪದವೀಧರ ಮತದಾರರು:* ಕೊಪ್ಪಳ ಜಿಲ್ಲೆಯಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ವಿವರ ಇಂತಿದೆ. ಕುಷ್ಟಗಿ ತಾಲ್ಲೂಕಿನಲ್ಲಿ 1523 ಪುರುಷ ಮತ್ತು 620 ಮಹಿಳೆಯರು ಸೇರಿ 2143 ಪದವೀಧರರ ಮತದಾರರಿದ್ದಾರೆ. ಕಾರಟಗಿ ತಾಲ್ಲೂಕಿನಲ್ಲಿ 767 ಪುರುಷ & 347 ಮಹಿಳೆಯರು ಸೇರಿ 1114 ಪದವೀಧರರು, ಕನಕಗಿರಿ ತಾಲ್ಲೂಕಿನಲ್ಲಿ 474 ಪುರುಷ & 182 ಮಹಿಳೆಯರು ಸೇರಿ 656 ಪದವೀಧರರು, ಗಂಗಾವತಿ ತಾಲ್ಲೂಕಿನಲ್ಲಿ 1908 ಪುರುಷ & 1229 ಮಹಿಳೆಯರು ಸೇರಿ 3137 ಪದವೀಧರರು, ಯಲಬುರ್ಗಾ ತಾಲ್ಲೂಕಿನಲ್ಲಿ 928 ಪುರುಷ & 380 ಮಹಿಳೆಯರು ಸೇರಿ 1308 ಪದವೀಧರರು, ಕುಕನೂರು ತಾಲ್ಲೂಕಿನಲ್ಲಿ 718 ಪುರುಷ & 358 ಮಹಿಳೆಯರು ಸೇರಿ 1076 ಪದವೀಧರರು, ಕೊಪ್ಪಳ ತಾಲ್ಲೂಕಿನಲ್ಲಿ 2608 ಪುರುಷ & 1363 ಮಹಿಳೆಯರು ಸೇರಿ 3971 ಪದವೀಧರರಿದ್ದು, ಕೊಪ್ಪಳ ಜಿಲ್ಲೆಯಲ್ಲಿ 8926 ಪುರುಷ ಹಾಗೂ 4479 ಮಹಿಳೆಯರು ಸೇರಿ ಒಟ್ಟು 13,405 ಪದವೀಧರರ ಮತದಾರರಿದ್ದಾರೆ ಎಂದು ಹೇಳಿದರು.
ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮೇ 6 ರಂದು ಕೊನೆಯ ದಿನಾಂಕವಾಗಿದ್ದು, ಅರ್ಹತಾ ದಿನಾಂಕ 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತ ಮುಂಚೆ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಪದವೀಧರರಾಗಿರುವಂತಹ ಅಥವಾ ಪ್ರಜಾ ಪ್ರಾತಿನಿಧ್ಯಕಾಯ್ದೆ 1950ರ ಪ್ರಕರಣ 27 ಉಪಪ್ರಕರಣ 3(ಎ)ರನ್ವಯ ಭಾರತ ಚುನಾವಣಾ ಆಯೋಗದ ಸಹಮತದೊಂದಿಗೆ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಪದವಿಗೆ ತತ್ಸಮಾನವೆಂದು ನಿರ್ದಿಷ್ಟಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರುವಂತಹ ಹಾಗೂ ದಿನಾಂಕ 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18 ರಲ್ಲಿ ಭಾವಚಿತ್ರದೊಂದಿಗೆ ಭರ್ತಿಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರಕಾರ್ಡ್/ ಚುನಾವಣಾ ಗುರುತಿನಚೀಟಿ/ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳಲ್ಲೊಂದು ಸ್ವಯಂಧೃಡೀಕರಿಸಿ ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಮೇ 6 ರ ಒಳಗಾಗಿ ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ( ತಹಶೀಲ್ದಾರ್ ಕಾರ್ಯಾಲಯದಲ್ಲಿ) ಸಲ್ಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕೊಪ್ಪಳ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!