ಬಿಜೆಪಿಗೆ ತಾಕತ್ತಿದ್ದರೇ ಎಸ್ ಸಿಪಿ-ಟಿಎಸ್ಪಿ ಕಾಯಿದೆ ಜಾರಿಗೊಳಿಸಲಿ – ಎಚ್.ಆಂಜನೇಯ
ಮಾದಿಗರಿಗೆ ಸಿದ್ದರಾಮಯ್ಯ ಗ್ಯಾರಂಟಿ
ಮಾದಿಗ ಮುಖಂಡರ ಸಭೆಯಲ್ಲಿ ಹೇಳಿಕೆ
— ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ
ಕೊಪ್ಪಳ:
ಬಿಜೆಪಿ ನಾಯಕರಿಗೆ ಮೋದಿ ಗ್ಯಾರಂಟಿಯಾದರೇ, ಮಾದಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗ್ಯಾರಂಟಿ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ತ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಮಾದಿಗ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಸಂಗಣ್ಣ ಕರಡಿ ಪಕ್ಷ ಸೇರ್ಪಡೆ ಜತೆಗೆ ಕ್ಷೇತ್ರದಲ್ಲಿನ ಕಾರ್ಯಕರ್ತರ ಹುಮ್ಮಸ್ಸು ನೋಡಿದರೇ ನಮ್ಮ ಅಭ್ಯರ್ಥಿ ಚುನಾವಣೆ ಪೂರ್ವವೇ ಗೆದ್ದಿದ್ದಾರೆ. ಬಡವರ ವಿರೋಧಿ, ರೈತರ, ಮಹಿಳೆಯರ ಹಾಗೂ ಎಸ್ಸಿ-ಎಸ್ಟಿ ಸಮಾಜದ ವಿರೋಧಿ ಹಾಗೂ ಸಂವಿಧಾನ ವಿರೋಧಿ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್ ಗೆಲ್ಲಿಸಿ, ಸಂವಿಧಾನ ರಕ್ಷಿಸುವ ಮಹತ್ತರ ಜವಾಬ್ದಾರಿ ಮಾದಿಗರ ಮೇಲಿದೆ ಎಂದರು.
ಇಡೀ ದೇಶದಲ್ಲಿ ಎಸ್ ಸಿಪಿ- ಟಿಎಸ್ಪಿ ಕಾಯಿದೆ ಜಾರಿಗೊಳಿಸಿದ್ದು ಕಾಂಗ್ರೆಸ್. ಇದಕ್ಕಾಗಿ 34 ಸಾವಿರ ಕೋಟಿ ಅನುದಾನ ಮೀಸಲು ಇಟ್ಟು ಅಭಿವೃದ್ಧಿ ಮಾಡಿದ್ದೇವೆ. ನಿಮಗೆ ತಾಕತ್ತಿದ್ದರೇ ದೇಶದಲ್ಲಿ ಎಸ್ ಸಿಪಿ- ಟಿಎಸ್ಪಿ ಕಾಯಿದೆ ಜಾರಿಗೆ ತನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅನುದಾನ ನೀಡಲಿಲ್ಲ, ಭೂಮಿ ಇಲ್ಲದವರಿಗೆ ಭೂಮಿ ನೀಡಲಿಲ್ಲ. ಮನೆ ಇಲ್ಲದವರಿಗೆ ಸಹಾಯಧನ ನೀಡದೇ ಅನ್ಯಾಯ ಮಾಡಿದರು. ಮಾದಿಗರ ಅಭಿವೃದ್ಧಿಯನ್ನು ಬಿಜೆಪಿ ಸಹಿಸದೇ ಅನೇಕ ಯೋಜನೆ ರದ್ದು ಮಾಡಿದರು ಎಂದರು.
ನೀವು ಎಲ್ಲೇಲ್ಲಿ ಕೆಲಸಕ್ಕೆ ಹೋಗತ್ತೀರೋ ಅಲ್ಲಿ ಕಾಂಗ್ರೆಸ್ ಗೆ ಮತ ಹಾಕಿದರೇ ಮಾತ್ರ ಕೂಲಿಗೆ ಬರ್ತೀವಿ ಅಂತ ಹೇಳಿ. ಇಲ್ಲ ಅಂದರೇ ಕೆಲಸ ಹೋಗಬೇಡಿ. ಕಾಲಿಗೆ ಬಿದ್ದಾದರೂ ಕಾಂಗ್ರೆಸ್ ಗೆ ಮತ ಹಾಕಿಸುವ ಕೆಲಸ ಮಾಡಿ. ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಆರು ಜನ ಕಾಂಗ್ರೆಸ್ ಶಾಸಕರಿದ್ದು, ರಾಜಶೇಖರ ಹಿಟ್ನಾಳ ಅವರ ಕ್ರಮ ಸಂಖ್ಯೆ-2ಕ್ಕೆ ಮತ ನೀಡಿ, ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ. ಸಿಎಂ ಸಿದ್ದರಾಮಯ್ಯನವರ ಕೈ ಬಲಪಡಿಸಿ ಎಂದರು.
ಕಾಂಗ್ರೆಸ್ ಎಲ್ಲ ಜಾತಿಗೂ ಟಿಕೆಟ್ ನೀಡಿತು. ಬಿಜೆಪಿ ಈ ಚುನಾವಣೆಯಲ್ಲಿ ಕುರುಬರಿಗೆ ಒಂದು ಟಿಕೆಟ್ ಕೂಡ ನೀಡದೇ ಬಲಿಷ್ಠ ಸಮುದಾಯವನ್ನು ತುಳಿಯುವ ಕೆಲಸ ಮಾಡಿದೆ. ಮುಂದೆ ಇತರೆ ಜಾತಿಗೂ ಟಿಕೆಟ್ ನೀಡದೇ ಅನ್ಯಾಯ ಮಾಡಬಹುದು. ಈ ನಿಟ್ಟಿನಲ್ಲಿ ಮತದಾರರು ಎಚ್ಚೇತ್ತುಕೊಂಡು ಮತ ಚಲಾಯಿಸಿ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮತ್ತು ವಾಸ್ತವ ಮಾತನಾಡುವ ಧೈರ್ಯ ಮಾಡಬೇಕು. ಕೇವಲ ಮೋದಿ ನಾಮಬಲದಿಂದ ಗೆಲ್ಲೋಕೆ ಆಗಲ್ಲ ಎಂಬ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಕೆಲವರು ಟೀಕೆ ಮಾಡಿದರು. ನೇರವಾಗಿ ಮಾತನಾಡಿದರೇ ಬಿಜೆಪಿ ನಾಯಕರು ಸಹಿಸಲ್ಲ. ರಾಜ್ಯದಲ್ಲಿ ಅನೇಕ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳ ಹೆಸರೇ ಗೊತ್ತಿಲ್ಲ, ನಾವು ಮೋದಿ ನಾಮಬಲದಿಂದ ಗೆಲ್ಲುತ್ತೇವೆ ಎಂಬ ವಿಜಯೇಂದ್ರ ಹೇಳಿಕೆ ನಿಜಕ್ಕೂ ನಾಚಿಕೆಗೇಡಿತನ. ಇವರು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದಾರೆ. ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿದೆ. ಸತ್ಯದ ಪರ ಇರುವ ಕಾಂಗ್ರೆಸ್ ಬೆಂಬಲಿಸಿ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಆರ್ ಎಸ್ ಎಸ್ ನವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದರೇ, ಬಿಜೆಪಿಗರು ನಾವು ಇರೋತನಕ ಸಂವಿಧಾನ ಬದಲಾವಣೆ ಮಾಡಲ್ಲ ಅಂತಾರೆ. ಇವರು ತಮ್ಮ ದ್ವಂದ್ವ ನಿಲುವಿನ ಮೂಲಕ ಜನರ ದಾರಿತಪ್ಪಿಸುತ್ತಿದ್ದಾರೆ. ಎಸ್ಸಿ-ಎಸ್ಟಿ ಜನಾಂಗಕ್ಕೆ ಕಾಯಿದೆ ತಂದವರು ಎಚ್. ಆಂಜನೇಯ ಅವರು, ದಲಿತರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿ ದಲಿತ ಸಮಾಜಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದರು. ಇಂತ ಒಳ್ಳೆ ರಾಜಕಾರಣಿಯನ್ನು ಅಲ್ಲಿನ ಜನ ಯಾಕೇ ಸೋಲಿಸಿದರು ಎಂಬುದು ಅರ್ಥವಾಗುತ್ತಿಲ್ಲ ಎಂದರು.
ದೇಶ ವಿಭಜನೆ ದುರಂತ ಕತೆ ಎಂಬ ಪುಸ್ತಕ ಹೊರತಂದವರು ಆರ್ ಎಸ್ ಎಸ್ ನವರು. ಯುವಕರಿಗೆ ಮೆದುಳಿಗೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಯುವಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರ ಎಚ್ಚೇತ್ತುಕೊಳ್ಳಬೇಕು ಎಂದ ಅವರು, ಇಂದಿನ ಪತ್ರಿಕೆಯಲ್ಲಿ ದಲಿತರ ಹಣ ದುರ್ಬಳಕೆ ಕುರಿತು ಬಿಜೆಪಿ ಜಾಹೀರಾತು ನೀಡಿದೆ, ಬಿಜೆಪಿ ನಾಯಕರಿಗೆ ಹಣಕಾಸಿನ ಬಗ್ಗೆ ಪರಿಜ್ಞಾನ ಇಲ್ಲ. ಎಸ್ ಸಿಪಿ ಮತ್ತು ಟಿಎಸ್ಪಿ ಯೋಜನೆ ಹಣ ದುರ್ಬಳಕೆ ಮಾಡಿಲ್ಲ. ಇವರು ಜನತೆಗೆ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಸಂಸತ್ತಿನಲ್ಲಿ ಸಂವಿಧಾನ ಪ್ರತಿ ಹರಿದು ಹಾಕಿ ಸಂವಿಧಾನಕ್ಕೆ ಅಪಮಾನ ಮಾಡಿದರು. ಈ ಚುನಾವಣೆಯಲ್ಲಿ ಮತ್ತೇ ನಾವು ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ನಾಯಕರೇ, ನಿಮಗೆ ತಾಕತ್ತಿದ್ದರೆ ಸಂವಿಧಾನ ಬದಲಾವಣೆ ಮಾಡಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತ, ಹಿಂದುಳಿದ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದು ಕಾಂಗ್ರೆಸ್.
ಬಿಜೆಪಿ ದಲಿತರಿಗೆ ಏನು ಮಾಡಿದೆ? ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತರ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದೀರಿ? ಗಂಗಾ ಕಲ್ಯಾಣ ಯೋಜನೆ ರದ್ದು ಮಾಡಿದವರು ಯಾರು?
ಶೋಷಿತರು, ತುಳಿತ್ತಕ್ಕೊಳಗಾದವರ ಸಮಾಜದ ಮುನ್ನಲೆಗೆ ತರುವ ಕೆಲಸ ನಾವು ಮಾಡಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿದರು.
ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಕೆ:
ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಕೆ:
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ನಡೆಯುತ್ತಿರುವ ಮಾದಿಗ ಸಮಾಜದ ಮುಖಂಡರ ಸಭೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಕೋರಿ,ಒಂದು ನಿಮಿಷದ ಮೌನಚಾರಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಮುಖಂಡರಾದ ಅಮರೇಶ ಕರಡಿ, ಕೆಪಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೇಪ್ಪ ಪೂಜಾರ್, ಮಾದಿಗ ಸಮುದಾಯದ ಮುಖಂಡ ಈರಪ್ಪ ಕುಡಗುಂಟಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಭಿ, ಬಸವರಾಜ ಭೋವಿ, ಸಿದ್ದೇಶ ಪೂಜಾರ್, ನಿಂಗಜ್ಜ ಶಹಾಪುರ, ವೀರುಪಣ್ಣ ನವೋದಯ, ಮಲ್ಲಿಕಾರ್ಜುನ ಪೂಜಾರ್ ಸೇರಿದಂತೆ ಇತರರಿದ್ದರು.
ಫೋಟೋ ಕ್ಯಾಪ್ಸನ್:01 ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಮಾದಿಗ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿದರು.
Comments are closed.