ಕೇಂದ್ರ ಸರ್ಕಾರ 10 ವರ್ಷಗಳ ಕಾಲ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದೆ: CM ಸಿದ್ಧರಾಮಯ್ಯ
ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ*
ಕೊಪ್ಪಳ : ಕೇಂದ್ರದಲ್ಲಿ ನರೇಂದ್ರ ಮೋದಿಯವರು 10 ವರ್ಷಗಳ ಕಾಲ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಷ್ಟೇ ಅಲ್ಲ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಅವರು ಇಂದು ಕುಷ್ಟಗಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜಶೇಖರ್ ಹಿಟ್ನಾಳ್ ರವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ರೈತರು, ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಮಾಡಿ ಅವರ ಬದುಕು ದುಸ್ತರಗೊಳಿಸಿದ್ದಾರೆ. ಬೆಲೆಯೇರಿಕೆ, ಹಣದುಬ್ಬರ, ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೀಡಾಯಿತು ಎಂದರು.
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತ ಮಾಡಿದ್ದು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು ಹುಸಿಗೊಳಿಸಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದಿರಿ.
ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹೆಚ್ .ಡಿ. ಕುಮಾರಸ್ವಾಮಿ ಹಾಗೂ 3 ವರ್ಷ 10 ತಿಂಗಳು ಆಡಳಿತ ಮಾಡಿದ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ಯಡಿಯೂರಪ್ಪ , ಬಸವರಾಜ ಬೊಮ್ಮಾಯಿ ಇಬ್ಬರೂ ಮುಖ್ಯಮಂತ್ರಿಗಳಾದರೂ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಬಡವರಿಗೆ, ಹಿಂದುಳಿದವರಿಗೆ , ಮಹಿಳೆಯರಿಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ ಲೂಟಿ ಹೊಡೆಯುತ್ತಿದ್ದರು. ಅದಕ್ಕಾಗಿಯೇ ರಾಜ್ಯ ಗುತ್ತಿಗೆದಾರ ಸಂಘದವರು 40% ಸರ್ಕಾರ ಎಂದು ಕರೆದರು. ತನಿಖೆ ಮಾಡಿಸಿ , ನಾವು ಸಾಕ್ಷಿ ಕೊಡುತ್ತೇವೆಂದು ಸಂಘದವರು ಹೇಳಿದರೂ ಬಸವರಾಜ ಬೊಮ್ಮಾಯಿ ಅವರು ಒಪ್ಪಲಿಲ್ಲ ಎಂದರು.
ತಪ್ಪಿತಸ್ಥರು ಎಂದು ಗೊತ್ತಾದರೆ ಖಂಡಿತವಾಗಿ ಕಠಿಣ ಕ್ರಮ
ನಾವು ಅಧಿಕಾರಕ್ಕೆ ಬಂದರೆ ಹಿಂದಿನ ಸರ್ಕಾರದ 40% ಕಮಿಷನ್ ಬಗ್ಗೆ ತನಿಖೆ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಅವರು ತಪ್ಪಿತಸ್ಥರು ಎಂದು ಗೊತ್ತಾದರೆ ಖಂಡಿತವಾಗಿ ಕಠಿಣ ಕ್ರಮ ತೆಗೆದುಕೊಂಡು ಕರ್ನಾಟಕ ರಾಜ್ಯದ ರಕ್ಷಣೆ ಮಾಡುತ್ತೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಮಾಡಿದ ದೊಡ್ಡ ಅಪರಾಧ ಎಂದರು.
ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿ ಗಳನ್ನು ಜಾರಿ ಮಾಡಿದೆವು.ಶಕ್ತಿ, ಗೃಹಲಕ್ಷ್ಮಿ , ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳಿಗೆ ಮೊದಲನೇ ವರ್ಷ 36 ಸಾವಿರ ಕೋಟಿಗಳನ್ನು ವೆಚ್ಚ ಮಾಡಿದ್ದೇವೆ ಎಂದರು.
ಗ್ಯಾರಂಟಿಗಳ ಘೋಷಣೆ
ದೇವರಾಜ ಅರಸು ಅವರ ನಂತರ ಐದು ವರ್ಷ ಮುಖ್ಯಮಂತ್ರಿಯಾಗಿ ಕಾರ್ಯವಹಿಸಿದ್ದು ಸಿದ್ದರಾಮಯ್ಯ. ನರೇಂದ್ರ ಮೋದಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೆ ಎ.ಐ.ಸಿ.ಸಿ ಕೂಡ ಗ್ಯಾರಂಟಿ ಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಮಹಿಳೆಗೆ 1 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದಾರೆ. ತಿಂಗಳಿಗೆ 8500 ರೂ.ಗಳು ದೊರೆಯಲಿದೆ. ಕುಟುಂಬ ನಡೆಸಲು ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಿಸಲು ಈ ಘೋಷಣೆ ಮಾಡಲಾಗಿದೆ. ನಿರುದ್ಯೋಗಿ ಯುವಕರಿಗೆ 1 ಲಕ್ಷ ರೂ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದರು.
ನರೇಂದ್ರ ಮೋದಿಯವರ ಪ್ರಯತ್ನವನ್ನು ವಿಫಲಗೊಳಿಸುವ ಶಕ್ತಿ ಜನತೆಗೆ ಇದೆ
ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಚುನಾವಣೆ ಬಂದಾಗ ಮಾತ್ರ ಕರ್ನಾಟಕ ಅವರಿಗೆ ನೆನಪಾಗುತ್ತದೆ. ಪ್ರವಾಹ, ಬರ ಬಂದಾಗ ಬರಲಿಲ್ಲ. ಚುನಾವಣೆಯಲ್ಲಿ ಸುಳ್ಳು ಹೇಳಿ ಮತ ಪಡೆದು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನವನ್ನು ವಿಫಲಗೊಳಿಸುವ ಶಕ್ತಿ ಜನತೆಗೆ ಇದೆ ಎಂದರು. ಬಂಡವಾಳಶಾಹಿ, ಕೈಗಾಕೋದ್ಯಮಿಗಳ 16 ಲಕ್ಷ ಕೋಟಿ ಮನ್ನಾ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಮಹಿಳೆಯರಿಂದ ಪ್ರಶಂಸೆ:
ಶಕ್ತಿ ಯೋಜನೆಯಡಿ ಇದುವರೆಗೆ 200 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಓಡಾಡಿದ್ದಾರೆ. ಶಕ್ತಿಯೋಜನೆಯ ಲಾಭವನ್ನು ಸ್ಮರಿಸಿ ಮಹಿಳೆಯರು ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಅನ್ನಭಾಗ್ಯ,10 ಕೆಜಿ ಅಕ್ಕಿ ಕೊಡುವ ಯೋಜನೆ. ಆದರೆ ಮೋದಿಯವರು ಐದು ಕೆಜಿ ಅಕ್ಕಿ ನೀಡಲು ಒಪ್ಪಲಿಲ್ಲ. ಆದ್ದರಿಂದ ಐದು ಕೆಜಿ ಅಕ್ಕಿಯ ಬದಲು 170 ರೂ.ಗಳನ್ನು 1.50 ಕೋಟಿ ಕುಟುಂಗಳಿಗೆ ನೀಡಲಾಗುತ್ತಿದೆ. ಅಕ್ಕಿ ನೀಡಲು ನಿರಾಕರಿಸಿ, ರಾಜ್ಯದ ಜನರಿಗೆ ಬಿಜೆಪಿಯವರು ಮಾಡಿರುವ ದ್ರೋಹ. ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಯಿತು. ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಮಹಿಳೆಯರಿಗೆ ತಿಂಗಳಿಗೆ 2000 ರೂ. ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಕಳೆದ ವರ್ಷ ಗ್ಯಾರಂಟಿಗಳಿಗಾಗಿ 36 ಸಾವಿರ ವ್ಯಯಿಸಲಾಗಿದ್ದು, ಈ ವರ್ಷ 52009 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗಬಹುದಾದ ನಾಯಕರಿದ್ದಾರೆ
ಸರ್ಕಾರ ಗ್ಯಾರಂಟಿಗಳನ್ನು ಜಾರಿಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಹೇಳಿದರು. ನಮ್ಮ ಗ್ಯಾರಂಟಿಗಳನ್ನು ನಮ್ಮ ಅವಧಿಯಲ್ಲಿ ತಪ್ಪದೇ ಜಾರಿಗೊಳಿಸಿ ನುಡಿದಂತೆ ನಡೆಯುತ್ತಿದ್ದೇವೆ. ಬಿಜೆಪಿ ಸರ್ಕಾರದ ಮೋದಿಯವರು ತಾನು ನೀಡಿದ ಭರವಸೆಗಳನ್ನು ಯಾವುದನ್ನೂ ಈಡೇರಿಸಲಿಲ್ಲ. ಆದರೆ ಕಳೆದ ಹಲವಾರು ದಶಕಗಳಿಂದ ದೇಶದಲ್ಲಿ ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿಯಾಗುವವರು ಯಾರಿಲ್ಲವೆಂದು ಮೋದಿಯವರು ಹೇಳಿರುವುದು ಅಪ್ಪಟ ಸುಳ್ಳು. ರಾಹುಲ್ ಗಾಂಧಿ, ಖರ್ಗೆಯವರು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದರು.2008 ರಿಂದ 2013ರವರೆಗೆ ಬಿಜೆಪಿಯಿದ್ದಾಗಿನ ಅವಧಿಯಲ್ಲಿ ಎಷ್ಟು ಮುಖ್ಯಮಂತ್ರಿಗಳಾದರು ಎಂದು ಪ್ರಶ್ನಿಸಿದರು.
ಬಿಜೆಪಿ ಮೀಸಲಾತಿ ವಿರೋಧಿ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಕಾನೂನು ರಚನೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯದ ಪರ. ಮೀಸಲಾತಿ ನೀಡಿ ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಬಿಜೆಪಿಯವರು ಮೀಸಲಾತಿ ವಿರೋಧಿ. ಬಿಜೆಪಿಯವರ ಮನೆದೇವರು ಸುಳ್ಳು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸತ್ಯವನ್ನು ತಿಳಿಸುತ್ತಿದ್ದರೆ, ಬಿಜೆಪಿಯವರು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಕುಷ್ಟಗಿಯ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಭೈರತಿ ಸುರೇಶ್, ಬಸವರಾಜ ರಾಯರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಬಸನಗೌಡ, ಶರಣಗೌಡ ಪಾಟೀಲ್, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕರು ಉಪಸ್ಥಿತರಿದ್ದರು.
Comments are closed.