ಬಿಜೆಪಿಯಿಂದ ಯುವಕರಿಗೆ ಅನ್ಯಾಯ- ಕೆ. ರಾಘವೇಂದ್ರ ಹಿಟ್ನಾಳ
— ವಿವಿಧ ಗ್ರಾಮದ ಮುಖಂಡರು ಕಾಂಗ್ರೆಸ್ ಸೇರ್ಪಡೆ
— ಕಾಂಗ್ರೆಸ್ ಗೆ ಶಕ್ತಿ ತುಂಬಿದ ಕಾರ್ಯಕರ್ತರು
ಕೊಪ್ಪಳ:
ದೇಶದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಣ್ಣ ಬಣ್ಣದ ಮಾತು ಹಾಡಿ ನಂತರದಲ್ಲಿ ಯುವಕರಿಗೆ ಉದ್ಯೋಗ ನೀಡದೇ ಅನ್ಯಾಯ ಎಸಗಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ಮಾಜಿ ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ಗುರುವಾರ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ದೇಶದ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದವರು ಈವರೆಗೂ ಎಷ್ಟು ಉದ್ಯೋಗ ನೀಡಿದ್ದಾರೆ ಎಂಬ ಲೆಕ್ಕ ಕೊಡಬೇಕು. ಚುನಾವಣೆ ಬಂದಾಗ ಯುವಕರ ದಾರಿತಪ್ಪಿಸುವ ಕೆಲಸ ಮಾಡಬೇಡಿ. ಬಿಜೆಪಿಗರು ದೇಶದಲ್ಲಿ ಕೆಲಸ ಸಿಗದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಹಿಂದಿಯವರನ್ನು ತಂದಿದ್ದಾರೆ. ಸ್ಥಳೀಯ ಯುವಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲು ಯಾರೂ ಇಲ್ಲ. ಹೀಗಾಗಿ ಜನರು ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ಕೊಟ್ಟು ಹೋಗುವವರಲ್ಲ ಅದನ್ನು ಜಾರಿ ಮಾಡುವವರು ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದೇ ತಾರತಮ್ಯ ಎಸಗಿದರು.ಹೀಗಾಗಿ ಅನೇಕ ರಸ್ತೆ ಯೋಜನೆಗಳು ಸ್ಥಗಿತಗೊಂಡವು. ಸಂಗಣ್ಣ ಕರಡಿ ಅಧಿಕಾರಾವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೆಲ ಯೋಜನೆಗಳಿಗೆ ಬಿಜೆಪಿಯವರೇ ಅಡ್ಡಗಾಲು ಹಾಕಿದ್ದರಿಂದ ಭಾರತ್ ಮಾಲಾ ಯೋಜನೆ ಕೂಡ ನಿಂತಿತು. ಇದು ಅಭಿವೃದ್ಧಿಗೆ ಹಿನ್ನಡೆಯಾಯಿತು. ಸಧ್ಯ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದೂ ಲೋಕಸಭಾ ಕ್ಷೇತ್ರದಲ್ಲಿನ ನೆನಗುದಿಗೆ ಬಿದ್ದಿರುವ ಎಲ್ಲ ಯೋಜನೆಗೆ ಚಾಲನೆ ನೀಡುವುದರ ಜತೆಗೆ ಹೊಸ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇವೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಳೆದ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಲೋಕಸಭಾ ವ್ಯಾಪ್ತಿಯ ಎಲ್ಲ ಕ್ಷೇತ್ರಕ್ಕೂ ಸಮಾನ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿ ಮಾಡಿದ್ದೇನೆ. ಅಂದಿನ ಬಿಜೆಪಿ ನಾಯಕರಿಂದಲೇ ಕೆಲ ಯೋಜನೆಗಳು ಸ್ಥಗಿತಗೊಂಡವು. ಸ್ವಾರ್ಥ ರಾಜಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಗೌಣವಾಯಿತು. ವಿಮಾನ ನಿಲ್ದಾಣ, ಭಾರತ್ ಮಾಲಾ ಯೋಜನೆ, ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸಿನ ಯೋಜನೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಿದರೇ ಎಲ್ಲ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.
ಕೇವಲ ದ್ವೇಷ ಭಾಷಣದ ಮೂಲಕ ಜನರ ದಾರಿತಪ್ಪಿಸುವ ಬಿಜೆಪಿ ನಂಬದೇ ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಭಿವೃದ್ಧಿಗೆ ಸಹಕರಿಸಿ. ನಿಮ್ಮ ಒಂದು ಮತ ಪ್ರಜಾಪ್ರಭುತ್ವ ರಕ್ಷಣೆ, ಸಂವಿಧಾನ ಉಳಿವಿಗೆ ಸಹಕಾರಿಯಾಗಲಿದೆ. ಸುಳ್ಳಿನ ಆಶ್ವಾಸನೆಗಳಿಗೆ ಮರುಳಾಗದೇ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿ ಎಂದರು.
ಕಮಲ ತೊರೆದ ನೂರಾರು ಕಾರ್ಯಕರ್ತರು:
ನಗರದ ಮಾಜಿ ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ಕೇಂದ್ರ ಸರ್ಕಾರದ ದುರಾಡಳಿತ ಧಿಕ್ಕರಿಸಿ ತಾಲೂಕಿನ ಕಾಮನೂರು, ಜಬ್ಬಲಗುಡ್ಡ , ಗೊಂಡಬಾಳದ ಗ್ರಾಮದ ಅನೇಕ ಮುಖಂಡರು ಬಿಜೆಪಿ ತೊರೆದು ಶಾಸಕ ಮತ್ತು ಮಾಜಿ ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
Comments are closed.