ಪಾರದರ್ಶಕ ಆಡಳಿತಕ್ಕಾಗಿ ಬಿಜೆಪಿಗೆ ಮತ ನೀಡಿ- ಹೇಮಲತಾ ನಾಯಕ
ಕೊಪ್ಪಳ: ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಹದಗೆಟ್ಟಿದೆ. ಶಾಂತಿ, ಸಹಭಾಳ್ವೆ, ಭಾತೃತ್ವ ಭಾವನೆ, ಸುರಕ್ಷಿತ ಅಭಿವೃದ್ಧಿ, ಪಾರದರ್ಶಕ ಆಡಳಿತಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ಹೇಳಿದರು.
ಕಿನ್ನಾಳ ಗ್ರಾಮದ ಬಾಲಕಿ ಅನುಶ್ರೀ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಏಳು ವರ್ಷದ ಬಾಲಕಿ ಅನುಶ್ರೀ ಹತ್ಯೆ ದುಃಖ ತಂದಿದೆ. ಈ ಹೇಯ ಕೃತ್ಯ ಮಾಡಿದ ಪಾಪಿಗಳಿಗೆ ಶಿಕ್ಷೆಯಾಗಬೇಕು. ಅನುಶ್ರೀಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೋಮುಗಲಭೆ, ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ಮಾಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಸಾವು- ನೋವುಗಳ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ರಾಜ್ಯಾದ್ಯಂತ ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ , ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಕಾನೂನು ಸುವ್ಯವಸ್ಥೆ ಮಾದರಿಯಾಗಿತ್ತು. ಸಾವು- ನೋವುಗಳ ಸಂಖ್ಯೆ ಕಡಿಮೆ ಇದ್ದವು. ಸಮಾಜದಲ್ಲಿ ಶಾಂತಿ ನೆಲೆಸಿತ್ತು. ಆದರೀಗ ಇದರ ತದ್ವಿರುದ್ಧವಾಗಿದೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಮಾತನಾಡಿ, ಆರೋಗ್ಯಕರ ಸಮಾಜಕ್ಕಾಗಿ ಶಾಂತಿ ನೆಲಸಬೇಕು. ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ದೇಶಾದ್ಯಂತ ನಕ್ಸಲರನ್ನು ಮಟ್ಟ ಹಾಕಲಾಗಿದೆ. ರೌಡಿಗಳ ಉಪಟಳ ತಡೆದು ಗಡಿಪಾರು ಮಾಡಲಾಗಿದೆ. ಶಾಂತಿ ಸುವ್ಯವಸ್ಥೆಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕೆ.ಜಿ.ಕುಲಕರ್ಣಿ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
*ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸಿ*
ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ, ಭಾಗ್ಯನಗರದ ಪರಶುರಾಮ್ ಸೇರಿ ಮೂವರ ಹತ್ಯೆ, ಬಾಲಕಿ ಅನುಶ್ರೀ ಹತ್ಯೆ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಎಡವಿದೆ. ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಈ ಹತ್ಯೆಗಳಿಗೆ ನ್ಯಾಯ ಒದಗಿಸಬೇಕು. ಆದ್ದರಿಂದ ನಿಷ್ಪಕ್ಷಪಾತ ತನಿಖೆಯಾಗಬೇಕು. ಆದ್ದರಿಂದ ಈ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಒತ್ತಾಯಿಸಿದರು.
Comments are closed.