ಮಳೆಯಾದಲ್ಲಿ ಬಿತ್ತನೆಗೆ ಬೀಜಗಳ ಕೊರತೆ ಆಗದಿರಲಿ: ಸಚಿವ ಶಿವರಾಜ ತಂಗಡಗಿ

ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ

Get real time updates directly on you device, subscribe now.

  • ಕೊಪ್ಪಳ ): ಮುಂಗಾರು ಹಂಗಾಮಿನ ಮಳೆ ಕೊರತೆ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಮೆಕ್ಕೆಜೋಳ, ಸಜ್ಜೆ, ನವಣೆ ಸೇರಿದಂತೆ ಇನ್ನೀತರ ಬೆಳೆಗಳ ಪೂರ್ಣಪ್ರಮಾಣದ ಬಿತ್ತನೆಗೆ ಅನುಕೂಲವಾಗುವಂತೆ ವಿವಿಧ ಬಿತ್ತನೆ ಬೀಜಗಳ ಲಭ್ಯತೆಗೆ ಗಮನ ಹರಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಪಂ ಕಚೇರಿಯ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಜುಲೈ 1ರಂದು ನಡೆದ ಕೊಪ್ಪಳ ಜಿಲ್ಲಾ ಮೊದಲನೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
    ರಾಜ್ಯದೆಲ್ಲೆಡೆ ಕಂಡು ಬಂದಂತೆ
    ಮಳೆ ಕೊರತೆಯು ಕೊಪ್ಪಳ ಜಿಲ್ಲೆಯಲ್ಲಿ ಸಹ ಮುಂದುವರಿದಿದೆ. ಹೀಗಾಗಿ
    ಬರ ಪರಿಸ್ಥಿತಿ ಎದುರಾದರೆ ಜಾನುವಾರುಗಳಿಗು ಸಹ ತೊಂದರೆಯಾಗಬಾರದು. ಸಮರ್ಪಕ ಮೇವು ಲಭ್ಯತೆಗೆ ಗಮನ ಹರಿಸಬೇಕು. ಬರ ಘೋಷಣೆಯಾದಲ್ಲಿ ಜಿಲ್ಲೆಯ
    ಯಾವ ಯಾವ ಕಡೆಗಳಲ್ಲಿ ಗೋಶಾಲೆ ತೆರೆಯುವ ಪರಿಸ್ಥಿತಿ ಬರಬಹುದು ಎಂಬುದರ ಬಗ್ಗೆ ಪೂರ್ವಯೋಜನೆಯೊಂದನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಸಚಿವರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
    *ಸಿದ್ಧತೆಗೆ ಸೂಚನೆ*: ಅನ್ನಭಾಗ್ಯ ಯೋಜನೆ ಅನುಷ್ಠಾನವು ಜಿಲ್ಲೆಯಲ್ಲಿ ಸಮರ್ಪಕ ಜಾರಿಯಾಗಬೇಕು. ಇದಕ್ಕೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜನರಿಗೆ ಈ ಯೋಜನೆಯ ಲಾಭವು ಪರಿಪೂರ್ಣವಾಗಿ ಮುಟ್ಟಬೇಕು. ಪ್ರತಿ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ ಜೊತೆಗೆ ಅವರು ತಮಗೆ ಬೇಕಾದ ದವಸ ಧಾನ್ಯಗಳನ್ನು ಖರೀದಿಸಲು ಹಣ ತಲುಪಿಸುವ ಕಾರ್ಯವನ್ನು ಸಹ ವ್ಯವಸ್ಥಿತವಾಗಿ ಮಾಡಬೇಕು ಎಂದು ಸಚಿವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    *ಗೊಬ್ಬರ ದಾಸ್ತಾನಿಗೆ ಸೂಚನೆ:* ನೀರಾವರಿ ಬೆಳೆಗಳ ಬಿತ್ತನೆ ವೇಳೆ ಯೂರಿಯಾ ರಸಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಬರುವ ಕಾರಣ, ಸಕಾಲಕ್ಕೆ ಗೊಬ್ಬರ ಸಿಗದೇ ರೈತರು ಬ್ಲಾಕ್ ಮಾರ್ಕೇಟ್ ಮೇಲೆ ಅವಲಂಬಿತರಾಗದಂತೆ ಗೊಬ್ಬರ ದಾಸ್ತಾನಿಗೆ ಮುಂಜಾಗ್ರತೆ ವಹಿಸಬೇಕು ಎಂದು ಸಚಿವರು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    ಜಿಲ್ಲೆಯ ಕೆಲವೆಡೆ ಕಳಪೆ ಬೀಜಗಳು ಪೂರೈಕೆಯಾದ ಬಗ್ಗೆ ಕೇಳಿ ಬಂದ ದೂರುಗಳ ಮೇಲೆ ಯಾವ ಕ್ರಮ ವಹಿಸಲಾಗಿದೆ ಎಂದು ಸಂಸದರಾದ ಕರಡಿ ಸಂಗಣ್ಣ ಅವರು
    ವಿಷಯ ಪ್ರಸ್ತಾಪಿಸಿದರು.‌
    ಕಳಪೆ ಬೀಜ ಮಾರಾಟದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ, ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇರಲಿ ಕಳಪೆ ಬೀಜ ಪೂರೈಸುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
    *ಇ-ಕೆವೈಸಿ ಅನುಷ್ಠಾನಕ್ಕೆ ಸೂಚನೆ:* ಜಿಲ್ಲೆಯಲ್ಲಿ ಇನ್ನು 45 ಸಾವಿರ ರೈತರು ಇ-ಕೆವೈಸಿಯಿಂದ ಹೊರಗಿದ್ದಾರೆ. ನೋಂದಣಿ ಪ್ರಗತಿಯು ಇದುವರೆಗೆ ಶೇ.72ರಷ್ಟು ಮಾತ್ರ ಆಗಿದೆ. ಶೇ.100ರಷ್ಟು ಪ್ರಗತಿ ತೋರುವ ಹಾಗೆ ರೈತರಿಗೆ ಇ-ಕೆವೈಸಿಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಸಂಸದರು, ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
    *ಸಮರ್ಪಕ ಪ್ರಚಾರ ಕೊಡಿ*: ಇ-ಕೆವೈಸಿಯು ರೈತರಿಗೆ ನೇರವಾಗಿ ಲಾಭವಾಗುವ ಯೋಜನೆಯಾಗಿದೆ. ಶಿಸ್ತುಬದ್ಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ರೈತರ ಮನೆಗಳಿಗೆ ಮಾಹಿತಿ ರವಾನೆಯಾಗಬೇಕು. ನರೇಗಾ ಯೋಜನೆಯಡಿ ಸಹ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಜಿಲ್ಲೆಯ ರೈತರಿಗೆ ಅವಕಾಶ ಕಲ್ಪಿಸಲು ಒತ್ತು ಕೊಡಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಘವೇಂದ್ರ ಕೆ. ಹಿಟ್ನಾಳ ಅವರು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
    *ವೈದ್ಯರ ಕೊರತೆ ಆಗಬಾರದು:* ಕುಷ್ಟಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿ ಪಶು ಆಸ್ಪತ್ರೆಗಳಲ್ಲಿ ಪಶು ತಜ್ಞ ವೈದ್ಯರ ಕೊರತೆ ಇದ್ದು ಬೇಗನೇ ಭರ್ತಿ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆಯಾದರು ಹುದ್ದೆಗಳನ್ನು ತಾತ್ಕಾಲಿಕ ಭರ್ತಿಗೆ ಕ್ರಮ ವಹಿಸಬೇಕು ಎಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಹೇಳಿದರು.
    *ಪೌಷ್ಠಿಕ ಆಹಾರ ಪೂರೈಕೆಯಾಗಲಿ:* ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನಿಯಮಾನುಸಾರ ಪೌಷ್ಠಿಕ ಆಹಾರ ಪೂರೈಕೆಗೆ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
    *ಹೆಚ್ಚುವರಿ ರಸಗೊಬ್ಬರ ಪೂರೈಕೆ ಕೋರಿ ಪತ್ರ:*
    ಬಿತ್ತನೆಯಾದ ಮೇಲೆ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ 10,000 ಮೆ ಟನ್ ಹೆಚ್ಚುವರಿ ರಸಗೊಬ್ಬರಕ್ಕೆ ಬೇಡಿಕೆ ಕೋರಿ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದರು.
    *ರೈತರಿಗೆ ತಿಳಿವಳಿಕೆ ಕಾರ್ಯಕ್ರಮ:* ಬೋರವೆಲ್ ಹೊಂದಿದ ರೈತರು ನರೇಗಾ ಯೋಜನೆಯ ಸಹಾಯಧನ ಪಡೆದು ತೋಟಗಾರಿಕಾ ಬೆಳೆ ತೆಗೆಯಲು ತೋಟಗಾರಿಕಾ ಇಲಾಖೆಯಿಂದ ಜಿಲ್ಲೆಯ ರೈತರಿಗೆ ತಿಳಿವಳಿಕೆ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಲಾಗುವುದು ಎಂದು ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ತಿಳಿಸಿದರು.
    ಜಿಲ್ಲೆಯಲ್ಲಿ ಈ ವರ್ಷ ಶೇ.
    33 ರಷ್ಟು ಮಳೆ ಕೊರತೆ ಆಗಿರುವುದರಿಂದ ಒಟ್ಟು 3 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಇಲ್ಲಿವರೆಗೆ 91 ಹೆಕ್ಟೆರನಲ್ಲಿ ಮಾತ್ರ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದೆ. ಹಿಂದಿನ ವರ್ಷ ಈ ವೇಳೆಗೆ ಶೇ. 57ರಷ್ಟು ಬಿತ್ತನೆಯಾಗಿತ್ತು.‌ ಮೆಕ್ಕೆಜೋಳ, ಸಜ್ಜೆ, ನವಣೆ, ಸೂರ್ಯಕಾಂತಿ, ಹೆಸರು, ಭತ್ತ ಸೇರಿ ಜಿಲ್ಲೆಯಲ್ಲಿ
    6979 ಕ್ವಿಂಟಲ್ ನಷ್ಟು ಬಿತ್ತನೆ ಬೀಜಗಳ ದಾಸ್ತಾನು ಇದ್ದು, ಇದುವರೆಗೆ ಅಂದಾಜು 4000 ಕ್ವಿಂಟಲ್ ನಷ್ಟು ಬೀಜಗಳ ವಿತರಣೆಯಾಗಿದೆ. 64,000 ಮೆ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
    ಜಿಲ್ಲೆಯಲ್ಲಿ ಎಲ್ಲಾ ಬಗೆಯ
    ಲಸಿಕಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ,
    ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಸಹಾಯಕ ಆಯುಕ್ತರಾದ ಬಸವಣ್ಣಪ್ಪ ಕಲಶೆಟ್ಟಿ, ಜಿಪಂ ಮುಖ್ಯ ಯೋಜನಾಧಿಕಾರಿ ಮಂಜುನಾಥ ಡಿ., ಡಿಯುಡಿಸಿ ಪ್ರೊಜೆಕ್ಟ್ ಡೈರೆಕ್ಟರ್ ಕಾವ್ಯರಾಣಿ ಕೆ.ವಿ., ಜಿಪಂ ಸಿಎಓ ಅಮಿನ್ ಅತ್ತಾರ, ತಹಸೀಲ್ದಾರರು, ತಾಪಂ ಇಓಗಳು, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಸ್ವಾಗತಿಸಿದರು.

Get real time updates directly on you device, subscribe now.

Comments are closed.

error: Content is protected !!