ಶಾಲೆಗಳಲ್ಲಿ ಅಮೃತ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ
—
ಕೊಪ್ಪಳ : ಶಾಲಾ ಮಕ್ಕಳ ಆರೋಗ್ಯ ದಾಖಲೆಗಾಗಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಿದ ಅಮೃತ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ವಿವಿಧ ಕ್ಷೇತ್ರಗಳ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಜುಲೈ 1ರಂದು ವಿದ್ಯುಕ್ತ ಚಾಲನೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ದೊಡ್ಡನಗೌಡ ಪಾಟೀಲ, ರಾಘವೇಂದ್ರ ಕೆ.ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಜಿಲ್ಲಾ ಪಂಚಾಯತ್ ಕಚೇರಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ವಿನೂತನವಾಗಿ ಸಿದ್ಧಪಡಿಸಿದ ಅಮೃತ ಆರೋಗ್ಯ ಚೈತನ್ಯ ರಿಜಿಸ್ಟರನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋದಾ ವಂಟಗೋಡಿ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಹಾಗೂ ಇತರರು ಇದ್ದರು.
ಏನಿದು ರಜಿಸ್ಟರ್?: ಶಿಕ್ಷಣದಷ್ಟೇ ಆರೋಗ್ಯವು ಮುಖ್ಯ. ಆರೋಗ್ಯವಂತ ಮಕ್ಕಳು ದೇಶದ ನಿಜವಾದ ಸಂಪತ್ತು. ಆರೋಗ್ಯವಂತ ಮಕ್ಕಳು ಆರೋಗ್ಯಯುತ ಸಮಾಜದ ನಿರ್ಮಾತೃಗಳು. ತಮ್ಮ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಎಲ್ಲಾ ಕುಟುಂಬಗಳಲ್ಲಿ ಆರೋಗ್ಯ ದಾಖಲೆಗಳ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಶಾಲಾ ಮಕ್ಕಳ ಎಲ್ಲಾ ದಾಖಲಾತಿಗಳನ್ನು ನಿರ್ವಹಿಸುವಂತೆ ಒಂದು ಆರೋಗ್ಯ ದಾಖಲಾತಿ ಕೂಡ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಲ್ಲಿ ಹುಟ್ಟಿನಿಂದ ಬರುವ ನೂನ್ಯತೆಗಳು ಮತ್ತು ವಿವಿಧ ಅಂಗಗಳಿಗೆ ಆಗಿರುವ ತೊಂದರೆಗಳು ಅಂದರೆ ಕಿವಿ ಕಣ್ಣು ಮೂಗು ಚರ್ಮ ಗಂಟಲು ಇರುಳು ಕುರುಡು ಹದಿಹರೆಯದ ಸಮಸ್ಯೆಗಳು ಸೇರಿದಂತೆ ಚಿಕ್ಕಪುಟ್ಟ ತೊಂದರೆಗಳಿಂದ ಓದಿನ ಮೇಲೆ ದುಷ್ಪರಿಣಾಮವಾಗಲಿದೆ. ಇದರಿಂದಾಗಿ ಕಲಿಕೆಯಲ್ಲಿ ನೂನ್ಯತೆಗಳು ಉಂಟಾಗುತ್ತವೆ. ಇಂತಹ ಕಲಿಕಾ ನೂನ್ಯತೆಗಳು ಪುನಃ ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಹೀಗಾಗಿ ಶಾಲೆಗೆ ಬರುವ ಎಲ್ಲಾ ಮಕ್ಕಳ ಆರೋಗ್ಯವನ್ನು ರಾಷ್ಟೀಯ ಬಾಲ ಸ್ವಾಸ್ತö್ಯಯನ್ವಯ ವೈದ್ಯಾಧಿಕಾರಿಗಳು ಪ್ರತಿ ವರ್ಷ ಶಾಲಾ ಹಂತದಲ್ಲಿ ಹಾಗೂ ತರಬೇತಿ ಹಂತದಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಆರೋಗ್ಯದ ನೂನ್ಯತೆಯನ್ನು ಗುರುತಿಸಿ ಅದರ ವಿವರವನ್ನು ದಾಖಲಿಸಿ ಅದನ್ನು ಅನುಪಾಲನೆ ಮಾಡಲು ಒಂದು ವ್ಯವಸ್ಥಿತವಾದ ರಜಿಸ್ಟರ್ ಅಗತ್ಯವಿದೆ ಎಂದು ಶಾಲೆಗಳ ಮುಖ್ಯಾಧ್ಯಾಪಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
ಶಾಲೆಯಲ್ಲಿ ಈ ರೀತಿಯ ರಜಿಸ್ಟರಗಳಿದ್ದರೆ, ಮಕ್ಕಳಲ್ಲಿ ಕಂಡು ಬರುವ ಆರೋಗ್ಯದ ನೂನ್ಯತೆಗಳನ್ನು ನುರಿತ ವೈದ್ಯರಿಂದ ತಪಾಸಣೆ ಮಾಡಿ ಗುರುತಿಸಿ ಅವುಗಳನ್ನು ರಜಿಸ್ಟರನಲ್ಲಿ ದಾಖಲಿಸಲು, ನೂನ್ಯತೆಗಳನ್ನು ಸರಿಪಡಿಸಲು ಶಾಲಾ ಹಂತ ಹಾಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಮಕ್ಕಳನ್ನು ಗುಣಮುಖರನ್ನಾಗಿ ಮಾಡಿಸಲು ಸಾಧ್ಯವಿದೆ. ಕೊಡಿಸಿದ ಮತ್ತು ಕೊಡಿಸಬಹುದಾದ ಚಿಕಿತ್ಸೆ ಬಗ್ಗೆ ತೀವ್ರ ಗಮನ ಹರಿಸಲು ಸಾಧ್ಯವಿದೆ. ಅಲ್ಲದೇ ಇಂತಹದ್ದೊಂದು ಮಕ್ಕಳ ಬಗೆಗಿನ ಆರೋಗ್ಯ ಮಾಹಿತಿ ಶಾಲೆಗಳಲ್ಲಿ ಲಭ್ಯವಿದ್ದಲ್ಲಿ ಸ್ಥಳೀಯವಾಗಿ ಎಸ್‌ಡಿಎಂಸಿ, ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ, ಎಲ್ಲಾ ಸಂಘ-ಸಂಸ್ಥೆಗಳು ಮಕ್ಕಳ ಆರೋಗ್ಯಕ್ಕಾಗಿ ಶಾಲೆಗೊಂದು ಏನಾದರು ಸೌಲಭ್ಯ ಕೊಡಿಸಲು ಸಹಕಾರಿಯಾದ ದಾಖಲೆ ಇದಾಗಿದೆ. ಇಂತಹ ದಾಖಲೆಯಿಂದ ಮಕ್ಕಳ ಆರೋಗ್ಯ ಹಾಗೂ ಅವರ ಆರೋಗ್ಯ ಬೆಳವಣಿಗೆಯು ಕ್ರಮಬದ್ಧವಾಗಿರುವುದನ್ನು ಗಮನಿಸಬಹುದಾಗಿದೆ. ಮಕ್ಕಳ ಸಂಚಿತ ಆರೋಗ್ಯ ದಾಖಲೆಯು ಆರೋಗ್ಯವಂತ ಮಕ್ಕಳನ್ನು ಹೊಂದಲು ಸಾಧ್ಯವಿದೆ ಎಂದು ಮುಖ್ಯಾಧ್ಯಾಪಕರು ಸಲಹೆ ಮಾಡಿದ್ದರು. ಮುಖ್ಯಾಧ್ಯಾಪಕರ ಅನಿಸಿಕೆಯಂತೆ ನುರಿತ ವೈದ್ಯಾಧಿಕಾರಿಗಳಿಂದ ಮಾದರಿ ರಜಿಸ್ಟರನ್ನು ತಯಾರಿಸಲಾಗಿತ್ತು. ಆಯಾ ಶಾಲೆಗಳ ಮುಖ್ಯಾಧ್ಯಾಪಕರೇ ಮಾದರಿ ರಜಿಸ್ಟರನಂತೆ ಒಂದು ರಜಿಸ್ಟರನ್ನು ಸಿದ್ಧಪಡಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಕಂಡು ಬರುವ ನೂನ್ಯತೆಗಳನ್ನು ಮತ್ತು ಕೊಡಿಸಿದ ಚಿಕಿತ್ಸೆಯನ್ನು ಈ ಅಮೃತ ಆರೋಗ್ಯ ಚೈತನ್ಯ ಹೆಸರಿನ ರಜಿಸ್ಟರನಲ್ಲಿ ದಾಖಲಿಸಬಹುದಾಗಿದ್ದು ಇಂತಹ ಮಹತ್ವದ ರಜಿಸ್ಟರ್ ನಿರ್ವಹಣೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪ್ರತಿನಿಧಿಗಳಿಂದ ಚಾಲನೆ ಸಿಕ್ಕಿತು.
ಶಿಕ್ಷಣ ಇಲಾಖೆಯ *ಅಧಿಕಾರಿಗಳಿಗೆ ಸೂಚನೆ*: ಈ ರಜಿಸ್ಟರದಿಂದಾಗಿ ಮಕ್ಕಳ ಮಾಹಿತಿ ಕೊಡಲು ಶಿಕ್ಷಕರಿಗೆ ಅನುಕೂಲವಾಗಲಿದೆ. ಆಯಾ ಮಕ್ಕಳ ನೂನ್ಯತೆಯ ಪ್ರಮಾಣವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ವೈದ್ಯರು, ಆಯಾ ಮಗುವಿಗೆ ಯಾವ ರೀತಿಯ ಚಿಕಿತ್ಸೆ ಕೊಡಿಸಬಹುದು ಎಂಬುದನ್ನು ಬರೆಯಲು ಸಹ ಈ ರಜಿಸ್ಟರನಲ್ಲಿ ಅವಕಾಶವಿದ್ದು ಇದರಿಂದಾಗಿ ಚಿಕಿತ್ಸೆಯ ರೂಪ ತಿಳಿದುಕೊಳ್ಳಲು ಅನುಕೂಲವಾಗಲಿದೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ 2023-24ನೇ ಸಾಲಿನಿಂದಲೇ ಈ ವಹಿಯು ಸಮರ್ಪಕವಾಗಿ ನಿರ್ವಹಣೆಯಾಗಲು, ಜುಲೈ 1ರಿಂದಲೇ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಆರಂಭವಾಗಬೇಕು. ಶಾಲೆಗಳಲ್ಲಿ ರಜಿಸ್ಟರಗಳನ್ನು ಜುಲೈ 1 ರಿಂದ ನಿಯಮಿತವಾಗಿ ಬರೆಯಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
*ಶಾಲೆಗಳಿಗೆ ಸೂಚನೆ:* ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಕ್ಕಳ ಆರೋಗ್ಯ ತಪಾಸಣೆಯ ಈ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಶಾಲೆಗೆ ದಾಖಲಾಗುವ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಒಂದೇ ರಜಿಸ್ಟರನಲ್ಲಿ ಮಗುವಿನ ಆರೋಗ್ಯ ತಪಾಸಣೆಯ ವಿವರಗಳ ಲಭ್ಯತೆ ದೊರೆಯಲಿದೆ. ಅಂಗನವಾಡಿಯಿಂದ ಬರುವ ಮಗುವಿನ ಆರೋಗ್ಯದ ವಿವರಗಳನ್ನು ಸಹ ಈ ರಜಿಸ್ಟರನಲ್ಲಿ ದಾಖಲಿಸಿ ಅದನ್ನು ಮುಂದುವರೆಸಲು ಸಹ ಈ ರಜಿಸ್ಟರನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ಕೆ ಆರೋಗ್ಯ, ಶಿಕ್ಷಣ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪೂರಕವಾದ ಸಲಹೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಜುಲೈ 1ರಿಂದ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ನಿರ್ವಹಣೆ ಮಾಡಲು ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದು ಈಗಾಗಲೆ ಜಿಲ್ಲೆಯ ಎಲ್ಲ ಶಾಲೆಗಳ ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಎ ರಡ್ಡೇರ್ ಅವರು ಪ್ರತಿಕ್ರಿಯಿಸಿದ್ದಾರೆ.
Comments are closed.