ಚುನಾವಣಾ ಅಕ್ರಮ ತಡೆಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ: ಡಾ.ಸತೀಶ ಪಾಟೀಲ್
ಲೋಕಸಭಾ ಚುನಾವಣೆ-2024ರ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯ ಕುರಿತು ರಾಯಚೂರು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳ ಚುನಾವಣಾ ಪೊಲೀಸ್ ವೀಕ್ಷಕರಾದ ಡಾ.ಸತೀಶ ಪಾಟೀಲ್ ಐಪಿಎಸ್ ಅವರು ಕೊಪ್ಪಳ ಚುನಾವಣಾಧಿಕಾರಿಗಳ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಇದೆ ವೇಳೆ ಮಾತನಾಡಿದ ಚುನಾವಣಾ ಪೊಲೀಸ್ ವೀಕ್ಷಕರಾದ ಡಾ.ಸತೀಶ ಪಾಟೀಲ್, ಪ್ರಸಕ್ತ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮ ತಡೆಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೆಲೆನ್ಸ್ ತಂಡ, ಎಸ್.ಎಸ್.ಟಿ ತಂಡಗಳು ಹಾಗೂ ಇತರ ಚುನಾವಣಾ ತಂಡಗಳೊಂದಿಗೆ ಸಹಕರಿಸಿ ಸೂಕ್ತ ಕಾರ್ಯಾಚರಣೆ ಕೈಗೊಂಡು, ಅಕ್ರಮ ಪತ್ತೆ ಹಚ್ಚಿ, ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ಪ್ರಸಕ್ತ ಲೋಕಸಭಾ ಚುನಾವಣೆ ನಿಮಿತ್ಯ ಜಿಲ್ಲೆಯಾದ್ಯಂತ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಸಮರ್ಪಕ ಜಾರಿಗೆ ಎಲ್ಲಾ ತಂಡಗಳು ಕಾರ್ಯನಿರತವಾಗಿವೆ ಎಂದು ಹೇಳಿದರು.
ಸಭೆಯಲ್ಲಿ ಎಂ.ಸಿ.ಸಿ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ ಕುಮಾರ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೊಳ, ಗಂಗಾವತಿ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್, ಡಿ.ಆರ್.ಡಿ.ಎಸ್.ಪಿ ನಿಂಗಪ್ಪ ಸೇರಿದಂತೆ ವಿಧಾನಸಭಾ ಕ್ಷೇತ್ರಗಳ ಪೊಲೀಸ್ ಇಲಾಖೆಯ ನೋಡಲ್ ಅಧಿಕಾರಿಗಳು ಹಾಗೂ ಇತರ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.