ಬಸಾಪುರ ಕೈಗಾರಿಕಾ ವಸಾಹತು – ಕಂಪನಿ ಮತ್ತು ಅಧಿಕಾರಿಗಳ ವಿಶೇಷ ಸಭೆ

Get real time updates directly on you device, subscribe now.

ಕೊಪ್ಪಳ: ತಾಲೂಕಿನ ಬಸಾಪೂರ ಬಳಿಯ ಕೈಗಾರಿಕಾ ವಸಾಹತುವನ್ನು ಕೂಡಲೇ ನ್ಯಾಯಾಲಯದಿಂದ ಮುಕ್ತಗೊಳಿಸಿ ಫಲಾನುಭವಿಗಳ ಹೆಸರಿಗೆ ನೀಡಿ ಅಭಿವೃದ್ಧಿಪೂರ್ಣಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ರವರಿಗೆ ನೀಡಿದ ಮನವಿ ಮೇರೆಗೆ ಎಂ.ಎಸ್.ಪಿ.ಎಲ್ ಕಂಪನಿ ಮತ್ತು ಕೆ.ಎಸ್.ಎಸ್.ಐ.ಡಿ.ಸಿ. ಅಧಿಕಾರಿಗಳ ಜೊತೆಗೆ ಜಿಲ್ಲಾ ಕೈಗಾರಿಕೆ ಅಧಿಕಾರಿಗಳು ವಿಶೇಷ ಸಭೆ ಕರೆದು ಚರ್ಚಿಸಿದರು.
ಸಭೆಯಲ್ಲಿ ಪ್ರಸ್ತುತ ಸಮಸ್ಯೆ ಕುರಿತು ಬಸಾಪೂರ ಕೈಗಾರಿಕಾ ವಸಾಹತು ಫಲಾನುಭವಿ ಮಂಜುನಾಥ ಜಿ. ಗೊಂಡಬಾಳ ಅವರು ಮಾತನಾಡಿ, ತಾಲೂಕಿನ ಗಿಣಗೇರಿ, ಹಾಲವರ್ತಿ, ಬಸಾಪೂರ, ಕಿಡದಾಳ ಸೇರಿ ಜಿಲ್ಲಾಡಳಿತ ಭವನದವರೆಗೆ ಸುಮಾರು ಒಂದು ಸಾವಿರ ಎಕರೆ ಭೂಪ್ರದೇಶವನ್ನು ಆಕ್ರಮಿಸಿಕೊಂಡು ನಿರ್ಮಾಣವಾಗುತ್ತಿರುವ ಎಮ್.ಎಸ್.ಪಿ.ಎಲ್. ಐರನ್ ಕಂಪನಿಯಿಂದ ಸ್ಥಳಿಯರಿಗೆ ಹೇಳಿಕೊಳ್ಳುವಷ್ಟು ಪ್ರಯೋಜನವಾಗುವದಿಲ್ಲ ಮೇಲಾಗಿ ಜಿಲ್ಲಾ ಪ್ರದೇಶದ ಸಮೀಪವೇ ಕಾರ್ಖಾನೆ ಆರಂಭವಾದರೆ ಲಕ್ಷಾಂತರ ಜನರ ಆರೋಗ್ಯಕ್ಕೆ ತೀವ್ರ ಸಮಸ್ಯೆ ಆಗಲಿದೆ ಎಂದು ಅಳಲು ತೋಡಿಕೊಂಡರು. ಇನ್ನು ಸಾವಿರ ಎಕರೆ ಅಲ್ಲದೇ ಇನ್ನೂ ೯೦೦ ಎಕರೆ ಪ್ರದೇಶವನ್ನು ಗುರುತಿಸಿದ್ದು ಅದೂ ಜಿಲ್ಲಾಧಿಕಾರಿಗಳ ಕಂಪೌಂಡ್ ಹತ್ತಿರ ಬರಲಿದೆ ಎಂದು ಅಲ್ಲಿ ಆಗಮಿಸಿದ್ದ ಎಂ.ಎಸ್.ಪಿ.ಎಲ್. ಕಂಪನಿ ಸಿಬ್ಬಂದಿ ಮಾಹಿತಿ ನೀಡಿದ್ದು ಎಲ್ಲರಿಗೂ ಹೊಸ ತಲೆನೋವೊಂದು ಊರಿಗೆ ಬರುತ್ತಿರುವದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿಯೇ ಬೃಹತ್ ಕೈಗಾರಿಕೆಗಳಿಗೆ ಭೂಮಿ ನೀಡುವದು ದೊಡ್ಡ ಮೂರ್ಖತನ, ಅಂತಹ ಪ್ರಮುಖ ಕೈಗಾರಿಕೆಯಲ್ಲಿ ಎಮ್.ಎಸ್.ಪಿ.ಎಲ್ ಸಹ ಒಂದಾಗಿದ್ದು ಅದಕ್ಕೆ ಹನ್ನೊಂದು ನೂರು ಎಕರೆ ಭೂಮಿ ಈಗಾಗಲೇ ಕೊಟ್ಟಿದ್ದಾರೆ. ಆದರೆ ಕಂಪನಿ ಸರಕಾರದ ಕೆ.ಎಸ್.ಎಸ್.ಐ.ಡಿ.ಸಿ. ಮೂಲಕ ಸುಮಾರು ೧೦೪ ಎಕರೆ ಭೂಮಿಯಲ್ಲಿ ಅದರಲ್ಲಿ ಸುಮಾರು ೪೭೦ ಜನ ಸಣ್ಣ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುವ ಬಸಾಪುರ ಕೈಗಾರಿಕಾ ವಸಾಹತು ನಿರ್ಮಾಣ ಮಾಡಿದ್ದು, ಅದರ ಅಭಿವೃದ್ಧಿಗೂ ೫೦ ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ.
ಕೇವಲ ೧೦೪ ಎಕರೆಯಲ್ಲಿ ೪೭೦ ಸಣ್ಣ ಕೈಗಾರಿಕೆಗಳ ಮೂಲಕ ೨೦೦೦ ಜನಕ್ಕೂ ಅಧಿಕ ಜನರ ಬದುಕು ಹಸನಾಗುತ್ತದೆ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಯುವ ಸ್ಥಳಿಯ ಉದ್ಯಮಿಗಳಿಗೆ ಅವಕಾಶ ನೀಡಬೇಕು ಮತ್ತು ತುರ್ತಾಗಿ ಕ್ರಮ ತೆಗೆದುಕೊಂಡು ವಸಾಹತು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಶೇಖು ಎಂ. ಚವ್ಹಾಣ ಮಾತನಾಡಿ, ಕಂಪನಿಯವರೇ ಮೊದಲು ಮಾನವೀಯತೆಯಿಂದ ಕೇಸ್ ಮರಳಿ ಪಡೆಯಬೇಕು ಇಲ್ಲವಾದಲ್ಲಿ ಸಮಸ್ಯೆ ಇನ್ನಷ್ಟು ಜಾಸ್ತಿಯಾಗುವದರ ಜೊತೆಗೆ ಎಲ್ಲರಿಗೂ ನಷ್ಟ ಉಂಟಾಗುತ್ತದೆ ಎಂದು ವಿನಂತಿಸಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಿ ನಂತರ ಸರಕಾರಕ್ಕೆ ಪತ್ರ ಬರೆಯಲಾಗುವದು ಎಂದು ವಿಶ್ವಾಸ ನೀಡಿದರು. ಕೆ.ಐ.ಎ.ಡಿ.ಬಿಯ ಅಧಿಕಾರಿಗಳು ದೂರವಾಣಿ ಮೂಲಕ ಸ್ಪಂದಿಸಿದರು, ಕೆ.ಎಸ್.ಎಸ್.ಐ.ಡಿ.ಸಿ. ದಿನೇಶ್ ಜವಳಿ, ಎಂ.ಎಸ್.ಪಿ.ಎಲ್ ಕಂಪನಿಯ ಎಜಿಎಂ ಮತ್ತು ಕಾನೂನು ಸಲಹೆಗಾರ ಪ್ರವೀಣ ಇತರರು ಇದ್ದರು. ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ತಂಡಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಸುಂದರೇಶಬಾಬು ಅವರು, ಕಂಪನಿ ಸಿಬ್ಬಂದಿಗೆ ಸಲಹೆ ನೀಡಿ, ತಮ್ಮ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ತುರ್ತಾಗಿ ಸ್ಥಳಿಯರ ಹಿತಕ್ಕೆ ಸ್ಪಂದಿಸುವಂತೆ ತಾಕೀತು ಮಾಡಿ, ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ ನೀಡಿದ ಪ್ರಯುಕ್ತ ಪ್ರತಿಭಟನೆ ಹಿಂದಕ್ಕೆ ಪಡೆದು ಜುಲೈ ೧ ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಕೊಡುವ ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಕೂಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಕಟಣೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!