ಮದುವೆ ಆಮಂತ್ರಣದಲ್ಲಿ ಮತದಾನ ಜಾಗೃತಿ ಮೂಡಿಸಿದ ಪ್ರಭುರಾಜ
ಕೊಪ್ಪಳ: ತಾಲೂಕಿನ ಗೊಂಡಬಾಳ ಗ್ರಾಮದ ಯುವ ಕೃಷಿಕ ಮತ್ತು ಕನ್ನಡಕ ವ್ಯಾಪಾರಿ ಪ್ರಭುರಾಜ್ ಜಾಗಿರ್ದಾರ್ ತಮ್ಮ ಮದುವೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಮಾಜ ಸೇವಕ ಮಂಜುನಾಥ ಗೊಂಡಬಾಳ ಅವರ ಸಲಹೆ ಮೇರೆಗೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಚಿತ್ರಗಳನ್ನು ಮತ್ತು ಘೋಷಣೆಗಳನ್ನು ಮುದ್ರಿಸಲಾಗಿದೆ ಜನರಿಗೆ ಕಾಡು ಕೊಡುವ ಮೂಲಕ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವುದಾಗಿ ಪ್ರಭುರಾಜ್ ಜಹೀರ್ದಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಕಾರ್ಡಿನ ಒಂದು ಬದಿ ಪ್ರಭುರಾಜ ಮತ್ತು ವಧು ಪವಿತ್ರಾ ಅವರು ಮತದಾನದ ಗುರುತುತೋರಿಸುವ ಚಿತ್ರದ ಜೊತೆಗೆ ಕೇಂದ್ರ ಚುನಾವಣಾ ಆಯೋಗದ ರಾಯಭಾರಿ ತೆಂಡುಲ್ಕರ್ ಮತ್ತು ಅವರ ಪತ್ನಿ ಅದೇ ರೀತಿ ಮತದಾನದ ಗುರುತು ತೋರಿಸುವ ಚಿತ್ರ ಹಾಗೂ ಚುನಾವಣೆ ಆಯೋಗದ ಲೋಗೊ ಹಾಗೂ ಘೋಷಣೆಗಳನ್ನು ಮುದ್ರಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಚುನಾವಣೆ ವೀಕ್ಷಕ ಚಂದ್ರಶೇಖರ, ತಾಲ್ಲೂಕು ಪಂಚಾಯತ ಇಒ ದುಂಡಪ್ಪ ತುರಾದಿ, ಜಿ.ಪಂ. ಸಿಎಒ ಅಮೀನ್ ಅತ್ತಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್, ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್ ಮಾಲಿಪಾಟೀಲ, ಮಹೆಬೂಬ ಕಿಲ್ಲೆದಾರ್ ಮುಂತಾದವರಿಗೆ ಆಮಂತ್ರಣ ನೀಡಿ ಮದುವೆಗೆ ಬರುವಂತೆ ಕೋರಿದ್ದು, ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಎಲ್ಲರೂ ಶುಭ ಕೋರಿದ್ದಾರೆ. ಎಪ್ರಿಲ್ 26 ರಂದು ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಶ್ರೀ ನಂದಿಬಂಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದ್ದು ಅಲ್ಲಿ ಮತದಾನ ಮಾಡುವ ಜಾಗೃತಿ ಫಲಕ ಹಾಕಿ ಪ್ರಮಾಣ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿಯೇ ಪರಿಸರ ಜಾಗೃತಿ ಸಹ ಏರ್ಪಡಿಸಿದ್ದು, ನೀರನ್ನು ಮಿತವಾಗಿ ಬಳಸುವ ಹಾಗೂ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಜಾಗೃತಿ ಮೂಡಿಸಲಾಗುವದು ಎಂದು ತಿಳಿಸಿದ್ದಾರೆ.
Comments are closed.