ಶಿಲ್ಪಾ ಮ್ಯಾಗೇರಿಯವರ ‘ಚೈತ್ರದ ಚರಮಗೀತೆ’
ಶ್ರೀಮತಿ ಶಿಲ್ಪಾ ಮ್ಯಾಗೇರಿಯವರು ಮೂಲತಃ ಕೊಪ್ಪಳದವರು. ಸದ್ಯ ಗದುಗಿನಲ್ಲಿ ವಾಸವಾಗಿರುವ ಇವರು ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಜೊತೆ-ಜೊತೆಗೆ ಸಾಹಿತ್ಯಿಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ‘ಭಾರತಾಂಬೆ’ ಮತ್ತು ‘ಮಾತು ಮೌನದ ನಡುವೆ’ ಎಂಬೆರಡು ಕವನ ಸಂಕಲನಗಳನ್ನು ಹಾಗೂ ‘ಆಕಾಶಕ್ಕೊಂದು ಏಣಿ’ ಎಂಬ ಚುಟುಕು ಸಂಕಲನವನ್ನು ಪ್ರಕಟಿಸಿ ಸಾಹಿತ್ಯಾಸಕ್ತರ ಮನಸು ಗೆದ್ದಿದ್ದಾರೆ. ನಾಲ್ಕನೆ ಕೃತಿಯಾಗಿ ‘ಚೈತ್ರದ ಚರಮಗೀತೆ’ ಎಂಬ ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲ ಕವಿಯಿತ್ರಿಯಾಗಿ ದಾಪುಗಾಲು ಹಾಕುತ್ತಿದ್ದಾರೆ.
‘ಚೈತ್ರದ ಚರಮಗೀತೆ’ ಈ ಸಂಕಲನದಲ್ಲಿ ಕವನ, ಹನಿಗವನ ಸೇರಿ ಒಟ್ಟು ನಲವತ್ತಾರು ಸಂಖ್ಯೆಯಾಗಿದೆ. ಇದು ಮಹಿಳೆಯಿಂದ ರಚಿತವಾದ ಕೃತಿಯಾಗಿರುವುದರಿಂದ ಇದರಲ್ಲಿ ಸಹಜವಾಗಿಯೇ ಮಹಿಳಾ ತುಮುಲುಗಳು, ತಲ್ಲಣಗಳು, ಅವಳ ನೋವು-ಸಂಕಟಗಳು ಮತ್ತು ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಗಳು ಇಲ್ಲಿ ಕವನಗಳಾಗಿ ರೂಪ ಪಡೆದಿವೆ. ಈ ಕೃತಿಯನ್ನೊಮ್ಮೆ ಓದಿದಾಗ ಶಿಲ್ಪಾ ಮ್ಯಾಗೇರಿಯವರ ಮನದಾಳದ ಮಾತುಗಳನ್ನೇ ಇಲ್ಲಿ ವ್ಯಕ್ತಪಡಿಸಿದಂತಿದೆ.
ಈ ಸಮಾಜದಲ್ಲಿ ಹೆಣ್ಣನ್ನು ಮಾತ್ರ ಪ್ರಶ್ನಿಸಲಾಗುತ್ತಿದೆ. ಗಂಡು ಏನೇ ಮಾಡಿದರೂ ಪ್ರಶ್ನಾತೀತ ಎಂಬ ನಂಬಿಕೆ ನಮ್ಮ ಸಮಾಜದಲ್ಲಿರುವುದು ಶೋಚನೀಯ. “ಹದಿನಾರು ಸಾವಿರ ಮಡದಿಯರ ರಮಣ ಕೃಷ್ಣನ ಕುರಿತು ತಕರಾರಿಲ್ಲ ನಮ್ಮಲ್ಲಿ” ಆದರೆ “ಐವರ ಗಂಡಂದಿರ ಒಡತಿ ಪಾಂಚಾಲಿ ನಾರಿರತ್ನ”ಳ ಬಗ್ಗೆ ಈ ಜಗದಲ್ಲಿ ಅಪವಾದವಿದೆ. “ನೂರಾರು ಸಖಿಯರರಸರು ರಾಜ ಪುಂಗವರೆಲ್ಲ ಮಾನ್ಯರೇ” ಆಗಿದ್ದಾರೆ. “ಒಬ್ಬಳ ಸೆರಗು ಇನ್ನೊಬ್ಬಳ ನೆರಿಗೆ ಹಿಡಿದವನಿಲ್ಲಿ ಮಾನ್ಯನೆ, ಎಷ್ಟಾದರು ಪುರುಷನಲ್ಲವೆ, ಅವಳಿಗೆ ಮಾತ್ರ ಜಗದ ಕಾನೂನು”ಗಳು. ಎನ್ನುವ ಮಾತುಗಳು ಮಹಿಳೆಯನ್ನು ಯಾವರೀತಿಯಲ್ಲಿ ಪುರುಷ ಸಮಾಜ ನಡೆಸಿಕೊಳ್ಳಿತ್ತಿದೆ ಎಂಬ ಸಂಗತಿ ಇಲ್ಲಿ ವ್ಯಕ್ತವಾಗುತ್ತದೆ. ಹೀಗಿರುವಾಗ ಮಹಿಳೆ ನೆಮ್ಮದಿಯಿಂದ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಒಂದು ವೇಳೆ ಮಹಿಳೆ ಏನಾದರೂ ಹಾದಿ ತಪ್ಪಿ ನಡೆದರೆ ಈ ಪುರುಷ ಸಮಾಜ ಅವಳನ್ನು ಅಪರಾಧಿ ಎಂಬಂತೆ ಕಾಣುತ್ತದೆ. ಇಂತಹ ಕೆಟ್ಟ ವ್ಯವಸ್ಥೆಯನ್ನು ಕವಿಯಿತ್ರಿ ಶಿಲ್ಪಾ ಮೌನವಾಗಿಯೇ ಪ್ರಶ್ನಿಸಿದ್ದಾರೆ.
ನಮ್ಮದು ಪುರುಷ ಪ್ರಧಾನ ವ್ಯವಸ್ಥೆ. ಅವರಿಗೆ ಯಾವುದೇ ನಿಯಮ, ರೀತಿ-ರಿವಾಜುಗಳು ಇರುವುದಿಲ್ಲ. ಅವರು ಸ್ವೇಚ್ಛಾಚಾರಿಯಾಗಿಯೂ ಬದುಕಬಹುದು. ಸೊಕ್ಕು, ಅಹಂಕಾರ, ಧಿಮಾಕು ಎಲ್ಲವನ್ನೂ ಒಳಗೊಂಡಂತೆ ಬದುಕಬಹುದಾಗಿದೆ. ಆದರೆ ಒಬ್ಬ ಸ್ತ್ರೀ ಹೀಗೆ ಬದುಕಲು ಸಾಧ್ಯವೇ? “ಹಮ್ಮು, ಬಿಮ್ಮು, ಗರ್ವ ಎಲ್ಲ ಕಳೆದು ಹೋಗಿದೆ, ನಾನೂ ಹೆಣ್ಣೆಂದು ಮನವರಿಕೆಯಾದ ದಿನದಿಂದ” ಎನ್ನುವಲ್ಲಿ ಒಬ್ಬ ಸ್ತ್ರೀ ತನ್ನ ಬದುಕನ್ನು ಯಾವ ರೀತಿಯಲ್ಲಿ ಕಟ್ಟಿಕೊಳ್ಳಬೇಕೆಂಬ ಕಟ್ಟುಪಾಡುಗಳು ಇಲ್ಲಿವೆ. ಅವಳಿಗೆ ಚಿಕ್ಕಂದಿನಿಂದಲೇ ತಗ್ಗಿ-ಬಗ್ಗಿ, ವಿನಯದಿಂದ ನಡೆಯಬೇಕೆಂಬ ನಿಯಮಗಳನ್ನು ಅವಳ ತಲೆಯಲ್ಲಿ ಬಲವಂತವಾಗಿಯೇ ತುಂಬಲಾಗುತ್ತಿದೆ. ಅಂದರೆ ಸ್ತ್ರೀಯಾಗಿ ಹುಟ್ಟಿದ ದಿನದಿಂದಲೇ ಹಮ್ಮು, ಬಿಮ್ಮು, ಬಿಟ್ಟು ಬದುಕಬೇಕೇ? ಯಾಕೆ ಅವು ಸ್ತ್ರೀಯರಿಗೆ ಯೋಗ್ಯವಲ್ಲವೇ? ಹಮ್ಮು, ಬಿಮ್ಮು, ಗರ್ವ ಪುರುಷರಿಗೆ ಭೂಷಣವೇ? ಇದಕ್ಕೆ ಸಮಾಜ ಉತ್ತರಿಸಬೇಕಿದೆ. ಇಂತಹ ಅಸಮಾನತೆಯನ್ನು ಶಿಲ್ಪಾರವರು ವಿರೋಧಿಸುವ ನೆಲೆಯಲ್ಲಿಯೇ ಕವನ ರಚಿಸಿದಂತೆ ಕಾಣುತ್ತದೆ. ಇವು ಶಿಲ್ಪಾರವರ ಮಾತುಗಳಾಗಿರದೇ ಇಡೀ ಮಹಿಳಾ ಸಮಾಜದ ಬದುಕಿನ ವ್ಯವಸ್ಥೆಯನ್ನು ಇಲ್ಲಿ ಅನಾವರಣ ಗೊಳಿಸುತ್ತವೆ.
ಸ್ತ್ರೀ ಬದುಕನ್ನು ಪ್ರಶ್ನಿಸುವ ವ್ಯವಸ್ಥೆ ಒಂದು ಕಡೆಯಾದರೆ; ಅವಳ ಕಷ್ಟ, ದುಃಖ, ನೋವು ಇನ್ನೊಂದು ಕಡೆ. ಇವುಗಳ ಮಧ್ಯೆ ಅವಳ ಬದುಕು ನುಜ್ಜು-ಗುಜ್ಜು ಆಗುತ್ತಿದೆ ಎನ್ನುವುದು ಮಾತ್ರ ಸತ್ಯ. “ಮೂರು ಮಕ್ಕಳಿಗಾಗಿ ಕಣ್ಣಿಗೆ ಎಣ್ಣೆ ಸುರಿದುಕೊಂಡು ಬೆವರಲ್ಲೇ ಸ್ನಾನ ಮಾಡಿ, ಗಂಧದಂತೆ ತಾನೆ ಸವೆದರೂ ಹಿತವನ್ನೇ ನೀಡದ” ಆಥವಾ ಕಾಣದ ವ್ಯವಸ್ಥೆಯೊಳಗೆ ಅವಳ ಬದುಕು ಸಾಗುತ್ತಿದೆ. ಅವಳ ಬದುಕು ಏನೇ ನುಜ್ಜು-ಗುಜ್ಜಾದರೂ ಎದ್ದು ನಿಲ್ಲುವ ಹಠ ಅವಳಲ್ಲಿದೆ. “ನಾನು ಮತ್ತೆ ಬದುಕುತ್ತೇನೆ ಸಖ, ಚಂದಾಗಿಯೊ ಮಂದಾಗಿಯೊ, ಕೊಂದು ಹೋದ ನಿನಗೆ ಅದರ ಚಿಂತೆ ಬೇಡ” ಎನ್ನುವಲ್ಲಿ ಮೆಟ್ಟಿ ನಿಲ್ಲುವ ಛಲ ನನ್ನಲ್ಲಿದೆ, ಕೊಂದ ಜಾಗದಲ್ಲೇ ನಾನು ಎದ್ದು ನಿಲ್ಲುತ್ತೇನೆ ಎಂಬ ಹಠದಿಂದ ನುಡಿದಂತೆ ಭಾಸವಾಗುತ್ತದೆ. ಇದು ಮಹಿಳೆಯರಿಗೆ ಇರಬೇಕಾದ ಛಲ.
ಈ ಸಮಾಜದಲ್ಲಿ ಸರ್ವರೂ ಸಮಾನರು. ಹೆಣ್ಣು-ಗಂಡು, ಜಾತಿ-ವರ್ಗ, ಧರ್ಮಗಳ ತಾರತಮ್ಯವಿಲ್ಲ ಎಂಬ ನಿಯಮಗಳನ್ನು ಬರೆಯಲಾಗಿದೆ. ಆದರೆ ಅವು ಚಾಲ್ತಿಯಲ್ಲಿವೆಯೇ ಎಂಬ ಅನುಮಾನ ಮೂಡುತ್ತದೆ. “ಹತ್ತು ಜನ ಹಸಿದ ಹುಲಿಯಂತೆ ಒಂದು ಹೆಣ್ಣನ್ನು ಕಿತ್ತು ತಿಂದಾಗ ನೆನಪು ಬರಲಿಲ್ಲ ನಾವು ಒಂದೆಂದು, ಆಗ ಹೆತ್ತವರು ಮಾತ್ರ ಅತ್ತರು.” ಒಬ್ಬ ಸ್ತ್ರೀಯನ್ನು ಈ ಸಮಾಜ ಬದುಕಲೂ ಬಿಡುವುದಿಲ್ಲ. ಮೇಲ್ನೋಟಕ್ಕೆ ಸಮಾನತೆಯ ಮಾತುಗಳನ್ನು ಎಲ್ಲಾ ಕಡೆಯಲ್ಲೂ ಆಡಲಾಗುತ್ತದೆ. ಕೊನೆಗೆ ಅವಳ ಸಾವಿಗೂ ಕಾರಣವಾಗುವ ವ್ಯವಸ್ಥೆ ಬಗ್ಗೆ ಇಲ್ಲಿ ಆಕ್ರೋಶ ವ್ಯಕ್ತವಾದಂತೆ ತೋರುತ್ತದೆ.
ಮಹಿಳೆಯರನ್ನು ಸಂಪ್ರದಾಯದ ಹೆಸರಿನಲ್ಲಿ ಹೇಗೆ ಸಂಕೋಲೆಯೊಳಗೆ ಬಂಧಿಸಿಡುತ್ತಾರೆ ಎಂಬ ಮಾತುಗಳು ಇಲ್ಲಿ ವ್ಯಕ್ತವಾಗಿವೆ. “ಅವನು ನಗುನಗುತ್ತಾ ಬಳೆ ತೊಡಿಸುತ್ತಾನೆ, ನನಗೂ ಅವನಿಗೂ ಗೊತ್ತು ಕೋಳ ಎನ್ನುವುದು ಸಂಪ್ರದಾಯ ಹೆಸರಿನಲ್ಲವ ಸುರಕ್ಷಿತ”ವಾಗಿದ್ದರೆ ಇತ್ತ ಮಹಿಳೆ ಸುರಕ್ಷಿತವಲ್ಲ ಎಂಬುದು ಮಾತ್ರ ಸತ್ಯ. “ತಾಳಿ ಕಟ್ಟಿದಾಗ ಹೇಳುತ್ತಾನೆ ಈ ಗಂಟು ಏಳೇಳು ಜನ್ಮದ್ದು, ಒಮ್ಮೆ ಕೇಳಬೇಕೆನಿಸುತ್ತದೆ, ಹಾಗಾದರೆ ನೀ ಒಂದು ದಾರವನ್ನಾದರೂ ಕಟ್ಟಿಕೊ, ನನ್ನಲ್ಲಿ ಬಂಧಿಯಾದ ಸಬೂತಿಗೆ” ಎಂದು ಪುರುಷ ಸಮಾಜವನ್ನು ಪ್ರಶ್ನಿಸುತ್ತಾಳೆ. ಇದಕ್ಕೆ ಪುರುಷ ಸಮಾಜ ಒಪ್ಪುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಮಹಿಳೆ ದಾರವನ್ನಷ್ಟೇ ಅಲ್ಲ ಕುಟುಂಬದ ಜವಾಬ್ಧಾರಿಯನ್ನು ಟೊಂಕಕ್ಕೆ ಕಟ್ಟಿಕೊಳ್ಳಬೇಕಾದ ಅನೇಕ ಪ್ರಸಂಗಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ.
ಮಹಿಳೆಯರಿಗೆ ತವರುಮನೆ ಎಂದರೆ ದೇವಾಲಯವಿದ್ದಂತೆ, ಅಲ್ಲಿನ ತಾಯಿ-ತಂದೆಗಳೇ ದೇವರು. ಇದನ್ನು ಜನಪದರು ಪ್ರಾಚೀನ ಕಾಲದಿಂದಲೂ ತಮ್ಮ ಸಾಹಿತ್ಯದಲ್ಲಿ ಹಾಡಿ ಹೊಗಳಿದ್ದಾರೆ. ತಾಯಿ, ತಂದೆ, ತವರಿನ ಬಗ್ಗೆ ಜನಪದರು ತಮ್ಮ ಸಾಹಿತ್ಯದಲ್ಲಿ ಅಮೋಘವಾಗಿ ವರ್ಣಿಸಿದ್ದಾರೆ. ತವರಿಗೆ ಹೋಗುವಾಗ ಏನೆಲ್ಲಾ ಸಂಭ್ರಮವಿರುತ್ತದೆ ಎನ್ನುವುದನ್ನು ಹೇಳಲಾಗದು. ಅದನ್ನು ಅನುಭವಿಸಿದ ಹೇಣ್ಣೇ ಹೇಳಬೇಕು. “ನವಿಲುಗಳು ಕುಣಿಯುತ್ತಿವೆ ನನ್ನೂರ ಸರಹದ್ದಿನಲ್ಲಿ, ಗಿಳಿಗಳು ಮಾತನಾಡುತ್ತವೆ, ಕೋಗಿಲೆಗಳು ಗಾಯಕ್ಕೆ ಮುಲಾಮು ಸವರುತ್ತವೆ” ಎನ್ನುವಾಗ ಅವಳು ತವರಿಗೆ ಹೋಗುವಾಗ ಆಗುವ ಸಂಭ್ರಮವನ್ನು ವರ್ಣಿಸಲಾಗದು. “ನದಿಗಳು ತುಂಬಿ ಹರಿಯುತ್ತವೆ, ಕೆರೆ ತೊರೆ ಹಳ್ಳ ಕೊಳ್ಳ ಉಕ್ಕೇರಿ ಬರುತ್ತವೆ, ಉದ್ಯಾನಗಳು ನಗುವ ಊರಲ್ಲಿ” ಅದುವೇ ನನ್ನ ತವರು ಎಂದು ಹೆಮ್ಮೆಯಿಂದ ಹಾಡಿ ಹೊಗಳುತ್ತಾಳೆ. ತವರಿಗಿಂತ ಮಿಗಿಲಾದದ್ದು ಬೇರೊಂದಿಲ್ಲಾ. ‘ತವರೂರು ದಾರಿಲಿ ಕಲ್ಲಿಲ್ಲ ಮುಳ್ಳಿಲ್ಲ’ ಎಂಬ ಜನಪದರ ಮಾತುಗಳು ಇಲ್ಲಿ ವ್ಯಕ್ತವಾದಂತೆ ತೋರುತ್ತದೆ. ಹೀಗೆ ಶ್ರೀಮತಿ ಶಿಲ್ಪಾ ಮ್ಯಾಗೇರಿಯವರು ಈ ಕೃತಿಯಲ್ಲಿ ಹೆಣ್ಣಿನ ನೋವು-ಕಷ್ಟಗಳ ಜೊತೆ-ಜೊತೆಯಲ್ಲಿ ತವರಿನ ತಣ್ಣನೆಯ ವರ್ಣನೆಯನ್ನು ಮಾಡಿದ್ದಾರೆ.
ಶ್ರೀಮತಿ ಶಿಲ್ಪಾ ಮ್ಯಾಗೇರಿಯವರ ‘ಚೈತ್ರದ ಚರಮಗೀತೆ’ ಈ ಸಂಕಲನದಲ್ಲಿ ಬಹುತೇಕ ಕವನಗಳು ಮಹಿಳಾ ಚರಮಗೀತೆಗಳೇ ಆಗಿವೆ. ಯಾಕೆಂದರೆ ತಾವೂ ಒಬ್ಬ ಮಹಿಳೆಯಾಗಿ ಕಂಡುಂಡ, ನೋಡಿದ ಮಹಿಳಾ ತಲ್ಲಣಗಳನ್ನು ಇಲ್ಲಿ ಹೇಳಿದ್ದಾರೆ. ಮತ್ತು ಮುಖ್ಯವಾಗಿ ಅವರು ಒಬ್ಬ ಶಿಕ್ಷಕಿಯಾಗಿದ್ದರಿಂದ ಸಮಾಜದಲ್ಲಿ ಅನೇಕ ಸಂಗತಿಗಳನ್ನು ಕಂಡವರಾಗಿದ್ದಾರೆ. ಮಹಿಳಾ ಸಂವೇದನೆ ಜೊತೆಗೆ ಅನೇಕ ಸಂಗತಿಗಳ ಕುರಿತು ಈ ಸಂಕಲನದ ಮೂಲಕ ಸಮಾಜಕ್ಕೆ ತಿಳಿಹೇಳಿದ್ದಾರೆ.
ಇಂದು ಮುಖಕ್ಕಿಂತ ಮುಖವಾಡದ ಬದುಕುಗಳೇ ವಿರಾಜಿಸುತ್ತಿವೆ. “ಕಮ್ಮಿಯಾಗಿದೆ ಬೆಲೆ ನೈಜತೆಗೆ, ನಿಂತು ಹೋಗಿದೆ ಮಾರ್ಕೆಟ್ ಗಾಂಧಿವಾದಕ್ಕೆ” ಗಾಂಧಿಯ ತತ್ವ, ಆದರ್ಶಗಳಿಗೆ ಬೆಲೆ ಇಲ್ಲದಂತಾಗಿದೆ. ಅವರ ಸರಳತೆ, ಅಹಿಂಸೆ, ಮಹಿಳಾ ಸಮಾನತೆ, ರಾಮರಾಜ್ಯದ ಕನಸು ಇಂದು ಅರ್ಥ ಕಳೆದುಕೊಂಡಿವೆ. ಇಂದು ಗಾಂಧಿಯನ್ನು ಮತ್ತು ಅವರ ತತ್ವಗಳನ್ನೂ ಹುಡುಕಬೇಕಿದೆ ಎನ್ನುವಷ್ಟರ ಮಟ್ಟಿಗೆ ಸಮಾಜ ಬದಲಾಗಿದೆ. ಇಂದಿನ ಬಣ್ಣ-ಬಣ್ಣದ ಲೋಕದಲ್ಲಿ “ಮಧುರತೆ ಕಳೆದೇ ಹೋಗಿದೆ.” ಇಂತಹ ವಾಸ್ತವಿಕತೆಯಲ್ಲಿ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ.
ಜಾಗತೀಕರಣದ ಇಂದಿನ ಯುಗದಲ್ಲಿ ಹಳೆಯ ವೈಭವಗಳು ಮರೆಯಾಗುತ್ತಿವೆ. ಜಾತ್ರೆ, ಹಬ್ಬ, ಸಂಭ್ರಮವಷ್ಟೇ ಅಲ್ಲ ಸಂಬಂಧಗಳೂ ಸಹ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. “ಕಳೆದು ಹೋಗಿದೆ ನನ್ನೂರು ಜಾತ್ರೆ, ಸೆಗಣಿ ಕಾಣದ ಅಂಗಳ ಬಣಗುತ್ತದೆ, ಬೇಕರಿ ಆಮದಿಗೆ ಬಡ್ತಿ ಪಡೆದಿವೆ, ಭಾವದ ಆವೇಗ ಕಳೆದುಕೊಂಡಿದೆ, ಅನುಬಂಧವೆಂಬುದು ಮರೆತು ಹೋಗಿದೆ” ಎಲ್ಲವನ್ನೂ ಮರೆತು ಇಂತಹ ಕೃತಕಗಳ ಲೋಕದಲ್ಲಿ ನಾವು ಬದುಕುತ್ತಿದ್ದೇವೆ. ಅನ್ಯೋನ್ಯ ಸಂಬಂಧಗಳು ಕಳೆದು ಹೋಗಿವೆ. ಜೊತೆಗೆ ಹಳೆಯ ವೈಭೋಗಗಳೂ ಇಲ್ಲ. ಇಂದು ಏನಿದ್ದರು ಕೃತಕ ಬದುಕು, ವ್ಯವಹಾರಿಕ ಜೀವನ.
ಒಬ್ಬ ಕವಿಯು ಇದ್ದದ್ದನ್ನು ಇದ್ದಂಗೆ ಹೇಳುವುದಷ್ಟೇ ಅವನ ಕೆಲಸ. ಮುಂದಿನದು ಸಮಾಜಕ್ಕೆ ಬಿಟ್ಟದ್ದು. ಅದರ ತಪ್ಪು-ಒಪ್ಪು, ಸ್ವೀಕಾರವೋ ಅಥವಾ ಅಸ್ವೀಕಾರವೋ ಸಮಾಜಕ್ಕೆ ಬಿಟ್ಟದ್ದು. ತನಗೆ ಕಂಡದ್ದನ್ನು ಕಂಡಹಾಗೆ ಹೇಳುವುದಷ್ಟೇ ಅವನ ಕೆಲಸ. ಕವನ, ಕಥೆ, ಕಾದಂಬರಿ ಮತ್ಯಾವುದೋ ಮಾಧ್ಯಮದ ಮೂಲಕ ಹೇಳುತ್ತಾನಷ್ಟೇ. “ಕವನ ಬರೆಯುತ್ತೇನೆ ನಾನೀಗ ವಾದ ಮಾಡುವುದಿಲ್ಲ, ಕಾಗೆ ಬಿಳಿಯನ್ನುವವರಿಗೆ ನನ್ನ ಬಳಿ ಸಾಕ್ಷಿ ಇಲ್ಲ, ಮಲಗಿದಂತೆ ಮಲಗಿದವರ ಅಂಗೈ ಹುಣ್ಣಿಗೆ ಎಲ್ಲಿಂದ ತರಲಿ ಕನ್ನಡಿಯ, ಸಿದ್ಧ ಉತ್ತರದಿ ಹೊಸ ಗಾಳಿ ಸೇವಿಸೆನೆಂದು ಶಪತಗೈದವರಿಗೆ ನಾನೀಗ ವಾದ ಮಾಡುವುದಿಲ್ಲ” ಎಂದು ತನ್ನ ಜವಾಬ್ಧಾರಿಯನ್ನು ನಿಭಾಯಿಸುತ್ತಾರೆ. ಮತ್ತು ಅಂತಹವರ ಜೊತೆ ವಾದ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಬಹುತೇಕರು ಬರೆದ ಕವನ ಸಂಕಲನ ಅವಲೋಕಿಸಿದಾಗ ಅದರಲ್ಲಿ ಪ್ರೀತಿ-ಪ್ರೇಮಗಳು ಇಣುಕಿರುತ್ತವೆೆ. ಪ್ರೀತಿ ಇಲ್ಲದೇ ಏನನ್ನೂ ಗೆಲ್ಲಲಾಗುವುದಿಲ್ಲ; ದ್ವೇಷವನ್ನೂ ಸಹ ಎಂಬ ಮಾತಿದೆ. ಹೀಗಾಗಿ ಇರಬಹುದೇನೋ ತಮ್ಮ ಸಾಹಿತ್ಯದಲ್ಲಿ ಅನೇಕರು ಪ್ರೀತಿ-ಪ್ರೇಮಗಳ ಕುರಿತು ಮುಕ್ತ ಮನಸಿನಿಂದ ಮಾತನಾಡುತ್ತಾರೆ. ಅದರಲ್ಲಿ ಕವಿಗಳ ಪಾಲು ಹೆಚ್ಚಿದೆ. ಇಲ್ಲಿ ಕವಿಯಿತ್ರಿ ಶಿಲ್ಪಾ ಮ್ಯಾಗೇರಿಯವರು ಅದನ್ನೇ ಮಾಡಿದ್ದಾರೆ. “ಪ್ರೇಮವೆಂದರೆ ನನಗೂ ಗೊತ್ತಿಲ್ಲ, ಇರಬಹುದು ಹೃದಯದಿಂದ ಹೃದಯಕ್ಕೆ ಎಳೆದ ಸರಳ ರೇಖೆ” ಎಂದು ಪ್ರೇಮದ ಗುರುತಿನ ಅರಿವು ತನಗೆ ಅಷ್ಟಾಗಿ ಇಲ್ಲ ಎಂದಂತೆ ಕಾಣುತ್ತದೆ. ಪ್ರೀತಿ ಎಂದರೆ ಕೇವಲ ಕಾಮನೆ ಎನ್ನುವುದು ಅನೇಕರ ತಪ್ಪು ಕಲ್ಪನೆಗಳಿಗೆ ಇಲ್ಲಿ ಉತ್ತರವಿದ್ದಂತೆ ಕಾಣುತ್ತದೆ. “ರೆಕ್ಕೆಯ ಜೊತೆಗೆ ಹುಟ್ಟಿರುವ ಹೆಳವಿ ನಾನು, ಅವನೇ ಕಲಿಸಿದ ಹಾರಲು” ಎಂಬ ಮಾತುಗಳನ್ನು ಗಮನಿಸಿದಾಗ ಪ್ರೀತಿ ಏನನ್ನು ಕಲಿಸುತ್ತದೆ ಎಂಬ ಅರಿವು ಇಲ್ಲಿ ವ್ಯಕ್ತವಾಗುತ್ತದೆ. ಅವಳ ಬದುಕಿನ ಬಣ್ಣ ಅವನೇ, ಅದಕ್ಕಾಗಿ “ಬದುಕಿಗೂ ತುಸು ರಂಗು ಬಳಿ ಮಾರಾಯ, ಕಪ್ಪು ಬಿಳುಪಿನ ಬದುಕು ರೋಸಿ ಹೋಗಿದೆ, ನಾಳೆಗಾದರೂ ಕಣ್ಣು ತೆರೆಯಲಿ” ಎಂದು ಪ್ರಿಯಕರನಲ್ಲಿ ಬೇಡುವ ಮಾತುಗಳು ತುಸು ಹೆಚ್ಚೆನಿಸಿದರೂ ಪ್ರೀತಿಯಲ್ಲಿ ಬೇಡುವುದು ಸಹಜವೇ ಆಗಿದೆ.
ಇಲ್ಲಿ ಶಿಲ್ಪಾ ಮ್ಯಾಗೇರಿಯವರು ಪುರಾಣದ ವ್ಯಕ್ತಿಗಳ ಮೂಲಕ ಇಂದಿನ ವಾಸ್ತವಿಕತೆಯನ್ನು ಸಮೀಕರಿಸಿ ಬರೆದಿದ್ದಾರೆ. ರಾಮ, ಸೀತೆ, ಊರ್ಮಿಳೆ, ಶಬರಿ, ರಾಧೆ, ಕೃಷ್ಣ, ಗಾಂಧಾರಿ, ಯಶೋಧರೆ, ಅಮೃತಮತಿ ಮುಂತಾದವರು ಅನುಭವಿಸಿದ ನೋವು, ಯಾತನೆ, ತಲ್ಲಣಗಳು, ಅವರ ಕಾತುರಗಳು ಇಂದಿನ ಯುಗದಲ್ಲಿಯೂ ರೂಪು ಬದಲಿಸಿಕೊಂಡು ಕಾಡುತ್ತಿವೆ ಎಂಬ ಸಂಗತಿಗಳನ್ನು ಕವನಗಳಲ್ಲಿ ಉಪಮೇಯ ಮತ್ತು ಹೋಲಿಕೆಗಳ ಮೂಲಕ ಚಿತ್ರಿಸಿದ್ದಾರೆ. ನಾನು ಗಮನಿಸಿದಂತೆ ಒಂದೇ ಸಂಕಲನದಲ್ಲಿ ಇಷ್ಟು ಪುರಾಣ ವ್ಯಕ್ತಿಗಳ ಉಲ್ಲೇಖಗಳು ಬಂದಿರುವುದು ಬಹಳ ಅಪರೂಪ.
ಒಟ್ಟಿನಲ್ಲಿ ಶ್ರೀಮತಿ ಶಿಲ್ಪಾ ಮ್ಯಾಗೇರಿಯವರ ‘ಚೈತ್ರದ ಚರಮಗೀತೆ’ ಸಂಕಲನವು ಬಹಳ ಮುಖ್ಯವಾಗಿ ಮಹಿಳಾ ತಲ್ಲಣಗಳ ಜೊತೆ-ಜೊತೆಗೆ ಕವಿತೆ ಹೇಗಿರಬೇಕೆಂಬ ನಿಯಮ, ಬದುಕಬೇಕೆಂಬ ಹಂಬಲದ ಮಾತುಗಳು, ಪ್ರೀತಿಯ ಅಪ್ಪುಗೆಗಳು, ಮರೆತು ಹೋದ ವೈಭವಗಳ ನೆನಕೆ, ಕೊರೋನಾ ಕರಾಳ ನೆನಪುಗಳು ಎಲ್ಲವೂ ಇಲ್ಲಿವೆ.
ಸಂಕಲನದ ಆರಂಭದಲ್ಲಿ ಸವದತ್ತಿಯ ಕನ್ನಡ ಪ್ರಾಧ್ಯಾಪಕರು ಹಾಗೂ ವಿಮರ್ಶಕರೂ ಆದಂತಹ ಡಾ.ವೈ.ಎಂ.ಯಾಕೊಳ್ಳಿ ಹಾಗೂ ಹಾಸನದ ಸಾಹಿತಿಗಳಾದ ಎನ್.ಎಲ್.ಚನ್ನೇಗೌಡರವರ ವಿಮರ್ಶನದ ಮಾತಗಳು ಅತ್ಯದ್ಭುತವಾಗಿವೆ. ಅವರ ಬರಹವನ್ನೊಮ್ಮೆ ಓದಿದರೆ ಸಾಕು ಇಡೀ ಸಂಕಲನವೇ ಅರ್ಥವಾಗುತ್ತದೆ. ಈ ಕೃತಿಗೆ ಬೆನ್ನುಡಿಯನ್ನು ಹೆಸರಾಂತ ಮಹಿಳಾ ಲೇಖಕಿ ಹಾಗೂ ಪತ್ರಕರ್ತೆ ಮಂಜುಳಾ ಕಿರುಗಾವಲು ಅವರು ಬರೆದಿರುವುದು ಸೂಕ್ತವಾಗಿದೆ. ಈ ಕೃತಿಯನ್ನು ಕೊಪ್ಪಳದ ಪತ್ರಕರ್ತ ಹಾಗೂ ಹಿರಿಯ ಸಾಹಿತಿ ಜಿ.ಎಸ್.ಗೋನಾಳರವರು ತಮ್ಮ ವಿಶಾಲ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಹೀಗಾಗಿ ಈ ಸಂಕಲನಕ್ಕೆ ಹೆಚ್ಚಿನ ಅರ್ಥ ಬಂದಿದೆ ಎನ್ನುವುದು ನನ್ನ ಅಭಿಪ್ರಾಯ.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊಬೈಲ್: 9448570340
E-mail;- [email protected]
Comments are closed.