ಮೋದಿಜಿಯವರ ಕೈ ಬಲಪಡಿಸೋಣ- ಡಾ ಬಸವರಾಜ ಕ್ಯಾವಟರ್
‘
ಕೊಪ್ಪಳ : ಭಾರತ ವಿಶ್ವಗುರುವಾಗಬೇಕು. ದೇಶ ಸುಭದ್ರವಾಗಿರಬೇಕು ಎಂದು ನಮ್ಮೆಲ್ಲರ ಧೀಮಂತ ನಾಯಕ ಹಾಗೂ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಕನಸು ಕಂಡಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಕಟಿಬದ್ಧರಾಗಿ ದುಡಿಯುಬೇಕು,” ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಹೇಳಿದರು.
ನಗರದ ಮಧುಶ್ರೀ ಗಾರ್ಡನ್ ನಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿಯ ನಗರ ಮತ್ತು ಗ್ರಾಮೀಣ ಮಂಡಲದ ಆಶ್ರಯದಲ್ಲಿ ಬೂತ್ ವಿಜಯ ಅಭಿಯಾನ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
“ಕಳೆದು ಹತ್ತು ವರ್ಷಗಳಲ್ಲಿ ಭಾರತ ಎಲ್ಲಾ ರಂಗಗಳಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಅದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಮೂಲಭೂತ ಸೌಕರ್ಯ ಕ್ಷೇತ್ರಗಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಗತಿ ಸಾಧಿಸಲಾಗಿದೆ. ಹೆದ್ದಾರಿ ಹಾಗೂ ರೇಲ್ವೆ ವಲಯಗಳಲ್ಲಿ ಅನೇಕ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆಗೊಂಡಿವೆ. ವಿಕಸಿತ ಭಾರತಕ್ಕಾಗಿ ನಾವೆಲ್ಲರೂ ಹಗಲಿರುಳು ದುಡಿಯಬೇಕಿದೆ” ಎಂದರು.
“ನನ್ನ ತಂದೆ ಸಮಾನರಾದ ಸಂಗಣ್ಣ ಕರಡಿಯವರು ಸಂಸದರಾಗಿ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಪ್ರವಾಸೋದ್ಯಮ, ಆರೋಗ್ಯ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಗಳ ಬೆಳವಣಿಗೆಗಾಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ತಂದ ಶ್ರೇಯಸ್ಸು ಅವರದ್ದು. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ನಾನು ಮುನ್ನಡೆಯುತ್ತೇನೆ,” ಎಂದರು.
“ಕುಷ್ಟಗಿಯ ವಕೀಲರಾದ ಕೆ ಶರಣಪ್ಪನವರ ಮಗನಾಗಿ ಜನಿಸಿದ್ದು ನನ್ನ ಪುಣ್ಯ. ನನ್ನ ತಂದೆಯವರನ್ನು ತಾವೆಲ್ಲ ಬಲ್ಲಿರಿ. ಸರಳ ಹಾಗೂ ಸಜ್ಜನಿಕೆಯ ಮೂರ್ತಿ ಎಂದೇ ಅವರನ್ನು ತಾವು ಗುರುತಿಸುತ್ತೀರಿ. ತಮ್ಮ ಆಶೀರ್ವಾದದಿಂದ ಅವರು ಒಂದು ಸಲ ಕುಷ್ಟಗಿ ಮತಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಮತದಾರರು ಸ್ಮರಿಸುತ್ತಾರೆ. ನನ್ನ ತಂದೆಯವರ ಬದುಕು ಹಾಗೂ ಆದರ್ಶಗಳೇ ನನಗೆ ದಾರಿದೀಪ. ವೈದ್ಯಕೀಯ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಲು ಅವಕಾಶಗಳಿದ್ದವು. ಆದರೇ ನನ್ನೂರು, ನನ್ನ ಜನ ಹಾಗೂ ನನ್ನ ದೇಶ ನನಗೆ ಮೊದಲ ಆದ್ಯತೆಯಾಗಿತ್ತು. ಕೊಪ್ಪಳದಂತಹ ಹಿಂದುಳಿದ ಪ್ರದೇಶದಲ್ಲಿ ಆಧುನಿಕ ಸೌಲಭ್ಯವುಳ್ಳ ಆಸ್ಪ್ರತ್ರೆಯಾದರೆ ನನ್ನ ಜನಕ್ಕೆ ಅನುಕೂಲವಾದೀತು ಎಂಬ ಕನಸನ್ನು ಹೊತ್ತು ಒಂದು ಆಸ್ಪತ್ರೆಯನ್ನು ಕಟ್ಟಿದೆ. ನಾನು ರಾಜಕಾರಣದಲ್ಲಿರದಿದ್ದರೂ ನಿರಂತರವಾಗಿ ಜನ ಸಂಪರ್ಕದಲ್ಲಿದ್ದೇನೆ,” ಎಂದರು.
“ಜನಸಂಖ್ಯೆ ಮತ್ತು ವಾಹನ ನೋಡಿದರೆ ಗೆಲುವು ಖಚಿತವಾಗಿದೆ. ಆದರೆ ಗೆಲುವಿನ ಅಂತರ ನಿರ್ಣಯ ಮಾಡಲು ಕೂಡಿದ್ದೇವೆ. ಇದೊಂದು ರಾಷ್ಟ್ರದ ಚುನಾವಣೆ. ರಾಜ್ಯದ ಚುನಾವಣೆಯಲ್ಲ. ರಾಜ್ಯದ ಚುನಾವಣೆ ಆಗಿದ್ದರೆ, ಒಂದೆರಡು ರಾಜ್ಯಗಳು ಸೋಲಲಿ ಎಂದು ಬಿಡಬಹುದಿತ್ತು. ಲೋಕಸಭಾ ಚುನಾವಣೆಯು ರಾಷ್ಟ್ರದ ಭವಿಷ್ಯದ ಚುನಾವಣೆಯಾಗಿದೆ. ಹಾಗಾಗಿ ರಾಷ್ಟ್ರ ಬಲಿಷ್ಠ ಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ಹಾಕಬೇಕು ಎಂದು ರಾಜ್ಯಸಭಾ ಸದಸ್ಯ ಮತ್ತು ಲೋಕಸಭಾ ಕ್ಷೇತ್ರದ ಉಸ್ತುವಾರಿ ನಾರಾಯಣಸಾ ಬಾಂಡಗೆ ಹೇಳಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಷ್ಟ್ರ ಬಲಿಷ್ಠ ಗೊಳಿಸಲು ಮೋದಿಗೆ ಮತ್ತು ಬಸವರಾಜ ಕ್ಯಾವಟರ್ ಗೆ ಮತ ಹಾಕಬೇಕು. ಮೋದಿಗಾಗಿ ಕೆಲಸ ಮಾಡಬೇಕು ಎಂದರು.
ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ ೬ ವರ್ಷದ ನಂತರ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವುದು ಸಂತಸವಾಗಿದೆ ಎಂದರು
ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ೧೩,೫೦೦ ಲೀಡ್ ಕೊಟ್ಟಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಜೆಡಿಎಸ್ ಸೇರ್ಪಡೆಯಾಗಿ, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆನು. ಇದರಿಂದಾಗಿ ಮತ ವಿಭಜನೆ ಆಗಿರುವುದು ಸತ್ಯ. ಇದನ್ನು ಒಂದು ಕಡೆ ಕ್ರೋಢಿಕರಣ ಆಗಬೇಕಿದೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮತ ಸೇರಿ ಲಕ್ಷಕ್ಕೂ ಹೆಚ್ಚು ಮತಗಳಾಗುತ್ತವೆ. ಚುನಾವಣೆ ಒಂದು ತಿಂಗಳ ಬೂತ್ ಮಟ್ಟದ ಕಾರ್ಯಕರ್ತರು ಒಂದಾಗಿ ಹೋಗಬೇಕು ಎಂದರು.
ಲೋಕಸಭಾ ಸಂಚಾಲಕ ಗಿರೀಗೌಡ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ವಿಧಾನಸಭಾ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ಸಂಸದ ಸಂಗಣ್ಣ ಕರಡಿ, ಎಮ್ ಎಲ್ ಸಿ ಹೇಮಲತಾ ನಾಯಕ್, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್, ಮಾಜಿ ಸಚಿವ ಹಾಲಪ್ಪ ಆಚಾರ್, ಅಲ್ಕೋಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ, ಶಿವರಾಮೇಗೌಡ, ಮಾಜಿ ಶಾಸಕ ಬಸವರಾಜ ದಡೇಸಗೂರು, ಪರಣ್ಣ ಮುನವಳ್ಳಿ, ಮುಖಂಡರಾದ ಕೆ.ಜಿ.ಕುಲಕರ್ಣಿ, ಬೂಸರನ ಮಠ ವಕೀಲರು ಗುರುಮೂರ್ತಿಸ್ವಾಮಿ ಅಳವಂಡಿ, ಮಹಾಂತೇಶ ಪಾಟೀಲ್ ಮೈನಳ್ಳಿ ಇದ್ದರು.
Comments are closed.