ಭಕ್ತರ ಮನೆ-ಮನದಲ್ಲಿ ನೆಲೆಸಿದವರು ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರು
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಬದುಕು ಸವೆಸಿದ, ನಮ್ಮೆಲ್ಲರ ಆರಾಧ್ಯ ದೈವರಾಗಿ ಎಲ್ಲರ ಮನೆ-ಮನದಲ್ಲಿ ನೆಲೆಸಿದವರು ಸಂಸ್ಥಾನ ಶ್ರೀ ಗವಿಮಠದ ೧೭ನೇ ಪೀಠಾಧಿಪತಿಗಳಾದ ಪೂಜ್ಯ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳವರು. ಅವರ ನಡೆ-ನುಡಿ ಮಾರ್ಗದರ್ಶನ ನಮಗೆ ಸದಾ ಸ್ಮರಣೀಯ. ಪೂಜ್ಯರ ೨೧ನೇ ಪುಣ್ಯ ಸ್ಮರಣೆ (೦೩.೦೪.೨೦೨೪) ನಿಮಿತ್ಯ ಲೇಖನದಿಂದ ಭಕ್ತಿ ನಮನಗಳು.
ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಪರಂಪರೆ:
ಕೊಪ್ಪಳPಕ್ಕೆ ಅದ್ಭುತ ಇತಿಹಾಸವಿದೆ. ಕೊಪ್ಪಳದ ಐತಿಹಾಸಿಕ ಪರಂಪರೆಯಲ್ಲಿ ಸಂಸ್ಥಾನ ಶ್ರೀ ಗವಿಮಠಕ್ಕೆ ಬಹಳ ಮಹತ್ವವಿದೆ. ಸಂಸ್ಥಾನ ಶ್ರೀ ಗವಿಮಠ ವಿರಕ್ತ ಮಠವಾಗಿದ್ದು, ನಾಡಿನ ಶ್ರೇಷ್ಠ ಮಠಗಳ ಸ್ಥಾನದಲ್ಲಿ ಎದ್ದು ಕಾಣುವ ಮಠವಾಗಿದೆ. ಅನ್ನ, ಜ್ಞಾನ, ಆರೋಗ್ಯ, ಆಶ್ರಯ ಚಥುರ್ವಿದ ದಾಸೋಹ ಕೇಂದ್ರವಾಗಿದೆ. ಶ್ರೀಮಠದ ಪ್ರಸ್ತುತ ಕತೃ ಗದ್ದುಗೆಯ ಶ್ರೀ ಗವಿಸಿದ್ಧೇಶ್ವರರು ಗುರುವನ್ನು ಮೀರಿಸಿ ಗುರು ಭಕ್ತಿಯಲ್ಲಿ ಮಿಂದ ಮಹಾಮಹಿಮರು. ೧೬ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀಮ.ನಿ.ಪ್ರ.ಜ. ಮರಿಶಾಂತವೀರ ಮಹಾಶಿವಯೋಗಿಗಳು ಆಯುರ್ವೇದ ಶಾಸ್ತ್ರದ ಪಂಡಿತರು ಹಾಗೂ ಶ್ರೀ ಮ.ನಿ.ಪ್ರ.ಜ.ಶಿವಶಾಂತವೀರ ಮಹಾಶಿವಯೋಗಿಗಳು ಶ್ರೇಷ್ಠ ಶಿಕ್ಷಣ ಪ್ರೇಮಿಗಳು, ಕವಿಗಳು ಆಗಿದ್ದರು. ಪ್ರಸ್ತುತ ಗವಿಮಠ ಸಂಸ್ಥಾನದ ೧೮ನೇ ಪೀಠಾಧಿಪತಿಗಳಾದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದೂರಷೃಷ್ಠಿ ಉಳ್ಳವರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಜನತೆಯ ಏಳ್ಗೆಯಲ್ಲಿ ಕೈ ಜೋಡಿಸಿದ್ದಾರೆ.
ಲಿಂ. ಶಿವಶಾಂತವೀರ ಮಹಾಶಿವಯೋಗಿಗಳವರ ಶಿವಜೀವನ
ಶ್ರೀ ಗವಿಮಠ ಮಹಾಸಂಸ್ಥಾನದ ೧೭ನೇ ಪೀಠಾಧಿಪತಿಗಳಾದ ಪೂಜ್ಯ ಶಿವಶಾಂತವೀರ ಮಹಾಶಿವಯೋಗಿಗಳ ಪೂರ್ವಾಶ್ರಮದ ಹೆಸರು ಉಮಾಪತಯ್ಯ, ರೋಣ ತಾಲ್ಲೂಕಿನ ಸೂಡಿಯಲ್ಲಿ ಪ್ರಸಿದ್ಧ ಜೋತಿಷ್ಯಿಗಳಾಗಿದ್ದ ಜುಕ್ತಿ ಹಿರೇಮಠ ಮನೆತನದ ಜಗದೀಶ್ವರಯ್ಯ ಮತ್ತು ಬಸಮ್ಮನವರ ಪುಣ್ಯ ದಂಪತಿಗಳ ಜೇಷ್ಠ ಸುಪುತ್ರರಾಗಿ ದಿನಾಂಕ ೦೭-೦೫-೧೯೩೧ರಲ್ಲಿ ಜನ್ಮ ತಾಳಿದರು. ಪೂಜ್ಯರ ಪ್ರಾರಂಭಿಕ ಶೈಕ್ಷಣಿಕ ಅಭ್ಯಾಸವು ಕೊಪ್ಪಳ ಗವಿಮಠದಿಂದ ಪ್ರಾರಂಭವಾಯಿತು. ನಂತರ ಸೂಡಿಯಲ್ಲಿ, ತಾಯಿಯ ತವರೂರಾದ ಚಳಗೇರಿಯಲ್ಲೂ ಪ್ರಾಥಮಿಕ ಶಿಕ್ಷಣ ಪಡೆದರು. ತಮ್ಮ ಮನೆತನದ ದಿವ್ಯ ಚಾರಿತ್ರ್ಯ, ಸರಳ ಜೀವನ ಪೂಜ್ಯರಲ್ಲಿ ಸಂಪೂರ್ಣ ಮನೆ ಮಾಡಿಕೊಂಡಿದ್ದವು.
ಮುದ್ದಾದ ಮುಖದ ಉಮಾಪತಯ್ಯನನ್ನು ವಾತ್ಸಲ್ಯದಿಂದ ಬೆಳೆಸಿದ ಮಹಾತಾಯಿ ಬಸಮ್ಮನವರು ಆತನ ೫ನೇ ವರ್ಷವಿರುವಾಗಲೇ ಶಿವಾಧೀನರಾದರು. ಊರಿನ ಹಿರಿಯರು ಜಗದೀಶಯ್ಯನವರಿಗೆ ಎರಡನೇಯ ಮದುವೆ ಮಾಡಿ ಮಲತಾಯಿ ಸಾವಿತ್ರಮ್ಮನಿಗೆ ಉಮಾಪತಯ್ಯನ ಯೋಗಕ್ಷೇಮ ಒಪ್ಪಿಸಿದರು. ನೀರಿಗಿಂತ ರಕ್ತ ದಪ್ಪ ಎನ್ನುವಂತೆ ರಕ್ತ ಸಂಬಂಧಿಯಾದ ಸಾವಿತ್ರಮ್ಮ ಬಸಮ್ಮ ತಾಯಿಯವರ ಸ್ವಂತ ಸಹೋದರಿಯಾಗಿದ್ದರಿಂದ ಸಹಜವಾಗಿಯೇ ತಾಯಿಯ ವಾತ್ಸಲ್ಯ ಬೆಳೆದು ಬಂತು. ನಂತರ ಸಾವಿತ್ರಮ್ಮರಿಗೂ ಮೂರು ಜನ ಗಂಡುಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳು ಜನಿಸಿದರೂ ಸಾವಿತ್ರಮ್ಮನವರಿಗೆ ಉಮಾಪತಯ್ಯನವರ ಮೇಲಿನ ಪ್ರೀತಿ, ವಾತ್ಸಲ್ಯ ಕಡಿಮೆಯಾಗಲಿಲ್ಲ.
ಉಮಾಪತಯ್ಯನವರ ಶಿಕ್ಷಣ ಹಾಗೂ ಗವಿಮಠದ ನಂಟು
ಉಮಾಪತಯ್ಯನವರ ಶಿಕ್ಷಣ ಸಂಸ್ಥಾನ ಶ್ರೀ ಗವಿಮಠದಲ್ಲಿ ನಡೆಯಿತು. ವೈದಿಕ ಕನ್ನಡ ಸಾಹಿತ್ಯ ಸಂಸ್ಕೃತ ಹಾಗೂ ಮಠದ ಪರಂಪರಾಗತವಾಗಿ ಬಂದ ಆಯುರ್ವೇದ ಅಭ್ಯಾಸದಲ್ಲಿ ಒಳ್ಳೆಯ ತರಬೇತಿ ಪಡೆದರು. ತಮ್ಮ ೧೫ನೇ ವಯಸ್ಸಿನಲ್ಲಿ ಆಗಿನ ಮುಲ್ಕಿ ಪರೀಕ್ಷೆಯನ್ನು (ಧಾರವಾಡದಲ್ಲಿ ೭ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎನ್ನುತ್ತಿದ್ದರು) ೧೯೪೬ರಲ್ಲಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ನಂತರ ೧೯೪೭-೪೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಯನ್ನು ಪಡೆದು ಉತ್ತಮ ದರ್ಜೆಯಲ್ಲಿ ಪಾಸಾದರು. ೧೯೫೧ರಲ್ಲಿ ಹಿಂದಿನ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಲಿಂ. ಮರಿಶಾಂತವೀರ ಸ್ವಾಮಿಗಳವರು ಕೊಪ್ಪಳದಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಿದರು. ಅಲ್ಲಿ ಉಮಾಪತಯ್ಯನವರನ್ನು ಶಿಕ್ಷಕರಾಗಿ ನೇಮಿಸಿದರು. ೧೯೫೮ರಲ್ಲಿ ಪೂಜ್ಯ ಮರಿಶಾಂತವೀರ ಸ್ವಾಮಿಗಳು ವೃದ್ಧಾಪ್ಯದಿಂದ ತಮ್ಮ ಉತ್ತರಾಧಿಕಾರಿಗಳನ್ನು ಹುಡುಕಾಡಿದರು. ಚುರುಕು ಬುದ್ದಿಯವರು ಲಿಂಗಾನಿಷ್ಠರು, ಸಾತ್ವಿಕ ವ್ಯಕ್ತಿತ್ವವಿರುವ ಮತ್ತು ತಮ್ಮ ಶ್ರೀ ಗವಿಮಠದ ಪೂರ್ವಾಶ್ರಮದ ಹಿನ್ನಲೆ ಅರಿತ ಉಮಾಪತಯ್ಯ ಮಾಸ್ತರ ಅವರನ್ನೇ ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಬಹುದೆಂದು ಎಲ್ಲರೂ ಒಕ್ಕೊರಲದಿಂದ ಒಮ್ಮತವ ಸೂಚಿಸಿದರು. ಪರಮಪೂಜ್ಯ ಮರಿಶಾಂತವೀರ ಸ್ವಾಮೀಜಿಯವರ ಮೇಲೆ ಅಪಾರವಾದ ಭಕ್ತಿ ಗೌರವ ಇರುವ ಉಮಾಪತಯ್ಯನವರು ಪೂಜ್ಯ ಮರಿಶಾಂತವೀರ ಸ್ವಾಮೀಜಿಯವರ ಅಪ್ಪಣೆಯನ್ನು ಒಪ್ಪಿಕೊಂಡು ಶಿಕ್ಷಕ ನೌಕರಿಗೆ ರಾಜೀನಾಮೆ ನೀಡಿ ೧೯೫೮ರಲ್ಲಿ ಗವಿಮಠದ ೧೭ನೇ ಪೀಠಾಧಿಪತಿಗಳೆಂದು ನೇಮಕವಾಗಿ ಮಠದ ಜವಬ್ದಾರಿ ವಹಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಶ್ರೀ ಮಠದ ಎಲ್ಲಾ ಕೆಲಸ ಕಾರ್ಯಗಳು ಇವರೇ ಮಾಡುತ್ತಾ, ಗುರುಗಳ ಸೇವೆಯಲ್ಲಿ ನಿರತರಾದರು.
ಕ್ರಿ.ಶ. ೧೮೮೮ ಪರಭಾವನಾಮ ಸಂವತ್ಸರದ ವೈಶಾಕ ಶುದ್ಧ ೭(ಸಪ್ತಮಿ) ಬುಧವಾರ ದಿನಾಂಕ ೨೭-೦೪-೧೯೬೬ನೇ ಇಸವಿಯಂದು ಷ.ಬ್ರ. ಉಮಾಪತಯ್ಯ ಶಿವಾಚಾರ್ಯರಿಗೆ ಶ್ರೀ ಮ.ನಿ.ಪ್ರ.ಜ. ಶಿವಶಾಂತವೀರ ಮಹಾಸ್ವಾಮಿಗಳೆಂಬ ಅಭಿದಾನವಿತ್ತು. ನಿರಂಜನ ಪಟ್ಟಾಧಿಕಾರವನ್ನು ದಯಪಾಲಿಸಿ ಸ್ವತಃ ಪರಮಪೂಜ್ಯ ಮರಿಶಾಂತವೀರ ಮಹಾಸ್ವಾಮಿಗಳವರೆ ಮಂತ್ರೋಪದೇಶಗೈದು ಪಟ್ಟಾಧಿಕಾರ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ನೆರವೇರಿಸಿದರು. ದಿನಾಂಕ ೦೧-೦೭-೧೯೬೭ರಂದು ಜ. ಮರಿಶಾಂತವೀರ ಮಹಾಸ್ವಾಮಿಗಳು ಅನಾರೋಗ್ಯದಿಂದ ದೈವಾದೀನರಾದರು.
ಜಗದ್ಗುರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳವರ ಪುಣ್ಯ ಕಾರ್ಯಗಳು
ಶ್ರೀಮಠದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಸಂಘಟನೆ ಮಾಡಿ ೨೭-೧೦-೧೯೬೬ರಂದು ಶ್ರೀಮಠದಲ್ಲಿ ಶ್ರೀ ಗವಿಸಿದ್ಧೇಶ್ವರ ಕೃಪಾ ಪೋಷಿತ ವಿದ್ಯಾರ್ಥಿ ಬಳಗ ಸ್ಥಾಪಿಸಿದರು.
ಪರಮಪೂಜ್ಯ ಲಿಂ. ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಗೆ ಸುಂದರವಾದ ಮಂದಿರ ಕಟ್ಟಿಸಿ ಅದರ ಮೇಲೆ ಪಂಚಲೋಹದ ಪಂಚ ಕಳಸಾರೋಹಣ ಮಾಡಿಸಿದರು.
ಆರಾದ್ಯ ದೈವ ಶ್ರೀ ಗವಿಸಿದ್ಧೇಶ್ವರನ ಕತೃ ಗದ್ದುಗೆಯನ್ನು ನವೀಕರಣಗೊಳಿಸಿದರು.
ಶಿವಾನುಭವ ಮಂಟಪವನ್ನು ನಿರ್ಮಿಸಿ ಪ್ರತಿ ಸೋಮುವಾರ ಶಿವಾನುಭವ ಕಾರ್ಯಕ್ರಮ ಏರ್ಪಡಿಸಿ ಭಕ್ತರಲ್ಲಿ ಸಾತ್ವಿಕ ವಿಚಾರ ಬಿತ್ತಿದರು.
ಕತೃ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಯ ನಿತ್ಯ ರುದ್ರಾಭಿಷೇಕ ನಡೆಯುವಂತೆ ಮಾಡಿದರು.
ಶ್ರೀಮಠಕ್ಕೆ ಅಂಟುಕೊಂಡಿರುವ ಪಾರ್ಶ್ವ ಭಾಗದಲ್ಲಿರುವ ಕೆರೆಯ ಹೂಳನ್ನು ಸ್ವಚ್ಛಗೊಳಿಸಿ ಸುಂದರ ತಾಣವಾಗಿಸಿದರು.
ಸಂಸ್ಥಾನ ಶ್ರೀ ಗವಿಮಠವು ತನ್ನ ಆಯುರ್ವೆಧ ಚಿಕಿತ್ಸೆಗೆ ಪ್ರಾಚೀನ ಕಾಲದಿಂದಲೂ ಪ್ರಸಿದ್ದಿಯನ್ನು ಹೊಂದಿದೆ. ೧೬ನೇ ಪೀಠಾಧಿಪತಿಗಳು ಆದ ಪೂಜ್ಯ ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಆಯುರ್ವೇದದಲ್ಲಿ ಅದ್ವಿತೀಯ ಪಂಡಿತರಾದ ಕಾರಣ ಈ ಪರಂಪರೆ ನಶಿಸಿ ಹೋಗಬಾರದೆಂಬ ಕಾರಣದಿಂದ ಆಯುರ್ವೇದ ಆಸ್ಪತ್ರೆ ಹಾಗೂ ಮಹಾವಿದ್ಯಾಲಯವನ್ನು ಸ್ಥಾಪಿಸಿದರು.
ಕುಕನೂರಿನ ಪ್ರೌಢ ಶಾಲೆಗೆ ಆಸಕ್ತಿ ವಹಿಸಿ ಹೊಸ ಕಟ್ಟಡ ವಹಿಸಿಕೊಟ್ಟರು.
ಪೂಜ್ಯ ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳವರ ಸಾಹಿತ್ಯ ಸೇವೆ
ಪೂಜ್ಯ ಲಿಂಗೈಕ್ಯ ಶಿವಶಾಂತವೀರ ಮಹಾಸ್ವಾಮಿಗಳವರು ಉತ್ತಮ ಕವಿಋಷಿಗಳೂ, ಮಹಾ ಪಂಡಿತರು, ವೈದ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ಆದ್ಯಾತ್ಮಿಗಳಾಗಿದ್ದಂತೆ ಕವಿಗಳೂ ಲೇಖಕರು ಆಗಿದ್ದಾರೆ. ಅಲ್ಪ ಬದುಕಿದರೂ ಕಲ್ಪಿಸುವಂತೆ, ಆರಾಧಿಸುವಂತೆ ಬದುಕಬೇಕು ಎಂದು ಸಾಹಿತ್ಯ ಕೃತಿ ಬೆರಳೆಣಿಕೆಷ್ಟಾದರೂ ಅತ್ಯಂತ ಮಹತ್ವ ಮತ್ತು ಮೌಲಿಕ ಕೃತಿಗಳನ್ನು ರಚಿಸಿದ್ದು ಪೂಜ್ಯರ ಸಾಹಿತ್ಯ ಸೇವೆಯ ವಿಶೇಷತೆ. ಪೂಜ್ಯರು ರಚಿಸಿದ ಗವಿಸಿದ್ಧೇಶ್ವರ ಸುಪ್ರಬಾತವು ಅತ್ಯುತ್ತಮ ಕೃತಿಯಾಗಿದೆ. ನಕ್ಷತ್ರ ಮಾಲಿಕೆಯಂತೆ ೨೭ ಚೌಪದಿಗಳಲ್ಲಿ ಕತೃ ಗವಿಸಿದ್ಧೇಶ್ವರರ ಲೀಲೆಗಳನ್ನು ಹಾಡಿ ೨೮ನೇ ನುಡಿಯಲ್ಲಿ ಗುರುಗಳೆಲ್ಲರಿಗೂ ಮಂಗಳ ಹಾಡಿದ್ದಾರೆ. ಜಂಗಮ ಶ್ರೇಷ್ಠನಾದ ಶ್ರೀ ಗವಿಸಿದ್ಧೇಶ್ವರನಲ್ಲಿ ತಮ್ಮ ತಾಪ ಪಾಪ ನೀಗಿ ಸಮುದಾಯವನ್ನು ಪೊರೆಯಲು ಪ್ರಾರ್ಥಿಸಿದ ಪೂಜ್ಯರು ಬಾಗಿ ಬಂದ ಭಕ್ತರ ತೊಂದರೆಗಳನ್ನು ಮಹಾಸ್ವಾಮಿಗಳು ಕಳೆಯುತ್ತಾರೆಂದು ಧ್ಯೇಯವನ್ನು ಮುಂದಿಡುತ್ತಾರೆ.
ಸಕಲ ತಾಪವ ಕಳೆವ ಲಿಂಗಯೋಗಿಯು ನೀನು |
ಅಕಳಂಕ ಜಗದೊಡೆಯೆನಾಗಿರುತ್ತಿರೆ
ನಿಖಿಲವೆ ಜಡಜನರ ಮನ ಮಲಿನವನು ಕಳೆದು ||
ಸಕಲ ನಿಶ್ಕಲ ಜಗವ ರಕ್ಷಿಸುವುದು
ಶಿವಭಾವದ ಪೂಜ್ಯರು ಪರಮಗುರು ಶ್ರೀ ಗವಿಸಿದ್ದೇಶ್ರರರ ಸುಪ್ರಭಾತ ಹಾಡುತ್ತ ಎದ್ದೇಳು ಬೆಳಗಾಯಿತು ಎನ್ನುತ ಪ್ರಥಮದಲ್ಲಿಯೇ ಸ್ಮರಿಸಿದ್ದಾರೆ. ೧೯೬೯ರಲ್ಲಿ ಶ್ರೀ ಗವಿಸಿದ್ಧೇಶ್ವರ ಕೃಪಾಪೋಷಿತ ವಿದ್ಯಾರ್ಥಿ ಬಳಗದ ಪ್ರಕಟನಾ ವಿಭಾಗದ ಮೂಲಕ ಶ್ರೀ ಗವಿಸಿದ್ಧೇಶ್ವರ ಸುಪ್ರಭಾತ ಪ್ರಕಟವಾಯಿತು. ಬಳ್ಳಾರಿಯ ವಿದ್ವಾಂಸರಾದ ಡಾ. ವೈ. ನಾಗೇಶ ಶಾಸ್ತ್ರೀಗಳಿಂದ ರಚಿತವಾದ ಶ್ರೀ ಗವಿಸಿದ್ಧೇಶ್ವರ ಪುರಾಣ ಪ್ರಕಟಗೊಂಡಿತು. ಮೂರನೆಯ ಕೃತಿಯಾಗಿ ಪೂಜ್ಯ ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳವರ ಸ್ಮಾರಕ ಗ್ರಂಥ ‘ಗವಿದೀಪ್ತಿ’ ಎಂಬ ಮೇರು ಕೃತಿ ಪ್ರಕಟಗೊಂಡಿತು. ಕರ್ನಟಕದಾದ್ಯಂತ ಮನೆಮಾತಾದ ಶರಣರತ್ನ ಶ್ರೀ ಮಾರುತೇಶ ಮಾಂಡ್ರೆ ಹೊಳೆಆಲುರು ಕವಿಗಳು ರಚಿಸಿದ ‘ಶ್ರೀ ಗವಿಸಿದ್ಧೇಶ್ವರ ಮಹಾತ್ಮೆ’ ಜಗದ್ಗುರು ಶಿವಶಾಂತವೀರ ಶಿವಯೋಗಿಗಳ ಕೃಪೆಯಿಂದ ರಚಿಸಲ್ಪಟ್ಟಿತು. ಪೂಜ್ಯ ಶ್ರೀ ಶಿವಶಾಂವೀರ ಮಹಾಸ್ವಾಮಿಗಳವರು. ಸರ್ವ ಭಕ್ತರ ಕಲ್ಯಾಣವೇ ತಮ್ಮ ಸಾರ್ಥಕ ಸಿದ್ಧಿ ಎಂಬ ಪವಿತ್ರ ಧ್ಯೇಯವೆಂದು ನಂಬಿದ್ದರು. ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ ಶ್ರೀಗಳವರು ಶ್ರೀಮಠಕ್ಕೆ ಆಗಮಿಸಿದ ಭಕ್ತರಲ್ಲಿ ಶ್ರೀ ಗವಿಸಿದ್ಧೇಶ್ವರನನ್ನು ಕಾಣುತ್ತಿದ್ದರು. ಇಂತಹ ಪವಿತ್ರ ಸಂಸ್ಥಾನದ ಪುಣ್ಯಪುರುಷರು ದಿನಾಂಕ ೨೬-೦೩-೨೦೦೩ರಂದು ಉದಯ ಪೂಜೆಯಲ್ಲಿ ನಿರತರಾದಾಗ ಲಿಂಗದ ಬೆಳಕಿನಲ್ಲಿಯೇ ಬೆಳಕಾಗಿ ಬಯಲಾದರು. ಅಂದು ನಾಡಿನ ಜನಸಾಗರವೇ ಶ್ರೀ ಗವಿಮಠಕ್ಕೆ ಹರಿದು ಬಂದು ಶ್ರೀ ಮಠದ ಆವರಣವೆಲ್ಲ ಸಂಪೂರ್ಣ ಭಕ್ತರಿಂದ ಆವರಿಸಿತು. ಸರ್ವ ಭಕ್ತರ ಕಣ್ಣಂಚಿನಲ್ಲಿ ತಡೆಯಲಾರದೆ ದುಖಃದ ಭಾವದ ಕಂಬನಿ ಜಿನುಗುತ್ತಿತ್ತು. ದುಖಃದ ಮಡುವಿನ ನಡುವೆಯು ಭಕ್ತರು ಭಕ್ತಿಪೂರ್ವಕ ಶೃದ್ಧಾಂಜಲಿಯನ್ನು ಅರ್ಪಿಸಿದರು. ಮಠದ ಶ್ರೇಯೋಬಿವೃದ್ಧಿಗಾಗಿ ಸುಮಾರು ಮೂವತ್ತಾರು ವರ್ಷಗಳ ಕಾಲ ಶ್ರೀಮಠಕ್ಕೆ ಪುಣ್ಯ ಸೇವೆಗೈದ ಶಿವಶಾಂತವೀರ ಶಿವಯೋಗಿಗಳವರ ಕಾಯಕನಿಷ್ಟೆ ಅನುಪಮ ಹಾಗೂ ಆದರ್ಶನೀಯವಾಗಿದೆ. ಪೂಜ್ಯ ಶ್ರೀ ಶಿವಶಾಂವೀರ ಶಿವಯೋಗಿಗಳ ಗದ್ದುಗೆ ಶ್ರೀ ಗವಿಮಠದ ಮೇಲ್ಭಾಗದ ಕೈಲಾಸ ಮಂಟಪಕ್ಕೆ ಹತ್ತಿಕೊಂಡಿರುವ ಜಗದ್ಗುರು ಲಿಂ. ಪೂಜ್ಯ ಮರಿಶಾಂತವೀರ ಮಹಾಸ್ವಾಮಿಗಳವರ ಗದ್ದುಗೆಯ ಪಕ್ಕದಲ್ಲಿ ಇದ್ದು ನಿತ್ಯ ನಿರಂತರ ಪೂಜೆಗೊಳ್ಳುತ್ತಲಿದೆ. ಪ್ರಸ್ತುತ ಪೀಠಾಧಿಪತಿಗಳು ಶ್ರೀ ಮ.ನಿ.ಪ್ರ.ಸ್ವ. ಪೂಜ್ಯ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಗುರು ತೋರಿದ ಪಥದಲ್ಲಿ ಸಾಗಿ ಶ್ರೀಮಠದ ಕೀರ್ತಿಯನ್ನು ನಾಡಿನಾಧ್ಯಂತ ಪಸರಿಸಿದ್ದಾರೆ. ‘ಆಚಾರ್ಯ ಪೂರ್ವರೂಪಂ | ಅಂತೆವಾಸಿ ಉತ್ತರರೂಪಂ ‘ಎನ್ನುವಂತೆ ಆಚಾರ್ಯ ಪೂರ್ವರೂಪ. ಶಿಷ್ಯ ಊತ್ತರರೂಪ . ಇವರೀರ್ವರ ಸಂಧಿ ಆತ್ಮವಿದ್ಯೆ ಎನ್ನುವಹಾಗೆ ಗುರುವಿನ ಸಕಲ ಸಂಕಲ್ಪದೊಂದಿಗೆ ಈ ನಡಿನ ಭಕ್ತರಿಗೆ ವರದಾನವಾಗುವ ಸಾಮಾಜಿಕ, ವೈಚಾರಿಕತೆಯ ಪ್ರಗತಿಪರ ಯೋಜನೆ, ಯೋಚನೆ, ಶ್ರೀ ಮಠದ ಪರಂಪರೆಯನ್ನು ಭಕ್ತರಿಗೆ ನೀಡುತ್ತಾ, ನಾಡಿನ ಏಳ್ಗೆಗೆ ತಮ್ಮ ಬದುಕು ಮೀಸಲಾಗಿಸಿದ್ದಾರೆ.
ಡಾ. ನಾಗರಾಜ ದಂಡೋತಿ
ಸಹಾಯಕ ಪ್ರಾಧ್ಯಾಪಕ
ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ, ಕೊಪ್ಪಳ
ಮೋ ನಂ: ೯೭೪೦೪೭೯೧೨೭
Comments are closed.