ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಗೆ ಡಿಎಚ್‌ಒ ಅವರಿಂದ ಸಲಹೆಗಳು

Get real time updates directly on you device, subscribe now.

ಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿಂದ     ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬಂದ     ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಲಿಂಗರಾಜು ಟಿ. ಅವರು ಸಲಹೆ ನೀಡಿದ್ದಾರೆ.
ಬೇಸಿಗೆ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ/ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು/ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಿರಿ, ಗಾಳಿಯಾಡುವ ಪಾದರಕ್ಷೆ ಧರಿಸಿರಿ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಿ. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ/ಶಾಖ ತರಂಗ (ಹೀಟ್ ವೇವ್)ದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳ್ಳಿ. ಬಿಸಿಲಿನಲ್ಲಿ ಹೊರಗಡೆ ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ.
ಬಿಸಿಲಿನ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಿರಿ. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ/ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಿ. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯಲು ಸಹಾಯ ಮಾಡಿ. ಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!