ಜೆಜೆಎಂ ನಿರ್ವಹಣೆ: ಗುತ್ತಿಗೆದಾರರೊಂದಿಗೆ ಸಿಇಓ ಸಭೆ
15 ದಿನದೊಳಗೆ ರಿಸ್ಟೋರೇಷನ್ ಕಾರ್ಯ ಪೂರ್ಣಗೊಳಿಸಲು ಸೂಚನೆ
ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿರುವ ಕಾಮಗಾರಿಗಳು, ಕೈಗೊಂಡ ಕ್ರಮಗಳ ಕುರಿತು ಜೂನ್ 27ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಅಧ್ಯಕ್ಷತೆಯಲ್ಲಿ ಜಿ.ಪಂ ಕಚೇರಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಇಓ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಸಿಸಿ ರಿಸ್ಟೋರೇಷನ್ ಅನ್ನು ಸರಿಯಾಗಿ ಮಾಡದ ಕಾರಣ, ಸಂಬಂಧಿಸಿದ ಗುತ್ತಿಗೆದಾರರು 15 ದಿನದೊಳಗೆ ಎಲ್ಲಾ ಕಾಮಗಾರಿಗಳ ರಿಸ್ಟೋರೇಷನ್ ಕಾರ್ಯವನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
2020-21ನೇ ಸಾಲಿನ ಜಲ ಜೀವನ್ ಮಷಿನ್ ಯೋಜನೆಯ 513 ಬ್ಯಾಚ್-1 (ವಾರಿಯೇಷನ್ ಕಾಮಗಾರಿಗಳು ಒಳಗೊಂಡಂತೆ) ಕಾಮಗಾರಿಗಳನ್ನು ಮೂರು ತಿಂಗಳೊಳಗಾಗಿ ಹಾಗೂ 2021-22ನೇ ಸಾಲಿನ ಜೆಜೆಎಂ ಯೋಜನೆಯ 209 ಬ್ಯಾಚ್-2 (ವಾರಿಯೇಷನ್ ಕಾಮಗಾರಿಗಳು ಒಳಗೊಂಡಂತೆ) ಕಾಮಗಾರಿಗಳ ಪೈಕಿ ಈಗಾಗಲೇ ಶೇಕಡಾ 60 ಕ್ಕಿಂತ ಹೆಚ್ಚು ಪೂರ್ಣಗೊಂಡಿರುವ ಕಾಮಗಾರಿಗಳನ್ನು ಸಹ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಲು ಹಾಗೂ ಶೇಕಡಾ 60ಕ್ಕಿಂತ ಕಡಿಮೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಾಲ್ಕು ತಿಂಗಳೊಳಗಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರ್ಕಾರದ ಮಾರ್ಗಸೂಚಿ ಅನುಸಾರ ಜೆಜೆಎಂ ಯೋಜನೆಯಡಿ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ನಳ ಸಂಪರ್ಕ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮತ್ತು ಎಲ್ಲಾ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಹಾಗೂ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಿಇಓ ಅವರು ಸೂಚನೆ ನೀಡಿದರು.
ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿರುವ 985 ಶಾಲೆಗಳಿಗೆ ಹಾಗೂ 1493 ಅಂಗನವಾಡಿಗಳಿಗೆ ಸರ್ಕಾರದ ಮಾರ್ಗಸೂಚಿ ಅನುಸಾರ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿರುತ್ತದೆ. ಜಿಲ್ಲೆಯ ವಿವಿಧ ತಾಲೂಕುಗಳ ಜನವಸತಿ ಪ್ರದೇಶಗಳಿಗೆ ಒದಗಿಸಲಾಗುತ್ತಿರುವ ಕುಡಿಯುವ ನೀರಿನ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ, ಎಫ್.ಟಿ.ಕೆ ಮತ್ತು ಹೆಚ್2ಎಸ್ ವೈಲ್ಸ್ಗಳನ್ನು ಬಳಕೆ ಮಾಡಿಕೊಂಡು ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಕುರಿತು ಎಲ್ಲಾ ತಾಲೂಕುಗಳಲ್ಲಿ ಜೂನ್ 21ರಿಂದ 26ರವರೆಗೆ 336 ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಹಾಗೂ ಆಯ್ದ ಸ್ವ-ಸಹಾಯ ಸಂಘದ (ಎಸ್.ಹೆಚ್.ಜಿ) ಮಹಿಳೆಯರಿಗೆ ತರಬೇತಿಯನ್ನು ನೀಡಲಾಗಿರುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.
ಜೆಜೆಎಂ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿರುವ ಕಾಮಗಾರಿಗಳನ್ನು ಸರ್ಕಾರದ ಮಾರ್ಗೂಚಿ ಅನುಸಾರ ಪರಿಶೀಲಿಸಿ ವರದಿ ಸಲ್ಲಿಸಲು ಸಣ್ಣನೀರಾವರಿ ಇಲಾಖೆ ಮತ್ತು ಪಿ.ಎಂ.ಜಿ.ಎಸ್.ವೈ. ಯೋಜನಾ ವಿಭಾಗದ ಅಭಿಯಂತರರನ್ನು ತಾಲೂಕಾ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಸಿಇಓ ಅವರು ಹೇಳಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಳ್ಳಾರಿ ವೃತ್ತದ ಅಧೀಕ್ಷಕ ಅಭಿಯಂತರರಾದ ಅಡಿವೆಪ್ಪನವರ್ ವೀರಪ್ಪ ಸೇರಿದಂತೆ ಗಂಗಾವತಿ ಮತ್ತು ಯಲಬುರ್ಗಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶಾಖಾಧಿಕಾರಿಗಳು ಹಾಗೂ ಸಂಬಂಧಿಸಿದ ಗುತ್ತಿಗೆದಾರರು ಹಾಜರಿದ್ದರು.
Comments are closed.