ಬೆಳಗಾವಿಯ ಕಾಮೇಶ್ ಪಾಟೀಲಗೆ ಕನಕಗಿರಿ ಕೇಸರಿ
: ಕನಕಗಿರಿ ಉತ್ಸವ-2024ರ ಅಂಗವಾಗಿ ಕನಕಗಿರಿಯ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹೊಸ ಬಿಲ್ಡಿಂಗ್ ಆವರಣದಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದಾವಳಿ ಅಂತಿಮ ಸ್ಪರ್ಧೆ ಕೊನೆಯ ಕ್ಷಣದವರೆಗೂ ರೋಚಕತೆಯನ್ನು ಕಾಯ್ದುಕೊಂಡಿತು.
74 ಕೆಜಿ ಮೇಲ್ಪಟ್ಟ ಪುರುಷ ವಿಭಾಗದ ಈ ಸ್ಪರ್ಧೆಯು ತುಂಬಾ ರೋಮಾಂಚನದಿಂದ ಕೂಡಿತ್ತು. ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಸೆಣೆಸಾಡಿದ ಕುಸ್ತಿಪಟುಗಳು. ಅಂತಿಮವಾಗಿ ಬೆಳಗಾವಿಯ ಕಾಮೇಶ್ ಪಾಟೀಲ “ಕನಕಗಿರಿ ಕೇಸರಿ” ಪಟ್ಟವನ್ನು ತಮ್ಮದಾಗಿಸಿಕೊಂಡರು. ಹಳಿಯಾಳದ ಮಂಜುನಾಥ ಗೌಡಪ್ಪನವರ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕನಕಗಿರಿ ಕೇಸರಿ ಪ್ರಶಸ್ತಿ ಒಂದು ಬೆಳ್ಳಿಯ ಗಧೆ, 15,000 ನಗದು ಬಹುಮಾನ ಹಾಗೂ ಪದಕವನ್ನು ಒಳಗೊಂಡಿದೆ.
ಪುರುಷರ ಕುಸ್ತಿ ಸ್ಪರ್ಧೆ ಫಲಿತಾಂಶ: 74 ಕೆಜಿ ಪುರುಷ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ “ಕನಕಗಿರಿ ಕುಮಾರ” ಪ್ರಶಸ್ತಿ ಪಡೆದರೆ, ಬಾಗಲಕೋಟೆಯ ಅಲ್ತಾಫ್ ಕರ್ಜಗಿ ದ್ವಿತೀಯ ಸ್ಥಾನ ಪಡೆದರು. ಅದೆ ರೀತಿ 61 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಹಳಿಯಾಳದ ರೊಹನ ದೊಮ್ಮನಿ “ಕನಕಗಿರಿ ಕಿಶೋರ್” ಪ್ರಶಸ್ತಿ ಪಡೆದರೆ, ಮಾಳಪ್ಪ ಹಾತರಕಿ ದ್ವಿತೀಯ ಸ್ಥಾನ ಪಡೆದರು.
ಪುರುಷ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 80 ಕುಸ್ತಿಪಟುಗಳು ಭಾಗವಹಿಸಿದ್ದರು.
ಮಹಿಳಾ ಕುಸ್ತಿ ಸ್ಪರ್ಧೆ ಫಲಿತಾಂಶ: 65 ಕೆಜಿ ಮೇಲ್ಪಟ್ಟ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳದ ಶಾಲಿನಿ ಸಿದ್ದಿ “ಕನಕಗಿರಿ ಮಹಿಳಾ ಕೇಸರಿ” ಪ್ರಶಸ್ತಿ ಪಡೆದರೆ, ಹಳಿಯಾಳದ ಪ್ರೀನ್ಸಿಟಾ ಸಿದ್ದಿ ದ್ವಿತೀಯ ಸ್ಥಾನ ಪಡೆದರು. 55 ಕೆಜಿ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಅಣ್ಣಿಗೇರಿಯ ಶ್ವೇತಾ “ಕನಕಗಿರಿ ಕಿಶೋರಿ” ಪ್ರಶಸ್ತಿ ಪಡೆದರೆ, ಹಳಿಯಾಳದ ಸವಿತಾ ಸಿದ್ದಿ ದ್ವಿತೀಯ ಸ್ಥಾನ ಪಡೆದರು.
ಮಹಿಳಾ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 58 ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದರು.
ಅಂತಿಮ ಕುಸ್ತಿ ಸ್ಪರ್ಧೆ ವೇಳೆ ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ, ಕನಕಗಿರಿ ತಹಶೀಲ್ದಾರರಾದ ವಿಶ್ವನಾಥ ಮುರಡಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಕಂದಕೂರ, ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯ ಜನರು ಉಪಸ್ಥಿತರಿದ್ದರು.
ಕ್ರೀಡಾ ಇಲಾಖೆ ಎ.ಎನ್.ಯತಿರಾಜು, ತಿಪ್ಪಣ್ಣ ಹಾಗೂ ಕುಸ್ತಿ ತರಬೇತುದಾರರಾದ ಶಿವಾನಂದ ಆರ್, ತುಕಾರಾಂಗೌಡ, ಕಾಟೇಶ್ ನ್ಯಾಮಗೌಡ, ಸತ್ಯಪ್ಪ ಬಿಳಿಕುದರಿ, ವಿನಾಯಕ ಯಂಕಂಚಿ ಮತ್ತಿತರರು ಕುಸ್ತಿ ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
Comments are closed.