ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯತ್ಯಯವಾಗದಂತೆ ಅಗತ್ಯ ಸಿದ್ಧತೆ: ನಲಿನ್ ಅತುಲ್

Get real time updates directly on you device, subscribe now.

ಕುಡಿಯುವ ನೀರು ಸಲುವಾಗಿ ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲಾ ರೀತಿಯಿಂದ ತಯಾರಿಯಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯತ್ಯಯವಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯತಿಗಳಿದ್ದು 722 ಗ್ರಾಮಗಳಿರುತ್ತವೆ. ಈ ಎಲ್ಲಾ ಗ್ರಾಮಗಳಲ್ಲಿ 430 ಗ್ರಾಮಗಳಿಗೆ ಡಿಬಿಓಟಿ ಎಂವಿಎಸ್ ಯೋಜನೆ ಮುಖಾಂತರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ 2334 ಸರ್ಕಾರಿ ಮತ್ತು 6366 ಖಾಸಗಿ ಬೋರ್‌ವೆಲ್‌ಗಳಿದ್ದು, ಇದರಲ್ಲಿ 898 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿದೆ. ಖಾಸಗಿ ಬೋರ್‌ವೆಲ್‌ಗಳ ಮಾಲೀಕರಿಂದ ಕರಾರು ಪತ್ರವನ್ನು ಮಾಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
*ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜಿಗೆ ರೂ. 45 ಲಕ್ಷ:* ಅಲ್ಲದೆ ಗ್ರಾಮೀಣ ಮಟ್ಟದಲ್ಲಿ ಅತೀಯಾಗಿ ಕುಡಿಯುವ ನೀರಿನ ಸಮಸ್ಯೆಯಾದರೆ, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿಕೊಳ್ಳಲು ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದಲ್ಲಿ ರೂ. 45 ಲಕ್ಷಗಳನ್ನು ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
*ಕುಡಿಯುವ ನೀರು ಸರಬರಾಜಿಗೆ ಪ್ರತಿ ತಾಲ್ಲೂಕಿಗೆ ರೂ. 50 ಲಕ್ಷ:* ಜಿಲ್ಲೆಯ ಏಳು ತಾಲೂಕಿನ ತಹಶೀಲ್ದಾರರ ಪಿ.ಡಿ ಖಾತೆಯಲ್ಲಿ ಸಹ ತುರ್ತು ಕುಡಿಯುವ ನೀರಿನ ಸರಬರಾಜು ಸಲುವಾಗಿ ತಲಾ ರೂ. 50 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಸದ್ಯಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವದಿಲ್ಲ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವದಿಲ್ಲ ಎಂದು ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ತಿಳಿಸಿರುತ್ತಾರೆ. ಹೀಗಾಗಿ ಕುಡಿಯುವ ನೀರು ಸಲುವಾಗಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
*38 ವಾರಗಳ ಮೇವು ಲಭ್ಯ:* ಜಿಲ್ಲೆಯಲ್ಲಿ ಇನ್ನೂ 5,71,66,5.11 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇನ್ನೂ 38 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮೇವಿನ ಸಮಸ್ಯೆ ಉಂಟಾದರೆ ಮೇವಿನ ಬ್ಯಾಂಕ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಮೇವಿನ ಕಿಟ್ ನೀಡಲು ಜಿಲ್ಲೆಯ ಪಶು ಸಂಗೋಪನಾ ಇಲಾಖೆಗೆ ಸರ್ಕಾರದಿಂದ 17,783 ಮಿನಿ ಕಿಟ್‌ಗಳು ಸರಬರಾಜು ಆಗಿದ್ದು, ಇದರಲ್ಲಿ 17,133 ಕಿಟ್‌ಗಳನ್ನು ಅವಶ್ಯವಿರುವ ರೈತರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಮೇವಿನ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.
*ಡಿ.ಬಿ.ಟಿ ಮೂಲಕ ರೈತರಿಗೆ ಇನ್‌ಪುಟ್ ಸಬ್ಸಿಡಿ:* ಮುಂಗಾರು ಹಂಗಾಮಿನ ವಾಡಿಕೆ ಮಳೆ 383 ಮೀ.ಮೀ ಇದ್ದು, ವಾಸ್ತವಿಕ 269 ಮೀ.ಮೀ. ಆಗಿ ಶೇ.30ರಷ್ಟು ಮಳೆ ಕೊರತೆಯಾಗಿರುತ್ತದೆ. ಕೃಷಿ ಬೆಳೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ 3,13,795 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆ ಹಾಗೂ ತೇವಾಂಶದ ಕೊರತೆಯಿಂದ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ನೀರಾವರಿ ಬೆಳೆಗಳು ಹೊರತುಪಡಿಸಿ 2,50,061 ಹೆಕ್ಟರ್ ಪ್ರದೇಶ ಹಾನಿಯಾಗಿರುತ್ತದೆ. ಇದಕ್ಕೆ ಬೇಕಾಗುವ ರೂ 216.41 ಕೋಟಿ ಬೆಳೆ ಪರಿಹಾರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ರಾಜ್ಯ ಸರ್ಕಾರದಿಂದ ರೈತರಿಗೆ ಆಗಿರುವ ನಷ್ಟಕ್ಕೆ ರೂ. 2000 ರವರೆಗೆ ಮಧ್ಯಂತರ ಪರಿಹಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1,01,605 ರೈತರಿಗೆ 20.08 ಕೋಟಿ ಪರಿಹಾರವನ್ನು ಹಂತ ಹಂತವಾಗಿ ಡಿ.ಬಿ.ಟಿ ಮೂಲಕ ನೇರವಾಗಿ ರೈತರಿಗೆ ಇನ್‌ಪುಟ್ ಸಬ್ಸಿಡಿಯನ್ನು ನೀಡಿರುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಇನ್‌ಪುಟ್ ಸಬ್ಸಿಡಿ ಡಿ.ಬಿ.ಟಿ ಮೂಲಕ ಜಮಾ ಆದ ಮಾಹಿತಿಯನ್ನು ಸಂಬAಧಪಟ್ಟ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪ್ರಚುರಪಡಿಸಲಾಗಿದೆ. ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಕುರಿತು ಹಾಗೂ ಸರ್ಕಾರದಿಂದ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿರುತ್ತದೆ ಎಂದರು.
*ಸಹಾಯವಾಣಿ ವಿವರ:* ಜಿಲ್ಲಾಧಿಕಾರಿಗಳ ಕಚೇರಿ ದೂ.ಸಂ: 7676732001, ಕೊಪ್ಪಳ ತಾಲ್ಲೂಕು ಕಚೇರಿ ದೂ.ಸಂ: 9380252346, ಯಲಬುರ್ಗಾ ತಾಲ್ಲೂಕು ಕಚೇರಿ ದೂ.ಸಂ: 9448833207, ಕುಷ್ಟಗಿ ತಾಲ್ಲೂಕು ಕಚೇರಿ ದೂ.ಸಂ: 9845791349, ಕನಕಗಿರಿ ತಾಲ್ಲೂಕು ಕಚೇರಿ ದೂ.ಸಂ: 9900433012, ಕುಕನೂರು ತಾಲ್ಲೂಕು ಕಚೇರಿ ದೂ.ಸಂ: 8050303495, ಗಂಗಾವತಿ ತಾಲ್ಲೂಕು ಕಚೇರಿ ದೂ.ಸಂ: 9740793877, ಕಾರಟಗಿ ತಾಲ್ಲೂಕು ಕಚೇರಿ ದೂ.ಸಂ: 9743600343 ಗೆ ಸಂಪರ್ಕಿಸಬಹುದಾಗಿದೆ.
ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಉಧ್ಭವಿಸಿದರೆ ತಕ್ಷಣ ಸ್ಪಂದಿಸಲು ಎಲ್ಲಾ ತಹಶೀಲ್ದಾರ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮಮಟ್ಟದ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿಯನ್ನು ರಚನೆ ಮಾಡಿಕೊಳ್ಳಲಾಗಿದೆ ಹಾಗೂ ಸದ್ಯಕ್ಕೆ ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಗಾಗಿ ಅನುದಾನದ ಕೊರತೆ ಇರುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಮತ್ತು ಬುದುವಾರ ಗ್ರಾಮ ಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲ್ಲೂಕಾ ಮಟ್ಟದ ಕಾರ್ಯಪಡೆ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿ ಶುಕ್ರವಾರ (ಜೂಮ್ ವಿ.ಸಿ ಮೂಲಕ) ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ ಮತ್ತು ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಾಪ್ತಾಹಿಕ ಸಭೆಗಳನ್ನು ನಡೆಸಲಾಗುತ್ತಿದೆ ಮತ್ತು ಅದರ ನಡಾವಳಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!