ಹಾಲವರ್ತಿಯಲ್ಲಿ ಶಾಂತಿ ನೆಲಸಲಿ: ಶಿವರಾಜ ತಂಗಡಗಿ
ಹಾಲವರ್ತಿಗೆ ಸಚಿವರ ಭೇಟಿ;
ಗ್ರಾಮಸ್ಥರಿಗೆ ಸಾಂತ್ವನ
ಕೊಪ್ಪಳ : ಅಸ್ಪೃಶ್ಯತೆ ಆಚರಣೆಯು ಯಾವುದೇ ಕಾರಣಕ್ಕು ನಡೆಯಬಾರದು. ಸಮಾಜ ಒಪ್ಪದ ಕೆಲಸವನ್ನು ಯಾರು ಮಾಡಬಾರದು ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಮನವಿ ಮಾಡಿದರು.
ಫೆ.17ರಂದು ಹಾಲವರ್ತಿ ಗ್ರಾಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಗ್ರಾಮಸ್ಥರೆಲ್ಲರೂ ಒಗ್ಗೂಡಿ ನಡೆಯಬೇಕು. ಹಾಲವರ್ತಿ ಗ್ರಾಮದಲ್ಲಿ ಶಾಂತಿ ನೆಲಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಗ್ರಾಮಸ್ಥರಲ್ಲಿ ವಿನಂತಿ ಮಾಡುತ್ತೇನೆ. ಯಾರು ಕೂಡ ತಾರತಮ್ಯ ಮಾಡಬಾರದು ಎಂದು ತಿಳಿಸಿದ ಸಚಿವರು, ಸುಮ್ಮನೆ ಅಮಾಯಕರ ಮೇಲೆ ದಾಳಿ ಮಾಡಿದರೆ ಅಂತಹದ್ದನ್ನು ಸಹಿಸಲಾಗದು. ಆದಾಗ್ಯೂ ಮತ್ತೆ ತಪ್ಪುಗಳು ನಡೆದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು.
ಜನರನ್ನು ಒಡೆದಾಳುವ ಅಮಾನೀಯ ತಂತ್ರಗಳಿಗೆ ಯಾರು ಸಹ ಬಲಿಪಶುವಾಗಬಾರದು ಎಂದು ತಿಳಿಸಿದರು.
ನಾವೇಲ್ಲ ಮನುಷ್ಯರು. ನಾವೆಲ್ಲರೂ ಒಂದೆ. ಯಾರನ್ನು ಟಾರ್ಗೆಟ್ ಮಾಡಕೂಡದು. ನಮ್ಮ ರಕ್ಷಣೆಗೆ ಸರ್ಕಾರ ಇದೆ. ತಾರತಮ್ಯ ಮಾಡುವುದಕ್ಕೆ
ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಇರಬೇಕು. ಶಾಂತಿ ಸೌಹಾರ್ದತೆಗೆ ಎಲ್ಲರು ಸಹಕಾರ ಕೊಡಬೇಕು ಎಂದರು.
ಶಿಕ್ಷಣವಂತರಾದರೆ ಇಂತಹ ಪರಿಸ್ಥಿತಿ ಉದ್ಭವಿಸಲ್ಲ. ನಾವು ಶಿಕ್ಷಣವಂತರಾಗಬೇಕು. ರಾಜ್ಯ ಸರ್ಕಾರವು ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಎಲ್ಲರೂ ಶಿಕ್ಷಣ ಕಲಿತು ಅಕ್ಷರಸ್ಥರಾದರೆ ಇಂತಹ ಅಸ್ಪೃಶ್ಯತೆ ಆಚರಣೆ ಸಂಭವಿಸುವುದಿಲ್ಲ ಎಂದರು.
ಎಲ್ಲರೂ ಸಮಾನರಾಗಿ ಬಾಳಬೇಕು ಎಂದು ಸಂದೇಶ ನೀಡಿದ ಶ್ರೀ ಬಸವೇಶ್ವರರು ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಗಾಗಿ ನಾಡಿನಾದ್ಯಂತ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತಿವೆ. ಜನವರಿ 26 ರಿಂದ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ. ಫೆ.17ರಂದು ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಯುತ್ತಿವೆ.
ನಾಡಿನಾದ್ಯಂತ ಇಂತಹ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿರುವುದರ ಉದ್ದೇಶ ಎಲ್ಲರೂ ಸಮಾನರಾಗಿ ಬಾಳಬೇಕು ಎಂಬ ಸಂದೇಶವನ್ನು ನೀಡುವುದಾಗಿದೆ ಎಂದರು.
ನಮಗೆ ಸಮಾನತೆ ಬೇಕು: ಗ್ರಾಮದ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಕನಕಮ್ಮ ಅವರು, ನಮಗೆ ಸಮಾನತೆ ಬೇಕು. ನಾವು ಎಲ್ಲರೂ ಅಕ್ಕ ತಂಗಿ ಅಣ್ಣ ತಮ್ಮಂದಿರಂತೆ ಬಾಳುತ್ತೇವೆ ಎಂದು ಮನವಿ ಮಾಡಿದರು. ನಮಗೆ ಸಮಾನತೆ ಬೇಕು. ಇದು ಯಾವುದೇ ಜಾತಿಯವರ ವಿರುದ್ಧದ ಹೋರಾಟ ಅಲ್ಲ ಎಂದು ಯುವ ಹೋರಾಟಗಾರ ಪ್ರಾಣೇಶ ಜಿ ಹಾಲವರ್ತಿ ತಿಳಿಸಿದರು.
ಅಸ್ಪೃಶ್ಯತೆ ವಿರುದ್ದ ಹೋರಾಟ: ಇದು ಯಾರ ವಿರುದ್ಧ ಹೋರಾಟವಲ್ಲ;
ಜಾತಿಯತೆ ಮಾಡಿದರ ವಿರುದ್ದ, ಅಸ್ಪೃಶ್ಯತೆ ಆಚರಣೆ ಮಾಡಿದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ ಎಂದು ಹೋರಾಟಗಾರರಾದ ಕರಿಯಪ್ಪ
ಗುಡಿಮನಿ ಅವರು ತಿಳಿಸಿದರು.
ಅವಮಾನದ ಸಂಗತಿ:
ಮುಖಂಡರಾದ ಡಿ.ಎಚ್.ಪೂಜಾರ ಮಾತನಾಡಿ, ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿರುವುದು ಈ ದೇಶಕ್ಕೆ ಅವಮಾನದ ಸಂಗತಿಯಾಗಿದೆ. ದೂರು ಕೊಟ್ಟಿದ್ದಕ್ಕೆ ಮೇಲಜಾತಿಯ ಜನರು ನಮಗೆ ಟಾರ್ಗೇಟ್ ಮಾಡಿದ್ದಾರೆ. ಹೊಲಗಳಿಗೆ ಹೋದಾಗ ಕಲ್ಲಿನಿಂದ ಹೊಡೆಯುತ್ತಿದ್ದಾರೆ ಎಂದು ನೊಂದವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಂಗಡಿಯಲ್ಲಿ ಪ್ರವೇಶ ನೀಡದ, ಕಟಿಂಗ್ ಮಾಡಲು ತಿರಸ್ಕರಿಸುವ ಅಂಗಡಿಕಾರರ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿದರು. ಇದಕ್ಕೆ ಪೂರ್ಣವಿರಾಮ ನೀಡಿ ಗ್ರಾಮಸ್ಥರು ಸೌಹಾರ್ದತೆಯಿಂದ ಬದುಕುವಂತಾಗಬೇಕು ಎಂದು ಕೋರಿದರು.
ಹೋರಾಟಗಾರರಿಂದ ಮನವಿ: ಅಸ್ಪೃಶ್ಯತೆ ಆಚರಣೆ ವಿರುದ್ಧದ ಅಭಿಯಾನವು ಹಾಲವರ್ತಿಯಿಂದ ಆರಂಭವಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಹೋಬಳಿಗಳಲ್ಲಿ ನಡೆಯಬೇಕು. ರಾಜ್ಯಾದ್ಯಂತ ನಡೆಯಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಮನವಿಯನ್ನು ಹೋರಾಟಗಾರರಾದ ಕರಿಯಪ್ಪ ಗುಡಿಮನಿ, ಬಸವರಾಜ ಶೀಲವಂತರ, ಕೆ ಬಿ ಗೋನಾಳ, ಮಹಾಂತೇಶ ಕೊತಬಾಳ, ಮುದುಕಪ್ಪ ಹೊಸಮನಿ, ರಮೇಶ ಬೇಳೂರ, ರಮೇಶ ಸಾಲಮನಿ, ಸಂಜಯ ದಾಸ್ ಸೇರಿದಂತೆ ಇತರರು ಸಚಿವರಿಗೆ ಸಲ್ಲಿಸಿದರು.
ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ ಸಿಇಓ ರಾಹುಲ್ ಪಾಂಡೆಯ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮುಖಂಡರಾದ ರಾಜಶೇಖರ ಹಿಟ್ನಾಳ, ತಹಸೀಲ್ದಾರ ವಿಠ್ಠಲ ಚೌಗಲಾ, ತಾಪಂ ಇಓ ದುಂಡಪ್ಪ ತುರಾದಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ಟಿ., ಅಧಿಕಾರಿಗಳಾದ ಚಿದಾನಂದ
ಸೇರಿದಂತೆ ಇತರರು ಇದ್ದರು.
Comments are closed.