Gangavati NEWS
ಗಂಗಾವತಿ: ತಾಲೂಕಿನ ನೀರಾವರಿ ಇಲಾಖೆ ಹಾಗೂ ಸಂಗಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀನಾರಾಯಣ ಬೃಹತ್ ಕೆರೆಯ ಹೂಳು ತೆಗೆದು, ಅಭಿವೃದ್ದಿಪಡಿಸಿ ಸುಂದರೀಕರಣಗೊಳಿಸಬೇಕೆಂದು ಶ್ರೀ ಲಕ್ಷ್ಮೀನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘ, ಗಂಗಾವತಿ ಪರಿಸರ ರಕ್ಷಣಾ ಸಮಿತಿ ಹಾಗೂ ಚಾರಣ ಬಳಗ ಗಂಗಾವತಿ ಸಂಘಟನೆಗಳ ಮುಖಂಡರು ಶಾಸಕರಲ್ಲಿ ಒತ್ತಾಯಿಸಿದ್ದಾರೆ.
ಅವರು ಇಂದು ಶಾಸಕ ಗಾಲಿ ಜನಾರ್ಧನರೆಡ್ಡಿಯವರಿಗೆ ಮನವಿ ಸಲ್ಲಿಸಿದರು. ಶ್ರೀ ಲಕ್ಷ್ಮೀನಾರಾಯಣ ಕೆರೆಯಲ್ಲಿ ಮುಳ್ಳುಕಂಟಿಗಳು ಬೆಳೆದು ಹೂಳು ತುಂಬಿದೆ. ಈ ಕೆರೆಯಲ್ಲಿ ನೀರು ಸಂಗ್ರಹದ ಪ್ರಮಾಣ ತೀರಾ ಕಡಿಮೆಯಾಗಿದ್ದು, ಬರಗಾಲದಲ್ಲಿ ಮಾತ್ರ ಈ ಕೆರೆಯ ಹೂಳು ತೆಗೆಯುವುದು ಸಾಧ್ಯವಾಗಲಿದೆ. ಈ ವರ್ಷ ಕೆರೆಯಲ್ಲಿ ನೀರು ಇಲ್ಲದ ಕಾರಣ, ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಸರಕಾರ ಈ ಕೆರೆಯ ಹೂಳು ತೆಗೆಸಿ, ಸುಂದರೀಕರಣಗೊಳಿಸಬೇಕು. ಇದರಿಂದ ಸಾವಿರಾರು ರೈತರಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವುದರ ಜೊತೆಗೆ ಅಂತರ್ಜಲದ ಮಟ್ಟ ಹೆಚ್ಚಾಗುವುದು. ಅಲ್ಲದೇ ಸದರಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಿದರೆ ಸಂಗಾಪುರ ಗ್ರಾ.ಪಂ.ಗೆ ಆದಾಯ ಹೆಚ್ಚಾಗಲಿದೆ. ಜೊತೆಗೆ ಪ್ರವಾಸಿಗರಿಗೆ ಒಳ್ಳೆಯ ಪ್ರವಾಸಿ ತಾಣವಾಗಿ ಗಮನ ಸೆಳೆಯಲಿದೆ. ಆ ನಿಟ್ಟಿನಲ್ಲಿ ಶಾಸಕರು ಶೀಘ್ರ ಕೆರೆಗೆ ಭೇಟಿ ನೀಡಿ, ಕೆರೆಯಲ್ಲಿರುವ ಹೂಳು ತೆಗೆದು ಅಭಿವೃದ್ಧಿಪಡಿಸಿ ಸುಂದರೀಕರಣಗೊಳಿಸಲು ಕ್ರಮಜರುಗಿಸಲು ಮುಂದಾಗಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಡಿ. ಕಮರ್ ಪಾಷಾ, ಹುಲ್ಲೇಶಪ್ಪ, ನರಸಪ್ಪ, ವಲಿಸಾಬ್, ನಾರಾಯಣಪ್ಪ, ಅಣ್ಣಪ್ಪ, ಡಾ|| ಶಿವಕುಮಾರ ಮಾಲಿಪಾಟೀಲ್, ವೀರೇಶ ಸುಳೇಕಲ್, ವೀರೇಶ ಬಲಕುಂದಿ, ಪ್ರಲ್ಹಾದ್ ಕುಲಕರ್ಣಿ, ಜಗದೀಶ ಮಾಲಿಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು.
Comments are closed.