ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿ-ಶ್ರೀಶೈಲಾ ಬಿರಾದಾರ
ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶ ತಂದು ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಶ್ರೀಶೈಲಾ ಬಿರಾದಾರ ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಭಾನುವಾರ
ಆಯೋಜಿಸಿದ್ದ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆ ಬಗ್ಗೆ ಯಾವುದೇ ಆತಂಕ ಪಡದೆ ಧೈರ್ಯದಿಂದ ಬರೆಯಬೇಕು, ಕಾಲಹರಣ ಮಾಡದೆ ಓದು, ಮನನ ಹಾಗೂ ಓದಿರುವುದನ್ನು ಬರೆದು ಉತ್ತಮ ಅಂಕ ಪಡೆದು ಕೊಳ್ಳಬೇಕೆಂದು ಹೇಳಿದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಉಚಿತವಾಗಿ ‘ ಕಲಿಕಾ ಆಸರೆ’ ಎಂಬ ಅಭ್ಯಾಸ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಓದುವ ಸಲುವಾಗಿ ವೇಳಾಪಟ್ಟಿ ಹಾಕಿಕೊಂಡು ನಿರಂತರ ಅಧ್ಯಯನ ಗುರಿಯನ್ನು ಸಾಧಿಸಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ನಕಲು ಮುಕ್ತ ಪರೀಕ್ಷೆ ನಡೆಸಲಾಗುತ್ತಿದೆ ಎಂದರು. ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಂತ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕೆಂದು ತಿಳಿಸಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಂಗಸ್ವಾಮಿ ಮಾತನಾಡಿ ಉತ್ತರ ಪತ್ರಿಕೆಗಳಲ್ಲಿ ವಿವಿಧ ತಂತ್ರಗಳನ್ನು ಪ್ರಯೋಗಿಸಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಿದೆ, ಶಿಕ್ಷಕರ ಸಂಘವು ಇಂಥ ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಶಿಕ್ಷಣ ಇಲಾಖೆಯ ಕಾರ್ಯಾಭಾರವನ್ನು ಕಡಿಮೆ ಮಾಡಿದೆ ಎಂದು ಶ್ಲಾಘಿಸಿದರು.ಸಂಘದ ಅಧ್ಯಕ್ಷೆ ಶಂಶಾದಬೇಗಂ, ಶಿಕ್ಷಣ ಸಂಯೋಜಕ ಆಂಜನೇಯ, ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಜಿ.ಸಂಗಮ್ಮನವರ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಿ.ಕೆ. ನಾಗರಾಜ, ವಿದ್ಯಾ ಚಿಕ್ಕಮಾದಿನಾಳ, ಶಿವಕುಮಾರ ಸೋಮಸಾಗರ, ವಿಶ್ವನಾಥ ಗೌರಿಪುರ ಹಾಗೂ ತೊಂಡೆಪ್ಪ ಅವರು ತರಬೇತಿ ನೀಡಿದರು. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಗೇರಿ, ಟಿ. ಎಸ್. ಜಗದೀಶ, ಸಿದ್ದಾಪುರದ ಕೆಕೆಜಿಬಿ ಮುಖ್ಯಶಿಕ್ಷಕ ಚಂದ್ರಶೇಖರ ಶಿಕ್ಷಕರಾದ ಬಸವರಾಜಸ್ವಾಮಿ, ಜ್ಯೋತಿ ಪಾಟೀಲ ಇತರರು ಇದ್ದರು.
Comments are closed.