ವಿಪತ್ತು ಪರಿಸ್ಥಿತಿ ಎದುರಿಸಲು ಮುಂಜಾಗ್ರತೆ ವಹಿಸಿ-ಜಿಲ್ಲಾಧಿಕಾರಿ
ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ-ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ನಿರ್ದೇಶನ
ಕೊಪ್ಪಳ : ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುAದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಜೂನ್ 23ರಂದು ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು.
ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಷ್ಟಗಿ, ಗಂಗಾವತಿ, ಕೊಪ್ಪಳ, ಯಲಬುರ್ಗಾ, ಕುಕನೂರ, ಕಾರಟಗಿ ಮತ್ತು ಕುಕನೂರ ತಾಲೂಕುವಾರು ಮಳೆಯ ಪರಿಸ್ಥಿತಿ, ಹವಾಮಾನದ ಸ್ಥಿತಿಗತಿ, ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ ವ್ಯವಸ್ಥೆ, ಪೂರ್ವ ಮುಂಗಾರು ಸಂದರ್ಭದಲ್ಲಿ ಉಂಟಾದ ಮನೆ ಹಾನಿ, ಪ್ರಾಣ ಹಾನಿ ಹಾಗೂ ಕೃಷಿ ತೋಟಗಾರಿಕಾ ಬೆಳೆ ಹಾನಿ ಪ್ರಕರಣಗಳಿಗೆ ಪರಿಹಾರ ವಿತರಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಆಯಾ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ ಅಧಿಕಾರಿಗಳು ಸೇರಿದಂತೆ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲೆಯಲ್ಲಿ ಸಹ ವಾಡಿಕೆ ಮಳೆ ವಿಳಂಬವಾಗಿದೆ. ಕಡಿಮೆ ಮಳೆ ಕಾರಣ ಮಣ್ಣಿನಲ್ಲಿ ತೇವಾಂಶದ ಕೊರತೆ ಕಾಣಿಸಬಹುದಾಗಿದ್ದು, ಬೆಳೆ ನಷ್ಟ ತಪ್ಪಿಸುವ ಹಿನ್ನೆಲೆಯಲ್ಲಿ ರೈತರು ಜಲ ಸಂರಕ್ಷಣಾ ಪದ್ಧತಿಗೆ ಮುಂದಾಗಲು ಹಾಗೂ ಅಲ್ಪಾವಧಿಯ ಅಥವಾ ಕಡಿಮೆ ಮಳೆಯಾದರು ಉತ್ತಮ ಬೆಳೆ ತೆಗೆಯುವ ಬೀಜಗಳನ್ನು ಬಿತ್ತನೆ ಮಾಡುವ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಸಲಹೆ ಮಾಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಬರ, ಪ್ರವಾಹ ಮತ್ತು ಇನ್ನಿತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸುವ ಪರಿಸ್ಥಿತಿಯನ್ನು ನಿಬಾಯಿಸಲು, ಅಗತ್ಯ ನೀತಿ ನಿರೂಪಿಸಲು ರಾಜ್ಯ ಸರ್ಕಾರವು ಈಗಾಗಲೇ ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ. ಅಂತಹ ಸಂದರ್ಭ ಎದುರಾದಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಸಹ ವಿಪತ್ತು ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಯಮಿತವಾಗಿ ನಡೆಸುತ್ತಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದಂತೆ ಮಳೆ ಕೊರತೆಯಿಂದಾಗಲಿ ಅಥವಾ ದಿಢೀರನೇ ಮಳೆ ಸುರಿಯುವುದರಿಂದಾಗಲಿ ಉದ್ಬವಿಸಬಹುದಾದ ಸಮಸ್ಯೆಗಳನ್ನು ಎದುರಿಸಲು ಸದಕಾಲ ಸನ್ನದ್ಧರಾಗಿರಬೇಕು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ ಅವರು ಮಾತನಾಡಿ, ಮುಂಗಾರು ಪ್ರವೇಶಿಸಿದಾಗ್ಯೂ ರಾಜ್ಯದ ವಿವಿಧೆಡೆ ಕಂಡು ಬಂದAತೆ ಜಿಲ್ಲೆಯಲ್ಲಿ ಸಹ ಮಳೆ ಅಭಾವ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ಪರಿಸ್ಥಿತಿಯ ನಿರ್ವಹಣೆಗೆ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದಾಗಿ ಕೊಪ್ಪಳ, ಕುಷ್ಟಗಿ, ಕುಕನೂರ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಸಿಡಿಲಿನಿಂದ ಮೃತಪಟ್ಟ ಐವರು ಕುಟುಂಬದವರಿಗೆ ತಲಾ 5 ಲಕ್ಷ ರೂ.ಗಳಂತೆ ಹಾಗೂ ಕನಕಗಿರಿ ತಾಲೂಕಿನಲ್ಲಿ ಮನೆಕುಸಿದು ಮೃತಪಟ್ಟ ಇಬ್ಬರಿಗೆ ತಲಾ ಎರಡು ಲಕ್ಷ ರೂ.ಗಳಂತೆ ಮಾನವ ಜೀವ ಹಾನಿ ಪ್ರಕರಣಗಳಿಗೆ 35,00,000 ರೂ.ಪರಿಹಾರವನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ. ಏಪ್ರಿಲ್‌ನಿಂದ ಜೂನ್ ಮಾಹೆವರೆಗೆ ಕೊಪ್ಪಳ ತಾಲೂಕಿನಲ್ಲಿ 12, ಕುಷ್ಟಗಿ ತಾಲೂಕಿನಲ್ಲಿ 10, ಕುಕನೂರ ತಾಲೂಕಿನಲ್ಲಿ 9 ಹಾಗು ಯಲಬುರ್ಗಾ ತಾಲೂಕಿನಲ್ಲಿ 22 ಮತ್ತು ಗಂಗಾವತಿ ತಾಲೂಕಿನಲ್ಲಿ 4 ಸೇರಿ ಒಟ್ಟು ಒಟ್ಟು 57 ಮನೆಹಾನಿ ಪ್ರಕರಣಗಳಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಜೂನ್ 22 ಕೊನೆಗೊಂಡAತೆ ಕೊಪ್ಪಳ ಜಿಲ್ಲೆಯಲ್ಲಿ 23,945 ಮೆ.ಟನ್ ಯೂರಿಯಾ, 11,609 ಮೆ.ಟನ್ ಡಿಎಪಿ, 845 ಮೆ ಟನ್ ಎಂಓಪಿ, 27,629 ಮೆ ಟನ್ ಎನ್‌ಕೆಪಿಎಸ್ ಮತ್ತು 405 ಮೆ ಟನ್ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನು ಇದೆ. ಅದೇ ರೀತಿ ಜೂನ್ 22 ಕೊನೆಗೊಂಡAತೆ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳು ಸೇರಿ ಒಟ್ಟು 258/50 ಕ್ವಿಂಟಲ್ ಭತ್ತದ ಬೀಜ ಮಾರಾಟವಾಗಿದ್ದು 342.75 ಕ್ವಿಂಟಲ್ ದಾಸ್ತಾನು ಇದೆ. 23603.51 ಕ್ವಿಂಟಲ್ ಮೆಕ್ಕೆಜೋಳದ ಬೀಜ ಮಾರಾಟವಾಗಿದ್ದು 1664.56 ಕ್ವಿಂಟಲ್ ದಾಸ್ತಾನು ಇದೆ. 179.76 ಕ್ವಿಂಟಲ್ ಸಜ್ಜೆ ಬೀಜವು ಮಾರಾಟವಾಗಿದ್ದು 175.37 ಕ್ವಿಂಟಲ್ ದಾಸ್ತಾನು ಇದೆ. 3.68 ಕ್ವಿಂಟಲ್ ನವಣಿ ಬೀಜವು ಮಾರಾಟವಾಗಿದ್ದು 6.92 ಕ್ವಿಂಟಲ್ ದಾಸ್ತಾನು ಇದೆ. 122.36 ಕ್ವಿಂಟಲ್ ಹೆಸರು ಬೀಜವು ಮಾರಾಟವಾಗಿದ್ದು 48.44 ಕ್ವಿಂಟಲ್ ದಾಸ್ತಾನು ಇದೆ. 444.06 ಕ್ವಿಂಟಲ್ ತೊಗರಿ ಬೀಜವು ಮಾರಾಟವಾಗಿದ್ದು 243.04 ಕ್ವಿಂಟಲ್ ದಾಸ್ತಾನು ಇದೆ. 14.57 ಕ್ವಿಂಟಲ್ ಸೂರ್ಯಕಾಂತಿ ಬೀಜವು ಮಾರಾಟವಾಗಿದ್ದು 98.51 ಕ್ವಿಂಟಲ್ ದಾಸ್ತಾನು ಇದೆ. ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ ಮತ್ತು ಸೂರ್ಯಕಾಂತಿ ಸೇರಿ ಕೊಪ್ಪಳ ಜಿಲೆಯಲ್ಲಿ ಒಟ್ಟು 5863.11 ಕ್ವಿಂಟಲ್‌ನಷ್ಟು ಬೀಜಗಳು ದಾಸ್ತಾನು ಪೈಕಿ ಜೂನ್ 22ರವರೆಗೆ 3383.44 ಕ್ವಿಂಟಲ್‌ನಷ್ಟು ಬೀಜಗಳು ಮಾರಾಟವಾಗಿ ಈದೀಗ 2479.59 ಕ್ವಿಂಟಲ್‌ನಷ್ಟು ಬೀಜಗಳು ದಾಸ್ತಾನು ಇದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜೂನ್ 16ರಿಂದ ಜೂನ್ 22ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 15.7 ಮಿಮಿ ಇದ್ದು ವಾಸ್ತವವಾಗಿ 8.3 ಮಿಮಿ ಸುರಿದಿದೆ. ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 13.4 ಮಿಮಿ ಇದ್ದು ವಾಸ್ತವವಾಗಿ 20.5 ಮಿಮಿ ಸುರಿದಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 11.2 ಮಿಮಿ ಇದ್ದು ವಾಸ್ತವವಾಗಿ 0.4 ಮಿಮಿ ಸುರಿದಿದೆ. ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 17.1 ಮಿಮಿ ಇದ್ದು ವಾಸ್ತವವಾಗಿ …0.6 ಮಿಮಿ ಸುರಿದಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 8.1 ಮಿಮಿ ಇದ್ದು ವಾಸ್ತವವಾಗಿ 22.1 ಮಿಮಿ ಸುರಿದಿದೆ. ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 3.7 ಮಿಮಿ ಇದ್ದು ವಾಸ್ತವವಾಗಿ 3.7 ಮಿಮಿ ಸುರಿದಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 8.4 ಮಿಮಿ ಇದ್ದು ವಾಸ್ತವವಾಗಿ 5.9 ಮಿಮಿ ಸುರಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಾಡಿಕೆ ಮಳೆ 13.5 ಮಿಮಿ ಇದ್ದು ವಾಸ್ತವವಾಗಿ 8.5 ಮಿಮಿ ಮಳೆ ಸುರಿದು ಶೇ.37ರಷ್ಟು ಮಳೆಕೊರತೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಏಪ್ರಿಲ್‌ದಿಂದ ಜೂನ್ 23ರವರೆಗೆ ಕೊಪ್ಪಳ ತಾಲೂಕಿನಲ್ಲಿ 12, ಕುಷ್ಟಗಿ ತಾಲೂಕಿನಲ್ಲಿ 12, ಕನಕಗಿರಿ ತಾಲೂಕಿನಲ್ಲಿ 1, ಕೂಕನೂರ ತಾಲೂಕಿನಲ್ಲಿ 4 ಮತ್ತು ಯಲಬುರ್ಗಾ ತಾಲೂಕಿನಲ್ಲಿ 5 ಸೇರಿ ಒಟ್ಟು 34 ಜಾನುವಾರುಗಳು ಸಾವಿಗೀಡಾಗಿದ್ದು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ, ಪಶುಪಾಲನೆ, ತೋಟಗಾರಿಕಾ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.
Comments are closed.