ಗವಿಮಠ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಸವ ಪಟ ಆರೋಹಣ ಕಾರ್ಯಕ್ರಮ

Get real time updates directly on you device, subscribe now.

ಕೊಪ್ಪಳ : ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಇಂದು ದಿನಾಂಕ ೨೩-೧-೨೦೨೩ ರಂದು ಮಂಗಳವಾರ ಸಂಜೆ ೫ ಗಂಟೆಗೆ ಗವಿಮಠದ ಬೆಟ್ಟದ ಮೇಲಿರುವ ಅನ್ನಪೂಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗಿತು. ಸಹಸ್ರಾರು ಮಹಿಳೆಯರು ಶ್ರೀಮಠಕ್ಕೆ ಆಗಮಿಸಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿರುತ್ತಾರೆ. ಹೋಳಿಗೆ ಸಜ್ಜಕದ ನೈವೇದ್ಯವಾದ ನಂತರ ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಅಲ್ಲಿ ನೆರೆದ ತಾಯಂದಿರು ನಡೆಸಿಕೊಡುತ್ತಾರೆ. ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಠಾರ್ಥಗಳು ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಈ ಮೂಲಕ ಹರಕೆ ಮಾಡಿಕೊಳ್ಳುತ್ತಾರೆ. ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು ಕೊಪ್ಪಳದ ಸಮಸ್ತ ಮಾತೆಯರಯ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳುತ್ತಾರೆ.

 

 

ಬಸವ ಪಟ ಆರೋಹಣ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿಂದು ದಿನಾಂಕ ೨೩-೦೧-೨೦೨೩ ರಂದು ಮಂಗಳವಾರ ಸಂಜೆ ೫ ಗಂಟೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ಬಸವ ಪಟ ಆರೋಹಣ ಎಂಬ ಧಾರ್ಮಿಕ ಕಾರ್ಯಕ್ರಮವೂ ಸಡಗರ ಸಂಭ್ರಮದಿಂದ ಜರುಗಿತು. ಬಸವಪಟದಲ್ಲಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರ, ಗಿಡ-ಮರ ಬಳ್ಳಿ ಮುಂತಾದ ಪ್ರಕೃತೀಯ ಚಿತ್ರಣಗನ್ನು ಅಳವಡಿಸಿರುವ ಬಸವಪಟಕ್ಕೆ ವೇದೋಕ್ತ ಮಂತ್ರಗಳ ಮೂಲಕ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ೫ ಸುತ್ತ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರ ಮಹಾರಾಜಕೀ ಜೈ ಎಂದು ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಬಸವ ಪಟ ಕಟ್ಟುವದರ ಮೂಲಕ ಬಸವ ಪಟ ಆರೋಹಣ ಕಾರ್ಯಕ್ರಮ ಜರುಗಿತು. ಶ್ರೀಮಠದಲ್ಲಿ ಬಸವ ಪಟ ಆರೋಹಣ ಮಾಡುವ ಉದ್ದೇಶವೆಂದರೆ ನಮ್ಮದು ಕೃಷಿ ಪ್ರಧಾನ ನಾಡು. ಆ ಕಾರಣಕ್ಕಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ವರ್ಷ ಪೂರ್ತಿಯಾಗಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗ ಹಾಗೂ ಸಕಲ ಭಕ್ತಜನಸ್ತೋಮಕ್ಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ಬಸವ ಪಟ ಆರೋಹಣ ಕಾರ್ಯಕ್ರಮವು ಅನೂಚಾನವಾಗಿ ನಡೆಯುತ್ತಾ ಬಂದಿದೆ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಯ ಕಾಯ್ರಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ದೊರೆಯುತ್ತದೆ.

 

ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಶೋಭಾಯಮಾನವಾದ ಪಂಚಕಳಸಗಳು

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿಂದು ದಿನಾಂಕ ೨೩-೦೧-೨೦೨೩ ರಂದು ಮಂಗಳವಾರ ಸಂಜೆ ೫ ಗಂಟೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಪಂಚಕಳಸಗಳು ಶೋಭಾಯಮಾನವಾದವು. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀಗವಿಮಠದ ಕರ್ತೃ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿವಸಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾರೆ. ನಂತರ ಆವುಗಳನ್ನು ತೊಳೆದು ತಿಕ್ಕಿ ಸ್ವಚ್ಚಗೊಳಿಸಿ ಶೃಂಗಾರಗೊಳಿಸಿ ಶ್ರೀಗವಿಮಠಕ್ಕೆ ಶ್ರಧ್ದಾ ಭಕ್ತಿಯಿಂದ ಭಜನೆ, ಡೋಲು, ಭಾಜಾ ಭಜಂತ್ರಿಗಳೊಂದಿಗೆ ತರುತ್ತಾರೆ. ಒಂದನೆಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು ಶ್ರೀಗೌರಿಶಂಕರ ದೇವಸ್ಥಾನದಿಂದ ಶೀಗವಿಮಠಕ್ಕೆ ಬರುವದು. ಎರಡನೆಯದು ವಿ.ಕೆ.ಸಜ್ಜನರು ಮಾಡಿಸಿದ ಕಳಸ ಅವರ ಮನೆಯುಂದ ಶೀಗವಿಮಠಕ್ಕೆ ಬರುವದು. ಮೂರನೆಯದು ಪಲ್ಲೇದವರ ಓಣಿಯ ಶ್ರೀಬಸವೇಶ್ವರ ದೇವಸ್ಥಾನದ ದೈವದವರಿಂದ ಶೀಗವಿಮಠಕ್ಕೆ ಬರುವದು. ನಾಲ್ಕನೆಯದು ಕೋಟೆರಸ್ತೆಯ ಶ್ರೀಮಹೇಶ್ವರ ದೇವಸ್ಥಾನದ ದೈವದವರಿಂದ ಶೀಗವಿಮಠಕ್ಕೆ ಬರುವದು. ಐದನೆಯದು ಶ್ರೀಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಶೀಗವಿಮಠಕ್ಕೆ ಬರುವದು. ಈ ಪಂಚಕಳಸಗಳನ್ನು ಆಯಾ ಓಣಿಯ ದೈವದವರು ಶ್ರೀ ಗವಿಮಠಕ್ಕೆ ತಂದು ಏರಿಸಿ ಪೂಜೆ ಮಾಡಿಸಿ ಪ್ರಸಾದ ಪಡೆದು ಮರಳುತ್ತಾರೆ. ಇದು ಪ್ರತಿವರ್ಷದ ಸಂಪ್ರದಾಯ ಹಾಗೂ ಪದ್ಧತಿ. ಭಕ್ತರು ಶ್ರೀಗವಿಮಠದ ಗೋಪುರಕ್ಕೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾರೆ.

 

ಜಂಗಮಾರಾಧನೆ:

ಶ್ರೀ ಗವಿಸಿದ್ಧೇಶ್ವರ ಜತ್ರಾ ಮಹೋತ್ಸವದ ನಿಮಿತ್ಯ ಶ್ರೀಮಠದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಗಳು ಜರುಗುತ್ತವೆ. ಮುತೈದೆಯರಿಂದ ದೇವಿಗೆ ಉಡಿ ತುಂಬುವುದು ಹಾಗೂ ಪಂಚ ಕಳಸಗಳ ಕಳಸಾರೋಹಣ ನಂತರ ಇದೇ ಉರಿನ ಎಲ್ಲ ಜಂಗಮಪುಂಗವರಿಗೆ ಭೂರಿ ಭೋಜನ ಪ್ರಸಾದ, ಜಂಗಮರಾಧನೆ ಕಾರ್ಯ ಅನೂಚಾನವಾಗಿ ನಡೆದು ಬಂದಿದೆ. ಪ್ರಸಾದದ ತರುವಾಯ ದಕ್ಷಿಣೆ ಹಾಗೂ ತಾಂಬೂಲಾಧಿಗಳನ್ನು ನೀಡಿ ಜಂಗಮ ಯೋಗಿಗಳ ಸಮಾರಾಧನೆಯು ಸಾಯಂಕಾಲ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!